ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್‌

ತೀರ್ಥಹಳ್ಳಿ ತಾಲ್ಲೂಕಿಗೆ ಮಹತ್ವದ ಕೊಡುಗೆ
ಡಾ.ಯು.ಆರ್.ಅನಂತಮೂರ್ತಿ, ಶಾಂತವೇರಿ ಗೋಪಾಲಗೌಡರಿಗೆ ವಿಶೇಷ ಮನ್ನಣೆ
ಸಫಲವಾದ ಮಾಜಿ ಸಚಿವ ಕಿಮ್ಮನೆ ಪ್ರಯತ್ನ

ದಾಖಲೆಯ 17ನೇ ಬಾರಿಯ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಥಹಳ್ಳಿ ಕ್ಷೇತ್ರಕ್ಕೆ ಸಿಹಿಸುದ್ದಿ ನೀಡಿದ್ದಾರೆ.

ವಿಶ್ವದ ಪ್ರಸಿದ್ಧ ಸಾಹಿತಿಗಳಲ್ಲಿ ಒಬ್ಬರು ಮತ್ತು ದೇಶದಲ್ಲಿಯೇ ಎರಡು ಜ್ಞಾನಪೀಠ ಪಡೆದ ಏಕಮಾತ್ರ ತಾಲ್ಲೂಕು ಎಂಬ ಹೆಗ್ಗಳಿಕೆ ತೀರ್ಥಹಳ್ಳಿಗೆ ಬರಲು ಕಾರಣರಾದ ಡಾ.ಯು.ಆರ್.ಅನಂತಮೂರ್ತಿ ಹೆಸರಿನಲ್ಲಿ ಅಧ್ಯಯನ ಕೇಂದ್ರ ಅರಂಭಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಜಗತ್ತಿಗೆ ಹೊಸ ತಿರುವುದು ನೀಡಿದ ಪ್ರಮುಖರಲ್ಲಿ ಒಬ್ಬರಾಗಿರುವ ಡಾ.ಯು.ಆರ್.ಅನಂತಮೂರ್ತಿ ಮೂಲತಃ ತೀರ್ಥಹಳ್ಳಿಯ ಮೇಳಿಗೆಯವರು. ಹಾಗೂ ಮೇರು ಸಮಾಜವಾದಿ ಶಾಂತವೇರಿ ಗೋಪಾಲಗೌಡರ ನೆಚ್ಚಿನ ಒಡನಾಡಿಯೂ ಆಗಿದ್ದವರು. ತೀರ್ಥಹಳ್ಳಿಯಲ್ಲಿ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಆಗಬೇಕು ಎಂದು ಹಲವು ವರ್ಷಗಳಿಂದ ಪ್ರಯತ್ನಿಸಲಾಗಿತ್ತು. ಕಿಮ್ಮನೆ ರತ್ನಾಕರ್‌ ಅವರು ಶಿಕ್ಷಣ ಸಚಿವರಾಗಿದ್ದಾಗ ಡಾ.ಯು.ಆರ್.ಅನಂತಮೂರ್ತಿ ಹೆಸರನ್ನು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಇಡುವ ಮೂಲಕ ಗೌರವ ಸೂಚಿಸಲಾಗಿತ್ತು. ಬಳಿಕವೂ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಲು ಕಿಮ್ಮನೆ ರತ್ನಾಕರ್‌ ಪ್ರಮುಖ ಪಾತ್ರ ವಹಿಸಿದ್ದರು. ಅವರ ಒತ್ತಾಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸುವ ಮೂಲಕ ಸಾಹಿತ್ಯ ಪ್ರೇಮಿಗಳ ಬಹುಕಾಲದ ಆಶಯವೊಂದು ಈಡೇರಿದೆ.

ಮೇರು ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಹೆಸರನ್ನು ಬೆಂಗಳೂರಿನ ಪ್ರಸಿದ್ಧ ವಿಕ್ಟೋರಿಯಾ ಆಸ್ಪತ್ರೆಗೆ ಮರು ನಾಮಕರಣ ಮಾಡಲಾಗಿದೆ. ಆ ಮೂಲಕ ಈ ಅಮರ ಸಮಾಜವಾದಿಗೆ ಸಿದ್ಧರಾಮಯ್ಯ ಮತ್ತೊಮ್ಮೆ ಗೌರವ ಸಲ್ಲಿಸಿದ್ದಾರೆ. ವಾಸ್ತವವಾಗಿ 1900ನೇ ಇಸವಿಯಲ್ಲಿ ಮೈಸೂರು ಸಂಸ್ಥಾನದ ರಾಜಮಾತೆ ಕೆಂಪನಂಜಮ್ಮಣ್ಣಿ ಮುತುವರ್ಜಿ ವಹಿಸಿ ಈ ಆಸ್ಪತ್ರೆಯನ್ನು ಸ್ಥಾಪಿಸಿದ್ದರು. ಬ್ರಿಟೀಷ್‌ ಆಡಳಿತದ ಕಾರಣದಿಂದಾಗಿ ಇಂಗ್ಲೆಂಡ್‌ನ ಮಹಾರಾಣಿ ವಿಕ್ಟೋರಿಯಾ ಹೆಸರು ಇಡಲಾಗಿತ್ತು. ಅಲ್ಲದೇ ಶಾಂತವೇರಿ ಗೋಪಾಲಗೌಡರು ತಮ್ಮ ಕೊನೆಯ ದಿನಗಳನ್ನು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮತ್ತು ಅಲ್ಲಿಯೇ ಕೊನೆಉಸಿರೆಳೆದಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post