ಕೂಡಲೇ ಬಂಧಿಸಿ ಶಿಕ್ಷಿಸಿ – ಆರ್‌ಎಂಎಂ ಆಗ್ರಹ

ದ.ರಾ. ಬೇಂದ್ರಯವರಿಂದಲೇ ಯುಗದ ಕವಿ, ಜಗದ ಕವಿ ಎಂದು ಕರೆಸಿಕೊಂಡ ಕುವೆಂಪು
ಕನ್ನಡ ಮಣ್ಣಿನ ಸಹಿಷ್ಣುತೆ, ಭವ್ಯ ಪರಂಪರೆಗೆ ಕಪ್ಪು ಚುಕ್ಕೆ ರೋಹಿತ್‌ ಚಕ್ರತೀರ್ಥ

ಯುಗದ ಕವಿ ಜಗದ ಕವಿ ಎಂದು ದ.ರಾ. ಬೇಂದ್ರೆ ಅವರಂತಹ ಮೇರು ಕವಿಯಿಂದಲೇ ಹೊಗಳಿಕೆಗೆ ಪಾತ್ರವಾಗಿ, ಮನುಕುಲದ ಒಳಿತಿಗಾಗಿ ವಿಶ್ವ ಮಾನವ ಸಂದೇಶ ಸಾರಿದ ಈ ದೇಶದ, ರಾಜ್ಯದ ವಿಶೇಷವಾಗಿ ತೀರ್ಥಹಳ್ಳಿ ಮಣ್ಣಿನ ಮೇರು ಕವಿ ಕುವೆಂಪು ಅವರನ್ನು ಹೀನಾಯವಾಗಿ ನಿಂದಿಸುವ, ನಾಡ ಧ್ವಜವನ್ನು ಒಳ ಉಡುಪಿಗೆ ಹೋಲಿಸುವ ವಿಕೃತ ಮನಸ್ಥಿತಿ ಉಳ್ಳ ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥನನ್ನು ಸರ್ಕಾರ ಕೂಡಲೇ ಬಂಧಿಸಿ ಶಿಕ್ಷಿಸಬೇಕೆಂದು ಎಂದು ಕರ್ನಾಟಕ ಕಾಂಗ್ರೆಸ್‌ ಸಹಕಾರ ವಿಭಾಗದ ರಾಜ್ಯ ಸಹಸಂಚಾಲಕರಾದ ಡಾ.ಆರ್. ಎಂ. ಮಂಜುನಾಥ ಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕನ್ನಡ ನಾಡು ಶರಣರು, ಸೂಫಿಗಳು, ವಚನಕಾರರು, ಭಕ್ತಿಪಂಥದ ದಾಸರು, ಆಧುನಿಕ ಸಾಹಿತ್ಯದಲ್ಲಿ ಪ್ರಖರ ವೈಚಾರಿಕ ವಾದಿಗಳನ್ನು ಸಹನೆಯಿಂದ ಆಲಿಸಿ ಭಿನ್ನಾಭಿಪ್ರಾಯಗಳನ್ನು ಅತ್ಯಂತ ಗೌರವಗಳಿಂದ ದಾಖಲಿಸಿದ ಪರಂಪರೆ ಹೊಂದಿದೆ. ಇಂತಹ ನಾಡಿನಲ್ಲಿ ರೋಹಿತ್‌ ಚಕ್ರತೀರ್ಥನಂತಹ ವ್ಯಕ್ತಿ ಹುಚ್ಚು ಹುಚ್ಚಾಗಿ ತಮ್ಮ ಜವಾಬ್ದಾರಿ ಮರೆತು ನಾಡಿನ ಕ್ಷೋಭೆಗೆ ಕಾರಣನಾಗುತ್ತಿರುವುದು ಖಂಡನೀಯ. ಕುವೆಂಪು, ತೇಜಸ್ವಿ, ಬರಗೂರು ರಾಮಚಂದ್ರಪ್ಪ, ನಾಗೇಶ್‌ ಹೆಗಡೆ ಹೀಗೆ ಜೀವಪರವಾಗಿ ಯೋಚಿಸುವ ಎಲ್ಲರ ಮೇಲೂ ಈತ ಹೀನಾಯವಾಗಿ ಬರೆದಿರುವ ಉದಾಹರಣೆಗಳಿವೆ. ಇಂತಹ ವ್ಯಕ್ತಿಯನ್ನು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಇರುವ ಪಠ್ಯ ಪುಸ್ತಕ ಸಮಿತಿಗೆ ಆರಿಸಿರುವುದೇ ಸರ್ಕಾರದ ತಪ್ಪು ನಿರ್ಧಾರ ಎಂದಿದ್ದಾರೆ.

ಶ್ರೀ ನಿರ್ಮಲಾನಂದ ಸ್ವಾಮೀಜಿ, ಬಸವ ಮೃತ್ಯುಂಜಯ ಸ್ವಾಮೀಜಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ನಾಡೋಜ ಹಂಪ ನಾಗರಾಜಯ್ಯ ಸೇರಿದಂತೆ ನಾಡಿನ ಹಿತ ಬಯಸುವವರು ಎಲ್ಲರೂ ಈತನ ನೇತೃತ್ವದ ಪ್ರಮಾದವನ್ನು ಕಟುವಾಗಿ ಖಂಡಿಸಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಚಕ್ರತೀರ್ಥನನ್ನು ಬಂಧಿಸುವಂತೆ ಮಂಜುನಾಥ ಗೌಡ ಆಗ್ರಹಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post