ಭಗವಾಧ್ವಜ ಸಂಕುಚಿತ ಮನೋಭಾವ, ಅಶೋಕ ಚಕ್ರದ ಚಲನೆ ಇರಲಿ

‌ತ್ರಿವರ್ಣ ಧ್ವಜ ಮೀರಿದ ಚಿಂತನೆ ಬೆಳೆಯಬೇಕು
ಚಿಂದಿ ದಾರ, ಮಹಿಳೆಯರ ಆಕ್ರಂದನದ ವಿರಾವೇಶ ನನ್ನ ಧ್ವಜ
ಸಂವಿಧಾನ ಅವಮಾನಿಸುವ ಕೃತ್ಯಕ್ಕೆ ಭಾರತ ಸಾಕ್ಷಿ

ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಾಹಿತಿ ಶಿವಾನಂದ ಕರ್ಕಿ ಅವರ ಗರ್ಕು ಕಾದಂಬರಿ ಶನಿವಾರ ಅನಾವರಣಗೊಂಡಿತು.

 ಹೆಣಕ್ಕೂ ಅದೇ ಬೆಂಕಿ, ಹೋಮಕ್ಕೂ ಅದೇ ಬೆಂಕಿ ಎಂದು ಗುಲಾಬಿ, ತಿಮ್ಮಿ ಪರಸ್ಪರ ಮಾತನಾಡಿಕೊಳ್ಳತೊಡಗಿದರು. ನಾವು ಧರ್ಮಸ್ಥಳದ ಮಂಜುನಾಥಸ್ವಾಮಿ ಅಂತ, ತಿರುಪತಿಯ ತಿಮ್ಮಪ್ಪ ಅಂತ ಹೆಸರಿಟ್ಟುಕೊಂಡರೂ ನಮ್ಮನ್ನು ಮಂಜ, ತಿಮ್ಮ ಅಂತಲೇ ಕರೀತಾರೆ. ನಮ್ಮನ್ನು ಪೂರ್ತಿ ಹೆಸರು ಹೇಳಿ ಕರೆದರೆ ಅವರಿಗೆ ಸಮಾನ ಅಂತ ಆಗಲ್ವಾ? ಅದಕ್ಕಾಗೆ ನಮಗೆ ಆದಷ್ಟು ಎರಡು ಮೂರು ಅಕ್ಷರದ ಹೆಸರನ್ನೇ ಇಡ್ತಾರೆ - ಗರ್ಕು

ಕಾದಂಬರಿಯ ರೂಪಕ ಗರ್ಕು (ಕಾಡ್ಗಿಚ್ಚು) ಆರಿಸುವ ಮೂಲಕ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಮೊಗಳ್ಳಿ ಗಣೇಶ್‌, ಕಾಡ್ಗಿಚ್ಚು ಕುರಿತು ಬಯಲು ಸೀಮೆಯವರಿಗೆ ಗೊತ್ತಿರುವುದಿಲ್ಲ. ಗರ್ಕಿನಿಂದ ಕಾಡು ಸುಡುವುದನ್ನು ರೂಪಕವಾಗಿ ಬಳಸಲಾಗಿದ್ದು, ಸಮಾಜಕ್ಕೆ ಹಿಡಿದ ಅಂತರಾಳದ ಕಿಚ್ಚನ್ನು ಆರಿಸುವ ಬಗೆಯನ್ನು ಕೃತಿ ವಿವರಿಸಿದೆ. ತ್ರಿವರ್ಣ ಧ್ವಜದಲ್ಲಿ ದಮನಿತರ, ರೈತರ, ಶೋಷಿತರ, ಬೆವರು, ಶ್ರಮದ ದೇಶಪ್ರೇಮದ ನೂಲುಗಳು ಅಡಕವಾಗಿದೆ. ಭಗವಾಧ್ವಜ ಆ ಅರ್ಥ ನೀಡುವುದಿಲ್ಲ. ನೀಲಿ ಬಣ್ಣದ ಅಶೋಕ ಚಕ್ರ ಸಂಚಲನವನ್ನು ಮೂಡಿಸುವಂತೆ ಹರಿವ ನೀರಿನಂತೆ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಿಂತ ನೀರಿನ ಕೊಚ್ಚೆಯಲ್ಲಿ ಕ್ರಿಯಾಶೀಲತೆ ಅರಳುವುದಿಲ್ಲ. ಹರಿವ ನದಿ ಸುತ್ತಲಿನ ಪರಿಸರ, ಕಾಡು, ಜನಜೀವನ, ಅಭಿವೃದ್ದಿ ಎಲ್ಲವನ್ನು ಸೂಕ್ಷ್ಮ ಸಂವೇದನೆಯಿಂದ ಅರಿತುಕೊಳ್ಳುವ ಆಲೋಚನೆ ಹೊಂದುತ್ತದೆ. ಹೀಗಾಗಿ ಸಾವಿರಾರು ಜೀವರಾಶಿಗೆ ಸತ್ವಪೂರ್ಣ ಆಹಾರ ಒದಗಿಸುವ ಚಲನಶೀಲತೆ ಪಡೆದಿದೆ. ಅದೇ ರೀತಿ ಸಾಹಿತಿ ಕೂಡ ಒಂದು ಚೌಕಟ್ಟಿಗೆ ಒಳಗಾಗದೆ ಸಮಾಜದ ಅಂಕು-ಡೊಂಕುಗಳಿಗೆ ಉತ್ತರದಾಯಿತ್ವವಾಗಿ ಯೋಚಿಸುವಂತಾಗಬೇಕು.

ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಶಿವಾನಂದ ಕರ್ಕಿ ಆರೋಗ್ಯದ ಸಮಸ್ಯೆಗಳ ನಡುವೆಯೂ ಕಾದಂಬರಿಯನ್ನು ಬರೆದು ಮುಗಿಸಿರುವುದು ಶ್ಲಾಘನೀಯ. ಹೇಳಬೇಕು ಎಂದೆನಿಸಿದ ವಿಚಾರಗಳನ್ನು ನೇರವಾಗಿ ಅಕ್ಷರಕ್ಕೆ ಇಳಿಸಿದ್ದಾರೆ. ಮಲೆನಾಡಿನ ಪರಿಸರದ ಒಳಗೆ ಆಗುವ ಬದಲಾವಣೆಯನ್ನು ತಡೆಯುವ ಪ್ರಯತ್ನದಲ್ಲಿ ಲೇಖಕ ವಿಫಲವಾಗುವ ಸಂದರ್ಭ. ಬದಲಾವಣೆಯ ನಂತರ ಆಗುವ ಸಾಮಾಜಿಕ ಬದಲಾವಣೆ ತಿಳಿಸಿದ್ದಾರೆ. ನಾನು ಕೂಡ ತಡೆಯುವ ಪ್ರಯತ್ನ ಮಾಡಿ ತೊಂದರೆಗೆ ಒಳಗಾದ ಸಂದರ್ಭ ಇದೆ ಎಂದು ಹೇಳಿದರು.

ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಡಾ.ಜೆ.ಕೆ. ರಮೇಶ್‌ ಮಾತನಾಡಿ, ಕೃತಿ ಜಾಗತಿಕ ಮಟ್ಟದ ಆಶಯವನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಅಮೇಜಾನ್‌ ಕಾಡಿಗೆ ಬೆಂಕಿ ಬಿದ್ದಾಗಿನ ಸ್ಥಿತಿ, ಇನ್ನೆಲ್ಲೋ ಒಳಗಾಗುವ ಆಂತರಿಕ ಕಿಚ್ಚು ಕಾದಂಬರಿಯ ಒಳಗಿನ ಘನತೆಯನ್ನು ಹೆಚ್ಚಿಸಿದೆ. ಭಾರತದಂತಹ ಪ್ರಜಾಪ್ರಭುತ್ವ ಹೊಂದಿರುವ ದೇಶದಲ್ಲಿ ಧರ್ಮ ಹೆಸರಿನಲ್ಲಿ ಆಗುತ್ತಿರುವ ದೊಂಬಿ ಸಮಾಜ ಕೆಡಿಸುವಂತಾಗಿದೆ. ಮನುಷ್ಯ ಜಗತ್ತಿನ ಅಭಿವೃದ್ಧಿಯ ದಳ್ಳೂರಿ ದೇಶದ ವಿನಾಶವನ್ನು ಸೂಚಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ವಿಮರ್ಶಕ ಡಾ.ಜೆ.ಕೆ. ರಮೇಶ್, ಗೃಹಸಚಿವ ಆರಗ ಜ್ಞಾನೇಂದ್ರ, ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ ಗೌಡ, ಲೇಖಕ ಶಿವಾನಂದ ಕರ್ಕಿ ಮಾತನಾಡಿದರು.

