ಆರ್‌ಎಸ್‌ಎಸ್‌ಗೆ ಸಂವಿಧಾನದ ಮೇಲೆ ಗೌರವ ಇಲ್ಲ

ಅಂಬೇಡ್ಕರ್‌ ಅವರಿಗೆ ದೇಶದ ಜಾತಿ ವ್ಯವಸ್ಥೆಯ ಕುರಿತು ಆಳವಾದ ಜ್ಞಾನವಿತ್ತು.
ಬಸವಣ್ಣ ಜಾತಿ ವ್ಯವಸ್ಥೆಯಿಂದ ಸಿಡಿದು ಮನುಷ್ಯ ಧರ್ಮ ಸೃಷ್ಟಿಸಿದರು
40 ವರ್ಷಗಳ ರಾಜಕೀಯ ಅನುಭವದಲ್ಲಿ ಜ್ಞಾನೇಂದ್ರರಂತಹ ಅಸಮರ್ಥ ಗೃಹಸಚಿವನನ್ನು ಕಂಡಿಲ್ಲ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡದ ಮನಸ್ಸುಗಳಿಗೆ ನೋವಾಗುವ ಕೆಲಸ ರಾಜ್ಯದಲ್ಲಿ ನಡೆಯುತ್ತಿದೆ. ಕನ್ನಡದ ಅಸ್ಮಿತೆಗೆ ಧಕ್ಕೆಯಾದಾಗ ಕನ್ನಡಪರ ಮನಸುಗಳು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಇಂದು ಬಸವಣ್ಣ, ಅಂಬೇಡ್ಕರ್‌, ಕುವೆಂಪು, ನಾರಾಯಣ ಗುರುಗಳಂತಹಾ ಮಹಾಪುರುಷರ ಚರಿತ್ರೆಯನ್ನು ತಿರುಚಲಾಗುತ್ತಿದೆ. ದೇಶದ ಭವಿಷ್ಯ ನಿರ್ಮಾಣ ಮಾಡುವ ಮಕ್ಕಳಿಗೆ ಎಂತಹಾ ಜ್ಞಾನ ತುಂಬಿಕೊಡಬೇಕು ಎಂಬುದು ಬಹಳ ಮುಖ್ಯ.

ಬಸವಣ್ಣನವರು ವೈದಿಕ ಧರ್ಮಕ್ಕೆ ಪರ್ಯಾಯವಾದ ಮನುಷ್ಯ ಧರ್ಮದ ಸ್ಥಾಪನೆ ಮಾಡಿದರು. ಅವರು ಮೌಢ್ಯ, ಕಂದಾಚಾರ, ಜಾತಿ ವ್ಯವಸ್ಥೆಗಳ ವಿರುದ್ಧ ಹೋರಾಟ ಮಾಡಿ ಮನುಷ್ಯ ಮನುಷ್ಯನಾಗಿ ಬಾಳುವ ಅವಕಾಶವಾಗಬೇಕು ಎಂದು ದುಡಿದರು. ವೈದಿಕ ಧರ್ಮ ಮನುಷ್ಯ ವಿರೋಧಿಯಾಗಿತ್ತು, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮುಂತಾದ ಹಲವು ಮನುಷ್ಯ ವಿರೋಧಿ ಆಚರಣೆಗಳು ಇದ್ದವು. ಜಾತಿ, ಧರ್ಮಗಳ ನಡುವೆ ಕಂದರ ಸೃಷ್ಟಿಯಾಗಬಾರದು ಎಂದು ಹೋರಾಟ ಮಾಡಿದ ಬಸವಣ್ಣನವರ ಆಶಯಗಳಿಗೆ ವಿರುದ್ಧವಾಗಿ ಜನರನ್ನು ಮತ್ತೆ ವೈದಿಕ ಧರ್ಮದ ಕಡೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ಇಂದು ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕುವೆಂಪು ವಿಶ್ವಮಾನವ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿ ಸೌಹಾರ್ದ ನಡಿಗೆ ಪಾದಯಾತ್ರೆ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅಂಬೇಡ್ಕರ್‌ ಅವರು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗದೇ ಹೋಗಿದ್ದರೆ ಈ ದೇಶಕ್ಕೆ ಇಂತಹಾ ಯೋಗ್ಯ ಸಂವಿಧಾನ ಸಿಗುತ್ತಿರಲಿಲ್ಲ. ಆರ್‌ಎಸ್‌ಎಸ್‌ ಮತ್ತು ಅಂಗ ಸಂಸ್ಥೆಗಳಿಗೆ ಸಂವಿಧಾನ ರಚನೆಯಾದ ದಿನದಿಂದಲೂ ಅದರ ಬಗ್ಗೆ ಗೌರವ ಇಲ್ಲ. ಕಾರಣ ಸಂವಿಧಾನ ಸಮಾನತೆ, ಜಾತ್ಯಾತೀತತೆಯನ್ನು ಸಾರುತ್ತದೆ, ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಇದು ಮನುವಾದಿಗಳಿಗೆ ಇಷ್ಟವಿಲ್ಲ ಎಂದರು.

