ಆರಗ ಜ್ಞಾನೇಂದ್ರ 850ಕ್ಕೂ ಹೆಚ್ಚು ಪರಿಶಿಷ್ಟರಿಗೆ ಜಾತಿ ಪ್ರಮಾಣಪತ್ರ ನೀಡಿದ್ದಾರೆ

ಅಂಬೇಡ್ಕರ್‌ ಅವರದ್ದು ಕಬೀರರ ಕುಟುಂಬವಾಗಿತ್ತು – ಕಾಸರವಳ್ಳಿ ಶ್ರೀನಿವಾಸ್
‌ಸಮಾಜ ಕಲ್ಯಾಣ ಇಲಾಖೆಯಿಂದ ಮೂವರು ಸಾಧಕರಿಗೆ ಸನ್ಮಾನ

ಭಾರತಕ್ಕೆ ಲಿಖಿತ ಸಂವಿಧಾನವನ್ನು ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್‌ 1952ರ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಷಡ್ಯಂತ್ರದಿಂದ ಆಗಿನ ವ್ಯವಸ್ಥೆ ಸೋಲಿಸುತ್ತದೆ. ದೇಶಕ್ಕಾಗಿ ಅಷ್ಟೆಲ್ಲಾ ಸೇವೆ ಮಾಡಿದ ಮೇಲೂ 1990ರ ವರೆಗೂ ಭಾರತ ರತ್ನವನ್ನು ನೀಡಲಿಲ್ಲ. ವಿ.ಪಿ.ಸಿಂಗ್‌ ಪ್ರಧಾನಿಯಾಗಿದ್ದಾಗ ಅವರಿಗೆ ಮರಣೋತ್ತರ ಭಾರತರತ್ನ ನೀಡಿ ಗೌರವಿಸಲಾಯಿತು. ಇಲ್ಲಿನ ಕಠೋರವಾದ ಜಾತಿ ವ್ಯವಸ್ಥೆಯ ನೋವಿನಲ್ಲೂ ಭಾರತದ ಎಲ್ಲಾ ವರ್ಗಕ್ಕೆ ಸಮಾನತೆ ಒದಗಿಸಿದರು. ಅವರದ್ದು ಕಬೀರರ ಕುಟುಂಬ ಆಗಿತ್ತು. ಮನೆಯಲ್ಲಿನ ಪೂಜೆ, ಪುನಸ್ಕಾರದಿಂದ ಉತ್ತಮವಾರ ಸಂಸ್ಕಾರವನ್ನು ಪಡೆದರು” ಎಂದು ವಕೀಲ ಕಾಸರವಳ್ಳಿ ಶ್ರೀನಿವಾಸ್‌ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತದಿಂದ ಇತ್ತೀಚೆಗೆ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸಕರಾಗಿ ವಿಷಯವನ್ನು ಮಂಡಿಸಿದರು. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಕ್ಷೇತ್ರದ ಸಾಧನೆ ಗುರುತಿಸಿ ಹಾರೋಗೊಳಿಗೆ ವಿಶ್ವನಾಥ, ಪಡುವಳ್ಳಿ ಕಿಟಪ್ಪ, ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಆದ್ಯ ಎ.ಹೆಚ್.‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂತರ್ಜಾತಿ ವಿವಾಹವಾದ 6 ಜೋಡಿಗಳಿಗೆ ಸರ್ಕಾರದ ಪ್ರೋತ್ಸಾಹಧನ ನೀಡಲಾಯಿತು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸಮಾಜ ಜಾತಿ ತೊರೆಯಲು ತಯಾರಿದೆ. ಆದರೆ ರಾಜಕಾರಣಿಗಳು ಜಾತಿ ವಿಮೋಚನೆಗೆ ಬಿಡುವುದಿಲ್ಲ. ಆಧುನಿಕತೆ ಬೆಳೆದಿದ್ದು ಮೇಲು, ಕೀಳೆಂಬುದು ಸರಿಯಲ್ಲ. ಸಮಾಜದಲ್ಲಿ ಬದಲಾವಣೆ ಆಗಬೇಕು. ಅಸ್ಪೃಷ್ಯತೆ ಎನ್ನುವುದು ಮನುಷ್ಯ ವಿರೋಧಿಯಾಗಿದೆ. ದಲಿತರ ಹೆಸರಿನಲ್ಲಿ ಯಾವ ಮುಖಂಡರು ರಾಜಕೀಯ ಮಾಡಬೇಡಿ. ಹೊಣೆಗಾರಿಕೆಯಿಂದ ವರ್ತಿಸಿ ಸಮುದಾಯಕ್ಕೆ ಸಹಾಯ ಮಾಡಬೇಕು. ಅಗತ್ಯ ಬಿದ್ದರೆ ನಮ್ಮ ಸಹಕಾರ ಪಡೆಯಿರಿ. ಜಾತಿ, ಪಂಗಡದ ಹೆಸರಿನಲ್ಲಿ ಕಿತ್ತಾಡಬೇಡಿ. ವಿಸಿಟಿಂಗ್‌ ಕಾರ್ಡ್‌ ಮುಖಂಡರಾಗಿ ಗುರುತಿಸಿಕೊಳ್ಳುವುದನ್ನು ಗಮನಿಸಿದರೆ ನೋವಾಗುತ್ತದೆ ಎಂದು ಹೇಳಿದರು.

ಎಂಎಡಿಬಿ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಮಾತನಾಡಿ, ಅಸಾಧ್ಯವಾದ ಗ್ರಹಿಕೆಯ ಶಕ್ತಿಯಿಂದ ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲಾ ವರ್ಗದ ಮಹಿಳೆಯರಿಗೆ ರಾಜಕೀಯ, ಆರ್ಥಿಕ, ಉದ್ಯೋಗ, ಮತದಾನ, ಸಮಾನತೆ, ಆಸ್ತಿಯ ಹಕ್ಕು ಒದಗಿಸಿದರು. ಸಂಪ್ರದಾಯ ವಾದಿಗಳು ಅವರ ನಿಲುವನ್ನು ಒಪ್ಪುತ್ತಾರೆ. ಸಮಾಜದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಬೇಕು. ಜಾತಿ, ಜಾತಿಗಳು ಒಟ್ಟಾಗಬೇಕು ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್‌ ಶೆಟ್ಟಿ, ಉಪಾಧ್ಯಕ್ಷೆ ಗೀತಾ, ತಹಶೀಲ್ದಾರ್‌ ಎಸ್.ರಂಜಿತ್‌, ಡಿವೈಎಸ್ಪಿ ಅರವಿಂದ ಎನ್‌ ಕಲಗುಜ್ಜಿ, ಇಓ ಶೈಲಾ ಎನ್‌, ಮುಖ್ಯಾಧಿಕಾರಿ ಡಿ.ನಾಗರಾಜ, ಬಿಇಓ ಗಿರಿರಾಜ್‌, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುಮನ ಎಚ್.ಕೆ. ಮತ್ತಿತರರು ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post