20 ಎಕರೆ ಪ್ರದೇಶದಲ್ಲಿ ವೈವಿಧ್ಯಮಯ ಪರಿಸರ ಸೃಷ್ಟಿಸಲು ನಿರ್ಧಾರ – ಇಒ ಶೈಲಾ
ಜೀವ ವೈವಿಧ್ಯ ಮತ್ತು
ಪರಿಸರ ಒಂದಕ್ಕೊಂದು ಪೂರಕವಾಗಿದೆ. ಪರಿಸರದ ಪ್ರತಿಯೊಂದು ಗಿಡ ಹಾಗೂ ವೃಕ್ಷ ಸಂಕುಲ ಜೀವ ವೈವಿಧ್ಯದ
ಉಗಮವಿದ್ದಂತೆ. ಇದರ ಪರಿಚಯ ಅರಿವು ಇಂದಿನ ಪೀಳಿಗೆಗೆ ದೊರಕುವಂತಾಗಬೇಕು ಎಂಬ ಕಾರಣದಿಂದ ಹೊರಬೈಲು
ಗ್ರಾಮ ಪಂಚಾಯಿತಿ ತೆಂಗಿನ ತೋಟದಲ್ಲಿ ವೈವಿಧ್ಯಮಯ ನೆಡುತೋಪು ಬೆಳೆಸುವ ಮೂಲಕ ಪರಿಸರ ಮತ್ತು ಅರಣ್ಯ
ತಳಿಗಳ ಅಧ್ಯಯನ ಕೇಂದ್ರ ಸ್ಥಾಪಿಸಲು ಆಲೋಚಿಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ
ಶೈಲಾ.ಎನ್. ಹೇಳಿದರು.
ವಿಶ್ವ ಪರಿಸರ ದಿನಾಚರಣೆ
ಪ್ರಯುಕ್ತ ಜಿಲ್ಲಾ, ತಾಲ್ಲೂಕು ಪಂಚಾಯಿತಿ, ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ, ನೇಚರ್
ವೆಲ್ಫೇರ್ ಸೊಸೈಟಿ ಸಹಯೋಗದಲ್ಲಿ ಶಾಹಿ ಎಕ್ಸ್‌ಪೋರ್ಟ್ ಕಂಪನಿಯ
ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯಿಂದ 37 ಲಕ್ಷ ವೆಚ್ಚದ ವನಮಹೋತ್ಸವ, ನಿರ್ವಹಣೆ ಕಾರ್ಯಕ್ರಮಕ್ಕೆ
ಚಾಲನೆ ನೀಡಿ ಅವರು ಮಾತನಾಡಿದರು.
ಶಾಹಿ ಎಕ್ಸ್‌ಪೋರ್ಟ್
ನಿಧಿಯಿಂದ 37 ಲಕ್ಷ ರೂಪಾಯಿ ವೆಚ್ಚದಲ್ಲಿ 10 ಸಾವಿರ ಗಿಡಗಳನ್ನು ಪ್ರಸ್ತುತ ಸಾಲಿನಲ್ಲಿ ನೆಡಲಾಗುತ್ತಿದೆ.
ಇವುಗಳಲ್ಲಿ ಹಣ್ಣು ಹಂಪಲಿನಿಂದ ಹಿಡಿದು ಔಷಧೀಯ ಸಸ್ಯಗಳವರೆಗೆ ವೈವಿಧ್ಯಮಯತೆ ಇರುವಂತೆ ಎಚ್ಚರ ವಹಿಸಲಾಗಿದ್ದು
ಎರಡು ವರ್ಷಗಳ ಅವಧಿಯ ನಿರ್ವಹಣೆಯ ನಂತರ ಪಂಚಾಯಿತಿಗೆ ಹಸ್ತಾಂತರಿಸುವ ಜವಾಬ್ದಾರಿಯನ್ನು ನೇಚರ್
ವೆಲ್ಫೇರ್ ಸೊಸೈಟಿ ವಹಿಸಿಕೊಂಡಿದೆ. ಕಡಿದಾಳು ದಯಾನಂದ ಸಲಹೆಯಂತೆ
ಅಧ್ಯಯನ ಕೇಂದ್ರಕ್ಕೆ ಅಗತ್ಯವಾದ ಹಣ್ಣು, ಹೂ, ಔಷಧಿ ಗಿಡಗಳ ವಿವಿಧ ತಳಿಗಳನ್ನು ಬೆಳೆಸಲಾಗುವುದು ಎಂದರು.
