ಶವ ಶೀತಲಿಕರಣಕ್ಕೆ ಯಾರಿಂದಲೂ ದೇಣಿಗೆ ಪಡೆದಿಲ್ಲ

ಆಪತ್ಕಾಲದಲ್ಲಿ ನೆರವು ನೀಡುವಾಗ ʼಎಡಗೈʼ - ʼಬಲಗೈʼ ಎಂದು ತಾರತಮ್ಯ ಮಾಡಿಲ್ಲ
ಕಡೇ ಪಕ್ಷ ಆರೋಪಗಳನ್ನಾದರು ಎಲ್ಲರು ನಂಬುವಂತೆ ಮಾಡಿ ಗೆಳೆಯರೇ - ಕುರುವಳ್ಳಿ ನಾಗರಾಜ್‌ ತಿರುಗೇಟು

ಶವ ಶೀತಲಿಕರಣ ಯಂತ್ರಕ್ಕಾಗಿ ಯಾರ ಬಳಿಯೂ ಹಣ ವಸೂಲಿ ಮಾಡಿಲ್ಲ. ನಾನು ಬದುಕಿರುವ ತನಕ ನನ್ನ ನಾಯಕರಿಗೆ ಸಾರ್ವಜನಿಕವಾಗಿ ಕೆಟ್ಟ ಹೆಸರು ತರುವ ಕೆಲಸ ಮಾಡುವುದಿಲ್ಲ. ಜಯ ಕರ್ನಾಟಕ ಸಂಘಟನೆಯ  ತಾಲ್ಲೂಕು ಅಧ್ಯಕ್ಷರಾಗಿ  ದಿ.ಪಿ.ಸಿ.ಸತೀಶ್‌ ಶೆಟ್ಟಿ ಅವರು ತೀರ್ಥಹಳ್ಳಿಗಾಗಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿಯೇ ನಾನು ಹಾಗೂ ನಮ್ಮ ಸಂಘಟನೆ, ನಮ್ಮ ರಾಜ್ಯಾಧ್ಯಕ್ಷರಾದ ಡಾ.ಬಿ.ಎನ್.ಜಗದೀಶ್‌ ಗೌಡ ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಿದ್ದೇವೆ. ಸಂಘಟನೆಯಲ್ಲಿ ಎಲ್ಲಾ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳಾಗಿ ತೀರ್ಥಹಳ್ಳಿ ಉತ್ಸವ 2026ರ ಯಶಸ್ವಿಗೆ ಶ್ರಮಿಸಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕುರುವಳ್ಳಿ ನಾಗರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವರು, ತಂದೆ-ತಾಯಿ ಆರ್ಶಿರ್ವಾದದಿಂದ ನನಗೆ ಎಡಗೈಯಲ್ಲಿಯೇ ಬಲ ನೀಡಿದ್ದಾನೆ. ಒಳ್ಳೆಯ ಕಾರ್ಯಕ್ಕೆ ಮುಂದಾಗಿರುವ ನಮ್ಮ ವಿರುದ್ಧ ಹೇಳಿಕೆ ನೀಡಿರುವ ನೀವು ಮತ್ತು ನಿಮ್ಮ ನಿಮ್ಮ ನಾಯಕರುಗಳಿಗೆ ಯಾವ ಕೈ ಎಂದು ಪ್ರಶ್ನೆ ಮಾಡುವ ಮೂಲಕ ಆತ್ಮಾವಲೋಕನ ಮಾಡಿಕೊಳ್ಳಿ. ಅತ್ಯಂತ ಕಡು ಬಡತನದ ಕುಟುಂಬದಿಂದ ಬಂದಿರುವ ನಾನು ತೀರ್ಥಹಳ್ಳಿಯ ಜನತೆ ಸೇರಿದಂತೆ ನನ್ನ ಸಹಾಯ ಕೇಳಿಕೊಂಡು ಬರುವ ಜನರಿಗೆ ಯಾವ ರೀತಿ ಸಹಾಯ ಮಾಡುತ್ತೇನೆ ಎಂದು ಕ್ಷೇತ್ರದ ಜನತೆಗೆ ಗೊತ್ತಿದೆ.

