ಬಹಳ ದಿನ ಉಳಿಯದ ಆರಗ ಸಚಿವರಾದ ಹರ್ಷ

ಕ್ಷೇತ್ರ ಬಿಜೆಪಿಯಲ್ಲಿ ಬೂದಿ ಮುಚ್ಚಿದಂತಿರುವ ಭಿನ್ನಮತದ ಕೆಂಡ
ಹಣ ಇಲ್ಲದವರಿಗೆ ಪಕ್ಷದಲ್ಲಿಲ್ಲ ಗೌರವ


ಆರಗ ರಾಜಕೀಯ ಶೈಲಿ ಬದಲು

ಸಚಿವರಾದ ಮೇಲೆ ಆರಗ ಜ್ಞಾನೇಂದ್ರ ಅವರ ರಾಜಕಾರಣದ ಶೈಲಿ ಭಾರೀ ಬದಲಾವಣೆಯಾದಂತಿದೆ. ಕ್ಷೇತ್ರದಲ್ಲಿ ಕೆಲವರು ಆರಗ ಜ್ಞಾನೇಂದ್ರ ಹೆಸರಲ್ಲಿ ಚಲಾಯಿಸುತ್ತಿರುವ ಅಧಿಕಾರ ಅವರ ರಾಜಕಾರಣಕ್ಕೆ ಮುಳುವಾಗುವ ಸಾಧ್ಯತೆ ಈಗಾಗಲೇ ಕ್ಷೇತ್ರದಲ್ಲಿ ಸೃಷ್ಟಿಯಾದಂತಿದೆ. ಪ್ರತಿಯೊಂದಕ್ಕೂ ಆರಗ ಜ್ಞಾನೇಂದ್ರ ಕೆಲವು ಆಪ್ತ ಬೆಂಬಲಿಗರನ್ನೇ ನಂಬಿಕೊಂಡು ಅಧಿಕಾರ ಚಲಾಯಿಸುತ್ತಿರುವುದು ಕೆಲವು ಅಪಸ್ವರಕ್ಕೆ ಕಾರಣವಾದಂತಿದೆ. ಅಧಿಕಾರ ಶಾಶ್ವತವಲ್ಲ ಎಂಬ ಸಂಗತಿ ಅರಿವಿದ್ದರು ಗೃಹಸಚಿವರ ಕೆಲವು ಬೆಂಬಲಿಗರ ಕಿತಾಪತಿ ರಾಜಕೀಯವಾಗಿ ಸವಾಲಾದಂತಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಪೂರ್ವ ರಾಜಕಾರಣದ ಕಾವು ತೀರ್ಥಹಳ್ಳಿ ಕ್ಷೇತ್ರದಲ್ಲಿ ನಿಧಾನವಾಗಿ ಗರಿಗೆದರುತ್ತಿರುವ ನಡುವೆ ಆಡಳಿತರೂಢ ಬಿಜೆಪಿಯಲ್ಲಿ ಭಿನ್ನಮತ ಬೂದಿ ಮುಚ್ಚಿದ ಕೆಂಡದಂತಿದೆ.

ಕ್ಷೇತ್ರದ ಶಾಸಕ, ಪಕ್ಷದ ಹಿರಿಯ ನಾಯಕ ಆರಗ ಜ್ಞಾನೇಂದ್ರ ಪ್ರಥಮ ಬಾರಿಗೆ ಸಚಿವರಾಗಿ ಅತೀ ಮಹತ್ವದ ಗೃಹಖಾತೆ ಅಧಿಕಾರ ಸ್ವೀಕರಿಸುತ್ತಿದಂತೆ ಬಿಜೆಪಿ ವಲಯದಲ್ಲಿ ಬಾರೀ ಹರ್ಷ ಮೂಡಿತ್ತು. ದಿನ ಕಳೆದಂತೆ ಬಿಜೆಪಿಯಲ್ಲಿ ಸಂಭ್ರಮದ ಹರ್ಷ ತಣ್ಣಗಾಗಿದ್ದು ಇದೀಗ ಅಸಮಾಧಾನದ ಕಟ್ಟೆ ನಿಧಾನವಾಗಿ ಒಡೆದಂತಿದೆ.