ವಿಹಂಗಮ ಪರಿಸರ ಅಧ್ಯಯನ
ಕೇಂದ್ರದ ಕಡಿದಾಳು ದಯಾನಂದ ಮಾತನಾಡಿ, ಪರಿಸರ ವೈವಿಧ್ಯಮತೆಯನ್ನು ಕಾಪಾಡಲು ಆ ಪ್ರಜ್ಞೆಯನ್ನು ಬೆಳೆಸಲು
ತೀರ್ಥಹಳ್ಳಿ ಅತ್ಯಂತ ಸೂಕ್ತ. ಪರಿಸರದ ಜೊತೆಗೆ ಪ್ರವಾಸೋದ್ಯಮವನ್ನು ಬೆಳೆಸಲು ಇಲ್ಲಿ ವಿಫಲವಾದ ಅವಕಾಶವಿದೆ
ಎಂದರು.
ಶಾಹಿ ಎಕ್ಸ್‌ಪೋರ್ಟ್
ಶಿವಮೊಗ್ಗದ ವ್ಯವಸ್ಥಾಪಕ ನಿರ್ದೇಶಕ ನಾಗಯ್ಯ ಮಾತನಾಡಿ, ಸುಮಾರು ಒಂದೂವರೆ ಲಕ್ಷದಷ್ಟು ಉದ್ಯೋಗಗಳಿಗೆ
ಅವಕಾಶ ನೀಡಿರುವ ಶಾಹಿ ಎಕ್ಸ್‌ಪೋರ್ಟ್ ಅದರಲ್ಲಿ ಶೇಕಡಾ 80 ರಷ್ಟು ಮಹಿಳೆಯರನ್ನು ನೇಮಿಸಿಕೊಂಡು
ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಇದರ ಜೊತೆಯಲ್ಲಿ ಪರಿಸರದ ಜೊತೆಗೆ ಆರೋಗ್ಯ, ಶಿಕ್ಷಣ, ಉತ್ತಮ
ಜೀವನ ರೂಪಿಸಲು ಸಿಎಸ್‌ಆರ್ ನಿಧಿಯನ್ನು ವಿನಿಯೋಗಿಸುತ್ತಿದೆ. ಎರಡು ವರ್ಷದ ನಿರ್ವಹಣೆ ಹೊಣೆ ಹೊತ್ತುಕೊಂಡು
ಗಿಡಗಳನ್ನು ಬೆಳೆಸುತ್ತಿದ್ದೇವೆ” ಎಂದು ತಿಳಿಸಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊರಬೈಲು ಪ್ರಭಾಕರ್ ಮಾತನಾಡಿ, ಗ್ರಾಮ ಪಂಚಾಯಿತಿಯ 20 ಎಕರೆ ತೋಟ ಪರಿಸರ ವೈವಿಧ್ಯದ ತಾಣವಾಗಿ ರೂಪುಗೊಳ್ಳುತ್ತಿರುವುದು ಸ್ವಾಗತಾರ್ಹ ಇದರಿಂದ ಬುಕ್ಲಾಪುರ ಗ್ರಾಮ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ. ಎಲ್ಲಾ ಗ್ರಾಮಸ್ಥರು ಈ ಯೋಜನೆಯ ಜೊತೆ ಕೈಜೋಡಿಸುತ್ತಾರೆ ಎಂದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಈ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಶೆಟ್ಟಿ ಅವರ ಸೇವೆಯನ್ನು ಶ್ಲಾಘಿಸಿದ್ದಲ್ಲದೇ ಈಗಾಗಲೇ ನೆಡಲಾಗಿರುವ ಸಸಿಗಳನ್ನು ತಮ್ಮ ತಂಡದೊಂದಿಗೆ ಪ್ರತಿಫಲಾಪೇಕ್ಷೆ ಇಲ್ಲದೆ ಪೋಷಿಸುತ್ತಿರುವ ಅವರ ಕಾರ್ಯವನ್ನು ಪ್ರಶಂಸಿಸಿದರು.
ನೇಚರ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಪ್ರೇಮನಾಥ, ಸಲಹಾ ಸಮಿತಿಯ ಸರ್ವೋತ್ತಮ ನಾಯಕ್, ಡಾ.ಎನ್.ಎಸ್.ಮನೋಹರ, ಪ್ರಭಾಕರ ಹೊರಬೈಲು, ಅಣ್ಣಪ್ಪ ಪಿ, ತಾಲ್ಲೂಕು ಪಂಚಾಯಿತಿ ಮ್ಯಾನೇಜರ್ ರಾಘವೇಂದ್ರ ಎಸ್, ಮೇಲಿನಕುರುವಳ್ಳಿ ಗ್ರಾ.ಪಂ. ಆಡಳಿತಾಧಿಕಾರಿ ಶಾಂತಿಲಾಲ್ ಗಾಂಧಿ, ಪಿಡಿಓ ಗಂಗಾಧರ ನಾಯ್ಕ್ ಇದ್ದರು.