ಸರ್ಕಾರದ ಜಾಹೀರಾತಿನಲ್ಲಿ ಗೃಹಸಚಿವರ ಹೆಸರು ನಾಪತ್ತೆ

ಮೋದಿ ಅವರ ಜೊತೆ ಬದಲು ಮನೆಯಲ್ಲೇ ಯೋಗಾಸನ
ನೆಟ್ಟಿಗರ ಟ್ರೋಲ್‌ಗೆ ಗುರಿಯಾದ ಆರಗ ಜ್ಞಾನೇಂದ್ರ
ಅವಗಣನೆಗೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ಅಸಮಾಧಾನ

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾರ್ವಜನಿಕ ಯೋಗಾಸನ. ಗೃಹಸಚಿವ ಆರಗ ಜ್ಞಾನೇಂದ್ರರಿಂದ ಮನೆಯಲ್ಲಿನ ಯೋಗಾ ಭಂಗಿ.

ವಿಶ್ವ ಯೋಗ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ್ಕೆ ಆಗಮಿಸಿ ಮೈಸೂರಿನಲ್ಲಿ ಜೂನ್‌ 21 ರಂದು ಸ್ವತಃ ಯೋಗಾಸನಗಳನ್ನು ಪ್ರದರ್ಶಿಸಿದ್ದು ಪ್ರಪಂಚದಾದ್ಯಂತ ಸುದ್ದಿಯಾಗಿದೆ. ಸದ್ಯ ಹತ್ತು ಹಲವು ವಿವಾದಗಳ ಕಾರಣ ಬಸವಳಿದಿದ್ದ ಮುಖ್ಯಮಂತ್ರಿ ಬಸವರಾಜ ಎಸ್‌ ಬೊಮ್ಮಾಯಿ ಅವರ ಸರ್ಕಾರಕ್ಕೆ ಮೋದಿ ಅವರ ಮೋಡಿ ತತ್ಕಾಲಕ್ಕೆ ಆಕ್ಸಿಜನ್‌ ನೀಡುವ ಕೆಲಸ ಮಾಡಿದೆ.
ಮಂಗಳವಾರ ವಾರ್ತಾ ಇಲಾಖೆ ವತಿಯಿಂದ ರಾಜ್ಯದ ಪ್ರಮುಖ ಪತ್ರಿಕೆಗಳಿಗೆ ನೀಡಿದ ಜಾಹೀರಾತು.
ಈ ನಡುವೆ ಜೂನ್‌ 21 ರಂದು ಯೋಗ ದಿನಾಚರಣೆಯ ಪ್ರಯುಕ್ತ ರಾಜ್ಯ ಸರ್ಕಾರ ಅಧಿಕೃತವಾಗಿ ಹೊರಡಿಸಿರುವ ಮಾನವಿಯತೆಗಾಗಿ ಯೋಗ ಎಂಬ ಜಾಹೀರಾತಿನ ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರ ಹೆಸರು ಇಲ್ಲದಿರುವುದು ದೊಡ್ಡ ಚರ್ಚೆಗೆ ಎಡೆ ಮಾಡಿದೆ. ಅವರ ಸ್ವಕ್ಷೇತ್ರವಾದ ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಕೆಲವರೇ ಈ ಅವಗಣನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಾಹೀರಾತಿನ ಘನ ಉಪಸ್ಥಿತಿ ಎಂಬಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೆಸರು, ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಕೇಂದ್ರ ಸಚಿವರುಗಳಾದ ಪ್ರಹಲ್ಲಾದ ಜೋಷಿ, ಶೋಭ ಕರಂದ್ಲಾಜೆ, ಭಗವಂತ ಖೂಬಾ, ಎ.ನಾರಾಯಣ ಸ್ವಾಮಿ ಮತ್ತು ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ಸಚಿವರುಗಳಾದ ಆರ್.‌ ಆಶೋಕ್‌, ಡಾ. ಅಶ್ವಥ್‌ನಾರಾಯಣ, ಎಸ್.ಟಿ. ಸೋಮಶೇಖರ್‌, ಡಾ.ಸುಧಾಕರ್‌, ವಿ ಸುನಿಲ್‌ ಕುಮಾರ್‌, ಜೆ.ಸಿ. ಮಾಧೂಸ್ವಾಮಿ, ಆನಂದಸಿಂಗ್‌, ಕೋಟಾ ಶ್ರೀನಿವಾಸ ಪೂಜಾರಿ, ಬಿ.ಸಿ. ನಾಗೇಶ್‌, ಮಾಜಿ ಸಿಎಂ ಸಿದ್ದರಾಮಯ್ಯ, ಮೈಸೂರು ಸಂಸದ ಪ್ರತಾಪ್‌ ಸಿಂಹ, ಮಾಜಿ ಸಿಎಂ ಯಡಿಯೂರಪ್ಪ ಹೆಸರುಗಳು ಕಾಣಿಸಿಕೊಂಡಿದೆ.

