ಸಿದ್ದು v/s ಎಚ್‌ಡಿಕೆ ವಾಕ್‌ ಸಮರ

ಕಾಂಗ್ರೆಸ್‌ ಪಕ್ಷದಿಂದಲೂ ಒಕ್ಕಲಿಗ ಸಮಾಜಕ್ಕೆ ಸಮರ್ಥ ನಾಯಕತ್ವ ನೀಡಬಲ್ಲವರು ಇದ್ದಾರೆ
ಕಿಮ್ಮನೆ ರತ್ನಾಕರ್‌ ಹೆಸರು ಕೂಡ ಪ್ರಸ್ತಾಪಿಸಿದ ಸಿದ್ದರಾಮಯ್ಯ

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ಬದಲಾವಣೆಯ ಚರ್ಚೆ ಬಿರುಸಾಗಿ ಈಗದು ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ವಾಗ್ವಾದವಾಗಿ ಬದಲಾಗಿದೆ. ಸಿದ್ದರಾಮಯ್ಯ ರಾಜ್ಯದಲ್ಲಿ ಪರ್ಯಾಯ ಒಕ್ಕಲಿಗ ನಾಯಕತ್ವ ಬೆಳೆಯಲು ತೊಡರುಗಾಲು ಹಾಕಿದ್ದೇ ದೇವೇಗೌಡರು ಮತ್ತು ಕುಮಾರಸ್ವಾಮಿ ಎಂದು ಮಾತಿನ ಬಾಣ ಹೂಡಿದರೆ ಪ್ರತಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಬಹುತೇಕರು ಜೆಡಿಎಸ್‌ ಪಡಸಾಲೆಯಿಂದ ಹೊರಬಂದವರೇ ಆಗಿದ್ದಾರೆ. ಅಂದಮೇಲೆ ದೇವೇಗೌಡರು ಯಾರನ್ನು ಬೆಳೆಸಿಲ್ಲ ಎಂದು ಹೇಳುವುದು ಯಾವ ಅರ್ಥದಲ್ಲಿ ಎಂದು ಪ್ರಶ್ನಿಸಿದ್ದಾರೆ.

ಅದರೆ ಇಂದಿಗೂ ಚಾಲ್ತಿಯಲ್ಲಿರುವ ಮಾತೆಂದರೆ ಒಕ್ಕಲಿಗ ಸಮುದಾಯದ ನಾಯಕತ್ವದ ಪ್ರಶ್ನೆ ಬಂದಾಗ ಈಗಲೂ ಬಹುಮಂದಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನೇ ಒಪ್ಪುತ್ತಾರೆ ಎನ್ನುವುದು. ಕಾಂಗ್ರೆಸ್‌ನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಒಕ್ಕಲಿಗ ಸಮಾಜದ ಮೇಲಿನ ದೇವೇಗೌಡ ಕುಟುಂಬದ ಹಿಡಿತವನ್ನು ಕಡಿಮೆ ಮಾಡಿ ಆ ಸ್ಥಾನಕ್ಕೆ ಏರಲು ಬೇಕಾದಷ್ಟು ತಯಾರಿ ಮಾಡಿಕೊಂಡಿದ್ದರಾದರೂ ರಾಜಕಾರಣದ ಚಿತ್ರ ವಿಚಿತ್ರ ವ್ಯೂಹಗಳು ಅವರ ಆಸೆಯನ್ನು ಇನ್ನೂ ಈಡೇರಲು ಬಿಟ್ಟಿಲ್ಲ.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥ ನಾಯಕತ್ವ ನೀಡಲು ಸಾಧ್ಯವಿರುವವರು ಈಗಲೂ ಕಾಂಗ್ರೆಸ್‌ ಪಕ್ಷದಲ್ಲಿಯೇ ಇರುವುದು ಡಿ.ಕೆ.ಶಿವಕುಮಾರ್‌, ಟಿ.ಬಿ.ಜಯಚಂದ್ರ, ಕಿಮ್ಮನೆ ರತ್ನಾಕರ್‌, ಎಂ.ಕೃಷ್ಣಪ್ಪ, ಕೃಷ್ಣೇಬೈರೇಗೌಡ, ಪಿರಿಯಾಪಟ್ಟಣ ವೆಂಕಟೇಶ್‌ ಹೀಗೆ ಒಕ್ಕಲಿಗ ನಾಯಕರ ದೊಡ್ಡ ಪಟ್ಟಿಯೇ ಇದೆ. ಆದರೆ ಜೆಡಿಎಸ್‌ನಲ್ಲಿ ದೇವೇಗೌಡರ ಕುಟುಂಬ ಹೊರತುಪಡಿಸಿ ಯಾರಿದ್ದಾರೆ. ಒಕ್ಕಲಿಗ ಸಮಾಜದಿಂದ ಮುಂದೆ ಯಾರಾದರೂ ಮುಖ್ಯಮಂತ್ರಿ ಆದಲ್ಲಿ ಅದು ಕಾಂಗ್ರೆಸ್‌ ಪಕ್ಷದಿಂದಲೇ ಆಗಲಿದೆ ಎಂದು ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಎಬ್ಬಿಸಿದೆ.

