ರಾಮೇಶ್ವರ, ಹಣಗೆರೆ, ಮೃಗವಧೆ ದೇವಾಲಯಗಳಿಗೆ ಪಂಗನಾಮ

 ಕಾಂಗ್ರೆಸ್‌ ಮುಖಂಡರ ಕೈಚಳಕ, ಅಧಿಕಾರಿಗಳಿಂದ ಅಕ್ರಮಕ್ಕೆ ಸಹಕಾರ
1.20 ಲಕ್ಷ ಬೆಲೆಯ ವಿದ್ಯುತ್‌ ದೀಪಕ್ಕೆ 4 ಲಕ್ಷ ಬಿಲ್‌
ಕೋದಂಡರಾಮ ದೇವಸ್ಥಾನದಲ್ಲಿ ಸುದ್ದಿಗೋಷ್ಟಿ ನಡೆಸುವ ಕಿಮ್ಮನೆಗೆ ಇದೆಲ್ಲ ಕಾಣುವುದಿಲ್ಲವೇ – ಆರಗ

ತೀರ್ಥಹಳ್ಳಿಯಲ್ಲಿ ಮುಜರಾಯಿ ದೇವಸ್ಥಾನಗಳಾದ ಶ್ರೀ ರಾಮೇಶ್ವರ, ಹಣಗೆರೆಕಟ್ಟೆ, ಮೃಗವಧೆ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಖರೀದಿಸಲಾದ ಹೈಮಾಸ್ಕ್‌ ಲೈಟ್‌ ಯೋಜನೆಯಲ್ಲಿ ಬಾರಿ ಅವ್ಯವಹಾರ ನಡೆದಿದೆ. ಒಂದು ಲಕ್ಷ 20 ಸಾವಿರ ಬೆಲೆಯ ದೀಪಗಳಿಗೆ 4 ಲಕ್ಷದ ವರೆಗೆ ಬಿಲ್‌ಗಳನ್ನು ಅಕ್ರಮವಾಗಿ ಕಾಂಗ್ರೆಸ್‌ ಮುಖಂಡರು ಮಾಡಿದ್ದಾರೆ. ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಅಕ್ರಮವಾಯಿತು ಎಂದು ತೀರ್ಥಹಳ್ಳಿಯ ಕೋದಂಡರಾಮ ದೇವಸ್ಥಾನದಲ್ಲಿ ಆಪಾದನೆ ಮಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಈಗೇನು ಹೇಳುತ್ತಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.

ಹೈಮಾಸ್ಕ್‌ ಲೈಟ್‌ ಅಳವಡಿಕೆಯ ಯೋಜನೆಯೇ ಪೂರ್ಣ ಅಕ್ರಮದಿಂದ ಕೂಡಿದ್ದು ಇದರಲ್ಲಿ ಭಾಗಿಯಾಗಿರುವ ಕಾಂಗ್ರೆಸ್‌ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಸತ್ಯಾಗ್ರಹ ಕೈಗೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದರು. ತೀರ್ಥಹಳ್ಳಿ ತಾಲ್ಲೂಕು ಆಪೀಸು ಅಕ್ರಮಗಳ ತಾಣವಾಗಿದೆ. ಮುಜರಾಯಿ ಇಲಾಖೆ ಪೂರ ಕೆಟ್ಟು ಹೋಗಿದ್ದು ಅರ್ಚಕರ ತಸ್ಥಿಕ್‌ ಹಣ ಬಿಡುಗಡೆಗೂ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಹಣಗೆರೆಯ ದರ್ಗಾ ಮತ್ತು ದೇವಾಲಯದ ಹುಂಡಿ ಎಣಿಕೆಯಲ್ಲಿ ತಾಲ್ಲೂಕು ಆಪೀಸು ಸಿಬ್ಬಂದಿಗಳೇ ತಪ್ಪು ಲೆಕ್ಕ ನೀಡಿ ಹಣ ದೋಚುತ್ತಾರೆ. ಅಕ್ರಮವಾಗಿ ಹೆಚ್ಚುವರಿ ತಿಂಗಳ ಸಂಬಳವನ್ನು ಹುಂಡಿಯಿಂದ ಮಾಡಿಸಿಕೊಳ್ಳುತ್ತಾರೆ. ಇದಲ್ಲದೇ ತನಗೆ 18 ಲಕ್ಷ ಬಾಕಿ ಬರಬೇಕಾಗಿದೆ ಎಂದು ಕಾಂಗ್ರೆಸ್‌ ಯುವ ಮುಖಂಡ ಜಯಕರ ಶೆಟ್ಟಿ ಧರಣಿ ಕೂತ ಕೂಡಲೇ ತಹಶೀಲ್ದಾರ್‌ ರಂಜಿತ್‌ ಮಂಜೂರು ಮಾಡುತ್ತಾರೆ.

