ಅಗ್ನಿಪಥ ಯೋಜನೆಯಿಂದ ನಿರುದ್ಯೋಗ ಹೆಚ್ಚಳ

ಬಡ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೊಳ್ಳಿ
ಪ್ರಚಾರದ ಅಬ್ಬರದಲ್ಲಿ ಶೋಷಿತರ ಧ್ವನಿ ಕಳೆದುಹೋಗಿದೆ
ರಾಮಾಯಣ ಬರೆದ ವಾಲ್ಮೀಕಿ ನೆನಪಿಸುವುದಿಲ್ಲ
ರಾಮನನ್ನು ವೈಭವೀಕರಿಸಿ ಬಿಜೆಪಿಯಿಂದ ರಾಜಕೀಯ 

ಪ್ಲೆಕ್ಸ್‌ನಲ್ಲಿ ಕಿಮ್ಮನೆ ಫೋಟೊ…?

ಇದೇ ವಿಚಾರಕ್ಕೆ ಕಳೆದ ವಾರ ಕಿಮ್ಮನೆ ರತ್ನಾಕರ್‌ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಾಗ ಭಾಷಣದಲ್ಲಾಗಲಿ, ಕರಪತ್ರದಲ್ಲಾಗಲಿ ಮಂಜುನಾಥ ಗೌಡರ ಸುಳಿವೇ ಇರಲಿಲ್ಲ. ಆದರೆ ಇಂದಿನ ಪ್ರತಿಭಟನೆಯ ಬ್ಯಾನರ್‌ನಲ್ಲಿ ಕಿಮ್ಮನೆ ರತ್ನಾಕರ್‌ ಅವರ ಭಾವಚಿತ್ರವೂ ಇತ್ತು. ವಿಶೇಷವೆಂದರೆ ಬಹುತೇಕ ಪಕ್ಷದವರೇ ಮರೆತು ಬಿಟ್ಟಿರುವ ಮಾಜಿ ಶಾಸಕ ಕಡಿದಾಳು ದಿವಾಕರ್‌ ಅವರ ಚಿತ್ರವೂ ಇತ್ತು.

ಮೊದಲ ಸುತ್ತಿನ ಸಂಘಟನೆಯಲ್ಲಿ ಮೇಲುಗೈ ಸಾಧಿಸಿದ ಆರ್‌ಎಂಎಂ

ಒಂದೇ ವಿಚಾರಕ್ಕೆ ಒಂದೇ ಪಕ್ಷದಿಂದ ಎರಡು ಪ್ರತಿಭಟನೆ ಎಂಬ ಕಾರಣಕ್ಕೆ ಈ ಪ್ರತಿಭಟನಾ ಸಭೆ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆದರೆ ಕಿಮ್ಮನೆ ರತ್ನಾಕರ್‌ ನೇತೃತ್ವದ ಪ್ರತಿಭಟನೆಯಲ್ಲಿ ಸೇರಿದ್ದ ನಾಯಕರು ಕಾರ್ಯಕರ್ತರಿಗಿಂತಲೂ ಈ ಪ್ರತಿಭಟನೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಸೇರಿ ಯಶಸ್ವಿಯಾಗಿದ್ದು ಸಂಘಟನೆಯಲ್ಲಿ ಆರ್‌ಎಂಎಂ ನಿಸ್ಸೀಮರು ಎಂಬುದನ್ನು ಸ್ಪಷ್ಟ ಪಡಿಸಿತ್ತು.

ನಾಪತ್ತೆಯಾದ ಯುವ ಕಾಂಗ್ರೆಸ್‌

ಬುಧವಾರ ಪತ್ರಿಕಾಗೋಷ್ಟಿ ಮಾಡಿದ್ದ ಯುವ ಕಾಂಗ್ರೆಸ್‌ ಮುಖಂಡರಾರು ಈ ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಕಾಂಗ್ರೆಸ್‌ ವಿದ್ಯಾರ್ಥಿ ಸಂಘಟನೆಯಾದ ಎನ್‌ಎಸ್‌ಯುಐನ ಅನೇಕ ಯುವಕರು ಪಾಲ್ಗೊಂಡಿದ್ದರು. ಬಹುತೇಕ ಜಿ.ಪಂ., ತಾ.ಪಂ., ಗ್ರಾ.ಪಂ., ಪಟ್ಟಣ ಪಂಚಾಯಿತಿ ಸದಸ್ಯರು ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ವಿಶೇಷವೆಂದರೆ ಇವರಲ್ಲಿ ಕಿಮ್ಮನೆ ರತ್ನಾಕರ್‌ ನೇತೃತ್ವದ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದರು.

