ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ

ಎರಡು ದಿನ ಸಂಚಾರ ನಿರ್ಬಂಧ
50 ಲಕ್ಷ ವೆಚ್ಚದಲ್ಲಿ ಸರ್ವೆಗೆ ಅನುದಾನ-ಆರಗ

ಭಾನುವಾರ ಮುಂಜಾನೆ ತೀರ್ಥಹಳ್ಳಿ, ಹೆಬ್ರಿ ತಾಲ್ಲೂಕು ಗಡಿ ಪ್ರದೇಶದ ಆಗುಂಬೆ 11ನೇ ತಿರುವಿನಲ್ಲಿ ಗುಡ್ಡ ಕುಸಿದಿದೆ. ತೆರವು ಕಾರ್ಯಾಚರಣೆ ಚಾಲ್ತಿಯಲ್ಲಿದ್ದರೂ ಮಣ್ಣು ಮತ್ತಷ್ಟು ಜರುಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಲಘು ವಾಹನಗಳಿಗೆ ಮಾತ್ರ ಒಂದು ವಾರದ ವರೆಗೆ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಭಾರಿ ವಾಹನಗಳಿಗೆ ಸದ್ಯಕ್ಕೆ ಅವಕಾಶ ನಿರ್ಬಂಧಿಸಲಾಗುತ್ತದೆ.

ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯ 11ನೇ ತಿರುವಿನಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಅಂದಾಜು 100 ಮೀಟರ್‌ ಗುಡ್ಡ ಜರುಗಿದ್ದು ತೆರವು ಕಾರ್ಯಾಚರಣೆ ಭಾನುವಾರ ಮುಂಜಾನೆಯಿಂದ ಜಾಲ್ತಿಯಲ್ಲಿದೆ. ಗುಡ್ಡ ಕುಸಿತದ ಹಿನ್ನಲೆ ಆಗುಂಬೆ ಮಾರ್ಗದ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬದಲಿ ವ್ಯವಸ್ಥೆಗೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು ಕೈಮರ, ಬೇಗಾರು, ಕಮ್ಮರಡಿ ಮಾರ್ಗದಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಅರಣ್ಯ ಇಲಾಖೆ ಹಾನಿಯಿಂದ ಉರುಳಿರುವ ಮರ ಕಡಿತಲೆಗೆ ಕ್ರಮ ವಹಿಸಿದೆ. ಮಂಗಳವಾರದಿಂದ ಸಂಚಾರಕ್ಕೆ ಮಾರ್ಗ ಬಿಟ್ಟುಕೊಡುವ ಸಾಧ್ಯತೆ ಇದೆ.

ಗೃಹಸಚಿವ ಆರಗ ಜ್ಞಾನೇಂದ್ರ ಘಟನೆ ವರದಿಯಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿ ಆಗುಂಬೆ ಘಾಟಿ ಪ್ರದೇಶದಲ್ಲಿ ಇಷ್ಟು ದೊಡ್ಡ ಗುಡ್ಡ ಕುಸಿತ ಮೊದಲ ಬಾರಿಗೆ ಸಂಭವಿಸಿದೆ. ರಾತ್ರಿಯ ವೇಳೆ ವಾಹನ ದಟ್ಟಣೆ ಇಲ್ಲದ ಕಾರಣ ಅಪಘಾತ ನಡೆದಿಲ್ಲ. ಇದೇ ರೀತಿ ಮಳೆ ಮುಂದುವರೆದರೆ ಕಷ್ಟ. ಗುಡ್ಡ ಸಾಮರ್ಥ್ಯ ಅಳೆಯುವ ಉದ್ದೇಶದಿಂದ ಸರ್ವೆ ಕಾರ್ಯಕ್ಕೆ 50 ಲಕ್ಷ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಪೈಲಿಂಗ್‌ ಮೂಲಕ ಸರ್ವೆ ನಡೆಯಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸುಮಾರು 150ಕ್ಕೂ ಹೆಚ್ಚು ಲಾರಿ ಲೋಡ್‌ನಷ್ಟು ಮಣ್ಣು ತೆಗೆಯಬೇಕಾಗುತ್ತದೆ. ಗುಡ್ಡ ಇನ್ನಷ್ಟು ಜರಿಯುವ ಸಾಧ್ಯತೆ ಇದ್ದು ಒಂದು ವಾರದ ವರೆಗೆ ಸಣ್ಣ ಪ್ರಮಾಣದ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post