ಇದಕ್ಕಾಗಿ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಎಲ್.ಸುಂದರೇಶ್‌ ಓಡಾಡುತ್ತಾರೆ. ಮೃಗವಧೆ ದೇವಸ್ಥಾನದ ವ್ಯವಸ್ಥಾಪನ ಮಂಡಳಿಗೆ ತಿಳಿಯದಂತೆ ಕಾಂಗ್ರೆಸ್‌ ಮುಖಂಡ ಕಟ್ಟೇಹಕ್ಕಲು ಪಣಿರಾಜ್‌ ಒಪ್ಪಿಗೆ ಪತ್ರ ಪಡೆಯುತ್ತಾರೆ. ಮೃಗವಧೆಯ ದೇವಸ್ಥಾನದ ಜಾತ್ರೆಗೆ ಆಗಮಿಸದಿದ್ದರೂ ತಹಶೀಲ್ದಾರ್‌ ರಂಜಿತ್‌ 70 ಸಾವಿರ ಸಂಬಳ ಪಡೆಯುತ್ತಾರೆ. ಹಣಗೆರೆ ದೇವಸ್ಥಾನದಿಂದ ಎಸಿ ಸಂಬಳ ಪಡೆಯುತ್ತಾರೆ. ದೇವಸ್ಥಾನಗಳಿಂದ ಕೇಸ್‌ ವರ್ಕರ್‌ ದೀಪಕ್‌ 30 ಸಾವಿರ ಸಂಬಳ ತೆಗೆದುಕೊಳ್ಳುತ್ತಾರೆ. ತೀರ್ಥಹಳ್ಳಿಯ ಮುಜರಾಯಿ ದೇವಸ್ಥಾನಗಳನ್ನು ಕಾಂಗ್ರೆಸ್‌ ಮುಖಂಡರು, ಅಧಿಕಾರಿಗಳು ಲೂಟಿ ಮಾಡುತ್ತಿದ್ದರು ಕಾಂಗ್ರೆಸ್‌ ಮುಖಂಡರು ಸುಮ್ಮನಾಗಿದ್ದಾರೆ. ಇದೆಂತಹ ವ್ಯವಸ್ಥೆ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಗಂಭೀರವಾಗಿ ದೂರಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ನವೀನ್‌ ಹೆದ್ದೂರು, ಮುಖಂಡರಾದ ನಾಗರಾಜ ಶೆಟ್ಟಿ, ಸಂದೇಶ ಜವಳಿ, ರಕ್ಷಿತ್‌ ಮೇಗರವಳ್ಳಿ, ಚಂದವಳ್ಳಿ ಸೋಮಶೇಖರ್‌, ಕಾನುಕೊಪ್ಪ ಶಿವಕುಮಾರ್‌, ಸಂತೋಷ್‌ ದೇವಾಡಿಗ, ಅಭಿ ಕೊಂಡ್ಲೂರು, ಸುದರ್ಶನ ಬಾಳೆಕೊಪ್ಪ, ಕಾಸರವಳ್ಳಿ ಶ್ರೀನಿವಾಸ, ಅಭಿಲಾಷ್‌ ಕೈಮರ, ಚೇತನ್‌ ಇಂಗ್ಲಾದಿ ಮುಂತಾದವರು ಇದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post