ಹಿಂದುಳಿದ ಸಮೂದಾಯದ ಭೂಮಿ ಹಕ್ಕು ಅರ್ಜಿ ವಜಾ; ಪ್ರವೀಣ್‌ ಹಿರೇಇಡಗೋಡು

ಈಡಿಗ ಸಮೂದಾಯ ಕಡೆಗಣಿಸಿದ ರಾಜ್ಯ ಸರ್ಕಾರ; ಮುಡುಬ ರಾಘವೇಂದ್ರ

ದೀವರು ದೇವರು ಮಕ್ಕಳು ಎಂದ ಆರಗ ಈಗೆಲ್ಲಿ; ಮೇಲಿನಕೊಪ್ಪ ಹರೀಶ್

ನಾರಾಯಣ ಗುರುಗಳ ಜೀವನ ಚರಿತ್ರೆ 10ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಿಂದ 7ನೇ ತರಗತಿ ಕನ್ನಡ ಪುಸ್ತಕಕ್ಕೆ ಅಳವಡಿಸಿರುವುದು ಖಂಡಿಸಿ ಹಾಗೂ ಈಡಿಗ ಅಭಿವೃದ್ದಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ತಾಲ್ಲೂಕು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ವತಿಯಿಂದ ತಹಶೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾರ್ಯಾಧ್ಯಕ್ಷ ಮುಡುವ ರಾಘವೇಂದ್ರ ಮಾತನಾಡಿ, ಶೈಕ್ಷಣಿಕ, ಆರ್ಥಿಕವಾಗಿ ಸಮೂದಾಯ ಹಿಂದುಳಿಯುವಂತೆ ವ್ಯವಸ್ಥಿತ ಸಂಚು ನಡೆಯುತ್ತಿದೆ. ಮೂಲ ಕಸುಬು ತೊರೆದಿರುವ ವರ್ಗಗಳಿಗೆ ಆರ್ಥಿಕ ಚೈತನ್ಯ ನೀಡಬೇಕು. 4ನೇ ದೊಡ್ಡ ಈಡಿಗ ಸಮೂದಾಯಕ್ಕೆ ನಿಗಮ ಮಂಡಳಿ ಸ್ಥಾಪಿಸಬೇಕು. ಪಠ್ಯ ಕ್ರಮದಲ್ಲಿ ಆಗಿರುವ ದೋಷಗಳನ್ನು ಬಗೆಹರಿಸಬೇಕು. ಸಮಾಜ ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರು ಅವರ ವಿಚಾರ ಧಾರೆ ಹೊಂದಿರುವ ಪಠ್ಯವನ್ನು ಕನ್ನಡ ಪುಸ್ತಕದಲ್ಲಿ ಅಳವಡಿಸಿ ಅವಮಾನ ಮಾಡಲಾಗುತ್ತಿದೆ. ಸಾಹಿತ್ಯಕ್ಕೂ ಸುಧಾರಣೆಗೂ ವ್ಯತ್ಯಾಸವೇ ಗೊತ್ತಿರದ ಮೂಡರನ್ನು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇದರ ತಿದ್ದುಪಡಿಗೆ ಆಗ್ರಹಿಸಿದರೆ ಸರಿ ಎಂದು ಮೊಂಡು ವಾದ ಮಾಡುವ ಬಿಜೆಪಿ ಈಡಿಗ ಸಮೂದಾಯದ ವಿರೋಧಿ ಎಂದು ಗಂಭಿರವಾಗಿ ಆರೋಪಿಸಿದರು.