ಅಂಬೇಡ್ಕರ್‌ ಅವರು ಸೇರಿ 7 ಜನ ಸಂವಿಧಾನ ಕರಡು ರಚನಾ ಸಮಿತಿ ಸದಸ್ಯರಾಗಿದ್ದರು. ಅದರಲ್ಲಿ ಟಿ.ಟಿ ಕೃಷ್ಣಮಾಚಾರಿ ಕೂಡ ಒಬ್ಬರು. ಇವರ ಜೊತೆ ಬಹಳಷ್ಟು ಮಂದಿ ಕಾನೂನು ತಜ್ಞರಿದ್ದರು, ಆದರೆ ಅಂಬೇಡ್ಕರ್‌ ಅವರಿಗೆ ಈ ದೇಶದ ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆ ಬಗ್ಗೆ ಇದ್ದ ಜ್ಞಾನ ಬೇರೆ ಯಾರಿಗೂ ಇರಲಿಲ್ಲ. ಆದ್ದರಿಂದ ಇವುಗಳಿಗೆ ಸೂಕ್ತ ಪರಿಹಾರ ಕೊಡುವ ಕೆಲಸವನ್ನು ಸಂವಿಧಾನದ ಮೂಲಕ ಅವರು ಮಾಡಿದ್ದಾರೆ.

ಕಿಮ್ಮನೆ ರತ್ನಾಕರ್ ಅವರಿಂದ ಆರಂಭವಾದ ಚಳವಳಿಗೆ ರಾಜಕೀಯ ರೂಪ ಕೊಡಬಾರದು, ರಾಜಕೀಯ ರೂಪ ಪಡೆಯದೆ ಇದ್ದರೆ ಇದು ಹೆಚ್ಚು ಯಶಸ್ವಿಯಾಗಲು ಸಾಧ್ಯ ಎಂದ ಅವರು ಬಸವರಾಜ ಬೊಮ್ಮಾಯಿ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ವಿಸರ್ಜನೆ ಮಾಡಿದ್ದಾರೆ, ಆದರೆ ಆ ಸಮಿತಿ ಶಿಫಾರಸ್ಸು ಮಾಡಿದ್ದ ಪಠ್ಯಗಳನ್ನು ತಿರಸ್ಕಾರ ಮಾಡಿಲ್ಲ. ಶಿಕ್ಷಣ ಸಚಿವ ನಾಗೇಶ್‌ ಅವರ ತಂದೆ ಚಂದ್ರಶೇಖರಯ್ಯ ಅವರು ರಾಮಕೃಷ್ಣ ಹೆಗಡೆ ಅವರ ಶಿಷ್ಯ, ಆದರೆ ಈ ಪುಣ್ಯಾತ್ಮ ನಾಗೇಶ್ ಆರ್‌ಎಸ್‌ಎಸ್ ಸೇರಿಕೊಂಡು ಬರೀ ಸುಳ್ಳು ಹೇಳುತ್ತಾರೆ. ಇಂಥವರು ಮಕ್ಕಳಿಗೆ ವಿದ್ಯೆ ಕಲಿಸಲು ಅರ್ಹರೆ? ಇಲ್ಲಿನ ಶಾಸಕ ಜ್ಞಾನೇಂದ್ರರಿಗೆ ಜ್ಞಾನವೇ ಇಲ್ಲ. ಆತ ಅಜ್ಞಾನಿ. ಕರ್ನಾಟಕ ಕಂಡ ಅತ್ಯಂತ ಅಸಮರ್ಥ ಗೃಹ ಸಚಿವ ಅಂದರೆ ಆರಗ ಜ್ಞಾನೇಂದ್ರ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹಾ ಅಸಮರ್ಥ ಗೃಹ ಸಚಿವರನ್ನೇ ನಾನು ನೋಡಿಲ್ಲ ಎಂದು ವ್ಯಂಗ್ಯವಾಡಿದರು.

ವೇದಿಕೆಯಲ್ಲಿ ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ, ಹಿರಿಯ ಪತ್ರಕರ್ತ ದಿನೇಶ್‌ ಆಮಿನ್‌ ಮಟ್ಟು, ಸಾಹಿತಿ ನಾ.ಡಿಸೋಜ, ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜಪ್ಪ, ಮುಖಂಡ ಕೆ.ಟಿ. ಗಂಗಾಧರ್‌, ಡಿಎಸ್‌ಎಸ್‌ ಜಿಲ್ಲಾಧ್ಯಕ್ಷ ಗುರುಮೂರ್ತಿ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮದ್‌, ಮಾಜಿ ಸಚಿವ ವೈ.ಎಸ್‌.ವಿ. ದತ್ತ, ಪ್ರೊ. ರಾಜೇಂದ್ರ ಚೆನ್ನಿ, ಕಸಪಾ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹೆಚ್.ಎಸ್.‌ ಸುಂದರೇಶ್‌ ಇದ್ದರು. ಪಾದಯಾತ್ರೆಯನ್ನು ಸಂಗೀತ ನಿರ್ದೇಶಕ ಹಂಸಲೇಖ ಕುಪ್ಪಳ್ಳಿಯ ಕವಿಶೈಲದಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿದರು.

ಬೆಂಗಳೂರಿಗೆ ವಿಶ್ವಮಾನವ ಜ್ಯೋತಿ

ಕುಪ್ಪಳ್ಳಿಯ ಕವಿಶೈಲದಿಂದ ಸಾಂಕೇತಿಕವಾಗಿ ಬೆಂಗಳೂರಿಗೆ ವಿಶ್ವಮಾನವ ಜ್ಯೋತಿ ಹೊರಡಿಸಲಾಗಿದೆ. ತೀರ್ಥಹಳ್ಳಿ, ತರಿಕೆರೆ, ಕಡೂರು, ಅರಸೀಕೆರೆ, ತುಮಕೂರು ಮಾರ್ಗವಾಗಿ ಜೂನ್‌ 17ರ ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಕೆಂಪೇಗೌಡ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನ ಸೇರಲಿದೆ. ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ಜ್ಯೋತಿಯ ಜವಾಬ್ದಾರಿ ನಿರ್ವಹಿಸಲಿದೆ ಎಂದು ಜಿಲ್ಲಾ ಸಂಚಾಲಕ ನೆಂಪೆ ದೇವರಾಜ್‌ ತಿಳಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post