ತಹಶೀಲ್ದಾರ್‌ ಆದೇಶಕ್ಕೂ ಕ್ಯಾರೆ ಇಲ್ಲ‌

ಸೋರುತಿಹುದು ತಾಲ್ಲೂಕು ಆಫೀಸ್ ಮಾಳಿಗೆ

ಅಂದಾಜು ವೆಚ್ಚ ನೀಡಲು ಮೀನಾಮೇಷಾ

ಶಿರಸ್ತೆದಾರ್‌ ಕಚೇರಿ ಸ್ವಿಮ್ಮಿಂಗ್‌ ಫೂಲ್‌

ತಾಲ್ಲೂಕು ರಕ್ಷಿಸುವರೇ ಅಧಿಕಾರಿಗಳು…

ತೀರ್ಥಹಳ್ಳಿ ತಾಲ್ಲೂಕು ಆಫೀಸ್‌ ಈ ವರ್ಷದ ಮಳೆ ಆರಂಭವಾದ ದಿನದಿಂದ ಸೋರುತ್ತಿದ್ದು ಮಧ್ಯಾಹ್ನದ ವರೆಗೆ ಅಧಿಕಾರಿಗಳು ಆಫೀಸ್‌ ನೀರು ಗೋಚಬೇಕಾಗಿದೆ. ಮೊದಲ ಮಹಡಿ ಶಿರಸ್ತೆದಾರ್‌ ಮತ್ತು ರೆಕಾರ್ಡ್‌ ರೂಂ ಭಾಗದ ಸುರುಮಾಡು ಜಾಗದಲ್ಲಿ ಸೋರುತ್ತಿದೆ. ದುರಸ್ಥಿ ಕಾಮಗಾರಿಗೆ ಎಸ್ಟಿಮೇಷನ್‌ ನೀಡಲು ಇಂಜಿನಿಯರ್‌ಗಳಿಗೆ ತಹಶೀಲ್ದಾರ್‌ ಮನವಿ ನೀಡುತ್ತಿದ್ದರು ಕ್ರಮ ತೆಗೆದುಕೊಂಡಿಲ್ಲ. ಸುಮಾರು ಹತ್ತು ದಿನದಿಂದ ನಾಳೆಯ ಲೆಕ್ಕಾಚಾರ ನೀಡುತ್ತಲೇ ಮುಂದೂಡುತ್ತಿದ್ದಾರೆ.

ಟೆರಾಸ್‌ ಮೇಲೆ ಮೇಲ್ಛಾವಣಿಯಲ್ಲಿ ಹೆಂಚು ಹಾಕಿದ್ದರೂ ಸೋರುತ್ತಿದೆ. ಈಚೆಗೆ ನಿರ್ಮಾಣವಾದ ಹೊಸ ತಾಲ್ಲೂಕು ಕಚೇರಿ ಇದಾಗಿದ್ದು ಕಳಪೆ ಕಾಮಗಾರಿಯಿಂದ ದುರಸ್ಥಿಗೆ ಬಂದಿದೆ. ಹಂಚಿನಿಂದ ನೀರು ಇಳಿಯುವ ಜಾಗದಲ್ಲಿ ಮಲೆನಾಡಿನ ಸಸ್ಯ ರಾಶಿಯನ್ನು ಕಣ್ಣು ತುಂಬಿಕೊಳ್ಳಬಹುದು. ಮೇಲ್ಛಾವಣಿಯ ಮೇಲೆ ಬೆಳೆದಿರುವ ಹುಲ್ಲಿನ ರಾಶಿ ಮೇಲ್ನೋಟಕ್ಕೆ ಲೆಕ್ಕ ಹಾಕಿದರ ಎರಡು ಮೂರು ದಿನ ಜಾನುವಾರು ಮೇಯಿಸಬಹುದು. ಅಷ್ಟೊಂದು ಹುಲ್ಲಿನ ರಾಶಿ ಮೇಲ್ಛಾವಣಿಯ ಮೇಲೆ ಬೆಳೆದಿದೆ.

