ಆಗುಂಬೆ ರಸ್ತೆ ನಿರ್ವಹಣೆ ಟಾಸ್ಕ್‌ಪೋರ್ಸ್‌ ಪಡೆ ನೇಮಿಸಿ

ಗ್ರಾ.ಪಂ. ಮಾಜಿ ಅಧ್ಯಕ್ಷ ಹಸಿರುಮನೆ ನಂದನ್‌ ಆಗ್ರಹ

ಕಳೆದ ನಾಲ್ಕಾರು ವರ್ಷಗಳಿಂದ ದಕ್ಷಿಣ ಕನ್ನಡ ಹಾಗೂ ಘಟ್ಟ ಪ್ರದೇಶದ ಎಲ್ಲಾ ಜಿಲ್ಲೆಗಳಿಗೆ ಪ್ರಮುಖ ಸಾರಿಗೆ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಗಳು ಶಿಥಿಲಗೊಳ್ಳುತ್ತಿದೆ. ಇದು ಆತಂಕಕಾರಿ.

ಈಗ ಮಳೆಗಾಲ ಆರಂಭವಾಗುತ್ತಿದ್ದು ದಕ್ಷಿಣ ಭಾರತದ ಚಿರಾಪುಂಜಿ ಎನಿಸಿರುವ ಆಗುಂಬೆಯಲ್ಲಿ ಸದಾಕಾಲ ರಭಸದ ಮಳೆ ಸುರಿಯುತ್ತದೆ. ಇತ್ತೀಚೆಗೆ ರಸ್ತೆಯ ದುರಸ್ಥಿಯ ಕಾರಣ ಒಂದು ಬದಿಯಲ್ಲಿ ಚರಂಡಿ ಸಂಪೂರ್ಣ ಮುಚ್ಚಲ್ಪಟ್ಟಿದ್ದು ನೀರು ಒಂದು ಭಾಗದ ಚರಂಡಿಯಿಂದ ಅದರ ಮಾಮೂಲಿ ಹಾದಿಯನ್ನು ಬಿಟ್ಟು ಎಲ್ಲೆಂದರಲ್ಲಿ ನುಗ್ಗುತ್ತಿದೆ. ಮಾಮೂಲಿ ಹಾದಿಗಳು ನೂರಾರು ವರ್ಷಗಳು ನೀರಿನ ಹರಿಯುವಿಕೆಯಿಂದ ಸ್ವಾಭಾವಿಕವಾಗಿ ನಿರ್ಮಾಣಗೊಂಡು ಅಲ್ಲಿನ ಪರಿಸಕ್ಕೆ ಪೂರಕವಾಗಿತ್ತು. ಆದರೆ ಈಗ ದೊಡ್ಡ ಗಾತ್ರ ಹಾಗೂ ರಭಸವಾಗಿ ಹರಿಯುವ ನೀರು ತನಗೆ ತೋಚಿದ ಕಡೆ ಹಾದಿಯನ್ನು ನಿರ್ಮಿಸಿಕೊಂಡು ಕಂದಕ್ಕೆ ಧುಮುಕುತ್ತಿರುವುದರಿಂದ ಮಣ್ಣಿನ ಪದರಗಳೇ ಸಡಿಲವಾಗುತ್ತಿದೆ. ಹಾಗಾಗಿ ಪ್ರತೀವರ್ಷವೂ ಇಲ್ಲಿ ಭೂ ಕುಸಿತ ಸಾಮಾನ್ಯ ಎಂಬಂತಾಗಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ ಶಾಶ್ವತವಾಗಿ ಘಾಟಿ ರಸ್ತೆಗಳು ಮುಚ್ಚಿಹೋಗಲಿದೆ.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಈ ತಕ್ಷಣ ಎಚ್ಚೆತ್ತುಕೊಂಡು ಮಳೆ ನೀರು ಅದರ ಹಿಂದಿನ ಹಾದಿಯಲ್ಲಿ ಹೋಗುವಂತೆ ಅಥವಾ ಸುರಕ್ಷಿತ ಸ್ಥಳದಲ್ಲಿ ಧುಮುಕುವಂತೆ ಮಾಡಲು ಟಾಸ್ಕ್‌ಪೋರ್ಸ್‌ ಪಡೆಯನ್ನು ಮಳೆಗಾಳ ಮುಗಿಯುವ ತನಕ ನೇಮಿಸಬೇಕು. ಮತ್ತು ಅವರ ಸುಪರ್ಧಿಗೆ ಕಟ್ಟಿಕೊಳ್ಳುವ ಚರಂಡಿ ಹಾಗೂ ನೀರನ್ನು ಶೀಘ್ರವಾಗಿ ಸರಿಪಡಿಸುವ ಜವಾಬ್ದಾರಿ ನೀಡಬೇಕು.

ಒಂದು ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಇದನ್ನು ನಿರ್ವಹಿಸಲು ಸಾಧ್ಯವಿಲ್ಲದಲ್ಲಿ ಅವರ ಮೂಲಕ ಗ್ರಾಮ ಪಂಚಾಯಿತಿಗೆ ಶಿಫಾರಸ್ಸು ಮಾಡಿ ಪಂಚಾಯಿತಿ ಮೂಲಕವಾದರೂ ಟಾಸ್ಕ್‌ಪೋರ್ಸ್‌ ಪಡೆ ನೇಮಿಸಬೇಕೆಂದು ಆಗುಂಬೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಆ ಭಾಗದ ಪರಿಸರ ಸೂಕ್ಷ್ಮತೆ ಹಾಗೂ ವೈವಿಧ್ಯತೆಯನ್ನು ಸಮರ್ಥವಾಗಿ ಬಲ್ಲ ಹಸಿರುಮನೆ ನಂದನ್‌ ಆಗ್ರಹಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post