ಕಾಂಗ್ರೆಸ್‌ನಲ್ಲಿ ನಿಲ್ಲದ ಮುಸುಕಿನ ಗುದ್ದಾಟ

 ತೀರ್ಥಹಳ್ಳಿ ಕ್ಷೇತ್ರದಲ್ಲಿ ತ್ರಿಮೂರ್ತಿಗಳ ತಂತ್ರ, ಪ್ರತಿತಂತ್ರ

ಪಾದಯಾತ್ರೆಯಲ್ಲಿ ಗೌಡರ ಕೆಲ ಬೆಂಬಲಿಗರು ಹಾಜರ್‌

ಕಿಮ್ಮನೆಯ ಕೆಲ ಬೆಂಬಲಿಗರ ಕಣ್ಣಾಮುಚ್ಚಾಲೆ

ಪಾದಯಾತ್ರೆ, ಪ್ರತಿಭಟನೆ ಕ್ರೆಡಿಟ್‌ ಯಾರಿಗೆ...?

ಆಗುಂಬೆ ಭಾಗದಲ್ಲಿ ರೈತರ ಜಮೀನಿಗೆ ನುಗ್ಗಿ ಹಾವಳಿ ನಡೆಸುತ್ತಿದ್ದ ಒಂಟಿ ಸಲಗ.
ಆನೆ ಬಂಧಿಸದ ಆರಗ ಪಾದಯಾತ್ರೆ
ಪಾದಯಾತ್ರೆ, ಪ್ರತಿಭಟನೆ ಇವುಗಳು ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಲ್ಲೇ ಇದ್ದು ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಸಾಧ್ಯವೇ ಎಂಬ ಪ್ರಶ್ನೆಯೂ ಸಹಜವಾಗಿದೆ. 2018ರ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್‌ ದುರಾಡಳಿತ, ಕಿಮ್ಮನೆ ರತ್ನಾಕರ್‌ ವೈಫಲ್ಯ ಎಂದು ಆರೋಪಿಸಿ ಆರಗ ಜ್ಞಾನೇಂದ್ರ ಆಗುಂಬೆಯಿಂದ ಮೇಗರವಳ್ಳಿಯ ವರಗೆ ಪಾದಯಾತ್ರೆ ಪ್ರತಿಭಟನೆ ನಡೆಸಿದ್ದರು. ಆಗುಂಬೆ ಭಾಗದಲ್ಲಿ ಹಾವಳಿ ಮಾಡುತ್ತಿದ್ದ ಒಂಟಿ ಸಲಗ ಬಂಧನಕ್ಕೆ ಆರಗ ಒತ್ತಾಯಿಸಿದ್ದರು. ಶಾಸಕರಾಗಿ, ಗೃಹಸಚಿವರಾಗಿ ಆರಗ ಅಧಿಕಾರದಲ್ಲಿ ಇದ್ದರೂ ಇಂದಿಗೂ ಕಾಡಾನೆ ಬಂಧನ ಸಾಧ್ಯವಾಗಿಲ್ಲ. ಅಧಿಕಾರಕ್ಕಾಗಿ ನಡೆಯುವ ಪ್ರತಿಭಟನೆ, ಪಾದಯಾತ್ರೆಗಳು ಸಮಸ್ಯೆ ಬಗೆಹರಿಸಲಾರವು ಎಂಬುದು ಜನರ ಗಮನದಲ್ಲಿಯೂ ಇದ್ದಂತಿದೆ.

ಮುಂದಿನ ವಿಧಾನ ಸಭಾ ಚುನಾವಣೆಯ ಪೂರ್ವ ತಯಾರಿ ರಾಜಕಾರಣ ತೀರ್ಥಹಳ್ಳಿ ಕ್ಷೇತ್ರದಲ್ಲಿ ಭರ್ಜರಿಯಾಗಿಯೇ ಆರಂಭವಾಗಿದೆ. ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಬಹುದು ಎಂಬ ನಿರೀಕ್ಷೆ ಹುಸಿಗೊಂಡ ಮೇಲೆ ರಾಜಕಾರಣದ ಲೆಕ್ಕಾಚಾರ ವಿಧಾನ ಸಭಾ ಚುನಾವಣೆ ಕಡೆಗೆ ದೃಷ್ಟಿ ನೆಟ್ಟಿದೆ.

ಈ ನಡುವೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಆರಂಭಿಸಿದ ಪಾದಯಾತ್ರೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಮಧ್ಯೆ ಹಲವು ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಬಿಜೆಪಿಯ ದುರಾಡಳಿತ ವಿರೋಧಿಸಿ ಶಿವಮೊಗ್ಗದಲ್ಲಿ ಮೇ 10ರಂದು ಕಾಂಗ್ರೆಸ್‌ ಹಮ್ಮಿಕೊಂಡಿರುವ ಪ್ರತಿಭಟನೆ ರಾಜಕೀಯ ವಲಯದಲ್ಲಿ ಹಲವು ಆಯಾಮದಲ್ಲಿ ಚರ್ಚೆಗೆ ಒಳಗಾಗಿದೆ.