ಸಿದ್ದರಾಮಯ್ಯ ಉಲ್ಲೇಖಿಸಿರುವ ಹೆಸರುಗಳ ಪಟ್ಟಿಯಲ್ಲಿ ಮಾಜಿ ಶಿಕ್ಷಣ ಸಚಿವ ತೀರ್ಥಹಳ್ಳಿಯ ಕಿಮ್ಮನೆ ಹೆಸರು ಇರುವುದು ಅವರ ಅಭಿಮಾನಿಗಳಲ್ಲಿ ಥ್ರಿಲ್‌ ನೀಡಿ ಮತ್ತೆ ರಾಜಕಾರಣದ ಹತ್ತು ಹಲವು ಸಾಧ್ಯತೆಗಳ ಚರ್ಚೆ ತೀರ್ಥಹಳ್ಳಿಯಲ್ಲಿ ನಡೆದಿದೆ.

ಹಾಗೆ ನೋಡಿದರೆ ರಾಜ್ಯ ರಾಜಕಾರಣಕ್ಕೆ ತೀರ್ಥಹಳ್ಳಿಯ ಕೊಡುಗೆ ಎಂದೂ ಮರೆಯಲಾಗದಂತಹದ್ದು. ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿದ್ದ ಕಡಿದಾಳು ಮಂಜಪ್ಪ ಅವಿಭಜಿತ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿ ಮುಖ್ಯಮಂತ್ರಿಯಾಗಿದ್ದರು (ಆಗ ತೀರ್ಥಹಳ್ಳಿ ಶೃಂಗೇರಿ ಸೇರಿ ಒಂದೇ ಕ್ಷೇತ್ರವಿತ್ತು).

ದೇಶ ಕಂಡ ಮಹಾನ್‌ ಸಮಾಜವಾದಿಗಳಲ್ಲಿ ಒಬ್ಬರಾಗಿದ್ದ ಶಾಂತವೇರಿ ಗೋಪಾಲಗೌಡರು ಇಂದಿಗೂ ಈ ರಾಜ್ಯಕಂಡ ಅತ್ಯಂತ ಶ್ರೇಷ್ಠ ವಿರೋಧ ಪಕ್ಷದ ನಾಯಕರಾಗಿದ್ದವರು ಮತ್ತು ಒಂದು ಹಂತದಲ್ಲಿ ಸರ್ಕಾರ ರಚನೆಗೆ ನೀಡಿದ ಬೆಂಬಲವನ್ನು ಹಿಂಪಡೆದು ಸಮಾಜವಾದಿ ಪಕ್ಷಕ್ಕೆ ನೀಡುವ ಭರವಸೆ ಬಂದಾಗ ಅದನ್ನವರು ಅನೈತಿಕ ಎಂದು ತಿರಸ್ಕರಿಸ ಮುಖ್ಯಮಂತ್ರಿ ಆಗುವ ಅವಕಾಶ ತ್ಯಜಿಸಿ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದರು.