ದೇಶದಲ್ಲಿ ಅರಾಜಕತೆ ಎಬ್ಬಿಸಿ ನಿಜವಾದ ಸಮಸ್ಯೆಗಳನ್ನು ಮರೆ ಮಾಚುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಆರ್ಥಿಕವಾಗಿ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ದುರ್ಭಲಗೊಳ್ಳುತ್ತಿದೆ. ಅಗ್ನಿಪಥ ಎಂಬ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ತಂದಿರುವ ಹಿಂದೆ ಹಣಕಾಸು ಬಿಕ್ಕಟ್ಟಿನಿಂದ ಪಾರಾಗುವ ಹುನ್ನಾರ ಅಡಗಿದೆ. ಹಿಂದಿನಂತೆ ಸೈನಿಕರನ್ನು 20 ವರ್ಷ ಗುತ್ತಿಗೆ ಅವಧಿಗೆ ನೇಮಿಸಿಕೊಂಡರೆ ಹೆಚ್ಚು ಸಂಬಳ ಭತ್ಯೆ ಮುಂತಾದವರುಗಳನ್ನು ನೀಡಬೇಕಾಗುತ್ತದೆ. ಆದರೆ 4 ವರ್ಷದ ಈ ಅಗ್ನಿಪಥ ಯೋಜನೆಯಲ್ಲಿ ಅಂತಹ ಯಾವ ಅನುಕೂಲ ಅಂಶಗಳು ಇರುವುದಿಲ್ಲ. 4 ವರ್ಷದ ನಂತರ ನಿರುದ್ಯೋಗ ಹೆಚ್ಚಳವಾಗುತ್ತದೆ. ಮೂಲಭೂತವಾಗಿ ಹಿಂದುಳಿದ ದಲಿತ, ಬಡವರ್ಗದವರ ವಿದ್ಯಾಭ್ಯಾಸ ಉಜ್ವಲ ಭವಿಷ್ಯವನ್ನು ಪ್ರಚಾರದ ಅಬ್ಬರದಡಿ ನಾಶಗೊಳಿಸುವ ಯೋಜನೆ ಇದೆ ಎಂದು ಕಾಂಗ್ರೆಸ್‌ ಮುಖಂಡ, ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಡಾ. ಆರ್.ಎಂ. ಮಂಜುನಾಥ ಗೌಡ ಹೇಳಿದರು.