ಕಾಂಗ್ರೆಸ್‌ನಲ್ಲಿ ಸ್ಪರ್ಧೆಗೆ ಯಾರಿಗೆ ಅವಕಾಶ ಸಿಗುತ್ತದೆ ಎಂಬಲ್ಲಿಂದ ಆರಂಭವಾಗುವ ಚರ್ಚೆ ಕಿಮ್ಮನೆ ರತ್ನಾಕರ್‌, ಮಂಜುನಾಥ ಗೌಡರ ನಡುವಿನ ಕಠೋರ ಭಿನ್ನಾಭಿಪ್ರಾಯದ ಕಡೆಗೆ ಸುಳಿಯುತ್ತಿದೆ. ಇಬ್ಬರು ನಾಯಕರು ಕ್ಷೇತ್ರ, ಪಕ್ಷದ ಮೇಲೆ ಹಿಡಿತ ಸಾಧಿಸಲು ಈಗಿನಿಂದಲೇ ಪೈಪೋಟಿಗಿಳಿದಿದ್ದಾರೆ.

ಶಿವಮೊಗ್ಗ ಪ್ರತಿಭಟನೆಯ ಕ್ರೆಡಿಟ್‌ ಪಡೆಯಲು ಇಬ್ಬರು ತಂತ್ರ, ಪ್ರತಿತಂತ್ರ ಮೊರೆ ಹೋಗಿದ್ದಾರೆ. ಕಿಮ್ಮನೆ ಪಾದಯಾತ್ರೆ ಆರಂಭಿಸಿ ಜೋಷ್‌ ನಲ್ಲಿದ್ದರೆ, ಮಂಜುನಾಥ ಗೌಡ ಪಕ್ಷದ ಮುಖಂಡರು, ಕಾರ್ಯಕರ್ತರ ಅನೇಕ ಸಭೆಯನ್ನು ನಡೆಸಿ ಹೆಚ್ಚು ಜನರನ್ನು ಪ್ರತಿಭಟನಾ ಸಭೆಗೆ ಭಾಗವಹಿಸುವಂತೆ ಮಾಡಲು ಪ್ರಭಾವ ಬೀರುತ್ತಿದ್ದಾರೆ. ಶಿವಮೊಗ್ಗದಲ್ಲಿ ತಮ್ಮ ತಮ್ಮ ಬೆಂಬಲಿಗರನ್ನು ಸೇರಿಸಿ ರಾಜ್ಯ ನಾಯಕರ ಎದುರು ಶಕ್ತಿ ಪ್ರದರ್ಶಿಸಲು ಇಬ್ಬರು ನಾಯಕರು ಸಿದ್ಧತೆ ನಡೆಸಿದ್ದಾರೆ.

ಕಿಮ್ಮನೆಯ ಕಟ್ಟಾ ಬೆಂಬಲಿಗರೆನಿಸಿಕೊಂಡ ಅನೇಕರು ಪಾದಯಾತ್ರೆಯಲ್ಲಿ ಮುಖ ತೋರಿಸಿ ಹಿಂದಿರುಗಿದ್ದಾರೆ. ಬಾಳೇಹಳ್ಳಿ ಪ್ರಭಾಕರ್‌, ಹೊಸಳ್ಳಿ ಸುಧಾಕರ್‌, ಹಾರೋಗೊಳಿಗೆ ಪದ್ಮನಾಭ್‌, ಬಂಡೆ ವೆಂಕಟೇಶ್‌, ಕಳೆದ ಅವಧಿಯಲ್ಲಿ ಜಿ.ಪಂ. ಸದಸ್ಯರಾಗಿದ್ದ ಭಾರತಿ, ಕಲ್ಪನಾ, ಶೃತಿ ಮತ್ತಿತರರು ಹೆಚ್ಚಾಗಿ ಪಾದಯಾತ್ರೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳದಿರುವುದು ಗುಮಾನಿಗೆ ಕಾರಣವಾಗಿದೆ.

ಗೌಡರ ಕಟ್ಟಾ ಬೆಂಬಲಿಗರಾದ ಕಟ್ಟೇಹಕ್ಕಲು ಕಿರಣ್‌, ಶಚೀಂದ್ರ ಹೆಗ್ಡೆ, ಶಿವಮೊಗ್ಗ ಎಪಿಎಂಸಿ ಮಾಜಿ ಅಧ್ಯಕ್ಷ ದುಗ್ಗಪ್ಪಗೌಡ ಸೇರಿದಂತೆ ಅನೇಕರು ಪಾದಯಾತ್ರೆಯಲ್ಲಿ ಸಕ್ರೀಯವಾಗಿ ಕಾಣಿಸಿದ್ದಾರೆ. ಪಾದಯಾತ್ರೆ, ಪ್ರತಿಭಟನೆ ಕಾಂಗ್ರೆಸ್‌ ನೆಲೆಯಲ್ಲಿಯೇ ಪ್ರತ್ಯೇಕವಾಗಿರುವುದು ಕಾರ್ಯಕರ್ತರಲ್ಲಿ ಗೊಂದಲವೂ ಮೂಡಿಸಿದೆ. ಈ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿರುವ ಗೃಹಸಚಿವ ಆರಗ ಜ್ಞಾನೇಂದ್ರ ಹೆಚ್ಚಿನ ಪ್ರತಿಕ್ರಿಯೆ ನೀಡದೆ ಪ್ರತಿತಂತ್ರದ ರಾಜಕಾರಣದಲ್ಲಿ ನಿರತರಾದಂತಿದೆ. ಸಚಿವರು ವಾರದಲ್ಲಿ 4 ದಿನ ಕ್ಷೇತ್ರದಲ್ಲೇ ಟಿಕಾಣಿ ಹೂಡಿ ವಿರೋಧಿಗಳಿಗೆ ಪ್ರತಿತಂತ್ರ ಹೆಣೆಯುತ್ತಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post