ಜೊತೆಗೆ ನಿಲ್ಲದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಎರಡನೇ ಸಾಲಿನ ನಾಯಕರು
ಮಾಜಿ ಶಿಕ್ಷಣ ಸಚಿವ ಕಿಮ್ಮನೆರತ್ನಾಕರ್ ಬಿರುಬಿಸಿಲಿನಲ್ಲಿ ಬೆವರು ಹರಿಸಿ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಮತ್ತು ಗೃಹಮಂತ್ರಿ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಹಮ್ಮಿಕೊಂಡಿದ್ದ ಸುಮಾರು 70 ಕಿ.ಮೀ.ಗಳ 5 ದಿನಗಳ ಪಾದಯಾತ್ರೆ ಆರಂಭದಲ್ಲಿ ಭರ್ಜರಿ ಸುದ್ದಿ ಮಾಡಿ ಅಂತಿಮವಾಗಿ ಕಾಂಗ್ರೆಸ್ ಜನಧ್ವನಿ ಸಮಾರಂಭದಲ್ಲಿ ಸ್ಪೋಟಗೊಳ್ಳದೇ ಹೋಗಿದ್ದು ಕಿಮ್ಮನೆ ಬೆಂಬಲಿಗರಲ್ಲಿ ನಿರಾಸೆ ಮೂಡಿಸಿದೆ.
ಪಾದಯಾತ್ರೆ ಸಮಾರೋಪಕ್ಕೆ
ಶಿವಮೊಗ್ಗದಲ್ಲಿ ಮೇ ೧೦ರಂದು ಜರುಗಿದ ಜನಧ್ವನಿ ವೇದಿಕೆಯಲ್ಲಿ ಸ್ವಾಗತ ದೊರೆಯಬಹುದು. ವೇದಿಕೆಯಲ್ಲಿ
ಆಸೀನರಾಗಿದ್ದ ಗಣ್ಯಾತಿಗಣ್ಯರು ಕಿಮ್ಮನೆಯ ಪಾದಯಾತ್ರೆ ಸಾಹಸವನ್ನು ಹಾರ ತುರಾಯಿ ಹಾಕಿ ಕೊಂಡಾಡಬಹುದು
ಎಂದು ನಿರೀಕ್ಷಿಸಿದ್ದ ಕಿಮ್ಮನೆ ಬೆಂಬಲಿಗರಿಗೆ ಕಡೇ ಪಕ್ಷ ಕೆಲವು ನಿಮಿಷಗಳ ಒಂದು ಭಾಷಣ ಕೂಡ ದೊರಕದೇ
ಇದ್ದದ್ದು, ಜಿಲ್ಲಾಧ್ಯಕ್ಷ ಸುಂದರೇಶ್‌ರ ಸ್ವಾಗತ
ಪ್ರಸ್ತಾಪದಲ್ಲಿ ಪಾದಯಾತ್ರೆ ಕುರಿತು ಒಂದು ಚಿಕ್ಕ ಉಲ್ಲೇಖ ಕೂಡ ಇಲ್ಲದೇ ಹೋಗಿದ್ದು ಕಡೆಗೆ ಸಮಾರಂಭದ ಕೇಂದ್ರ ಬಿಂದುವಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ
ಶಿವಕುಮಾರ್ ಕೂಡ ಇದನ್ನು ಕಡಗಣಿಸಿದ್ದು ಬೆಂಬಲಿಗರಲ್ಲಿ ಮರ್ಮಾಘಾತ ಉಂಟು ಮಾಡಿದೆ
ಅಂತಿಮವಾಗಿ ಡಿಕೆ ಶಿವಕುಮಾರ್ ತಮ್ಮ ಭಾಷಣ ಮುಗಿಸಿ ಎದ್ದು ಹೊರಟ ನಂತರ ಎರಡು
ನಿಮಿಷಗಳ ಭಾಷಣದ ಅವಕಾಶ ಮಾತ್ರ ಕಿಮ್ಮನೆಯವರಿಗೆ ದೊರಕಿತು. ಆ ಹೊತ್ತಿಗೆ ಅವರ ಹತಾಶೆ ಎಲ್ಲಿಗೆ ತಲುಪಿತ್ತು
ಎಂದರೆ ಜೀವಮಾನದಲ್ಲಿ ಯಾರಿಗೂ ಕೂಡ ಪರಾಕು ಹೇಳದ ಕಿಮ್ಮನೆ ಕಾಂಗ್ರೆಸ್ ಜಿಂದಾಬಾದ್, ಡಿಕೆ ಶಿವಕುಮಾರ್
ಅವರಿಗೆ ಜಿಂದಾಬಾದ್ ಎಂದು ಎಳಸು ನಾಯಕರು ಕೂಗುವಂತಹ ಹಂತ ತಲುಪಿದ್ದು ಬೆಂಬಲಿಗರಲ್ಲಿ ಮುಜುಗರ ತರಿಸಿದಂತಿದೆ.