ಬೆಜ್ಜವಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ಮೇಲಿನಕೊಪ್ಪ ಮಾತನಾಡಿ, ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಚುನಾವಣೆ ಸಂದರ್ಭದಲ್ಲಿ ಧೀವರು ದೇವರ ಮಕ್ಕಳು, ಅವರಿಂದ ನನ್ನ ರಾಜಕೀಯ ಭವಿಷ್ಯ ಎನ್ನುತ್ತಿದ್ದವರು ಸಚಿವರಾದರೂ ಸೌಜನ್ಯಕ್ಕೂ ಹೇಳಿಕೆ ನೀಡಲಿಲ್ಲ. ಕುವೆಂಪು, ಬುದ್ದ, ಬಸವ, ಅಂಬೇಡ್ಕರ್‌, ಶಂಕರಾಚಾರ್ಯ ಯಾವುದೇ ಸಮೂದಾಯಕ್ಕೆ ಸೀಮಿತವಾಗಿ ಆದರ್ಶ ಸಾರಲಿಲ್ಲ. ಅಂತವರನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ. ಸಮಾಜ ವಿಜ್ಞಾನದಲ್ಲಿ ಅಳವಡಿಸಿದ್ದ ಪಠ್ಯವನ್ನು ಕನ್ನಡಕ್ಕೆ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಐಚ್ಚಿಕ ವಿಷಯ ಆಯ್ಕೆ ಮಾಡುವಾಗ ಕನ್ನಡ ಬಿಟ್ಟು ಓದುತ್ತಾರೆ. ಹಿಂದಿ, ಸಂಸ್ಕೃತ, ತೃತೀಯ ಭಾಷೆ ಕನ್ನಡದಲ್ಲಿ ಇತಿಹಾಸ ತಿಳಿಯಲು ಆಗುವುದಿಲ್ಲ. ಇತಿಹಾಸ ತಿಳಿಯದಂತೆ ಪರಿಷ್ಕರಣ ಸಮಿತಿ ಹುನ್ನಾರ ಮಾಡಿದೆ ಎಂದು ದೂರಿದರು.

ಜಿಲ್ಲಾಧ್ಯಕ್ಷ ಪ್ರವೀಣ್‌ ಹಿರೇಇಡಗೋಡು ಮಾತನಾಡಿ, ಸರ್ಕಾರದ ಸೌಲಭ್ಯ ನೀಡುವ ಉದ್ದೇಶ ಇದ್ದರೆ ಹಿಂದುಳಿದ ಸಮೂದಾಯಗಳಿಗೆ ಭೂಮಿ ಹಕ್ಕು ಕೊಡಿ. ಈಡಿಗ ಸಮೂದಾಯದ ಕ್ಯಾಬಿನೇಟ್‌ ಸಚಿವರು ಬಿಜೆಪಿ ಗುಲಾಮರಂತೆ ವರ್ತಿಸುತ್ತಿದ್ದಾರೆ. ಬ್ರಹ್ಮಶ್ರೀ ಪಾಠ ಯತಾಸ್ಥಿತಿ ಕಾಪಾಡಿಕೊಳ್ಳದಿದ್ದರೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತೇವೆ. ಅಧಿಕಾರ ಅನುಭವಿಸುತ್ತಿರುವ ಸಚಿವರು, ಶಾಸಕರ ಧ್ವನಿ ಕುಗ್ಗಿದೆ. ಹಿಂದುಳಿದ ಸಮೂದಾಯ ತಲೆಮಾರಿನಿಂದ ಸಾಗುವಳಿ ಮಾಡಿಕೊಂಡ ಜಮೀನು ಹಕ್ಕು ನೀಡದೆ ವಂಚಿಸಲಾಗಿದೆ. ಬಗರ್‌ ಹುಕುಂ, ಅರಣ್ಯ ಹಕ್ಕು ಅರ್ಜಿ ವಜಾ ಮಾಡಿ ನ್ಯಾಯಾಂಗ ಅಲೆಯುವಂತೆ ಹಿಂದುಳಿದ ಸಮೂದಾಯಕ್ಕೆ ಪೀಡಕವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಸಭೆಯಲ್ಲಿ ನಾರಾಯಣ ವಿಚಾರ ವೇದಿಕೆ ತಾಲ್ಲೂಕು ಅಧ್ಯಕ್ಷ ವಿಶಾಲ್‌ ಕುಮಾರ್‌, ಹೊಸನಗರ ಅಧ್ಯಕ್ಷ ವಾಸಪ್ಪ, ಸಂಘಟನೆಯ ಪ್ರಮುಖರಾದ ಉಮೇಶ್ ಬಿ.ಆರ್., ಚಿಡುವ ಸೂರ್ಯನಾರಾಯಣ, ಕುರುವಳ್ಳಿ ಪದ್ಮನಾಭ್, ಡಾ. ಸುಂದರೇಶ್, ಗಂಗಾಧರ್, ಕುರುವಳ್ಳಿ ನಾಗರಾಜ್, ಜಾನಕಿ ಪುಟ್ಟಸ್ವಾಮಿ, ಈರೇಗೋಡು ಹರಿಯಪ್ಪಣ್ಣ ಮುಂತಾದವರು ಮಾತನಾಡಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post