ಶ್ರೀ ಕ್ಷೇತ್ರ ಆಲಬಳ್ಳಿ ; ಶ್ರೀ ಚಾಮುಂಡೇಶ್ವರಿ ಮಹಾದ್ವಾರ ಉದ್ಘಾಟನೆ ಮೇ 4, 5ಕ್ಕೆ
ಸಂಭ್ರಮದ ಸಿದ್ಧತೆ ; ಶ್ರೀ ಶ್ರೀ ಪ್ರಸನ್ನ ನಾಥ ಸ್ವಾಮೀಜಿ ಆಗಮನ
ಪಂಚ ದೇವರ ಕ್ಷೇತ್ರ ಆಲಬಳ್ಳಿಯಲ್ಲಿ 68ನೇ ವರ್ಷದ ವಾರ್ಷಿಕ ಜಾತ್ರೆ ಉತ್ಸವ, ಕೆಂಡಕೊಂಡ ಸೇವೆ ಹಾಗೂ ಮಹಾಧ್ವಾರ ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮ ಮೇ 4 ಮತ್ತು 5ರಂದು ವಿಜೃಂಬಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಮುಖ್ಯಸ್ಥ ಕೆ.ವಿ.ಗುರುರಾಜ್ ಆಚಾರ್ ತಿಳಿಸಿದ್ದಾರೆ .
ಪಂಚಮುಖಿ ಮಹಾಗಣಪತಿ, ಮಲ್ಲಿಕಾರ್ಜುನ, ಆಂಜನೇಯ, ನಾಗದೇವರು, ಚಾಮುಂಡೇಶ್ವರಿ ಹೊನ್ನತ್ತಮ್ಮ ಮತ್ತು ಗುಳ್ಳೇಮಾರಿಯಮ್ಮ ದೇವರುಗಳು ಒಂದೇ ಕಡೆ ಇರುವ ಅಪರೂಪದ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಆಲಬಳ್ಳಿ ಈಗ ಕಾರಣಿಕ ಕ್ಷೇತ್ರವಾಗಿ ಬೆಳೆದು ನಿಂತಿದೆ. ದೇವಸ್ಥಾನವು ಪಲ್ಲಕ್ಕಿ ಹೇಳಿಕೆಯಂತೆ ಪ್ರತಿವರ್ಷ ನವೀಕರಣಗೊಳ್ಳುತ್ತಿದೆ. ಸ್ಥಿರ ಆಸ್ತಿ ಇಲ್ಲದಿದ್ದರು ಭಕ್ತರ ಉದಾರ ದೇಣಿಗೆಯಿಂದ ಅಭಿವೃದ್ಧಿ ಹೊಂದುತ್ತಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಅವರು ಹೇಳಿದರು.
ಒಟ್ಟು 60 ಲಕ್ಷ ವೆಚ್ಚದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಂಗಳವಾರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಹಾಧ್ವಾರದ ಉದ್ಘಾಟನೆ ನೆರವೇರಿಸಲಿದ್ದಾರೆ. ಕೊಪ್ಪ ವೃತ್ತದಿಂದ ಬೈಕ್ ರ್ಯಾಲಿ, ಪೂರ್ಣಕುಂಭ ಸ್ವಾಗತ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಆಲಬಳ್ಳಿಯಿಂದ ದೇವರ ಪಲ್ಲಕ್ಕಿ ಹೊರಟು ಸಂಜೆ 5 ಗಂಟೆಗೆ ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನ, ನಂತರ ಮಾರಿಕಾಂಬಾ ದೇವಸ್ಥಾನ ತಲುಪಲಿದೆ. ಅಲ್ಲಿಂದ ಸಿಡಿಮದ್ದು ಪ್ರದರ್ಶನದೊಂದಿಗೆ ಕುವೆಂಪು ವೃತ್ತ ಮಾರ್ಗವಾಗಿ ಪುನಃ ದೇವಸ್ಥಾನ ಸೇರಲಿದೆ. ರಾತ್ರಿ 10ಕ್ಕೆ ವಾರ್ಷಿಕ ಜಾತ್ರಾ ಉತ್ಸವ ಹಾಗೂ ಕೆಂಡಕೊಂಡ ಸೇವೆ ನಡೆಯಲಿದೆ ಎಂದು ತಿಳಿಸಿದ್ದಾರೆ .
ಅಲಬಳ್ಳಿ ಕುರುವಳ್ಳಿ ಹೆದ್ದಾರಿಯಿಂದ 4 ಕಿಲೋಮೀಟರ್ ದೂರದಲ್ಲಿದ್ದು ಪ್ರತಿ ಮಂಗಳವಾರ ದೇವಾಲಯದಲ್ಲಿ ಭಕ್ತರಿಗೆ ಪಲ್ಲಕ್ಕಿ ಹೇಳಿಕೆ ಇರುತ್ತದೆ. ಹಾಗೂ ಅನ್ನಸಂತರ್ಪಣೆ ನಡೆಯುತ್ತದೆ. ಯಾವುದೇ ಸೇವೆಗೂ ನಿರ್ದಿಷ್ಟ ದರವಿರದೆ ಭಕ್ತರು ಅವರ ಇಚ್ಛೆಯಂತೆ ನೀಡುವ ಕಾಣಿಕೆ ಮಾತ್ರ ಪಡೆಯುವುದು ಇಲ್ಲಿನ ವಿಶೇಷ.ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಸ್ಥಳೀಯರು ಹಾಗೂ ಬಡವರಿಗೆ ಉಚಿತ ಹಾಗೂ ಅತ್ಯಲ್ಪ ದರದಲ್ಲಿ ಮದುವೆ ಸಭಾಂಗಣ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಮಕ್ಕಳ ಫಲ, ಬಾವಿ ಜಲ, ಉದ್ಯೋಗ ಸಮಸ್ಯೆ ಮುಂತಾದವುಗಳಿಗೆ ಇಲ್ಲಿನ ಹರಕೆ ಪ್ರಸಿದ್ದವಾಗಿದೆ.