ಮುಂದೆ ಕೋಣಂದೂರು ಲಿಂಗಪ್ಪ ತೀರ್ಥಹಳ್ಳಿಯಲ್ಲಿ ಬೆರಳೆಣಿಕೆ ಸಮುದಾಯದ ಹಿನ್ನಲೆಯಿಂದ ಬಂದು ಕ್ಷೇತ್ರದ ಏಕೈಕ ಒಕ್ಕಲಿಗೇತರ ಶಾಸಕರಾಗಿ ವಿಕ್ರಮ ಸಾಧಿಸಿದವರು. ಕಡಿದಾಳು ದಿವಾಕರ್‌ 26ನೇ ಹರೆಯದಲ್ಲಿಯೇ ಶಾಸಕರಾಗಿ ಇಡೀ ವಿಧಾನಸಭೆಯ ಕೇಂದ್ರ ಬಿಂದುವಾಗಿದ್ದವರು. ಪಟಮಕ್ಕಿ ರತ್ನಾಕರ್‌ ರಾಜ್ಯಕಂಡ ಅತ್ಯುತ್ತಮ ವಾಗ್ಮಿಗಳಲ್ಲಿ ಒಬ್ಬರಾಗಿದ್ದವರು. ಡಿ.ಬಿ.ಚಂದ್ರೇಗೌಡ ಸ್ವೀಕರ್‌ ಆಗಿ ಕ್ಷೇತ್ರಕ್ಕೆ ಗೌರವ ತಂದವರು. ತಳಮಟ್ಟದಿಂದ ಬಂದ ಆರಗ ಜ್ಞಾನೇಂದ್ರ ಪ್ರಖರ ಸಮಾಜವಾದ, ಕಮುನಿಸ್ಟ್‌, ಕಾಂಗ್ರೆಸ್‌ ಚಿಂತನೆಯ ನೆಲದಲ್ಲಿ ಇಡೀ ರಾಜ್ಯವೇ ದಂಗಾಗುವಂತೆ ಬಿಜೆಪಿಯನ್ನು ಗೆಲ್ಲಿಸಿದ ಹಾಗೂ ಪ್ರತಿಭಾವಂತ ಚರ್ಚಾಪಟು ಎಂದು ಹೆಸರು ಮಾಡಿದರಲ್ಲದೇ ಹಂಗಾಮಿ ಸ್ಪೀಕರ್‌ ಆಗಿ, ಗೃಹಮಂತ್ರಿಯಾಗಿ ಅತ್ಯುನ್ನತ ಗೌರವಕ್ಕೆ ಪಾತ್ರರಾದವರು. ಆರಗ ಜ್ಞಾನೇಂದ್ರರ ನಿರಂತರ ಗೆಲುವಿನ ಓಟದಿಂದ ಬಹುತೇಕ ಬಿಜೆಪಿಯ ಹಿಡಿತಕ್ಕೆ ಹೋಗಿದ್ದ ಕ್ಷೇತ್ರವನ್ನು  ಮತ್ತೆ ಕಾಂಗ್ರೆಸ್‌ ಹಿಡಿತಕ್ಕೆ ತಂದವರು ಕಿಮ್ಮನೆ ರತ್ನಾಕರ್‌. ಶಿಕ್ಷಣ ಸಚಿವರಾಗಿ ರಾಜ್ಯದಲ್ಲಿಯೇ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಉತ್ತಮ ಕ್ರಮಗಳನ್ನು ಕೈಗೊಂಡಿದ್ದಲ್ಲದೇ ಹಲವು ಕ್ರಾಂತಿಕಾರಕ ಬದಲಾವಣೆಯನ್ನು ತಂದರು.

