ಆನವಟ್ಟಿಯ 'ಜತೆಗಿರುವನು ಚಂದಿರ' ನಾಟಕ ಪ್ರದರ್ಶನಕ್ಕೆ ಅಡ್ಡಿ

ಸಂಘ ಪರಿವಾರದ ಗೂಂಡಾ ಸಂಸ್ಕೃತಿಗೆ ಕಸಾಪ ಖಂಡನೀಯ
ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಮನೋಭಾವ – ಕಸಾಪ ಅಧ್ಯಕ್ಷ

ಆನವಟ್ಟಿಯಲ್ಲಿ ಬಲಾತ್ಕಾರದಿಂದ ನಾಟಕ ಪ್ರದರ್ಶನ ನಿಲ್ಲಿಸಿದ ಸಂಘ ಪರಿವಾರದ ಗೂಂಡಾ ಸಂಸ್ಕೃತಿಗೆ ತೀರ್ಥಹಳ್ಳಿ ತಾಲೂಕು ಕಸಾಪ ಖಂಡನೆ.

ಕಳೆದ ಭಾನುವಾರ ಜುಲೈ 3 ರಂದು ಸಂಜೆ ಶಿವಮೊಗ್ಗ ಜಿಲ್ಲೆ ಆನವಟ್ಟಿಯ ವೀರಶೈವ ಕಲ್ಯಾಣ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಮತ್ತು ಕರ್ನಾಟಕ ಜಾನಪದ ಪರಿಷತ್ತು ಆಶ್ರಯದಲ್ಲಿ  'ಜತೆಗಿರುವನು ಚಂದಿರ' ಎಂಬ ನಾಟಕ ಪ್ರದರ್ಶನಗೊಳ್ಳುತ್ತಿದ್ದಾಗ ಸಭಾಂಗಣದೊಳಗೆ ನುಗ್ಗಿ ಸಂಘಕರನ್ನು ಹಾಗೂ ಕಲಾವಿದರನ್ನು ಬೆದರಿಸಿ ಬಲಾತ್ಕಾರವಾಗಿ ನಾಟಕವನ್ನು ಮಧ್ಯದಲ್ಲಿಯೇ ನಿಲ್ಲಿಸಿದ ಹಿಂದೂ ಪರ ಸಂಘಟನೆಗಳ ಗೂಂಡಾ ಸಂಸ್ಕೃತಿಯನ್ನು ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ‌.

ನಾಟಕ ವೀಕ್ಷಿಸಿದ ಮೇಲೆ ತಮಗೆ ಸರಿ ಕಾಣಿಸದಿದ್ದಲ್ಲಿ ಅದನ್ನು ಪ್ರಜಾಸತ್ತಾತ್ಮಕವಾಗಿ ವಿಮರ್ಶಿಸಬಹುದಿತ್ತು ಅಥವಾ ಟೀಕಿಸುವ ಮತ್ತು ಸಂವಾದ ನಡೆಸಬಹುದಾಗಿತ್ತು. ಅದು ಬಿಟ್ಟು ಬೆದರಿಕೆಯೊಡ್ಡಿ ನಾಟಕವನ್ನು ಮಧ್ಯದಲ್ಲಿ ನಿಲ್ಲಿಸಿರುವುದು ಅತ್ಯಂತ ಖಂಡನೀಯ. ಈ ಘಟನೆಯನ್ನು ನೋಡಿದರೆ ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆಯೋ ಅಥವಾ ಯಾವುದಾದರೂ ಸರ್ವಾಧಿಕಾರಿ ಮಿಲಿಟರಿ ಪ್ರಭುತ್ವದಡಿಯಲ್ಲಿದ್ದೇವೆಯೋ ಎನ್ನುವ ಅನುಮಾನವಾಗುತ್ತಿದೆ.

ಈ ರೀತಿ ಸರ್ವಾಧಿಕಾರಿ ಧೋರಣೆಯ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಂಘ ಪರಿವಾರದ ಮತ್ತು ಹಿಂದೂ ಸಂಘಟನೆಗಳ ಕೆಲವರ ದುಷ್ಕೃತ್ಯವನ್ನು ಶಾಂತಿಪ್ರಿಯ ಮತ್ತು ಪ್ರಜಾಪ್ರಭುತ್ವವಾದಿ ಎಲ್ಲಾ ಜನರು ಹಾಗೂ ಕಲಾವಿದರು, ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ಒಕ್ಕೊರಲಿನಿಂದ ಖಂಡಿಸಬೇಕು ಹಾಗೂ ಪ್ರತಿಭಟಿಸಬೇಕಾಗಿದೆ. ಇಲ್ಲದಿದ್ದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿ ಮನೋಭಾವದವರು ಸೇರಿಕೊಂಡು ಇಂತಹ ಗೂಂಡಾ ಸಂಸ್ಕೃತಿಯನ್ನು ಮೆರೆಯುತ್ತಲೇ ಇರುತ್ತಾರೆ.

ಆದ್ದರಿಂದ ಪ್ರಭುತ್ವದಲ್ಲಿ ಬಲಾತ್ಕಾರವಾಗಿ ನಾಟಕ ನಿಲ್ಲಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಿದ್ದಲ್ಲದೆ ಕಲಾವಿದರನ್ನು ಹಾಗೂ ಕಲೆಯನ್ನು ಅವಮಾನಿಸಿರುವ ವ್ಯಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸುತ್ತಿರುವುದಾಗಿ ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಕಾರ್ಯದರ್ಶಿಗಳಾದ ಗಾಯತ್ರಿ ಶೇಷಗಿರಿ, ಸೌಳಿ ನಾಗರಾಜ್ ಮತ್ತು ಕೋಶಾಧ್ಯಕ್ಷರಾದ ಹಾಲಿಗೆ ನಾಗರಾಜ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post