ನೀವು ಹೇಳಿದಂತೆ ಶಿಮುಲ್‌ ಹಾಗೂ ಸಹಕಾರ ಸಂಘಗಳಿಂದ ಒಂದು ರೂಪಾಯಿ ಕೂಡ ನಾವು ದೇಣಿಗೆ ಸಂಗ್ರಹಿಸಿಲ್ಲ. ಜೊತೆಗೆ ಯಾರ ಮೇಲೂ ಕೂಡ ದೇಣಿಗೆ ನೀಡುವಂತೆ ಒತ್ತಡ ಹಾಕಿಲ್ಲ. ರಾಜ್ಯದ ಚಲನಚಿತ್ರ ರಂಗ, ಪ್ರಮುಖ ರಾಜಕೀಯ ಧುರೀಣರು ಹಾಗೂ ಧಾರ್ಮಿಕ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದ ತೀರ್ಥಹಳ್ಳಿ ಉತ್ಸವ – 2026 ಅತ್ಯಂತ ಯಶಸ್ವಿಯಾಗಿ ನಡೆದಿದೆ. ಮನರಂಜನೆ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಸಾವಿರಾರು ಜನ ಭಾಗವಹಿಸಿ ಉತ್ಸವದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಅದಕ್ಕೆ ಸಮಾನ ಮನಸ್ಕ ಸ್ನೇಹಿತರು, ಬಂಧುಗಳು, ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆರ್ಥಿಕ ಸಹಕಾರವನ್ನು ನೀಡಿದ್ದಾರೆ.

ಯಾವುದಾದರು ಒಳ್ಳೆಯ ಕೆಲಸ ಮಾಡಿದಾಗ ನೀವು ಹಳದಿ ಕಣ್ಣಿನಿಂದ ನೋಡುವುದನ್ನು ಬಿಟ್ಟು ನೀವು ಇಂತಹ ಕಾರ್ಯಕ್ರಮಗಳನ್ನು ಮಾಡಿ ತೋರಿಸಿ. ಈ ಕಾರ್ಯಕ್ರಮದಲ್ಲಿ ಉಳಿದ ಹಣವನ್ನು ನಮ್ಮ ಸಂಘಟನೆಯ ಪದಾಧಿಕಾರಿಗಳು ಹಾಗೂ ನನ್ನ ಮಾರ್ಗದರ್ಶಿಗಳ ಜೊತೆ ಚರ್ಚೆ ನಡೆಸಿ ಶವ ಶೀತಲೀಕರಣ ಪೆಟ್ಟಿಗೆ ಉಚಿತವಾಗಿ ನೀಡಲು ಮುಂದಾಗಿದ್ದೇವೆ. 2024ರಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ಯಂತ್ರಕ್ಕೆ ನಡವಳಿ ಮಾಡಿಕೊಂಡು ಈಗಲೂ ಪ್ರಕ್ರಿಯೆ ಹಂತದಲ್ಲಿ ಉಳಿದಿದೆ. ಈ ಬಗ್ಗೆ ನೀವು ಅಲ್ಲಿ ಪ್ರಶ್ನೆ ಮಾಡಿಕೊಳ್ಳಬಹುದು. ಅದಕ್ಕೂ ನಾವು ಶವ ಶೀತಲೀಕರಣ ಯಂತ್ರ ನೀಡುವುದಕ್ಕೂ ಯಾವುದೇ ಸಂಬಂಧ ಇಲ್ಲ.

ಶವ ಶೀತಲೀಕರಣ ಯಂತ್ರ ಇಲ್ಲದೆ ತಾಲ್ಲೂಕಿನಲ್ಲಿ ಆಗಿರುವ ಹಲವು ಸಮಸ್ಯೆಗಳನ್ನು ಸಾಮಾಜಿಕ ಸೇವಕನಾದ ನಾನು ಬಹಳ ಹತ್ತಿರದಿಂದ ಗಮನಿಸಿದ್ದೇನೆ. ಅದಕ್ಕಾಗಿಯೇ  ಸಂಘಟನೆಯ ಮೂಲಕ ಉಚಿತವಾಗಿ ಶವ ಶೀತಲೀಕರಣ ಯಂತ್ರ ನೀಡಲು ಮುಂದಾಗಿದ್ದೇವೆ. ಅದರೊಳಗೆ ಮಲಗಲು ಯಾವುದೇ ಸಂಘಟನೆ, ಪಕ್ಷ, ಜಾತಿ, ಧರ್ಮದ ನಿಯಮಗಳು ಹಾಕುವುದಿಲ್ಲ. ಯಾರು ಅದರೊಳಗೆ ಮುಕ್ತವಾಗಿ ಅಂತಿಮ ಯಾತ್ರೆಗೆ ಮಲಗಬಹುದು.

ನಿಮ್ಮ ಸುಳ್ಳು ಆರೋಪದಿಂದ ಕುಗ್ಗುವ ಜಾಯಮಾನ ನನ್ನದಲ್ಲ. ನಿಮ್ಮ ಆರೋಪವೇ ನನಗೆ ಆಶೀರ್ವಾದ. ಜೈ ಭಜರಂಗ ಬಲಿ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post