ತೀರ್ಥಹಳ್ಳಿ ತಾಲ್ಲೂಕು ಕಚೇರಿ ಎದುರು ಪಕ್ಷದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹಿಂದುಳಿದವರು, ದಲಿತ ವರ್ಗವನ್ನು ಮೌಢ್ಯಕ್ಕೆ ತಳ್ಳುತ್ತಿದ್ದಾರೆ. ರಾಮಾಯಣ ದರ್ಶನಂ ಬರೆದ ವಾಲ್ಮೀಕಿ ಮರೆಮಾಚಿ ರಾಮನನ್ನು ವೈಭವೀಕರಿಸುತ್ತಿರುವ ಹಿಂದಿನ ಬಿಜೆಪಿ ಸಂಚು ಜನರಿಗೆ ಅರ್ಥವಾಗಬೇಕಿದೆ. ವಾಸ್ತವವಾಗಿ ಅವರಿಗೆ ಕುವೆಂಪು, ದಾ.ರಾ. ಬೇಂದ್ರೆ, ಯು.ಆರ್.‌ ಅನಂತಮೂರ್ತಿ, ಶಿವರಾಮ ಕಾರಂತರಂತಹ ಸಾಹಿತಿಗಳು ಯಾವ ತತ್ವಾದರ್ಶಗಳನ್ನು ಹೇಳಿದರು ಕೂಡ ಬಿಜೆಪಿಯವರಿಗೆ ತಿಳಿದಿಲ್ಲ. ಯುಗದ ಕವಿ ಜಗದ ಕವಿ ಎಂದು ಬೇದ್ರೆಯವರಿಂದಲೇ ಕರೆಯಲ್ಪಟ್ಟ ಕುವೆಂಪು ಯಕಶ್ಚಿತ್‌ ಒಬ್ಬ ವಾಟ್ಸಪ್‌ ಸಾಹಿತಿ ಲೇವಡಿ ಮಾಡುತ್ತಿದ್ದರು ಆತನನ್ನು ಇನ್ನೂ ಕೂಡ ಕಿತ್ತೊಗೆಯಲು ಈ ಸರ್ಕಾರಕ್ಕೆ ಸಾಧ್ಯವಾಗದಿರುವುದು ವಿಪರ್ಯಾಸದ ಪರಮಾವಧಿ ಎಂದರು.

ಸಾಮಾಜಿಕ ಹೋರಾಟಗಾರ ಎಸ್.ಟಿ. ದೇವರಾಜ್‌ ಮಾತನಾಡಿ, ದಲಿತ, ಶೂದ್ರ ಸಮೂದಾಯದ ಮೀಸಲಾತಿ ಕಿತ್ತುಕೊಂಡು ಶಿಕ್ಷಣದಿಂದ ವಂಚಿಸಿ ವಿದ್ಯಾವಂತ ಯುವಕರನ್ನು ಅಗ್ನಿವೀರ ಮಾಡಲು ಹೊರಟಿದ್ದಾರೆ. 25 ವರ್ಷದಲ್ಲಿ ಮೇಲ್ವರ್ಗದ ಗುಲಾಮಗಿರಿ ಮರುಕಳಿಸಲಿದೆ. ಶೂದ್ರರ ಮಕ್ಕಳು ಸರ್ಕಾರದ ಉನ್ನತ ಅಧಿಕಾರಕ್ಕೆ ಹೋಗಬಾರದು ಎಂಬ ಸಂಚು ಇದರಲ್ಲಿ ಅಡಗಿದೆ. ಕಾಲೇಜು ಸೇರುವುದನ್ನು ತಡೆಯಲು ರೂಪಿಸಿದ ದುರಂತ ನೇಮಕಾತಿ ಇದಾಗಿದೆ. ದೇಶದಲ್ಲಿ 3.86 ಲಕ್ಷ ಬಡ ಯುವಕರು ಅಗ್ನಿಪಥ ನೇಮಕಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ದೇಶದ ಬಡತನವನ್ನು ಅಳೆಯಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ದೂರಿದರು.

