ಇಸ್ಕೊಂಡೋನು ಈರಭದ್ರ, ಕೊಟ್ಟವನು ಕೋಡಂಗಿ ಎನ್ನುವ ಪ್ರಕರಣವೇ?

35 ಲಕ್ಷ‌ ಟೋಪಿ ಕೇಸ್‌ ; ವಂಚಕರ ಖೆಡ್ಡಾಕ್ಕೆ ಬಿದ್ದರೆ ಅಮ್ರಪಾಲಿ ಸುರೇಶ್‌ ?
ಶಾಸಕ ಆರಗರನ್ನು ಮಹಿಳೆ ಭೇಟಿ ಮಾಡಿದ್ದೇಕೆ ?

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಜನತಾದಳದಲ್ಲಿ ಇದ್ದ ಕಾಲದಲ್ಲಿಯೂ ಅವರ ಬಲಗೈ ಬಂಟನಂತೆ ಇದ್ದು ಬಳಿಕ ಅವರು ಶಾಸಕ, ಮಂತ್ರಿಯಾದ ಮೇಲೆ ಒಂದಿಷ್ಟು ಜನರ ಮೆಚ್ಚುಗೆ ಹಾಗೂ ಮತ್ತೊಂದಿಷ್ಟು ಜನರ ಅಸಹನೆ, ಮತ್ಸರಕ್ಕೂ ಗುರಿಯಾಗಿದ್ದ ಅಮ್ರಪಾಲಿ ಸುರೇಶ್‌ ವಂಚನೆ ಪ್ರಕರಣವೊಂದರಲ್ಲಿ ಜಾಮೀನು ಸಿಗದೆ ತಲೆಮರೆಸಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ.

ಸದಾಕಾಲ ನಿವೃತ್ತಿ ಸಮೀಪದಲ್ಲಿರುವ ಹಾಗೂ ನಿವೃತ್ತಿ ವಯಸ್ಸನ್ನು ದಾಟಿರುವ ಕಾಂಗ್ರೆಸ್ ನಾಯಕ ಮಣಿಗಳು ಶಾಸಕ ಆರಗ ಜ್ಞಾನೇಂದ್ರರ ವಿರುದ್ಧ ಉಸಿರೆತ್ತಲೂ ಬೆಚ್ಚಿ ಬೀಳುತ್ತಿದ್ದ ಸಂದರ್ಭದಲ್ಲಿ ನಿರ್ಭಿಡೆಯಿಂದ ಅವರ ವಿರುದ್ಧ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿದ್ದ ಅಮ್ರಪಾಲಿ ಮೇಲೆ ಈಗ ಬಿಜೆಪಿ ಮುಗಿಬಿದ್ದಿದೆ. ಇದು ಕೊಟ್ಟವನು ಕೋಡಂಗಿ ಇಸ್ಕೊಂಡೋನು ಈರಭದ್ರ ಎನ್ನುವಂತಹ ವಿಲಕ್ಷಣಾ ವಂಚನೆ ಪ್ರಕರಣದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಪ್ರಕರಣದ ವಿವರ ?

ಬೆಂಗಳೂರು ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ 37 ವರ್ಷದ ಮಹಿಳೆಯೊಬ್ಬಳು ಅಮ್ರಪಾಲಿ ಸುರೇಶ್‌ ಹಾಗೂ ಇತರರ ಮೇಲೆ 35 ಲಕ್ಷ ರೂಪಾಯಿ ವಂಚನೆಯ ಕೇಸು ದಾಖಲಿಸಿದ್ದು ಆ ಪ್ರಕಾರ ಸುರೇಶ್‌ ಎ1, ವೆಂಕಟರಮಣ ಎ2, ಪ್ರದ್ಯುಮ್ನ ಎ3, ಅತುಲ್‌ ಕುಮಾರ್‌ ಶರ್ಮಾ ಎ4, ರೋಹನ್‌ ಎ5, ಶಿವಂದ ದುಗ್ಗಲ್‌ ಎ6 ಹೀಗೆ ಒಟ್ಟು ಆರು ಜನರ ಮೇಲೆ ಜನವರಿ 12 ರಂದು ಎಫ್‌ಐಆರ್‌ ದಾಖಲಾಗಿದೆ.