ವಿಶೇಷವೆಂದರೆ ಶಿಷ್ಠಾಚಾರದ ಪ್ರಕಾರ ನೋಡಿದರೂ ಸಿಎಂ ನಂತರದಲ್ಲಿ ಕಾಣಿಸಿಕೊಳ್ಳಬೇಕಾಗಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರರ ಹೆಸರೇ ನಾಪತ್ತೆಯಾಗಿದೆ. ಇದೇನು ಉದ್ದೇಶ ಪೂರ್ವಕವೋ ಅಥವಾ ಆಕಸ್ಮಾತ್‌ ಆದ ಪ್ರಮಾದವೋ ಎಂಬುದನ್ನು ಈ ಜಾಹೀರಾತು ರೂಪಿಸಿದವರೇ ಹೇಳಬೇಕಾಗಿದೆ.

ವಾಸ್ತವವಾಗಿ ಆರಗ ಜ್ಞಾನೇಂದ್ರ ರಾಜ್ಯದ ಮೊದಲ ಸಾಲಿನ ಹಿರಿಯ ಬಿಜೆಪಿ ಸಾಲಿನ ನಾಯಕರಲ್ಲಿ ಒಬ್ಬರು. ಒಂದು ಕಾಲದಲ್ಲಿ ಶಿವಮೊಗ್ಗದಲ್ಲಿ ಬಿಜೆಪಿಯ ಎಲ್ಲಾ ಹುರಿಯಾಳುಗಳು ಸೋತಾಗಲೂ ತೀರ್ಥಹಳ್ಳಿಯಲ್ಲಿ ಗೆದ್ದಿದ್ದ ಜನಪ್ರೀಯ ರಾಜಕಾರಣಿ. ಗೃಹಮಂತ್ರಿಯಾದ ಆರಂಭದ ಕಾಲದಲ್ಲಿ ಅದರ ಆಗಾಧತೆ ಮತ್ತು ವ್ಯಾಪ್ತಿಯ ಕಾರಣ ನಿಭಾಯಿಸುವಲ್ಲಿ ತಬ್ಬಿಬ್ಬಾಗಿದ್ದರೂ ಇಲ್ಲಿಯ ತನಕ ಕೈ ಸ್ವಚ್ಚವಾಗಿರಿಸಿಕೊಂಡಿರುವುದು ಎಷ್ಟೇ ವಿವಾಧಗಳು ಬುಗಿಲೆದ್ದರೂ ಅವರ ಸ್ಥಾನಕ್ಕಂತೂ ಚ್ಯುತಿ ತಂದಿಲ್ಲ. ಹೀಗಿರುವಾಗ ಓರ್ವ ಗೃಹಮಂತ್ರಿಯನ್ನು ದೂರವಿಟ್ಟು ಈ ಜಾಹೀರಾತು ಹೊರಬರಲು ಏನು ಕಾರಣ ಎಂಬುದು ಮುಂದೆ ಜಗಜ್ಜಾಹೀರಾಗಬೇಕಾಗಿದೆ.

ಅಲ್ಲದೇ ಆಹ್ವಾನಿತರಲ್ಲಿ ಹೆಸರು ಕೈಬಿಟ್ಟ ಕಾರಣ ಮೈಸೂರಿನಲ್ಲಿ ನರೇಂದ್ರ ಮೋದಿ ಅವರೊಂದಿಗೆ ಯೋಗಾಸನ ಪ್ರದರ್ಶನ ನೀಡಬೇಕಿದ್ದ ಗೃಹಮಂತ್ರಿ ಆರಗ ಜ್ಞಾನೇಂದ್ರ ಬೆಂಗಳೂರಿನ ಸ್ವಗೃಹದಲ್ಲಿ ಮಾಡಿರುವ ಯೋಗಾ ಭಂಗಿ ವಿರೋಧ ಪಕ್ಷ ಹಾಗೂ ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post