ಕುವೆಂಪು ನಿಂದಿಸಿದವರ ವಿರುದ್ಧ ಕ್ರಮ ಜರುಗಿಸಿ

ನಾಡಗೀತೆ ತಿರುಚಿ ಅಪಮಾನ
ಕುವೆಂಪು ನಿಂದಿಸಿದವರ ವಿರುದ್ಧ ಕ್ರಮ ಜರುಗಿಸಿ
ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ
ರಾಷ್ಟ್ರಕವಿ ಕುವೆಂಪು ಅವರನ್ನು ಅಸಂಸದೀಯ ಭಾಷೆಯಲ್ಲಿ ನಿಂದಿಸಿ ಲೇಖನ ಬರೆದಿರುವ ಮತ್ತು ನಾಡಗೀತೆಯನ್ನು ತಿರುಚಿ ಬರೆದಿರುವವರ ವಿರುದ್ಧ ಸೈಬರ್ ಕ್ರೈಮ್ ಅಡಿಯಲ್ಲಿ ಕಾನೂನು ಪ್ರಕಾರ ಸರ್ಕಾರವು ಕ್ರಮ ಜರುಗಿಸಲಿದೆ ಎಂದು ನಂಬಿದ್ದೇನೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆಯನ್ನು ಗೇಲಿ ಮಾಡಿ, ವಿಕೃತಗೊಳಿಸಿ, ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥ ಅವರ ಹಳೆಯ ಪೋಸ್ಟ್‌ ವೈರಲ್ ಆಗಿದೆ. ಲಕ್ಷ್ಮಣ ಆಕಾಶೆ ಕಾರ್ಕಳ ಎಂಬಾತ ಕುವೆಂಪು ಅವರ ಬಗ್ಗೆ ಬರೆದಿರುವ ಬರಹ ಅವಹೇಳನಕಾರಿಯಾಗಿದೆ ಎಂದು ಕನ್ನಡಿಗರು ಸಿಟ್ಟಿಗೆದ್ದಿದ್ದು, ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿಗೆ ರೋಹಿತ್‌ ಚಕ್ರತೀರ್ಥ ಅಧ್ಯಕ್ಷರಾಗಿರುವುದು ವಿವಾದಕ್ಕೆ ಕಾರಣವಾಗಿದೆ.

ನಮ್ಮ ನಾಡು ಕಂಡ ಅಪ್ರತಿಮ ಕವಿ, ದಾರ್ಶನಿಕ, ಸರ್ವೋದಯ ತತ್ವ ಪ್ರತಿಪಾದಕರಾದ ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯದ ಮೇರು ಕವಿಗಳು; ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಅವರ ಸಾಹಿತ್ಯ ಸರ್ವರನ್ನೂ ಒಳಗೊಳ್ಳುವ, ಸರ್ವರಹಿತ ಬಯಸುವ ಕ್ರಾಂತದೃಷ್ಟಿಯನ್ನು ಹೊಂದಿದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ   ಅಸಮಾನತೆಯನ್ನು ಮತ್ತು ಲಿಂಗಭೇದವನ್ನು ನಿವಾರಿಸಿಕೊಂಡು ಈ ನಾಡು "ಸರ್ವಜನಾಂಗದ ಶಾಂತಿಯ ತೋಟ"ವಾಗಬೇಕು ಎಂಬ ಕನಸು ಕಂಡವರು ಅವರು. ಅವರ 'ಕಾನೂರು ಹೆಗ್ಗಡತಿ' ಮತ್ತು 'ಮಲೆಗಳಲ್ಲಿ ಮದುಮಗಳು' ಮಹಾಕಾದಂಬರಿಗಳು, 'ಶೂದ್ರ ತಪಸ್ವಿ', 'ಜಲಗಾರ', 'ಬೆರಳ್ಗೆ ಕೊರಳ್' ಮುಂತಾದ ಶ್ರೇಷ್ಠ ನಾಟಕಗಳು, 'ರಾಮಾಯಣ ದರ್ಶನಂ' ಮಹಾಕಾವ್ಯ ಹಾಗೂ ಸಾವಿರಾರು ಪದ್ಯಗಳು, ಲೇಖನಗಳ ಮೂಲಕ ಕನ್ನಡ ಸಾಹಿತ್ಯದ ಕ್ಷಿತಿಜವನ್ನು ವಿಸ್ತರಿಸಿದ ಮಹಾಕವಿ ಕುವೆಂಪು.