ಹಿನ್ನಲೆ ಏನು ?

ದೂರುದಾರ ಮಹಿಳೆ ಬೆಂಗಳೂರಿನ ಎಚ್.ಬಿ.ಆರ್.‌ ಲೇಔಟಿನ ನಾಲ್ಕನೇ ಬ್ಲಾಕ್‌ನಲ್ಲಿ ನಡೆಸುತ್ತಿರುವ ರಾಯ್‌ ಎಜ್ಯೂಕೇಷನಲ್‌ ಟ್ರಸ್ಟ್‌ ಇದರ ಮ್ಯಾನೇಜಿಂಗ್‌ ಟ್ರಸ್ಟಿಯಾಗಿದ್ದು ಸೆಪ್ಟೆಂಬರ್‌ 2025ರಲ್ಲಿ ಈಕೆಯನ್ನು ಭೇಟಿ ಮಾಡಿದ ಸುರೇಶ್‌ ಟ್ರಸ್ಟಿಗೆ 100 ಕೋಟಿ ದೇಣಿಗೆ ಕೊಡಿಸುತ್ತೇನೆ ಎಂದು ವೆಂಕಟರಮಣ ಭಟ್‌ ಎಂಬುವವರನ್ನು ಪರಿಚಯ ಮಾಡಿಸುತ್ತಾರೆ. ಆತ ಹೈದರಾಬಾದ್‌ ನ ಅತುಲ್‌ ಕುಮಾರ್‌ ಶರ್ಮಾ ಎಂಬುವವನನ್ನು ಪರಿಚಯಿಸಿ ಹಣದ ನೆರವು ಕೊಡಿಸುವುದಾಗಿ ಎಲ್ಲಾ ದಾಖಲೆಗಳನ್ನು ಪಡೆದಿದ್ದಾನೆ. ಬಳಿಕ ವೆಂಕಟರಮಣ ಭಟ್‌ ಹಾಗೂ ಅತುಲ್‌ ಕುಮಾರ್‌ ನಿಗದಿತ ಸಮಯದೊಳಗೆ ಕೆಲಸ ಮುಗಿಸಿಕೊಡುವುದಾಗಿ ಡಿಸೆಂಬರ್‌ 2 ರಂದು 7 ಲಕ್ಷ, ಡಿಸೆಂಬರ್‌ 10 ರಂದು 50 ಸಾವಿರ, ಡಿಸೆಂಬರ್‌ 15 ರಂದು 7.5 ಲಕ್ಷ ಹಣವನ್ನು ಪಡೆದಿದ್ದಾರೆ ಎಂದು ಸಂದಾಯವಾದ ದಾಖಲೆಗಳನ್ನು ಪೊಲೀಸರಿಗೆ ನೀಡಿ ಪ್ರಕರಣದ ಹಿಂದಿನ ಸಂಪೂರ್ಣ ರೂವಾರಿ ಅಮ್ರಪಾಲಿ ಸುರೇಶ್‌ ಎಂದು ದೂರು ನೀಡಿದ್ದಾಳೆ. ಕಾರಣ ಅವರನ್ನು ಎ1 ಆರೋಪಿಯಾಗಿ ಪ್ರಕರಣ ದಾಖಲಿಸಲಾಗಿದೆ. ಸದ್ಯಕ್ಕೆ ಇದು ಚಾಲ್ತಿಯಲ್ಲಿರುವ ವಿಚಾರ.

ಹಾಗಾದರೆ ನಡೆದಿರುವುದು ಏನು?

