ತೀರ್ಥಹಳ್ಳಿಯಲ್ಲಿ ಸದ್ದು ಮಾಡದ ಪ್ರವೀಣ್‌ ನೆಟ್ಟಾರ್‌ ಹತ್ಯೆ ಪ್ರಕರಣ

ಯಾರ ವಿರುದ್ದ ಹೋರಾಟ…? ಬಿಜೆಪಿಯಲ್ಲಿ ಗೊಂದಲ!
ನಂದಿತಾ ಪ್ರಕರಣ ಮುನ್ನೆಲೆಗೆ ತಂದ ಸಂತೋಷ್‌ ಪೂಜಾರಿ ಮೌನದ ಗುಟ್ಟೇನು

ಬಾಳೇಬೈಲು ಸಂತೋಷ್‌ ಪೂಜಾರಿ ಆರ್‌ಎಸ್‌ಎಸ್‌ನ ಕಟ್ಟಾಳು. 2018ರ ವಿಧಾನಸಭಾ ಚುನಾವಣೆಯಲ್ಲಿ ಆರಗ ಗೆಲುವಿನಲ್ಲಿ ಪರಿಣಾಮ ಕಾರಿ ಪಾತ್ರ ವಹಿಸಿದವರು. ಪ್ರವೀಣ್‌ ನೆಟ್ಟಾರ್‌ ಹತ್ಯೆ ಪ್ರಕರಣದಲ್ಲಿ ತೀರ್ಥಹಳ್ಳಿಯಲ್ಲಿ ಪ್ರತಿಭಟನೆಯ ಧ್ವನಿ ಪ್ರಖರವಾಗಿ ಮೊಳಗದಿರುವುದಕ್ಕೆ ಬಿಜೆಪಿಯಲ್ಲಿರುವ ಭಿನ್ನಮತವೇ ಕಾರಣವೆಂಬುದು ಗುಟ್ಟಾದ ವಿಷಯವಲ್ಲ. ಅಚ್ಚರಿಯ ಸಂಗತಿಯೆಂದರೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಹಿಂದುಳಿದ ವರ್ಗಗಳ, ದಲಿತ ಮುಖಂಡರುಗಳಿಗೆ ಹೆಚ್ಚಿನ ಮನ್ನಣೆ ಇಲ್ಲದಿರುವುದು ರಾಜಕೀಯವಾಗಿ ಹಲವು ಬೆಳವಣಿಗೆಗೆ ಕಾರಣವಾಗಿದೆ. ಕ್ಷೇತ್ರ ಬಿಜೆಪಿಯಲ್ಲಿ ಹಿಂದುಳಿದ, ದಲಿತ ವರ್ಗಗಳನ್ನು ಸಂಪೂರ್ಣ ಮೂಲೆಗೆ ತಳ್ಳಿದಂತಿದೆ. ಈ ವರ್ಗಗಳಿಗೆ ಯಾವುದೇ ರೀತಿಯ ಬೆಲೆಯೂ ಪಕ್ಷದಲ್ಲಿ ಸಿಗುತ್ತಿಲ್ಲ.  ನಂದಿತಾ ಸಾವಿನ ಪ್ರಕರಣದ ಲಾಭ ಬಿಜೆಪಿಗೆ ಸಿಕ್ಕಿತೇ ವಿನಃ ಸಂತೋಷ್‌ ಪೂಜಾರಿಗಲ್ಲ ಎಂಬ ಸಂಗತಿ ಹಿಂದುಳಿದ, ದಲಿತ ವರ್ಗಗಳಿಗೆ ನಿಧಾನವಾಗಿ ಈಗ ಅರ್ಥವಾದಂತಿದೆ.


