ಪೊಲೀಸ್ ಇಲಾಖೆಯೊಳಗಿನ ‘ಹೋರಾಟಗಾರ’: ಎಸ್‌ಎಸ್ ಕಾಶಿಗೆ ‘ಸೆಂಡ್ ಆಫ್’!
ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ತಾಜ್ ವಿವಾಂತ ಹೋಟೆಲ್‌ನಲ್ಲಿ ಏಪ್ರಿಲ್ 30 ರಂದು ನಡೆದ ಖಾಸಗಿ ಕಾರ್ಯಕ್ರಮವೊಂದು ಕರ್ನಾಟಕ ಪೊಲೀಸ್ ಇಲಾಖೆಯ ಅಂತರಂಗಕ್ಕೆ ಕನ್ನಡಿ ಹಿಡಿದಂತಿತ್ತು. ತೀರ್ಥಹಳ್ಳಿ ಮೂಲದ ಪೊಲೀಸ್ ಅಧಿಕಾರಿ ಎಸ್‌ಪಿ ಎಸ್‌ಎಸ್ ಕಾಶಿ ಸೇವೆಯಿಂದ ನಿವೃತ್ತರಾದ ನೆಪದಲ್ಲಿ ಅವರ ಸ್ನೇಹಿತರು, ಹಿತೈಷಿಗಳು ಪುಟ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಬ್‌ಇನ್ಸ್‌ಪೆಕ್ಟರ್ ಆಗಿ ಇಲಾಖೆಗೆ ಕಾಲಿಟ್ಟ ಕಾಶಿ ಎಸ್ಪಿ ಹಂತಕ್ಕೆ ಬೆಳೆದರಾದರೂ, ಐಪಿಎಸ್ ಲಾಬಿಯ ಎದೆ ಒಡ್ಡಿಕೊಂಡೇ ಇಲಾಖೆಯೊಳಗೆ ಒಗ್ಗಿಕೊಂಡವರು. ಕಳೆದ ಒಂದೂವರೆ ದಶಕಗಳ ಕಾಲ, ಸರಕಾರಗಳು ಬದಲಾದರೂ ಕಾಶಿ ಅವರ ಕಾರ್ಯಕ್ಷೇತ್ರದಲ್ಲಿ ಯಾವುದೇ ಬದಲಾವಣೆಗಳಾಗಲಿಲ್ಲ. ನಡುವೆ ರಾಜೀನಾಮೆಯನ್ನು ನೀಡುವ ಮೂಲಕ ಸುದ್ದಿಯಾದರೂ, ಅಂತಿಮವಾಗಿ; ಯಾವುದೇ ಅಡೆತಡೆಗಳಿಲ್ಲದೆ ನಾನ್ ಎಗ್ಸೆಕೆಟಿವ್ ಹುದ್ದೆಯಲ್ಲೇ ನಿವೃತ್ತರಾದರು.
ಅದರ ನೆಪದಲ್ಲಿ ಹಮ್ಮಿಕೊಂಡ ಖಾಸಗಿ ಕಾರ್ಯಕ್ರಮದ ಉದ್ದಕ್ಕೂ ಇಲಾಖೆಯ ಒಳಗೆ ಕಾಶಿ ನಡೆಸಿದ ಹೋರಾಟಗಳ ಕತೆಯನ್ನು ಮೆಲುಕು ಹಾಕಲಾಯಿತು. ಕಾಶಿ, ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಪಾಲಿಗೆ ಆಶಾಕಿರಣವೂ ಅಗಿದ್ದಾರೆ ಎಂಬುದನ್ನು ‘ಸೆಂಡ್ ಆಫ್’ ಕೋರಿ ಮಾತನಾಡಿದ ಬಹುತೇಕರು ನಿರೂಪಿಸಿದರು.