ಶೃಂಗೇರಿ ಮೂಲದ ತೀರ್ಥಹಳ್ಳಿಯಲ್ಲಿ ವಾಸವಿರುವ ವೆಂಕಟರಮಣ ಭಟ್‌ ಅವರೊಂದಿಗೆ ರಿಯಲ್‌ ಎಸ್ಟೇಟ್‌, ಇನ್ಶೂರೆನ್ಸ್‌ ಸೇರಿದಂತೆ ಹಲವು ವ್ಯವಹಾರಿಕ ಸಂಬಂಧ ಹೊಂದಿದ್ದ ಅಮ್ರಪಾಲಿ ಸುರೇಶ್‌ ಅವರಿಗೆ ಹೀಗೆ ಒಂದು ದಿನ 10 ಕೋಟಿಯ ಫಂಡ್‌ ಕೊಡುವವರು ಇದ್ದಾರೆ ಎಂದು ಕಿವಿಗೆ ದೊಡ್ಡ ದಾಸವಾಳ ಮುಡಿಸುತ್ತಾರೆ. ಹಾಗೂ ಅದಕ್ಕೆ ಒಂದು ಟ್ರಸ್ಟ್‌ ಅಗತ್ಯ ಇದೆ ಎಂದು ತಿಳಿಸಿರುತ್ತಾರೆ. ಸುರೇಶ್‌ ಗ್ರಹಚಾರಕ್ಕೆ ಇದನ್ನು ಕೇಳಿಸಿಕೊಂಡ ಅಮ್ರಪಾಲಿ ಶಿಷ್ಯನೊಬ್ಬ ನಮ್ಮ ಅತ್ತಿಗೆ ಅಂತಹ ಟ್ರಸ್ಟ್‌ ಹೊಂದಿದ್ದಾರೆ ಎಂದು ಮತ್ತೊಂದು ಹೂವು ಸುರೇಶ್‌ ಕಿವಿಗೆ ಇಡುತ್ತಾನೆ.

ಮುಂದೆ ಈ ಟ್ರಸ್ಟ್‌ ಮಾಹಿತಿಗಳನ್ನು ತಿಳಿದುಕೊಳ್ಳುವ ಸುರೇಶ್‌, ವೆಂಕಟರಮಣ ಭಟ್‌, ಅವರ ಮಗ ಪ್ರದ್ಯುಮ್ನ ಜೊತೆ ಹಣ ಕೊಡಿಸುವ ಭರವಸೆ ನೀಡಿದ್ದ ಹೈದರಾಬಾದಿನ ಅತುಲ್‌ ಕುಮಾರ್‌ ತಂಡವನ್ನು ಭೇಟಿಯಾಗುತ್ತಾರೆ. 10 ಕೋಟಿ ಹಗಲುಗನಸಿಗೆ ಬಿದ್ದಿದ್ದ ಆ ಮಹಿಳೆ ಆತುಲ್‌ ಕುಮಾರ್‌ ತಂಡ ಬೆಂಗಳೂರಿಗೆ ಆಗಮಿಸುವುದು, ಹೋಟೆಲಿನಲ್ಲಿ ಉಳಿದುಕೊಳ್ಳುವುದು ಸೇರಿದಂತೆ ಎಲ್ಲಾ ಬಗೆಯ ಹಣಕಾಸಿನ ನೆರವು ನೀಡುತ್ತಾಳೆ. ಮುಂದಿನ ಹಂತ ಟ್ರಸ್ಟ್‌ಗೆ 10 ಕೋಟಿ ಸಿಎಸ್‌ಆರ್‌ (ಕಂಪನಿ ಸಾಮಾಜಿಕ ಹೊಣೆಗಾರಿಕೆ) ಹಣ ತರಲು ಒಳ್ಳೆಯ ಪ್ರಾಜೆಕ್ಟ್‌ ರಿಪೋರ್ಟ್‌ ತಯಾರಾಗಬೇಕೆಂದು ಅತುಲ್‌ ಕುಮಾರ್‌ ಆ ಹೂವನ್ನು ಸುರೇಶ್‌ ಕಿವಿಯಿಂದ ಮಹಿಳೆಯ ಕಿವಿಗೆ ಇಡುತ್ತಾನೆ. ಬಳಿಕ ಅದಕ್ಕೆ ಸರಿಯಾದ ರಿಪೋರ್ಟ್‌ ತಯಾರಾಗುತ್ತದೆ.

