ತೀರ್ಥಹಳ್ಳಿ ದಂಧೆಯ ತವರೂರಾಯಿತೇ...?

ಇಸ್ಪೀಟ್‌, ಓಸಿ ದಂಧೆಗೆ ತೀರ್ಥಹಳ್ಳಿ ತತ್ತರ
ಒಂದಿಬ್ಬರು ಪೊಲೀಸರು ಭಾಗಿ
ಪೊಲೀಸರ ಜಾಣ ನಿದ್ದೆ - ಕುಟುಂಬಗಳಲ್ಲಿ ಕಣ್ಣೀರು
ಬೆಳೆದು ನಿಂತಿತೇ ದಂಧೆ - ಕೋಟ್ಯಾಂತರ ರೂ ವ್ಯವಹಾರ

ಆರಗ ಜ್ಞಾನೇಂದ್ರ ಅವರಿಗೆ ಮಹತ್ವದ ಗೃಹಸಚಿವ ಸ್ಥಾನ ದೊರಕಿದಾಗ ದಂಧೆಗಳಿಗೆಲ್ಲ ಕಡಿವಾಣ ಬೀಳಬಹುದು ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿತ್ತು. ಆದರೆ ದಂಧೆ ಮಾತ್ರ ನಿಲ್ಲದೆ ನಾಗಾಲೋಟದಲ್ಲಿ ಸಾಗುತ್ತಿರುವುದು ಆರಗ ಜ್ಞಾನೇಂದ್ರರವರಿಗೆ ಮುಜುಗರದ ಸಂಗತಿಯೆ. ಇಸ್ಪೀಟು, ಓಸಿ ದಂಧೆಯಲ್ಲಿ ತೊಡಗಿರುವ ಅನೇಕರು ಕಾನೂನಿನ ಮುಲಾಜಿಲ್ಲದಂತಿದ್ದಾರೆ. ಆರಗ ಇತ್ತ ಒಮ್ಮೆ ಚಿತ್ತ ಹರಿಸಿದರೆ ನೂರಾರು ಕುಟುಂಬಗಳ ಕಣ್ಣೀರು ಒರೆಸಲು ಸಾಧ್ಯವಿದೆ. ಸಚಿವ ಆರಗ ಜ್ಞಾನೇಂದ್ರ ಈ ನಿಟ್ಟಿನಲ್ಲಿ ಗಮನ ಹರಿಸುತ್ತಾರೆ ಎಂಬ ನಂಬಿಕೆ ಸಾರ್ವಜನಿಕರಲ್ಲಿ ಇನ್ನೂ ಇದೆ.

ಪೊಲೀಸರ ಗಾಢ ನಿದ್ದೆ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ತೀರ್ಥಹಳ್ಳಿ ಸಮಾಜ ಬಾಹಿರ ಕೃತ್ಯದ ದಂಧೆಗಳ ತವರೂರಾಗಿ ಪರಿವರ್ತನೆ ಆದಂತಿದೆ. ಸಾಹಿತ್ಯ, ಹೋರಾಟ ಕ್ಷೇತ್ರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಖರವಾಗಿ ಗುರುತಿಸಿಕೊಂಡ ತೀರ್ಥಹಳ್ಳಿಗೆ ದಂಧೆಯ ಕೃತ್ಯಗಳು ಕಪ್ಪು ಚುಕ್ಕೆ ಅಂಟಿಸಿದಂತೆ ಮಾಡಿದೆ. ಪೊಲೀಸರು ಖಡ್ಡಕ್‌ ಆಗಿ ಕೆಲಸ ಮಾಡಿದರೆ ದಂಧೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು. ಆದರೆ ಪೊಲೀಸರು ಖಡಕ್‌ ಕೆಲಸದಂತ್ತ ನಿಗಾ ವಹಿಸಿಲ್ಲ ಎಂಬ ದೂರು ಸಾರ್ವಜನಿಕರಿಂದ ಪದೇ ಪದೇ ಕೇಳಿ ಬರುತ್ತಲೇ ಇದೆ.