ಸದ್ಯ ಕಿಮ್ಮನೆ ರತ್ನಾಕರ್‌ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದ ಸಂದರ್ಭದಲ್ಲಿಯೂ ಯಾವ ಅಧಿಕಾರದಲ್ಲೂ ಇಲ್ಲ. ಮನಸ್ಸು ಮಾಡಿದ್ದರೆ ನಿಗಮ ಮಂಡಳಿ ಅಧ್ಯಕ್ಷರಾಗಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ಮಿಂಚಬಹುದಿತ್ತು. ಗೂಟದ ಕಾರಿನಲ್ಲಿ ಓಡಾಡಬಹುದಿತ್ತು. ಆದರೆ ಎಲ್ಲವನ್ನು ತಿರಸ್ಕರಿಸಿ ಈಗಲೂ ತೀರ್ಥಹಳ್ಳಿ ಬಿಜೆಪಿಗೆ ಸಮರ್ಥ ಎದುರಾಳಿಯಾಗಿಯೇ ಉಳಿದುಕೊಂಡಿದ್ದಾರೆ.

ಹಾಗೆ ಅಧಿಕಾರವಿಲ್ಲದಾಗಲೂ ರಾಜಕೀಯವಾಗಿ ಅತ್ಯಂತ ಬಿಕ್ಕಟ್ಟಿನ ಸಮಯದಲ್ಲಿ ಸಾವಿರಾರು ಕೋಟಿಗಳಿಗೆ ತೂಗುವ ಶ್ರೀಮಂತರಿರುವ ಆಡಳಿತರೂಢ ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯನವರ ಹೇಳಿಕೆಯಲ್ಲಿ ಅವರ ಹೆಸರು ಸಂಭವನೀಯ ಒಕ್ಕಲಿಗ ನಾಯಕತ್ವ ಮತ್ತು ಮುಖ್ಯಮಂತ್ರಿ ಪಟ್ಟಕ್ಕೆ ಉಲ್ಲೇಖಗೊಂಡಿರುವುದು ರಾಜ್ಯದಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ.

ಅವರ ವಯಸ್ಸು ಮತ್ತು ಸದ್ಯ ರಾಜಕಾರಣ ಪಡೆದುಕೊಳ್ಳುತ್ತಿರುವ ತಿರುವನ್ನು ಗಮನಿಸಿದರೆ ಸಿದ್ದರಾಮಯ್ಯನವರ ಅನಿಸಿಕೆಯಂತೆ ಆಗಬಹುದು ಅಥವಾ ಆಗದೆಯೂ ಇರಬಹುದು. ಆದರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಪ್ರದಾನಿ ಪಟ್ಟದ ಕನಸೇ ಕಂಡಿರದ ಎಚ್.ಡಿ.ದೇವೇಗೌಡರು ಪ್ರದಾನಿ ಆಗಿದ್ದಲ್ಲದೇ ಕೇವಲ 11 ತಿಂಗಳ ಅವಧಿಯಲ್ಲಿ ಅತ್ಯಂತ ದಕ್ಷ ಪ್ರದಾನಿ ಎನ್ನುವ ಗೌರವ ಉಳಿಸಿ ಹೋಗಿದ್ದು, ಒಂದು ಕಾಲದಲ್ಲಿ ಒಂದು ಮಂತ್ರಿ ಪದವಿ ಮತ್ತು ಕೆಲವು ಕೋಟಿಗಳಷ್ಟು ಹಣ ಸಹಾಯ ಮಾಡಿದ್ದಲ್ಲಿ ಜೆಡಿಎಸ್‌ಗೆ ಬರುವೆ ಎಂದು ಹೇಳಿದ್ದರು ಎನ್ನಲಾಗಿರುವ ಯಡಿಯೂರಪ್ಪ ಮುಂದೆ ಸತತವಾಗಿ ಮುಖ್ಯಮಂತ್ರಿಯಾಗಿ ಇಂದಿಗೂ ಲಿಂಗಾಯತ ಸಮಾಜದ ಅನಭಿಶಕ್ತ ದೊರೆಯಂತೆ ಮೆರೆದಿರುವುದು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮಂಡಿ ನೋವಿನ ಕಾರಣ ಮೂರು ತಿಂಗಳ ವಿಶ್ರಾಂತಿ ಕಡ್ಡಾಯ ಎಂದಾಗ ಹಂಗಾಮಿ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಆಗ ಗೃಹಮಂತ್ರಿಯಾಗಿದ್ದ ಆರಗ ಜ್ಞಾನೇಂದ್ರರ ಹೆಸರು ಕೇಳಿ ಬಂದಿದ್ದು ಹೀಗೆ ಹಲವು ಉದಾಹರಣೆ ಗಮನಿಸಿದರೆ ರಾಜಕಾರಣದಲ್ಲಿ ಯಾವ ಕ್ಷಣದಲ್ಲಿ ಏನು ಎಂಬುದನ್ನು ಯಾರು ಕೂಡ ಊಹಿಸಲಾಗುವುದಿಲ್ಲ.