ಮುಂದೆ 10 ಕೋಟಿಯ ಬದಲು 100 ಕೋಟಿಯಷ್ಟು ದೊಡ್ಡದಾದ ಮೊತ್ತದ ದೇಣಿಗೆ ಆಸೆಯನ್ನು ಅತುಲ್‌ ಕುಮಾರ್‌ ತೋರಿಸಿದಾಗ ದುರಾಸೆಗೆ ಬೀಳುವ ಆ ಮಹಿಳೆ ಈ ಹಂತದಲ್ಲಿ ಅವರುಗಳನ್ನು ಪರಿಚಯಿಸಿದ ಅಮ್ರಪಾಲಿ ಸುರೇಶ್‌ ಮತ್ತು ವೆಂಕಟರಮಣ ಭಟ್‌ ಹಾಗೂ ಅವರ ಪುತ್ರ ಪ್ರದ್ಯುಮ್ನ ಎಲ್ಲರ ಕಿವಿಗೂ ಈ ಎಲ್ಲಾ ಹೂಗಳು ಸಾಕಾಗುವುದಿಲ್ಲ ಎಂದು ದೊಡ್ಡ ಕಮಲದ ಹೂವನ್ನು ಇಟ್ಟು ನೇರ ಸಂಪರ್ಕಕ್ಕೆ ಹೋಗುತ್ತಾಳೆ.

ಅತುಲ್‌ ಕುಮಾರ್‌ ವ್ಯವಹಾರವೇನು?

ನಂತರ ಹೈದರಬಾದಿಗೆ ಹಿಂದಿರುಗಿದ ಅತುಲ್‌ ಕುಮಾರ್‌ ಶರ್ಮಾ ಮಹಿಳೆಯಿಂದ 15 ಲಕ್ಷ ಹಣವನ್ನು ಫೋನ್‌ ಫೇ ಮೂಲಕ ಪಡೆದುಕೊಂಡಿದ್ದಾನೆ. ಅಲ್ಲದೇ ಸಿಎಸ್‌ಆರ್‌ ಫಂಡ್‌ ನೀಡುವ ಕಂಪನಿಗೆ 50 ಕೋಟಿ ನಗದು ತೋರಿಸಬೇಕು. ಅದಕ್ಕೆ ಎರಡು ಎಟಿಎಂ ಮನಿ ಟ್ರಾನ್ಸಫರ್‌ ವಾಹನಗಳ ಅಗತ್ಯ ಇದೆ. ಅದಕ್ಕೆ ದೊಡ್ಡ ಕೊಠಡಿ ವ್ಯವಸ್ಥೆ ಮಾಡಿಸಬೇಕೆಂಬ ಕಥೆ ಸೃಷ್ಟಿಸಿದ್ದಾನೆ. ಅದರ ವ್ಯವಸ್ಥೆ ಮಾಡಿ ಕೊಡುವುದಾಗಿ ನಂಬಿಸಿದ ಆತ ರೋಹನ್‌ ಎಂಬಾತನ ಹೆಸರಿಗೆ ಪುನಃ 20 ಲಕ್ಷ ಹಣವನ್ನು ಆರ್‌ಟಿಜಿಎಸ್‌ ಮೂಲಕ ಪಡೆದಿದ್ದಾನೆ. ಅಲ್ಲಿಗೆ ನೇರವಾಗಿ ಆಕೆಯೇ ಈ ಡೀಲ್‌ನ ಮುಂಗಡವಾಗಿ ಒಟ್ಟಾರೆ 35 ಲಕ್ಷ ಹಣವನ್ನು ವರ್ಗಾಯಿಸಿದ್ದಾಳೆ. ಈಗ ಮಿಕ ಸರಿಯಾಗಿ ಬಲೆಗೆ ಬಿತ್ತು ಎನ್ನುವುದನ್ನು ತಿಳಿದುಕೊಂಡ ಅತುಲ್‌ ಕುಮಾರ್‌ ಶರ್ಮಾ 20 ಲಕ್ಷ ಪಡೆದ ನಂತರ ಪರಾರಿಯಾಗುತ್ತಾನೆ. ಮೊಬೈಲ್‌ ಸ್ವಿಚ್‌ ಆಫ್‌ ಹೀಗೆ ಯಾವ ರೀತಿಯ ಸಂಪರ್ಕಕ್ಕೂ ಸಿಗದೆ ಕಣ್ಮರೆಯಾಗುತ್ತಾನೆ.