ಆರಗ ಜ್ಞಾನೇಂದ್ರ ಬಳಿ ನೇರವಾಗಿ ಯಾರೂ ಅಸಮಾಧಾನ ಹೊರ ಹಾಕುತ್ತಿಲ್ಲ. ಹೋದಲ್ಲಿ ಬಂದಲ್ಲಿ, ನಿಂತಲ್ಲಿ ಕೆಲ ಮುಖಂಡರು, ಕಾರ್ಯಕರ್ತರು ಸಿಟ್ಟಾಗುತ್ತಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಿದ ನಮಗೆ ಸಚಿವರ ಹತ್ತಿರ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಪಕ್ಷದಲ್ಲಿ ಭುಗಿಲೇಳುತ್ತಿದೆ.

ಸರ್ಕಾರದ ವಿವಿಧ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಕದಲ್ಲೂ ಪಕ್ಷದ ನಿಷ್ಟಾವಂತರನ್ನು ಗುರುತಿಸುವ ಜವಾಬ್ದಾರಿಯಲ್ಲಿ ನಾಯಕತ್ವ ವಿಫಲವಾಗಿದೆ. ಅಧಿಕಾರ ಅನುಭವಿಸಿದವರಿಗೆ, ಅಧಿಕಾರ ಇದ್ದವರಿಗೆ ಸಮಿತಿಯಲ್ಲಿ ಸ್ಥಾನ ಒದಗಿಸಲಾಗಿದೆ ಎಂಬ ಅಪಸ್ವರ ಪಕ್ಷದಲ್ಲಿ ಕೇಳಿಬಂದಿದೆ.

ತಣ್ಣನೆ ಮುಖಂಡರು

ಪಕ್ಷದ ಪ್ರಮುಖರಾದ ರಾಜ್ಯ ಕಾಂಪೋಸ್ಟ್‌ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಗೆ ಪ್ರಬಲ ಅಕಾಂಕ್ಷೆ ವ್ಯಕ್ತಪಡಿಸಿದ್ದ ಬೇಗುವಳ್ಳಿ ಸತೀಶ್‌, 2013ರಲ್ಲಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಆಗಿ ಸ್ಪರ್ಧಿಸಿ ಗಣನೀಯ ಮತ ಪಡೆದು 2019ರಲ್ಲಿ ಬಿಜೆಪಿ ಸೇರ್ಪಡೆಗೊಂಡ ಪ್ರಸ್ತುತ ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕರಾದ ಆರ್.‌ ಮದನ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಅಶೋಕ್‌ಮೂರ್ತಿ ಸೇರಿದಂತೆ ಅನೇಕ ಪ್ರಮುಖ ಮುಖಂಡರುಗಳ ತಣ್ಣನೆಯ ರಾಜಕಾರಣ ಪಕ್ಷದಲ್ಲಿ ಹೆಚ್ಚು ಚರ್ಚೆಗೀಡಾಗಿದೆ. ಪಕ್ಷದ ಮೇಲ್ತರದ ಮುಖಂಡರುಗಳ ಸರ್ಕಾರದ ಕಾರ್ಯವೈಖರಿ ಪಕ್ಷದ ಸ್ಥಳೀಯ ಹಂತದ ಕೆಲ ಪದಾಧಿಕಾರಿ, ಮುಖಂಡರ, ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾದಂತಿದೆ.

