ಕಂದಾಯ ಇಲಾಖೆ ಎಡವಟ್ಟು

ಕೇಸ್‌, ಕೌಂಟರ್‌ ಕೇಸ್‌ ಕಳ್ಳಾಟ
ಮಲ್ಲೇಸರ ಗ್ರಾಮದ ರೈತ ಚಂದ್ರಶೇಖರ್‌ ಮೇಲೆ ಗಂಭೀರ ಹಲ್ಲೆ
ಗೃಹಸಚಿವರ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಮರೀಚಿಕೆ…!

ಗೃಹಸಚಿವ ಆರಗ ಜ್ಞಾನೇಂದ್ರರ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ಪೊಲೀಸ್‌ ಇಲಾಖೆ ಕೇಸ್‌, ಕೌಂಟರ್‌ ಕೇಸ್‌ನಲ್ಲೇ ಮುಳುಗಿದಂತಿದೆ. ದಾಖಲಾಗುವ ದೂರುಗಳ ಕುರಿತು ಪರಿಶೀಲನೆ ಮಾಡದೆ ಏಕಾಏಕಿ ಎಫ್‌ಐಆರ್‌ ದಾಖಲಾಗುತ್ತಿರುವುದು ಗೃಹಸಚಿವರಿಗೆ ಒಂದು ರೀತಿಯಲ್ಲಿ ಸವಾಲಾದಂತಿದೆ.

ಇಂತದೊಂದು ಪ್ರಕರಣಕ್ಕೆ ತೀರ್ಥಹಳ್ಳಿ ತಾಲ್ಲೂಕಿನ ಮಲ್ಲೇಸರ ಗ್ರಾಮದ ಘಟನೆಯೊಂದು ಸಾಕ್ಷಿಯಾದಂತಿದೆ. ಮಲ್ಲೇಸರ ಗ್ರಾಮದ ಸರ್ವೆ ನಂಬರ್112ರಲ್ಲಿ ಚಂದ್ರಶೇಖರ್‌ ಎಂಬುವವರು ಪಿತ್ರಾರ್ಜಿತ 9 ಗುಂಟೆ ಬಾಗಾಯ್ತು ಭೂಮಿಯಲ್ಲಿ ಸಾಗುವಳಿ ಹೊಂದಿದ್ದು ಇದು ಭೂ ಸುಧಾರಣೆ ನಿಯಮದ ಗೇಣಿ ಜಮೀನಾಗಿದೆ. ಚಂದ್ರಶೇಖರ್‌ ಅವರ ತಂದೆ ರಂಗಪ್ಪಗೌಡ ಹೆಸರಲ್ಲಿ ಭೂ ನ್ಯಾಯ ಮಂಡಳಿ ಫಾರಂ ನಂಬರ್‌ 10 ದಾಖಲೆಯಡಿ ಭೂ ಮಂಜೂರಾತಿ ನೀಡಿದೆ.

2017ರ ವರೆಗೆ ಆರ್‌ಟಿಸಿ ದಾಖಲೆಯಲ್ಲಿ ರಂಗಪ್ಪಗೌಡ ಹೆಸರು ನಮೂದಾಗಿದೆ. ಕಂದಾಯ ಇಲಾಖೆ ಎಡವಟ್ಟಿನಿಂದಾಗಿ ಆರ್‌ಟಿಸಿ ದಾಖಲೆಯಲ್ಲಿ ರಂಗಪ್ಪಗೌಡ ಹೆಸರು ಇದ್ದಕ್ಕಿದ್ದಂತೆ ಮಾಯವಾಗಿದೆ. ಈ ಸಂಬಂಧ ಚಂದ್ರಶೇಖರ್‌ ಆರ್‌ಟಿಸಿ ದಾಖಲೆ ಸರಿಪಡಿಸುವಂತೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ 5 ವರ್ಷ ಕಳೆದರು ಈವರೆಗೂ ದಾಖಲೆ ಸರಿಯಾಗಿಲ್ಲ.