ಮೋಹನ್‌ ಮುನ್ನೂರು ಆರಂಭ ಗೀತೆ ಹಾಡಿದರು. ನೆಂಪೆ ದೇವರಾಜ್‌ ಸ್ವಾಗತಿಸಿದರು. ಡಾ.ಬಿ.ಗಣಪತಿ ನಿರೂಪಿಸಿದರು.


ವಿಕಾರಗೊಂಡ ನಾಗರೀಕತೆ
ದೇಸಿ ಸಂಸ್ಕೃತಿ ಚಿಂತಕ, ವಾಗ್ಮಿ, ವಕೀಲ ಸುಧೀರ್‌ ಕುಮಾರ್‌ ಮುರೊಳ್ಳಿ ಮಾತನಾಡಿ, ಅಕೆಶಿಯಾ ನೆಡುತೋಪು ಸುಂದರವಾಗಿ ಅರಳಿದ್ದ ಮನುಷ್ಯನ ನಾಗರೀಕತೆಯನ್ನು ಹಂತ ಹಂತವಾಗಿ ದಮನಗೊಳಿಸಿದೆ. ಚಕ್ರ, ಸಾವೇಕ್ಕಲು, ಶರಾವತಿ ಮುಳುಗಡೆ ಸಂದರ್ಭ ಆದಂತಹ ಜನರ ಒಳಗಿನ ತಲ್ಲಣ ಸಂಸ್ಕೃತಿ ನಾಶಕ್ಕೆ ಕಾರಣವಾಗಿದೆ. ಅಲ್ಲಿ ಇದ್ದ ಕಾಡಿನ ಅವಲಂಭನೆಯನ್ನು ಅಧಿಕಾರಶಾಯಿತ್ವ ಹತೋಟಿ ತಂದಿದೆ. ಅಭಿವೃದ್ದಿಯ ಹೆಸರಿನಲ್ಲಿ ಮನುಷ್ಯ ತಲೆಮಾರುಗಳಿಂದ ಅನುಸರಿಸಿದ ನಾಗರೀಕತೆ ವಿರೂಪಗೊಂಡಿತು. ಎಂಪಿಎಂನಿಂದಾಗಿ ಆ ಎಲ್ಲ ಅಂತಃಸತ್ವ ಕಳೆದುಕೊಂಡ ಜನರ ಕಷ್ಟಗಳ ಬಗ್ಗೆ ಲೇಖಕ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ಹೊಸನಗರ ಶಾಸಕರೊಬ್ಬರು ಸೌತೆ ಏರಿ, ಬಸಳೆ, ತೊಂಡೆ ಚಪ್ಪರ ನೋಡಿ ಜಾಗ ನೀಡುವುದಾಗಿ ಹೇಳುತ್ತಿದ್ದರು. ಪ್ರಸ್ತುತ ರಾಜಕೀಯ ವಿದ್ಯಮಾನದಲ್ಲಿ ಆ ಮಾತುಗಳನ್ನು ಯಾವುದೇ ಪಕ್ಷ ಮುಖಂಡರು, ನಾಯಕರು ಹೇಳದಂತಹ ಸ್ಥಿತಿಗೆ ತಲುಪಿದ್ದೇವೆ. ಒಂದು ವೇಳೆ ಹೇಳಿದ್ದೇ ಆದರೆ ನಾಯಕನ ವಿರುದ್ಧ ಕಾರ್ಯಕರ್ತರು ಹೈಕಮಾಂಡ್‌ ಮೊರೆ ಹೋಗುತ್ತಾರೆ ಎಂದು ವಿನೋದವಾಗಿ ಹೇಳಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post