ಆದರೆ ಸಿದ್ದರಾಮಯ್ಯನವರ ಹೇಳಿಕೆ ಹಿನ್ನಲೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಮುಂದಿನ ಕಾಂಗ್ರೆಸ್‌ ಟಿಕೆಟ್‌ ಮತ್ತೆ ಬಹುತೇಕ ಕಿಮ್ಮನೆ ರತ್ನಾಕರ್‌ ಪಾಲಾಗುವುದು ನಿಚ್ಚಳವಾದಂತಿದೆ. ಇದಲ್ಲದೇ 2023ರ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಮುಂಚಿತವಾಗಿ ಕಿಮ್ಮನೆ ರತ್ನಾಕರ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿದ್ದಲ್ಲಿ ಅವರ ತಯಾರಿ ಮತ್ತು ಪ್ರಚಾರಕ್ಕೆ ದೀರ್ಘ ಸಮಯದೊರೆತು ಅವರು ಗೆಲ್ಲುತ್ತಿದ್ದರು ಎಂಬ ನಂಬಿಕೆ ಅವರ ನಿಷ್ಟಾವಂತ ಅನುಯಾಯಿಗಳಲ್ಲಿ ಇದೆ. ಈ ಬಗ್ಗೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದಿಂದ ನಿಂತು ಪರಾಭವಗೊಂಡವರ ಲೆಕ್ಕಾಚಾರ ಉಲ್ಲೇಖಿಸುವ ಸಂದರ್ಭ ಹಲವು ಬಾರಿ ಕೆಪಿಸಿಸಿ ಅಂಗಳದಲ್ಲಿ ತೀರ್ಥಹಳ್ಳಿಯ ಟಿಕೆಟ್‌ ಹಂಚಿಕೆಯ ವಿಳಂಬದ ವಿಚಾರ ಕೂಡ ಪ್ರಸ್ತಾಪವಾಗಿದೆ. ಇದಲ್ಲದೇ ಶಿಕ್ಷಣ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಗಿನ ಸಚಿವ ಸಂಪುಟವನ್ನು ಬ್ಯಾಲೆನ್ಸ್‌ ಮಾಡಲು ಸಿದ್ದರಾಮಯ್ಯ ಸೂಚಿಸಿದ ತಕ್ಷಣವೇ ಮರು ಮಾತಿಲ್ಲದೇ ಯಾವ ಹೈಡ್ರಾಮವನ್ನು ಮಾಡದೆ ರಾಜೀನಾಮೆ ನೀಡಿದ ಕಿಮ್ಮನೆ ರತ್ನಾಕರ್‌ ನಡವಳಿಕೆ ಮತ್ತು ಪಕ್ಷ ನಿಷ್ಟೆ ಕುರಿತು ಈಗಲೂ ಸಿದ್ದರಾಯಮ್ಯ ಅಪಾರ ಗೌರವ ಉಳಿಸಿಕೊಂಡಿದ್ದಾರೆ ಎನ್ನುವುದು ಹತ್ತು ಹಲವು ಬಾರಿ ಅವರೇ ಸಭೆಗಳಲ್ಲಿ ಕಿಮ್ಮನೆ ರತ್ನಾಕರ್‌ ಹೆಸರು ಪ್ರಸ್ತಾಪಿಸಿರುವುದರಿಂದ ಬಹಿರಂಗವಾಗಿದೆ. ಒಟ್ಟಿನಲ್ಲಿ ತೀರ್ಥಹಳ್ಳಿ ರಾಜಕಾರಣ ರಂಗೇರ ತೊಡಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post