ಈ ನಡುವೆ ಚಂದ್ರಶೇಖರ್‌ ಅವರ ದಾಯಾದಿಗಳು ಸಲ್ಲಿಸಿದ್ದ ಅರ್ಜಿಯ ಕಾರಣಕ್ಕೆ ಜೂನ್‌ 28ರಂದು ಸಾಗುವಳಿ ಭೂಮಿಯ ಸರ್ವೆ ಕಾರ್ಯ ನಡೆಸಲು ಸಿಬ್ಬಂದಿಗಳು ತೆರಳಿದ್ದಾರೆ. ಈ ಸಂದರ್ಭ ಚಂದ್ರಶೇಖರ್‌ ಅವರಿಗೆ ಸರ್ವೆ ಕುರಿತು ಯಾವುದೇ ನೊಟೀಸ್ ನೀಡಿಲ್ಲ. ಆದರೂ ಮಾಹಿತಿ ತಿಳಿದು ಚಂದ್ರಶೇಖರ್‌ ಮತ್ತವರ ಸಹೋದರರು ಸ್ಥಳದಲ್ಲಿ ಸೇರಿದ್ದರು. ಸರ್ವೆ ಆರಂಭವಾಗುತ್ತಿದ್ದಂತೆ ಆಕ್ಷೇಪಣೆ ವ್ಯಕ್ತವಾಗಿದೆ. ಆಗ ದಾಯಾದಿಗಳಾದ ಸತ್ಯಮೂರ್ತಿ, ಗುರುಮೂರ್ತಿ ಮತ್ತು ಕೆಲವು ಯುವಕರು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂಬುದು ಚಂದ್ರಶೇಖರ್‌ ಅವರ ದೂರಾಗಿದೆ. ಹಲ್ಲೆಯಿಂದ ಗಾಯಗೊಂಡ ಚಂದ್ರಶೇಖರ್‌ ತಕ್ಷಣ ಪಟ್ಟಣದ ಜೆಸಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿದ್ದಾರೆ. ಈ ಸಂಬಂಧ ಪೊಲೀಸರು ಚಂದ್ರಶೇಖರ್‌ ಅವರಿಂದ ಆಸ್ಪತ್ರೆಯಿಂದ ಹೇಳಿಕೆ ಪಡೆದಿದ್ದಾರೆ. ಚಂದ್ರಶೇಖರ್‌ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಸ್ವಾರಸ್ಯ ಎಂದರೆ ಚಂದ್ರಶೇಖರ್‌ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಜೆಸಿ ಆಸ್ಪತ್ರೆಗೆ ದಾಖಲಾಗಿ ಚಂದ್ರಶೇಖರ್‌ ವಿರುದ್ಧ ದೂರು ಸಲ್ಲಿಸಿದ್ದಾರೆ. ದೂರು, ಪ್ರತಿದೂರು ಪಡೆದ ಪೊಲೀಸರು ನೇರವಾಗಿ ಎಫ್‌ಐಆರ್‌ ದಾಖಲಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯುವ ಮೊದಲೇ ಹಲ್ಲೆಗೊಳಗಾದವರ ಮೇಲೂ ಕ್ರಿಮಿನಲ್‌ ಪ್ರಕರಣ ದಾಖಲಾಗಿರುವುದು ಈಗ ಪ್ರಶ್ನೆಗೆ ಕಾರಣವಾದಂತಿದೆ. ಪ್ರಕರಣ ದಾಖಲಾಗುವ ಸಂಬಂಧ ಸರ್ಕಾರ ಏಕ ರೂಪದ ನಿಯಮ ಜಾರಿಯಲ್ಲಿಟ್ಟಿರುವುದು ಗೊಂದಲ ಮೂಡುವಂತೆ ಮಾಡಿದೆ ಎಂಬುದು ಹಲ್ಲೆಗೊಳಗಾದ ಚಂದ್ರಶೇಖರ್‌ ಅವರ ಅಳಲು. ಯಾವುದೇ ತಪ್ಪು ಮಾಡದೆ ಹಲ್ಲೆಗೊಳಗಾಗಿ ಕೇಸು ಹಾಕಿಸಿಕೊಳ್ಳಬೇಕಾದ ನೋವು ಅವರನ್ನು ಕಾಡುತ್ತಿದೆ.