ಹಿಂದೂಪರ ಹೋರಾಟಗಾರ ಪ್ರವೀಣ್‌ ನೆಟ್ಟಾರ್ ಅಮಾನುಷ ಕೊಲೆಯಾಗಿ ವಾರ ಕಳೆದಿಲ್ಲ. ಈ ಹತ್ಯೆ ರಾಜ್ಯಾದ್ಯಾಂತ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ. ಮೊದಲು ಪ್ರವೀಣ್‌ ನೆಟ್ಟಾರ್ ಮೃತದೇಹ ನೋಡಲು ಬಂದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಇಂಧನ ಸಚಿವ ಸುನಿಲ್‌ ಕುಮಾರ್‌ ಕಾರ್ಯಕರ್ತರಿಂದ ಘೇರಾವ್‌ಗೆ ಒಳಗಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪಟ್ಟಾಭಿಷೇಕದ ವಾರ್ಷಿಕ ಸಂಭ್ರಮಾಚರಣೆಯನ್ನು ಈ ಹತ್ಯೆ ರದ್ದು ಪಡಿಸಿದೆ. ಅಂತದ್ದೊಂದು ಅಲ್ಲೋಲ ಕಲ್ಲೋಲ ಬೆಳವಣಿಗೆ ರಾಜ್ಯದಲ್ಲಿ ಘಟಿಸಿದೆ. ಆಡಳಿತಾರೂಢ ಬಿಜೆಪಿಯ ಬಹುತೇಕ ರಾಜಕೀಯ ಮುಖಂಡರುಗಳ ಬಾಯಿ ಬಂದ್‌ ಆಗಿದೆ. ಹಿಂದೂಪರ ಸಂಘಟನೆಗಳ ಹೆಸರಲ್ಲಿ ಹೋರಾಟ ಮಾಡುತ್ತಿದ್ದವರು ಗಪ್‌ಚುಪ್‌ ಆಗಿದ್ದಾರೆ. ಬಿಜೆಪಿ ಗುಂಪು ಗುಂಪಾಗಿ ಒಡೆದು ಹೋಗಿದೆ. ಕಟ್ಟಾ ಹಿಂದುತ್ವ ವಾದಿಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಹೀಗಿದ್ದರೂ ಆಡಳಿತ ಹಿಡಿದ ಬಿಜೆಪಿ ನಾಯಕರುಗಳ ಲಜ್ಜೆಗೆಟ್ಟ ರಾಜಕಾರಣ ಕೊನೆಯಿಲ್ಲದಂತೆ ಮುಂದುವರೆದಿರುವುದು ಜನಾಕ್ರೋಶಕ್ಕೆ ಗುರಿಯಾಗಿದೆ.

ರಾಜ್ಯದ್ಯಾಂತ ಯುವ ಮೋರ್ಚಾ ಕಾರ್ಯಕರ್ತರ ಸರಣಿ ರಾಜೀನಾಮೆ ಪರ್ವ ಮುಂದುವರೆದಿರುವ ಬೆನ್ನಿಗೆ ಶನಿವಾರ ಬೆಳಿಗ್ಗೆ ಗೃಹಮಂತ್ರಿ ಆರಗ ಜ್ಞಾನೇಂದ್ರರ ಬೆಂಗಳೂರು ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ನುಗ್ಗಿ ಗಲಾಟೆ ಎಬ್ಬಿಸಿದ್ದಾರೆ. ಆಡಳಿತಾರೂಢ ಬಿಜೆಪಿ ತನ್ನ ಅಂಗ ಸಂಸ್ಥೆಗಳಿಂದಲೇ ಪ್ರತಿಭಟನೆ ಎದುರಿಸಿ ಮುಜುಗರಕ್ಕೊಳಗಾಗಿದೆ. ಕರಾವಳಿ ಭಾಗದಲ್ಲಿ ಅಮಾನುಷ ಹತ್ಯೆಗೆ ಬಲಿಯಾದವರಲ್ಲಿ ಹೆಚ್ಚಿನವರು ಬಿಲ್ಲವರೇ ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಪ್ರಚೋದನೆ ನೀಡಿದವರ, ಅಧಿಕಾರಸ್ಥರ ಮಕ್ಕಳು ಚೆನ್ನಾಗಿ ಓದಿಕೊಂಡು ಹಾಯಾಗಿ ವಿದೇಶದಲ್ಲಿದ್ದರೆ ಆ ಪ್ರೇರೇಪಣೆಯಿಂದಲೇ ಹುಲಿ, ವೀರ ಇತ್ಯಾದಿ ಪಟ್ಟ ಅಲಂಕರಿಸುವ ಹುಮ್ಮಸ್ಸಿನಲ್ಲಿರುವ ಕೆಳವರ್ಗದ ಯುವಕರು ಬೀದಿ ಹೆಣವಾಗುತ್ತಿದ್ದಾರೆ.

