ಪುಂಡು ಪೋಕರಿಗಳು ಪಠ್ಯ ಪುಸ್ತಕ ರೂಪಿಸುವಂತಾಗಿದೆ

ಆರಗ ಜ್ಞಾನೇಂದ್ರ ಅತ್ಯಂತ ದುರ್ಬಲ ಗೃಹಮಂತ್ರಿ
ಬಿಜೆಪಿಗೆ ಸಂವಿಧಾನ ಹಾಗೂ ಬಹುತ್ವದಲ್ಲಿ ನಂಬಿಕೆ ಇಲ್ಲ
ಬಿ.ಕೆ. ಹರಿಪ್ರಸಾದ್‌ ವಾಗ್ದಾಳಿ

ಪಠ್ಯ ಪುಸ್ತಕಗಳು ಈ ದೇಶದ ನೆಲ ಜಲದ ಮಹಾನ್‌ ಸಾಧಕರ ಜೀವನವನ್ನು ಕಟ್ಟಿಕೊಡುವ ಮೂಲಕ ಮಕ್ಕಳನ್ನು ಸತ್ಪಜೆಗಳನ್ನಾಗಿ ರೂಪಿಸುತ್ತವೆ. ಯಾವಾಗಲು ಪಠ್ಯ ಪುಸ್ತಕವನ್ನು ಸಮರ್ಥರಾದ ಶಿಕ್ಷಣ ತಜ್ಞರು, ಸಮಾಜಪರ ಚಿಂತಕರು ರೂಪಿಸಬೇಕು. ಪುಂಡು ಪೋಕರಿಗಳೆಲ್ಲ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯಲ್ಲಿ ಸೇರಿಕೊಂಡರೆ ಸಮಾಜದಲ್ಲಿ ಅಶಾಂತಿ ಉಂಟಾಗುವುದು ಸಹಜ, ಪಠ್ಯ ಪುಸ್ತಕ ವಾಪಾಸ್ಸು ಪಡೆಯುವ ತನಕ ಹೋರಾಟ ಮುಂದುವರೆಯಲಿದೆ ಎಂದು ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ವಿಧಾನಸಭಾ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿದರು.

ರೋಹಿತ್‌ ಚಕ್ರತೀರ್ಥ ಯಾವ ಶಿಕ್ಷಣ ತಜ್ಞನೂ ಅಲ್ಲ ಈತ ನಾಗಪುರ ಯೂನಿವರ್ಸಿಟಿ ಕೊಡುಗೆ ಅಷ್ಟೇ. ಅವರಿಗೆ ಯಾವತ್ತೂ ಈ ದೇಶದ ಸಂವಿಧಾನ ಬಹುಸಂಸ್ಕೃತಿಯ, ಜೀವನ ಪದ್ಧತಿಯ ವಿವಿಧತೆಯಲ್ಲಿ ಏಕತೆ ಎಂಬ ತತ್ವದಲ್ಲಿ ನಂಬಿಕೆಯೇ ಇಲ್ಲ. ಅದು ಪದೇ ಪದೇ ಸಾಭೀತಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲೂ ಕೂಡ ಸಮಾಜ ವಿರೋಧಿ ಧೋರಣೆಯನ್ನು ಮುಂದುವರೆಸಲಾಗಿದೆ ಎಂದು ಹರಿಹಾಯ್ದರು.