ಅಂತಿಮವಾಗಿ ಕಿಮ್ಮನೆ ಅವರ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ವಿರುದ್ಧ ಕೂಗಾಡಿದ್ದು
ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಆಗಿ ಬಿತ್ತರಗೊಂಡಿತು. ವಿಶೇಷವೆಂದರೆ ಇಲ್ಲಿಯ ತನಕ ಕಿಮ್ಮನೆಯವರಿಗೆ
ಆದ ಅವಮಾನಕ್ಕೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತೀರ್ಥಹಳ್ಳಿ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ
ಸೇರಿದಂತೆ ಪ್ರಮುಖ ಮುಖಂಡರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ.
೨ ನೇ ಹಂತದ ಕಾಂಗ್ರೆಸ್ ಮುಖಂಡರು ಕಿಮ್ಮನೆ ಆವರನ್ನು ಕೈ ಬಿಟ್ಟರೆ ಎಂಬ ಆನುಮಾನದ ನಡುವೆ ಸಾರ್ವಜನಿಕ ಹಾಗೂ ಪಕ್ಷದ
ವಲಯದಲ್ಲಿ ಇದು ಚರ್ಚೆಗೆ ಗುರಿಯಾಗಿದ್ದು ಬಹುತೇಕ ಕಿಮ್ಮನೆ ಒಂಟಿಯಾಗುವ ದಿಕ್ಕಿನಲ್ಲಿ ಸಾಗುತ್ತಿದ್ದಾರೆಯೇ
ಎಂಬ ಅನುಮಾನವೂ ವ್ಯಕ್ತವಾಗತೊಡಗಿದೆ.
ಕಿಮ್ಮನೆ ಹಠವು ಮುಳುವಾಯ್ತೆ
ರಾಜ್ಯ ರಾಜಕಾರಣದಲ್ಲಿ ಕಿಮ್ಮನೆಗೆ ಉತ್ತಮ ಹೆಸರಿದ್ದರು ಜಿಲ್ಲಾ ನಾಯಕರೊಂದಿಗೆ
ವಿಶ್ವಾಸ ಸಾಧಿಸಲು ವಿಫಲರಾಗಿರುವುದು ಈಗ ಚರ್ಚೆ ವಿಷಯವಾಗಿದೆ.
ಜಿಲ್ಲೆಯ ಬಹುತೇಕ ನಾಯಕರು ಕಿಮ್ಮನೆ ಪರ ಬ್ಯಾಟ್ ಬೀಸುತ್ತಿಲ್ಲ.ಮಾಜಿ ಸಚಿವ ಕಾಗೋಡು ತಿಮ್ಮಪ್ಪ,
ಶಾಸಕ ಬಿ.ಕೆ. ಸಂಗಮೇಶ್, ಮಾಜಿ ಶಾಸಕರಾದ ಮಧುಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕ ಮುಖಂಡರು ಮೀನಮೇಷ ಎಣಿಸುತ್ತಿರುವುದು ಕಿಮ್ಮನೆಗೆ ಕಿರಿಕಿರಿ
ತಂದಂತಿದೆ. ಇದಕ್ಕೆ ಕೆಲ ವಿಷಯದಲ್ಲಿ ಕಿಮ್ಮನೆ ತೋರುವ ಹಠ ಈಗ ರಾಜಕೀಯವಾಗಿ ಹೊಡೆತ ನೀಡುತ್ತಿದೆ ಎಂಬ ಸಂಗತಿ ರಹಸ್ಯವಾದಂತಿಲ್ಲ.