ಕಳ್ಳಾಟಕ್ಕೆ ಸಂತ್ರಸ್ತರ ಪರದಾಟ

ಪೊಲೀಸ್‌ ಇಲಾಖೆ ಪ್ರಕರಣದ ಭೇದಿಸುವ ಬದಲು ಕೌಂಟರ್‌ ಕೇಸ್‌ ದಾಖಲು ಮಾಡುತ್ತಿದ್ದಾರೆ ಎಂಬ ಆರೋಪ ಬಹಳ ದಿನದಿಂದ ತೀರ್ಥಹಳ್ಳಿಯಲ್ಲಿ ಇದೆ. ಯಾವುದೇ ಪ್ರಕರಣ ನಡೆದರೂ ಇಲಾಖೆ ಕಾರ್ಯ ನಿರ್ವಹಣೆ ದೂರಿಗೆ ಕಾರಣವಾಗುತ್ತಿದೆ. ನಿಜವಾದ ಸಂತ್ರಸ್ತರ ದೂರಿಗೆ ನ್ಯಾಯ ಸಿಗುತ್ತಿಲ್ಲ. ಎರಡೂ ಕಡೆಯ ದೂರುಗಳನ್ನು ಪಡೆದು ಪ್ರಕರಣವನ್ನು ತಣ್ಣಗಾಗಿಸುವ ಪ್ರಯತ್ನ ಠಾಣೆಯಲ್ಲಿ ಮಾಮೂಲಿಯಂತಿದೆ. ಖಡಕ್‌ ಪೊಲೀಸ್‌ ಗಿರಿ ಎಂಬುದು ಗೃಹಸಚಿವರ ಸ್ವಕ್ಷೇತ್ರದಲ್ಲಿ ಸಾಸಿವೆ ಕಾಳಿನಷ್ಟು ಇಲ್ಲವಾದಂತಿದೆ.

ಗೃಹಸಚಿವರಿಗೆ ತಿಳಿದಿಲ್ಲವೇ…?

ತೀರ್ಥಹಳ್ಳಿ ರಾಜಕಾರಣದಲ್ಲಿ ಸುದೀರ್ಘ 45 ವರ್ಷಗಳ ಸಾಮಾಜಿಕ ಹೋರಾಟ ನಡೆಸಿ ಆಡಳಿತದ ಕಾರ್ಯ ವೈಖರಿಯ ಬಗ್ಗೆ ಅಪಾರ ಅನುಭವ ಹೊಂದಿರುವ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಮಲ್ಲೇಸರ ಗ್ರಾಮದ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕಂದಾಯ ಇಲಾಖೆ ಮಾಡಿದ ಎಡವಟ್ಟು ದಾಯಾದಿಗಳ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ಘಟನೆಯ ನೈಜತೆಯನ್ನು ತಿಳಿಯದೆ ಕೇಸು, ಕೌಂಟರ್‌ ಕೇಸ್‌ನಲ್ಲೇ ಕಾಲ ತಳ್ಳುವಂತ ಕಾರ್ಯದಲ್ಲಿ ಇರುವ ಕುರಿತು ಗೃಹಸಚಿವರು ಸೂಕ್ಷ್ಮವಾಗಿ ಗಮನಿಸದಿದ್ದರೆ ಜನತೆಗೆ ನ್ಯಾಯ ಸಿಗಲು ಸಾಧ್ಯವೇ…?

ಭೂ ನ್ಯಾಯ ಮಂಡಳಿ ಮೂಲಕ ಸ್ಥಳೀಯ ಭೂ ವ್ಯಾಜ್ಯ ನಡವಳಿಗಳನ್ನು ನಿಯಮಾನುಸಾರ ಮಾಡುತ್ತಿಲ್ಲ. ಬಗರ್‌ ಹುಕುಂ ಸಾಗುವಳಿದಾರರಿಗೂ ಭೂ ನ್ಯಾಯ ಮಂಡಳಿಯಿಂದ ಸರಿಯಾದ ನ್ಯಾಯ ಸಿಗುತ್ತಿಲ್ಲ. ಎಡವಟ್ಟು ಸೃಷ್ಟಿಸಿದ ಕಂದಾಯ ಇಲಾಖೆ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕಾದಂತಹ ಅನಿವಾರ್ಯತೆಯೂ ಇದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post