ಗೃಹಸಚಿವ ಆರಗ ಜ್ಞಾನೇಂದ್ರ ಕುರಿತು ಮಾತನಾಡಿದ ಅವರು ಆರಗ ಜ್ಞಾನೇಂದ್ರ ರಾಜ್ಯ ಇಲ್ಲಿಯವರೆಗೆ ಕಂಡಂತ ಅತ್ಯಂತ ದುರ್ಬಲ ಗೃಹಮಂತ್ರಿ. ಅವರಿಗೆ ನೈತಿಕತೆ ಇದ್ದಿದ್ದರೆ ಅವರ ಸುಪರ್ದಿಯಲ್ಲಿ ಬರುವ ಎಸ್. ಐ ನೇಮಕಾತಿ ಹಗರಣದಲ್ಲಿ ಇಷ್ಟು ಹೊತ್ತಿಗಾಗಲೇ ರಾಜಿನಾಮೆ ನೀಡಬೇಕಿತ್ತು. ಮೈಸೂರು ಅತ್ಯಾಚಾರ ಪ್ರಕರಣ, ಶಿವಮೊಗ್ಗ ಗಲಭೆ, ಪೊಲೀಸ್‌ ಕುರಿತಾದ ಅಗೌರವರ ಹೇಳಿಕೆಯಲ್ಲಿ ಅವರ ದೌರ್ಬಲ್ಯವನ್ನು ಜಗಜ್ಜಾಹೀರು ಮಾಡಿಕೊಂಡಿದ್ದಾರೆ. ಅಲ್ಲದೇ ಕುವೆಂಪು ಇಡೀ ದೇಶದ ಆಸ್ತಿ ವಿಪರ್ಯಾಸ ಎಂದರೆ ಕುವೆಂಪುರನ್ನು ನಿಂದಿಸಿದಾಗ ಅವರ ತಾಲ್ಲೂಕು ಹಾಗೂ ಜಿಲ್ಲೆಯವರಾಗಿ ಖಂಡಿಸಬಹುದಿತ್ತು. ಆದರೆ ಆರಗ ಜ್ಞಾನೇಂದ್ರ ಮೌನವಾಗಿರುವ ಮೂಲಕ ಕುವೆಂಪುಗೆ ಅವಮಾನ ಮಾಡಿದ್ದಾರೆ. ಮಾತ್ರವಲ್ಲದೇ ಪರೋಕ್ಷವಾಗಿ ರೋಹಿತ್‌ ಚಕ್ರತೀರ್ಥನ ಆಲೋಚನೆಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಅವರು 70 ವರ್ಷ ಕಾಂಗ್ರೆಸ್‌ ಕಷ್ಟಪಟ್ಟು ಬೆಳೆಸಿದ ದೇಶವನ್ನು ಮೋದಿ ವಿನಾಶದತ್ತ ಕೊಂಡೊಯ್ಯುತ್ತಿದ್ದಾರೆ. ಸದಾಕಾಲ ಧರ್ಮದ ಅಮಲಿಗೆ ಯುವಜನತೆಯನ್ನು ದೂಡುತ್ತಾ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿದ್ದಾರೆ. ಬುಲ್ಡೋಜರ್‌ ಸಂಸ್ಕೃತಿ ದೇಶದ ಎಲ್ಲಾ ಕಡೆ ಕಂಡುಬರುತ್ತಿದೆ. ಈಗ ನೂಪೂರ್‌ ಶರ್ಮಾ ಜಿಂದಾಲ್‌ ಎಂಬ ಅವಿವೇಕಿಗಳು ಎಬ್ಬಸಿದ ರಾದ್ದಾಂತವನ್ನು ಮರೆಮಾಚಲು ನ್ಯಾಷನಲ್‌ ಹೆರಾಲ್ಡ್‌ ಪ್ರಕರಣವನ್ನು ಮುನ್ನೆಲೆಗೆ ತಂದು ರಾಹುಲ್‌ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಿ ಪ್ರಚಾರ ಮಾಡಲಾಗುತ್ತಿದೆ. ಕಾಂಗ್ರೆಸ್‌ ಹೋರಾಟದಿಂದ ಎದ್ದು ಬಂದ ಪಕ್ಷ ಓಡಿ ಹೋಗುವ ಪ್ರಶ್ನೆ ಇಲ್ಲ ಎಂದರು.

ತೀರ್ಥಹಳ್ಳಿ ಕಾಂಗ್ರೆಸ್‌ನಲ್ಲಿ ನಾಯಕತ್ಬದ ಗೊಂದಲವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದನ್ನು ಜನರು ನೋಡಿಕೊಳ್ಳುತ್ತಾರೆ. ಪ್ರಜಾಪ್ರಭುತ್ವದ ಅಂತಸತ್ವ ಇರುವುದೇ ಪ್ರಶ್ನೆ ಮಾಡುವುದರಲ್ಲಿ ಹೇಳಿದನ್ನೆಲ್ಲಾ ಒಪ್ಪುವ ನಾಗಪುರ ಸಂಸ್ಕೃತಿ ಕಾಂಗ್ರೆಸ್‌ನಲ್ಲಿ ಇಲ್ಲ. ಹಾಗಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ ಸಹಜ ಎಂದರು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್‌ ನಾಯಕ ಆರ್.ಎಂ. ಮಂಜುನಾಥ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್‌, ಟಿ.ಎಲ್.‌ ಸುಂದರೇಶ್ ಇದ್ದರು.




ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post