ನೀರು ಕೇಳುವ ನೆಪದಲ್ಲಿ ದರೋಡೆಗೆ ಯತ್ನ
ಜನ ಸಂಪರ್ಕ ಸಭೆ ಮಾಡದ ಪೊಲೀಸ್ ಇಲಾಖೆ ವ್ಯರ್ಥ
ಜನ ಸ್ನೇಹಿಯಾಗಿರದ ಪೊಲೀಸರು
ನಾಗರೀಕರನ್ನು ಭಯದಲ್ಲಿರಿಸಿದ ಸಿಬ್ಬಂದಿಗಳು
ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗ ಗ್ರಾಮದ ಸಿದ್ದಾಪುರದಲ್ಲಿ ದರೋಡೆಗೆ ಪ್ರಯತ್ನಿಸಿ ಸಿಕ್ಕಿ ಬಿದ್ದ ಪ್ರಕರಣ ದಾಖಲಾಗಿದೆ. ಕೋಣಂದೂರಿನಲ್ಲಿ ಜೆಸಿಬಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಯುವಕರು ಮಹಿಳೆಯೊಬ್ಬರು ಮನೆಯಲ್ಲಿ ಇರುವುದನ್ನು ಗಮನಿಸಿ ಓರ್ವ ಯುವಕ ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ್ದಾನೆ. ಮತ್ತೊಬ್ಬ ಕಾರಿನಲ್ಲಿ ಪರಾರಿಯಾಗುವುದಕ್ಕೆ ಸಹಕಾರ ನೀಡಿದ್ದಾನೆ. ನೀರು ತರುತ್ತಿದ್ದಂತೆ ಮಹಿಳೆಯ ಬಾಯಿ ಮುಚ್ಚಿ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಿತ್ತುಕೊಳ್ಳುವ ಯತ್ನ ನಡೆಸಿದ್ದಾನೆ. ಮಹಿಳೆ ಪ್ರತಿರೋಧ ತೋರಿಸಿ ಆತನಿಂದ ತಪ್ಪಿಕೊಂಡು ಕಿರುಚಾಡಿದ್ದಾರೆ. ಮಹಿಳೆಯ ಕೂಗು ಕೇಳುತ್ತಿದ್ದಂತೆ ಅಕ್ಕಪಕ್ಕದ ಜನರು ಒಟ್ಟಾಗಿದ್ದಾರೆ. ಅಷ್ಟರಲ್ಲಿ ಯುವಕ ಹೌಹಾರಿ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದವ ಓಡಿಹೋಗಲು ಆಗದೆ ಸಿಕ್ಕಿಬಿದ್ದಿದ್ದಾನೆ.
ಇಬ್ಬರು ಯುವಕರು ಬಯಲು ಸೀಮೆಯಿಂದ ಜೆಸಿಬಿ ಕೆಲಸಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಕಾರು ಮಾಲೀಕರು ಕೋಣಂದೂರಿನವರದ್ದೇ ಆಗಿರುವುದರಿಂದ ಕಳ್ಳ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಕೋಣಂದೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ.
![]() |
| ಕುತ್ತಿಗೆ ಭಾಗದಲ್ಲಿ ಗಾಯಗೊಂಡಿರುವುದು. |
ಪೊಲೀಸ್ ಇಲಾಖೆ ಕಾನೂನುಗಳನ್ನು ಮೀರಿ ಮನಸೋಇಚ್ಚೆ ಬೈಕು, ಕಾರುಗಳನ್ನು ಮಾತ್ರ ಹಿಡಿಯಲು ಸೀಮಿತರಾಗಿದ್ದಾರೆ. ಬಡಬಗ್ಗರನ್ನು ಮಾತ್ರ ಸುಲಿಗೆ ಮಾಡುತ್ತಿದ್ದಾರೆ. ಕೆಲವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿದೆ. ಇಂತಹ ಹತ್ತಾರು ವಿಚಾರಗಳ ಬಗ್ಗೆ ದೂರುಗಳು ಇರುವಾಗ ಜನಸಾಮಾನ್ಯರಿಗೆ ಪೊಲೀಸ್ ಇಲಾಖೆ ಸಿಬ್ಬಂದಿಗಳನ್ನು ನೋಡಿದರೇ ಭಯ ಆವರಿಸಿದೆ. ಇದರಿಂದಾಗಿ ಅನುಮಾನಗಳಿದ್ದರೂ ತಿಳಿಸದಂತಹ ಪರಿಸ್ಥಿತಿ ನಿರ್ಮಾಣವಾದಂತಿದೆ. ಕ್ಷೇತ್ರದ ಶಾಸಕ, ಗೃಹಸಚಿವ ಆರಗ ಜ್ಞಾನೇಂದ್ರರ ಸ್ವಂತ ಇಲಾಖೆ ಸಿಬ್ಬಂದಿಗಳ ಈ ನಡೆಯಿಂದಾಗಿ ಕಳ್ಳತನ ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ವಿಫಲವಾದಂತಿದೆ.
![]() |
| ಕೋಣಂದೂರು ಮೂಲದ ಕಾರು ಸಿಕ್ಕಿಬಿದ್ದಿರುವುದು. |