ಇತ್ತ ತೀರ್ಥಹಳ್ಳಿಯಲ್ಲೂ ಕೂಡ ಈ ಹತ್ಯೆ ಖಂಡಿಸಿ ಆರಂಭಿಕ ಹಂತದಲ್ಲಿ ನಾರಾಯಣಗುರು ವಿಚಾರವೇದಿಕೆಯ ಸದಸ್ಯರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದ್ದಾರೆ. ಶನಿವಾರ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆದಿದೆ. ಈ ಸಂಘಟನೆ ಯಾವಾಗ ಹುಟ್ಟಿಕೊಂಡಿತು ಎಂಬುದೇ ಕ್ಷೇತ್ರದ ಜನರಿಗೆ ಗೊತ್ತಿಲ್ಲ. ವಿಧಾನಸಭಾ ಚುನಾವಣೆಯ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಬೇಗುವಳ್ಳಿ ಸತೀಶ್‌, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಟಿ. ಮಂಜುನಾಥ್ ಮುಂತಾದವರು ಪ್ರವೀಣ್‌ ಹತ್ಯೆಯನ್ನು ಕಟುವಾಗಿ ಖಂಡಿಸಿದ್ದಾರೆ. ಅಚ್ಚರಿಯೆಂದರೆ ರಾಜ್ಯದ ಆಡಳಿತ ಹೊತ್ತ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರರ ರಾಜೀನಾಮೆಗೆ ಮಾತ್ರ ಆಗ್ರಹಿಸಿಲ್ಲ.

2014ರಲ್ಲಿ ಪ್ರಪಂಚದಾದ್ಯಂತ ಸುದ್ದಿಯಾದ ತೀರ್ಥಹಳ್ಳಿಯ ಶಾಲಾ ಬಾಲಕಿ ನಂದಿತಾ ಸಾವಿನ ಪ್ರಕರಣವನ್ನು ಸಾರ್ವಜನಿಕರು ಈಗ ನೆನಪು ಮಾಡಿಕೊಳ್ಳತೊಡಗಿದ್ದಾರೆ. ಬಾಳೇಬೈಲಿನ ಆ ನತದೃಷ್ಟ ಬಾಲಕಿ ಕೇವಲ 8ನೇ ತರಗತಿ ಓದುತ್ತಿರುವಾಗಲೇ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದಳು. ಇದು ಅನ್ಯಧರ್ಮಿಯರಿಂದಾದ ಅತ್ಯಾಚಾರ ಮತ್ತು ಕೊಲೆಯೆಂದೇ ಬಿಂಬಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಶೋಭಾ ಕರಂದ್ಲಾಜೆ, ಆಯನೂರು ಮಂಜುನಾಥ್‌, ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿ ಬಹುತೇಕ ಗಣ್ಯರು ವಾರಗಟ್ಟಲೇ ಪ್ರತಿಭಟನಾ ಸಭೆ ನಡೆಸಿ ವಿವಾದ ಜೀವಂತವಾಗಿಸಿದ್ದರು. ಚುನಾವಣೆ ಹೊತ್ತಿಗೆ ಕೇಂದ್ರದ ಈಗಿನ ಗೃಹಸಚಿವ ಅಮಿತ್‌ ಶಾ ಕೂಡ ನಂದಿತಾ ಮನೆಗೆ ಭೇಟಿ ನೀಡಿದ್ದರು. ಚುನಾವಣೆ ಪೂರ್ವದಲ್ಲಿ ಸತತವಾಗಿ ಎರಡು ವರ್ಷ ಆಕೆಯ ಪುಣ್ಯಸ್ಮರಣೆ ಕೂಡ ಬಿಜೆಪಿ ವತಿಯಿಂದ ನಡೆದಿತ್ತು. ತಾಲ್ಲೂಕು ಕಚೇರಿ ಮುಂಭಾಗ ನಂದಿತಾ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಬೇಕೆಂದು ಆಗ್ರಹಿಸಿ ಹಲವು ದಿನಗಳ ಕಾಲ ಪ್ರತಿಭಟನೆ ನಡೆದಿತ್ತು.