ದಕ್ಕದ ಪ್ರತಿಫಲ

2018ರ ವಿಧಾನಸಭಾ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಅವರನ್ನು 22 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸಲು ಶ್ರಮಿಸಿದ್ದ ಬಿಜೆಪಿ ಕಾರ್ಯಕರ್ತರು ಈಗ ಉತ್ಸಾಹ ಕಳೆದುಕೊಂಡಂತಿದ್ದಾರೆ. ಯಾರೋ ಉದ್ದಾರಕ್ಕೆ ನಮ್ಮ ಜೀವನ ಬಲಿ ಕೊಡಬೇಕೆ ಎಂಬಲ್ಲಿಂದ ಆರಂಭವಾಗುವ ಅಸಮಾಧಾನ ಬೈಗುಳದಲ್ಲಿ ಕೊನೆ ಆಗುತ್ತಿದೆ. ಸುಮಾರು 40 ವರ್ಷದಿಂದ ನಿರಂತರವಾಗಿ ಆರಗ ಜ್ಞಾನೇಂದ್ರ ಅವರನ್ನು ಬೆಂಬಲಿಸಿದ ವಿವಿಧ ಜಾತಿ, ವರ್ಗಕ್ಕೆ ಸೇರಿದ್ದ ಕಾರ್ಯಕರ್ತರನ್ನು ಮತದಾರರನ್ನು ಪಕ್ಷದ ನಾಯಕತ್ವ ಈಗ ಗುರುತಿಸುತ್ತಿಲ್ಲ. ಸಚಿವರ ಆಪ್ತ ವಲಯದಲ್ಲಿನ ಕೆಲವರಿಂದಾಗಿ ಹಣ ಇಲ್ಲದ ಕಾರ್ಯಕರ್ತರಿಗೆ ಗೌರವವೇ ಇಲ್ಲದಂತಾಗಿದೆ ಎಂಬ ಅಳಲು ಪಕ್ಷದಲ್ಲಿ ಹೆಚ್ಚಾಗುತ್ತಿದೆ. ಪ್ರತಿ ಚುನಾವಣೆಯಲ್ಲೂ ಪಕ್ಷ, ಅಭ್ಯರ್ಥಿಗಾಗಿ ಕೆಲಸ ಮಾಡಿದವರು ನಿರ್ಲಕ್ಷ್ಯಗೀಡಾಗಿದ್ದಾರೆ. ಪಕ್ಷದ ನಾಯಕರ ಮನೆಗೆ ನೂರಾರು ಬಾರಿ ಅಲೆದರು ಯಾವುದೇ ಕೆಲಸವಾಗುತ್ತಿಲ್ಲ. ವಿವಿಧ ಸರ್ಕಾರಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಅರ್ಜಿ, ಮನವಿಗೆ ಪುರಸ್ಕಾರ ಸಿಗುತ್ತಿಲ್ಲ. ಪ್ರತಿಪಕ್ಷಗಳ ಮುಖಂಡರ ವಿರೋಧ ಕಟ್ಟಿಕೊಂಡು ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಕ್ಕೆ ಈಗ ತಕ್ಕ ಪ್ರತಿಫಲ ಸಿಗುತ್ತಿದೆ ಎಂಬ ಕೆಲ ಮುಖಂಡರ, ಕಾರ್ಯಕರ್ತರ ಆಕ್ರೋಶ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಂತಿದೆ.

ಕಳೆದುಹೋದ ಪೇಜ್‌ ಪ್ರಮುಖ್‌

ಪಕ್ಷಕ್ಕಾಗಿ ನಿರಂತರವಾಗಿ ದುಡಿದ ಅನೇಕ ಪ್ರಮುಖರು ಸೈಡ್‌ಲೈನ್‌ ಆದಂತಿದೆ. ಹಿರಿಯ, ಪ್ರಮುಖ ಮುಖಂಡರ ಮಾತಿಗೆ ಪಕ್ಷದಲ್ಲಿ ಕವಡೇಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ವಿವಿಧ ಚುನಾವಣೆ ಸಂದರ್ಭ ಪಕ್ಷದ ಸ್ಥಳೀಯ ಮುಖಂಡರು ಮತದಾರರಿಗೆ ನೀಡಿದ ಭರವಸೆ ಈಡೇರಿಸಲಾಗದೆ ತಳಮಳಕ್ಕೀಡಾಗಿದ್ದಾರೆ. ಮತದಾರರಿಗೆ ಮುಖ ತೋರಿಸಲಾಗದೆ ಇಕ್ಕಟ್ಟಿಗೆ ಸಿಕ್ಕಿದ್ದಾರೆ.  ಫೇಜ್‌ ಪ್ರಮುಖ್‌ ಎಂದು ಗುರುತಿಸಿಕೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದವರು ಈಗ ಪಕ್ಷದಲ್ಲಿ ಕಳೆದುಹೋದಂತಿದೆ. ಪೇಜ್‌ ಪ್ರಮುಖ್‌ ಎಂದು ಹುದ್ದೆ ಪಡೆದವರು ಈಗ ಪಕ್ಷದಲ್ಲಿ ಲೆಕ್ಕಕ್ಕಿಲ್ಲದಂತಾಗಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post