ತಾಲ್ಲೂಕು ರಕ್ಷಿಸುವ ಜವಾಬ್ದಾರಿ ಹೊತ್ತ ಅಧಿಕಾರಿ ವರ್ಗಗಳ ನಿರ್ಲಕ್ಷ್ಯದಿಂದ ನೀರು ಸೋರುತ್ತಿದ್ದರು ಕ್ರಮ ತೆಗೆದುಕೊಂಡಿಲ್ಲ. ನೀರಿನ ಪಸೆ ಗೋಡೆಯಲ್ಲಿ ಇಳಿಯುತ್ತಿದ್ದು ಗಬ್ಬು ವಾಸನೆಗೆ ಕಾರಣವಾಗಿದೆ. ಶಿರಸ್ತೆದಾರ್‌ ರೂಮಿನಲ್ಲಿ ಸಿಬ್ಬಂದಿಗಳು ಕೆಲಸ ಮಾಡದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ತಾಲ್ಲೂಕಿನ ದಾಖಲೆಗಳನ್ನು ಇಟ್ಟಿರುವ ರೆಕಾರ್ಡ್‌ ರೂಮಿನಲ್ಲಿರುವ ಸಾರ್ವಜನಿಕ ಪೈಲು ಒದ್ದೆಯಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳನ್ನು ತಹಶೀಲ್ದಾರ್‌ ಗ್ರಹಿಸಿ ಇಂಜಿನಿಯರ್‌ಗಳಿಗೆ ಅಂದಾಜು ಮೊತ್ತ ನೀಡುವಂತೆ ತಿಳಿಸಿದರು ಕಾರ್ಯಪ್ರವೃತ್ತರಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ.

ಹಂಚಿನಿಂದ ಸೋರುವುದು ಹೇಗೆ…?

ಮಲೆನಾಡು ಆಗಿರುವ ಹಿನ್ನಲೆಯಲ್ಲಿ ತೀರ್ಥಹಳ್ಳಿಯ ಈಗಿನ ತಾಲ್ಲೂಕು ಕಚೇರಿ ಮೇಲೆ ಹೆಂಚು ಹಾಕಲಾಗಿದೆ. ವಿಶೇಷವೆಂದರೆ ಹಂಚು ಮತ್ತು ಸಿಮೆಂಟ್‌ ಕಾಂಕ್ರೀಟ್‌ ಭೇದಿಸಿ ನೀರು ನುಗ್ಗುತ್ತಿದೆ. ಸುರುಮಾಡಿನ ಜಾಗದಲ್ಲಿ ಕಾಂಕ್ರಿಟ್‌ ಹಾಗೂ ಸಿಮೆಂಟ್‌ ಬಳಸಿ ತೇಪೆ ಹಚ್ಚುವ ಕೆಲಸವನ್ನು ಗುತ್ತಿಗೆದಾರರು ಮಾಡಿದ್ದಾರೆ. ಅದಕ್ಕೆ ಸಮ ಎಂಬಂತೆ ಮೇಲ್ಛಾವಣಿ ಸ್ವಚ್ಚ ಮಾಡದಿರುವುದರಿಂದ ಗಿಡಗಂಟಿಗಳು ಬೆಳೆಯಲು ಕಾರಣವಾಗಿದೆ.

ಗಾಂಧಿ ಜಯಂತಿಯಂದು ಊರಿಗೆಲ್ಲ ಸ್ವಚ್ಚತೆಯ ಪಾಠ ಮಾಡುವ ಅಧಿಕಾರಿಗಳ ಕೇಂದ್ರ ಸ್ಥಾನದ ಸ್ವಚ್ಚತೆ ಮಾತ್ರ ಅಧೋಗತಿಗೆ ತಲುಪಿದೆ. ಮಾತಿನ ಅರಮನೆ ಕಟ್ಟುವ ಅಧಿಕಾರಿ ವರ್ಗಗಳು ತಮ್ಮ ಬುಡವನ್ನು ಸ್ವಚ್ಚ ಮಾಡಿಕೊಳ್ಳಬೇಕಿದೆ. ತಾಲ್ಲೂಕು ಕಚೇರಿಯನ್ನೇ ಸುವ್ಯವಸ್ಥೆಯಲ್ಲಿ ಇಟ್ಟುಕೊಳ್ಳಲಾಗದ ಅಧಿಕಾರಿಗಳು ಸಾರ್ವಜನಿಕರ ಕೆಲಸ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆಗಳು ಹುಟ್ಟುವುದು ಸಹಜ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post