ಅಂದ ಹಾಗೆ ನಂದಿತಾ ಸಾವಿನ ಪ್ರಕರಣವನ್ನು ಅತ್ಯಂತ ಯಶಸ್ವಿಯಾಗಿ ಬಿಜೆಪಿ ಪಾಲಿನ ಚುನಾವಣಾ ವಿಷಯವಾಗಿ ಮುನ್ನಲೆಗೆ ತಂದಿದ್ದರ ಹಿಂದಿನ ಮಾಸ್ಟರ್‌ ಮೈಂಡ್‌ ಭಜರಂಗದಳದ ಹಿರಿಯ ಮುಖಂಡ ಬಾಳೇಬೈಲು ಸಂತೋಷ್‌ ಪೂಜಾರಿ ಎಂಬುದು ಆಗ ಬಾರೀ ಪ್ರಚಾರ ಪಡೆದ ವಿಷಯವಾಗಿತ್ತು. ಇದು ಕೇವಲ ಧರ್ಮಗಳ ನಡುವಿನ ಕಲಹವಾಗಿ ಉಳಿಯದೇ ಅಂತಿಮವಾಗಿ ಬಿಲ್ಲವ ಜನಾಂಗಕ್ಕೆ ಸೇರಿದ್ದ ಆ ಬಾಲಕಿಗೆ ಘೋರವಾದ ಅನ್ಯಾಯವಾಗಿದೆ ಎಂಬ ವಿಚಾರ ತಾಲ್ಲೂಕಿನ ಪ್ರತಿಯೊಂದು ಬಿಲ್ಲವ ಕುಟುಂಬಗಳ ಮನೆಗಳಲ್ಲೂ ಪ್ರಚಾರವಾಗುವಂತೆ ನೋಡಿಕೊಂಡಿದ್ದು ಸಂತೋಷ್‌ ಪೂಜಾರಿ.

ಪರಿಣಾಮ ಸಚಿವರಾಗಿ 2000 ಕೋಟಿಗೂ ಹೆಚ್ಚಿನ ಅಭಿವೃದ್ದಿ ಕೆಲಸಗಳನ್ನು ಮಾಡಿಸುವ ಮೂಲಕ ಭಾರೀ ಅಂತರದ ಗೆಲುವಿನ ಹುಮ್ಮಸ್ಸು ಕಂಡಿದ್ದ ಕಿಮ್ಮನೆ ರತ್ನಾಕರ್‌ 22 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದ ಆಘಾತಕಾರಿ ಸೋಲುಂಡರು. ಬಹುತೇಕವಾಗಿ ರಾಜಕೀಯದಿಂದ ಹಿಂದೆ ಸರಿಯ ತೊಡಗಿದ್ದ ಆರಗ ಜ್ಞಾನೇಂದ್ರ ನಂದಿತಾ ಪ್ರಕರಣದ ಮೂಲಕವೇ ರಾಜಕೀಯವಾಗಿ ಮರುಹುಟ್ಟು ಪಡೆದರಲ್ಲದೇ ಬಹುಶಃ ಕನಸ್ಸಿನಲ್ಲೂ ಎಣಿಸಿರದ ಅಂತರದಲ್ಲಿ ಗೆದ್ದು ಗೃಹಮಂತ್ರಿ ಪದವಿಯ ತನಕ ಸಾಗಿ ಹೋದರು.