ತಾಲ್ಲೂಕಿನ ಆಯಕಟ್ಟಿನ ಕೆಲವು ಹಳ್ಳಿಗಳಲ್ಲಿ ಇಸ್ಪೀಟ್‌, ಓಸಿ, ಗಾಂಜಾ, ಕಳ್ಳನೋಟು ದಂಧೆ ಸದ್ದಿಲ್ಲದಂತೆ ಭರ್ಜರಿಯಾಗಿ ನಡೆಯುತ್ತಿದೆ. ಅಚ್ಚರಿಯೆಂದರೆ ಇದು ಪೊಲೀಸರಿಗೆ ಗೊತ್ತಿಲ್ಲ ಎಂದೇನಲ್ಲ. ಕೆಲ ಪೊಲೀಸರ ನಿಗಾದಲ್ಲೇ ದಂಧೆ ಸಲೀಸಾಗಿ ನಡೆಯುತ್ತಿದೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಬೇರೂರಿದೆ. ಅದಕ್ಕೆ ಪುಷ್ಠಿ ಎಂಬಂತೆ ಒಂದಿಬ್ಬರು ಪೊಲೀಸ್‌ ಸಿಬ್ಬಂದಿಗಳು ಇಸ್ಪೀಟು ಆಟದಲ್ಲಿ ಭರ್ಜರಿ ಹೂಡಿಕೆಯಲ್ಲಿರುವುದು ಗುಟ್ಟಾದ ಸಂಗತಿಯೇನಲ್ಲ. ಆ ಪೊಲೀಸ್‌ ಸಿಬ್ಬಂದಿ ನಯ ನಾಜೂಕಿನಿಂದ ಇಸ್ಪೀಟ್‌ ಆಟದ ಪೋಷಕರಂತೆ ಕರ್ತವ್ಯ ನಿರ್ವಹಿಸುತ್ತಿರುವುದು ನಾಚಿಕೆ ಎನಿಸಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿದೆ.

ಕಮ್ಮರಡಿ, ಗುಡ್ಡೇಕೇರಿ, ಮೇಗರವಳ್ಳಿ, ಕೈಮರ, ರಂಜದಕಟ್ಟೆ, ಬಸವಾನಿ, ಕಟ್ಟೇಹಕ್ಕಲು, ದೇವಂಗಿ, ಬೆಜ್ಜವಳ್ಳಿ, ಮಂಡಗದ್ದೆ, ಹಣಗೆರೆ, ಕನ್ನಂಗಿ, ಕೋಣಂದೂರು, ಹೆದ್ದೂರು, ನೊಣಬೂರು, ಆಗುಂಬೆ, ತೀರ್ಥಹಳ್ಳಿ ಪಟ್ಟಣ ಸೇರಿದಂತೆ ಅನೇಕ ಪ್ರಮುಖ ಊರುಗಳಲ್ಲಿ ಇಸ್ಪೀಟ್‌, ಓಸಿ ದಂಧೆ ನಡೆಯುತ್ತಿರುವ ಕುರಿತು ಸಾರ್ವಜನಿಕವಾಗಿ ದೂರಿದ್ದರು ಬೀಟ್‌ ಪೊಲೀಸರ ಕಾರ್ಯಾಚರಣೆ ಮಾತ್ರ ವಿಫಲ ಹಾದಿ ಹಿಡಿದಂತಿದೆ.

ಜಿಲ್ಲೆ, ಹೊರಜಿಲ್ಲೆಗಳ ಕೆಲವರು ಇಸ್ಪೀಟ್‌ ದಂಧೆಯಲ್ಲಿ ತೊಡಗಿದ್ದು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಓಸಿ ಬಿಡ್ಡಿಂಗ್‌ ಲಕ್ಷಾಂತರ ರೂಪಾಯಿಯಲ್ಲಿದೆ. ಕೀ ಪ್ಯಾಡ್‌ ಮೊಬೈಲ್‌ ನಲ್ಲಿ ಓಸಿ ಬಿಡ್ಡಿಂಗ್‌ ನ ವಹಿವಾಟು ನಡೆಯುತ್ತಿದೆ ಎಂಬ ರಹಸ್ಯ ಸಂಗತಿ ಆಡಳಿತದ ಗಮನದಲ್ಲಿದ್ದರೂ ಕ್ರಮ ಮಾತ್ರ ಜರುಗಿಸುತ್ತಿಲ್ಲ ಎಂಬ ಆರೋಪ ಇದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post