     ಅವರು ತಮ್ಮ ಯೌವನದ ಕಾಲದಲ್ಲಿ ಬರೆದ 'ಜೈ ಭಾರತ ಜನನಿಯ ತನುಜಾತೆ' ಕವಿತೆಯು ಕಳೆದ ತೊಂಬತ್ತು ವರ್ಷಗಳಿಂದ ಕನ್ನಡಿಗರ ಹೃದಯದಲ್ಲಿ ನೆಲೆನಿಂತು, ದೇಶಭಕ್ತಿ ಮತ್ತು ನಾಡಪ್ರೇಮವನ್ನು ಉದ್ದೀಪಿಸಿದೆ. ಇದನ್ನು ಮನಗಂಡು ಕರ್ನಾಟಕ ಸರ್ಕಾರವು 'ಜೈ ಭಾರತ ಜನನಿಯ ತನುಜಾತೆ' ಗೀತೆಯನ್ನು ನಾಡಗೀತೆಯಾಗಿ ಘೋಷಿಸಿತು. ಅದನ್ನು ನಾಡಗೀತೆಯಾಗಿ ಘೋಷಣೆ ಮಾಡಬೇಕು ಎಂದು ಯಾರೂ ಕೇಳಿರಲಿಲ್ಲ. ಅದು ಸರ್ಕಾರವೇ ತೆಗೆದುಕೊಂಡ ತೀರ್ಮಾನವಾಗಿತ್ತು. ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಯಾಗಿರುವ ಅಧಿಕೃತ ನಾಡಗೀತೆಯನ್ನು ಹಾಡಿ ಕೋಟಿ ಕೋಟಿ ಕನ್ನಡಿಗರು ಸಂಭ್ರಮಿಸಿದ್ದಾರೆ, ಸಂಭ್ರಮಿಸುತ್ತಿದ್ದಾರೆ.
   ಆದರೆ ಈಚೆಗೆ ಕೆಲವರು ನಾಡಗೀತೆಯನ್ನು ತಿರುಚಿ ಬರೆದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಸರ್ಕಾರದ ತೀರ್ಮಾನವನ್ನು ಗೇಲಿ ಮಾಡುತ್ತಿರುವಂತಿದೆ. ಅಷ್ಟೇ ಅಲ್ಲ, ಮಹಾಕವಿಗಳೂ ರಾಷ್ಟ್ರಕವಿಗಳೂ ಆಗಿರುವ ಕುವೆಂಪು ಅವರ ಬಗ್ಗೆ ಅತ್ಯಂತ ಕೀಳುಭಾಷೆಯಲ್ಲಿ ಅವಹೇಳನಕಾರಿ ಲೇಖನಗಳನ್ನು ಬರೆದಿದ್ದಾರೆ. ನಾಡಗೀತೆಯನ್ನು ಅವಮಾನಿಸುವುದೆಂದರೆ  ರಾಷ್ಟ್ರಗೀತೆಯನ್ನು ಅವಮಾನಿಸಿದಂತೆ; ಹಾಗೂ ನೆಲದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. 
    ಪ್ರಯುಕ್ತ, ರಾಷ್ಟ್ರಕವಿ ಕುವೆಂಪು ಅವರನ್ನು ಅಸಂಸದೀಯ ಭಾಷೆಯಲ್ಲಿ ನಿಂದಿಸಿ ಲೇಖನ ಬರೆದಿರುವ ಮತ್ತು ನಾಡಗೀತೆಯನ್ನು ತಿರುಚಿ ಬರೆದಿರುವವರ ವಿರುದ್ಧ ಸೈಬರ್ ಕ್ರೈಮ್ ಅಡಿಯಲ್ಲಿ ಕಾನೂನು ಪ್ರಕಾರ ಸರ್ಕಾರವು ಕ್ರಮ ಜರುಗಿಸುತ್ತದೆಂದು ಭಾವಿಸುತ್ತೇವೆ. ಹಾಗೂ ಈ ಮೂಲಕ ಸರ್ಕಾರವು ಕಾನೂನು ಮತ್ತು ವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವವರನ್ನು ಕ್ಷಮಿಸುವುದಿಲ್ಲ ಎಂಬ ಸಂದೇಶ ರವಾನಿಸುತ್ತದೆ ಎಂಬುದು ನಮ್ಮ ಅಭಿಲಾಷೆಯಾಗಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post