ರಾಜ್ಯದ 31 ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸುಮಾರು 1000 ಪೊಲೀಸ್ ಠಾಣೆಗಳಿವೆ. ಜತೆಗೆ, ತುರ್ತ ಅಗತ್ಯಗಳಿಗಾಗಿ 12 ಕೆಎಸ್‌ಆರ್‍ಪಿ ತುಕಡಿಗಳು ಸೇರಿದಂತೆ 6 ಕಮಿಷನರೇಟ್‌ಗಳಲ್ಲಿ ಒಟ್ಟು ಒಂದು ಲಕ್ಷಕ್ಕೂ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶೇಷ ಅಂದರೆ, ಇದರಲ್ಲಿ ಸುಮಾರು 215 ಐಪಿಎಸ್ ಗ್ರೇಡ್ ಅಧಿಕಾರಿಗಳಿದ್ದು, ಉಳಿದವರನ್ನು ನಾನ್ ಐಪಿಎಸ್ ಶ್ರೇಣಿಯಲ್ಲಿದ್ದಾರೆ.
“ಇಲಾಖೆಯ ಒಳಗೆ ಬಹಳ ಹಿಂದಿನಿಂದಲೂ ಐಪಿಎಸ್ ಹಾಗೂ ನಾನ್- ಐಪಿಎಸ್ ನಡುವೆ ಶೀಥಲ ಸಮರ ಜಾರಿಯಲ್ಲಿದೆ. ಹೀಗಾಗಿಯೇ, ಸರಕಾರ ವರ್ಷದ ಆರಂಭದಲ್ಲಿಯೇ ದೊಡ್ಡಮಟ್ಟದಲ್ಲಿ ಸುಧಾರಣೆ ಕೈಗೊಂಡಿತು. ಸುಮಾರು 68 ಐಪಿಎಸ್ ಶ್ರೇಣಿಯ ಅಧಿಕಾರಿಗಳಿಗೆ ಪದೋನ್ನತಿ ನೀಡಿತು. ಜತೆಗೆ 28 ನಾನ್ ಐಪಿಎಸ್ ಸ್ಥಳೀಯ ಅಧಿಕಾರಿಗಳಿಗೆ ಐಪಿಎಸ್ ಶ್ರೇಣಿಗೆ ಪ್ರವೇಶ ನೀಡಲಾಯಿತು. ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ಹೆಚ್ಚಿನ ಪದೋನ್ನತಿ ನೀಡುವ ಪ್ರಕ್ರಿಯೆ ಇದು,’’ ಎನ್ನುತ್ತಾರೆ ವಿ. ಮುರಳೀಧರ್. ಬೆಂಗಳೂರಿನಲ್ಲಿ ಹಲವು ವರ್ಷಗಳ ಕಾಲ ಅಪರಾಧ ವರದಿಗಾರಿಕೆ ಮಾಡಿದ ಅನುಭವ ಮುರಳಿಯವರಿಗಿದೆ.
ಇವೆರಡೂ ಶ್ರೇಣಿಗಳ ನಡುವೆ ಸಂಖ್ಯೆ ಮಾತ್ರ ಅಲ್ಲ; ಸೌಕರ್ಯಗಳು ಹಾಗೂ ಜೀವನ ಗುಣಮಟ್ಟದಲ್ಲಿಯೂ ದೊಡ್ಡ ಅಂತರವಿದೆ. ರಜೆ, ವರ್ಗಾವಣೆ, ವೇತನ, ಪದೋನ್ನತಿ ಹೀಗೆ ಪ್ರತಿ ಹಂತದಲ್ಲಿಯೂ ಎದ್ದು ಕಾಣುವ ಅಂತರದ ಕುರಿತು ಪ್ರಶ್ನಿಸುವುದೇ ದೊಡ್ಡ ಅಪರಾಧವೂ ಆಗಿದೆ. ಈ ಕಾರಣಕ್ಕೆ ಆತ್ಮಹತ್ಯೆಯಂತಹ ಪ್ರಕರಣಗಳೂ ಇಲಾಖೆಯೊಳಗೆ ನಡೆದಿವೆ. ಇಂತಹ ವಾತಾವರಣದಲ್ಲಿ, ಯಾವುದೇ ಮುಲಾಜಿಗೆ ಒಳಗಾಗದೇ ಅನ್ಯಾಯಗಳ ವಿರುದ್ಧ ದನಿ ಎತ್ತಿದ್ದು ಕಾಶಿ ಅವರ ವಿಶೇಷತೆಯೂ ಆಗಿರಬಹುದು. ದೊಡ್ಡ ಸಂಖ್ಯೆಯಲ್ಲಿರುವ ನಾನ್ ಐಪಿಎಸ್ ಶ್ರೇಣಿಯ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳ ಅವಹಾಲುಗಳಿಗೆ ದನಿಯಾಗಿ ನಿಂತಿದ್ದು ಮಾತ್ರವಲ್ಲ, ವೈಯಕ್ತಿಕವಾಗಿ ದೊಡ್ಡ ಘಾಸಿಗೆ ಒಳಗಾಗದೆ ಇಲಾಖೆಯಿಂದ ಈಗ ನಿವೃತ್ತರಾಗಿರುವುದನ್ನು ಅವರ ಆತ್ಮೀಯರು ಸಂಭ್ರಮಿಸಿದರು.