ಯಾವ ಧರ್ಮವೂ ಮನುಷ್ಯನನ್ನು ಕೊಲ್ಲು ಎಂದು ಹೇಳುವುದಿಲ್ಲ. ಉದಯಪುರದಲ್ಲಿ ಧರ್ಮಾಂಧರಿಂದ ನಡೆದಿರುವ ಘಟನೆ ಹೇಯ ಮತ್ತು ಖಂಡನೀಯ. ಇದನ್ನು ಮುಸ್ಲೀಂ ಸಮಾಜ ಒಕ್ಕರಲಿಂದ ಖಂಡಿಸಿದೆ. ಅದೇ ರೀತಿ ಈ ಹಿಂದೆ ಹಿಂದೂ ಕೋಮುವಾದಿಗಳಿಂದ ರಾಜಸ್ಥಾನ, ಕಾಶ್ಮೀರ ಮುಂತಾದ ಕಡೆಗಳಲ್ಲಿ ಬರ್ಬರವಾಗಿ ಅಮಾಯಕ ಮುಸ್ಲೀಂರು ಹತ್ಯೆಯಾದಾಗ ಒಕ್ಕೊರಲಿನ ಖಂಡನೆ ಅದರಿಂದ ಬರಲಿಲ್ಲ. ಪ್ರಜ್ಞಾವಂತರು ಯಾವುದೇ ಧರ್ಮದ ಕೋಮುವಾದಿಗಳ ಕೊಲೆಗಡುಕ ಸಿದ್ದಾಂತವನ್ನು ಖಂಡಿಸಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತುಲ್ಲಾ ಅಸಾಧಿ ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ. ಇದೊಂದು ರೀತಿಯ ಸೇಲ್ಸ್‌ ಮನ್‌ ರೀತಿಯ ಸರ್ಕಾರ. ಆಕರ್ಷಕ ಘೋಷಣೆಗಳ ಮೂಲಕ ಜನರನ್ನು ಮರಳು ಮಾಡುವುದರಲ್ಲೇ ಸಾಧನೆ ಮಾಡುತ್ತಿದೆಯೇ ಎಂದು ಸಮಸ್ಯೆಗಳ ನಿರ್ಮೂಲನೆಯಲ್ಲಿ ಅಗ್ನಿಪಥದಂತಹ ಯೋಜನೆ ಕೂಡ ಈ ರೀತಿಯ ಆಕರ್ಷಕ ಮುಖವಾಡದ ಯೋಜನೆ. ಒಂದು ರಾಜ್ಯ ಬೌಧಿಕವಾಗಿ ಬಲಿಷ್ಠವಾಗಿರುವುದು ಅಲ್ಲಿನ ಜನಪರ ಸಾಹಿತ್ಯ ಹಾಗೂ ವಿಚಾರವನ್ನು ಎಷ್ಟು ಗೌರವಿಸಿದೆ ಎಂಬುವುದರ ಮೇಲೆ ಆದರೆ ಚಕ್ರತೀರ್ಥ, ಸೂಲಿಬೆಲೆಯಂತಹ ಸುಳ್ಳುಗಾರರು ಕೂಡ ಈಗಿನ ರಾಜ್ಯ ಸರ್ಕಾರದ ಭಾಷೆಯಲ್ಲಿ ತಜ್ಞರಾಗಿದ್ದಾರೆ ಎಂದು ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜೀನಾ ವಿಕ್ಟರ್‌ ಹೇಳಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಹಾರೋಗೊಳಿಗೆ ಪದ್ಮನಾಭ್‌, ಟಿ.ಎಲ್.‌ ಸುಂದರೇಶ್‌, ಕಡಿದಾಳು ತಾರಾನಾಥ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಬನಮ್‌, ಸದಸ್ಯರುಗಳಾದ ಮಂಜುಳಾ ನಾಗೇಂದ್ರ, ಗೀತಾ ರಮೇಶ್‌, ಬಿ. ಗಣಪತಿ, ಸುಶೀಲ ಶೆಟ್ಟಿ, ರತ್ನಾಕರ್‌ ಶೆಟ್ಟಿ ಹಾಗೂ ಸುಷ್ಮ ಸಂಜಯ್‌, ಸುಮ ಸುಬ್ರಮಣ್ಯ, ರಾಘವೇಂದ್ರ ಶೆಟ್ಟಿ, ಪಡುವಳ್ಳಿ ಹರ್ಷೇಂದ್ರ ಕುಮಾರ್‌, ಕೆಪಿಸಿಸಿ ಜಿಲ್ಲಾ ವಕ್ತಾರ ರಮೇಶ್‌ ಶೆಟ್ಟಿ, ಸುಧೀರ್‌, ಕರಿಮನೆ ಮಧುಕರ್‌, ಕುರುವಳ್ಳಿ ನಾಗರಾಜ್‌, ಭುಜಂಗ ಪೂಜಾರಿ, ಶೃತಿ ವೆಂಕಟೇಶ್‌, ಹಾರೋಗೊಳಿಗೆ ವಿಶ್ವನಾಥ, ಕೇಳೂರು ಮಿತ್ರ ಮುಂತಾದವರು ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post