ಪ್ರವೀಣ್ ನೆಟ್ಟಾರ್ ಕೂಡ ಬಿಲ್ಲವ ಸಮುದಾಯದ ಯುವಕ. ಎಲ್ಲಾ ಕೆಳ ಮಧ್ಯಮ ವರ್ಗದ ಸಮಸ್ಯೆಗಳು ಈತನ ಮನೆಯಲ್ಲೂ ಇದ್ದವು. ಹೊಟ್ಟೆಪಾಡಿಗೆ ಕೋಳಿ ಅಂಗಡಿ ನಡೆಸುತ್ತಿದ್ದ ಈ ಯುವಕನ ಸಂಘಟನೆಯ ಆಕಾಂಕ್ಷೆಗೆ ಆತನ ಪತ್ನಿ ಅನುವು ಮಾಡಿಕೊಟ್ಟು ಆಕೆ ಪ್ರವೀಣ್‌ ಇಲ್ಲದಿದ್ದಾಗ ಕೋಳಿ ಅಂಗಡಿ ಮುನ್ನಡೆಸುತ್ತಿದ್ದರು. ಎಷ್ಟೇ ಪ್ರತಿಭಟನೆ ನಡೆದರೂ ಹಣ ಹರಿದು ಬಂದರೂ ಬಹುತೇಕ ಪ್ರವೀಣನ ಕುಟುಂಬದ ನೋವಿಗೆ ಕೊನೆಯಿಲ್ಲದಂತಾಗಿದೆ.

ಬಿಲ್ಲವ ಸಮುದಾಯದ ಸ್ವಾಭಿಮಾನದ ಪ್ರಶ್ನೆ ಮುಂದಿಟ್ಟು ನಂದಿತಾ ಪ್ರಕರಣದಲ್ಲಿ ಮುನ್ನುಗ್ಗಿದ್ದ ಸಂತೋಷ್‌ ಪೂಜಾರಿ ಪ್ರವೀಣ್‌ ಹತ್ಯೆ ಸಂದರ್ಭದಲ್ಲಿ ನಾಪತ್ತೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಬಹುಶಃ ಇದರಿಂದ ತೀರ್ಥಹಳ್ಳಿಯಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಲಾಭವಾಗುವುದಿಲ್ಲ ಎಂಬ ಭಾವನೆಯೋ ಅಥವಾ ಪ್ರತಿಭಟನೆ ನಡೆಸಿದರೆ ಸರ್ಕಾರ ಮತ್ತು ಇಲ್ಲಿಯವರೇ ಆದ ಹೋಂ ಮಿನಿಸ್ಟರ್‌ ಆರಗ ಜ್ಞಾನೇಂದ್ರ ಅವರ ವಿರುದ್ದವೇ ನಡೆಸಬೇಕಾದೀತು, ಅದು ಮುಜುಗರದ ವಿಚಾರ ಎಂಬ ಜಾಣ್ಮೆಯೋ..? ಅಥವಾ ಸಂತೋಷ್‌ ಅವರಿಂದ ಈಗ ಲಾಭ ಇಲ್ಲ ಎಂಬ ಕಾರಣಕ್ಕೆ ಬಿಜೆಪಿಯ ನಿರ್ಲಕ್ಷ್ಯವೋ ಎಂಬ ಕುತೂಹಲ ಸಾರ್ವಜನಿಕವಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post