ಕಾರ್ಯಕ್ರಮವನ್ನು ನಿರೂಪಿಸಿದ, ಇನ್ನೊಬ್ಬ ನಿವೃತ್ತ ಅಧಿಕಾರಿ ಕೆ. ಎನ್. ನಾರಾಯಣ ಸ್ವಾಮಿ ಅವರಿಂದ ಹಿಡಿದು, ಮಾತನಾಡಿದ ಎಲ್ಲಾ ಅಧಿಕಾರಿಗಳು ಒಂದಿಲ್ಲೊಂದು ರೂಪದಲ್ಲಿ ಇಲಾಖೆಯೊಳಗಿನ ತಾರತಮ್ಯವನ್ನು, ಅದಕ್ಕೆ ಕಾಶಿ ನಡೆಸಿದ ಹೋರಾಟವನ್ನು ನೆನಪಿಸಿಕೊಂಡರು; ಒಂದು ಹಂತದಲ್ಲಿ ಕೊಂಡಾಡಿದರು ಕೂಡ.
“ನಮ್ಮ ಬ್ಯಾಚ್‌ನಲ್ಲಿ ಮೊದಲು ಮುಖ್ಯಮಂತ್ರಿ ಪದಕ ಪಡೆದುಕೊಂಡಿದ್ದು ಕಾಶಿ,’’ ಎಂದು ನೆನಪುಗಳನ್ನು ಅಧಿಕಾರಿಯೊಬ್ಬರು ಮೆಲಕು ಹಾಕಿದರು. ರಾಯಚೂರು ಜಿಲ್ಲೆಯಲ್ಲಿ ನಡೆದ ನಕ್ಸಲ್ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಲಭ್ಯವಾದ ಸನ್ಮಾನ ಇದು. ಸರಕಾರದ ವಿರುದ್ದದ ಶಸಸ್ತ್ರ ಹೋರಾಟದ ದಮನದ ಕಾರಣಕ್ಕೆ ಸನ್ಮಾನಿತರಾದ ಕಾಶಿ, ತಮ್ಮ ನಿವೃತ್ತಿಯ ಹೊತ್ತಿಗೆ ಇಲಾಖೆಯ ಒಡನಾಡಿಗಳ ಕಣ್ಣಿಗೆ ಹೋರಾಟಗಾರರಾಗಿ ಕಾಣಿಸುತ್ತಿರುವುದೂ ವಿಶೇಷವಾಗಿದೆ.
“ಇಲಾಖೆಯ ನನ್ನ ಸಹಜೀವಿಗಳಿಗೆ ಕಾನೂನು ನೆರವು ನೀಡುವ ಕೆಲಸ ಮಾಡುತ್ತೇವೆ,’’ ಎಂದು ತಮ್ಮ ನಿವೃತ್ತ ಜೀವನದ ಯೋಜನೆಯನ್ನು ಮುಂದಿಟ್ಟ ಕಾಶಿ, ಇತ್ತೀಚಿಗೆ ಕಾನೂನು ಪದವಿಯನ್ನೂ ಮುಗಿಸಿದ್ದಾರೆ.