ಆಗ ಕಂಗಾಲಾದ ಆ ಮಹಿಳೆ ತಾನು ನೇರ ಹಣಕಾಸು ವ್ಯವಹಾರ ಮಾಡಿದ್ದನ್ನು ಮರೆತು ಪರಿಚಯಿಸಿದ ಅಮ್ರಪಾಲಿ ಸುರೇಶ್‌ ಹಾಗೂ ವೆಂಕಟರಮಣ ಭಟ್‌ಗೆ ದುಡ್ಡು ವಾಪಾಸ್ಸು ಮಾಡುವಂತೆ ಅಟಕಾಯಿಸಿಕೊಂಡಿದ್ದಾಳೆ. ಆಗ ಮಂಡೆ ಬಿಸಿ ಮಾಡಿಕೊಂಡು ಅಮ್ರಪಾಲಿ ಸುರೇಶ್‌ ಮತ್ತು ವೆಂಕಟರಮಣ ಭಟ್ ಪರಿಚಯಿಸಿದ್ದು ನಾವಿರಬಹುದು ಆದರೆ ನಿಮ್ಮ ಹಣ ವ್ಯವಹಾರದಲ್ಲಿ ನಾವಿಲ್ಲ, ನಾವೇನು ಮಾಡುವುದು ಎಂದು ಕೈ ಎತ್ತಿದ್ದರು. ಆ ನಂತರದಲ್ಲಿ ಮಹಿಳೆ ಮತ್ತು ಶಾಸಕ ಆರಗ ಜ್ಞಾನೇಂದ್ರ ಜೊತೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಆಕೆ ಈ ಪ್ರಕರಣದಲ್ಲಿ ನೇರವಾಗಿ ಸಹಕಾರ ಪಡೆದಿರಬಹುದು ಎನ್ನುವ ಊಹಾಪೋಹಗಳಿಗೆ ಕಾರಣವಾಗಿದೆ.

ಏನಿದು ಸಿಎಸ್‌ಆರ್‌?

ಭಾರತೀಯ ಕಂಪನಿ ಕಾಯ್ದೆ 2013ರ ಅನ್ವಯ ಪ್ರತಿ ಕಂಪನಿಯೂ ತನ್ನ ವಾರ್ಷಿಕ ಆದಾಯದಲ್ಲಿ ಶೇಕಡಾ 2 ರಷ್ಟು ಹಣವನ್ನು ಕಂಪನಿ ಸಾಮಾಜಿಕ ಹೊಣೆಗಾರಿಕೆ ಉದ್ದೇಶಕ್ಕೆ ಚಾರಿಟಿ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ. ಹೀಗೆ ಚಾರಿಟಿ ನೀಡುವ ಕಂಪನಿಗೆ 80ಜಿ ಅಡಿಯಲ್ಲಿ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಕಂಪನಿಗಳು ಶೇಕಡಾ 2 ರಷ್ಟು ಹಣವನ್ನು ಸಮಾಜಕ್ಕೆ ವಿನಿಯೋಗಿಸಬೇಕೆಂಬ ಕಾನೂನೇ ಸಿಎಸ್‌ಆರ್‌ ಆಗಿದೆ. ಹೀಗೆ ಸಿಎಸ್‌ಆರ್‌ ದೇಣಿಗೆ ನೀಡುವ ಸಂಸ್ಥೆ ಒಟ್ಟಾರೆ ಸಂಸ್ಥೆಯ ಕ್ಯಾಪಿಟಲ್‌, ಗುಡ್‌ವಿಲ್‌ ಗೆ ಸಂಬಂಧಿಸಿದಂತೆ ಮಾಸ್‌ ಆಗಿರುವ ಅಭಿಪ್ರಾಯ ಸೃಷ್ಟಿಸಿಕೊಳ್ಳಲು ವಿನಿಯೋಗಿಸಿಕೊಳ್ಳುವುದು ವಾಡಿಕೆ.

ವಂಚನೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ

ಅಮ್ರಪಾಲಿ ಸುರೇಶ್‌ ವಿರುದ್ಧ ದಾಖಲಾಗಿರುವ ಭಾರತೀಯ ನ್ಯಾಯ ಸಂಹಿತೆ (ಬಿಎಸ್‌ಎಸ್)‌ ಅಡಿಯಲ್ಲಿ ಬರುವ 318 (4) (ವಂಚನೆ), ಆರ್‌/ಡ್ಬ್ಯೂ 3(5) (ವಂಚನೆಯ ಜಂಟಿ ಪಾಲುದಾರಿಕೆ) ಪ್ರಕರಣ ಸಾಬೀತಾದರೆ ಒಟ್ಟಾರೆ 7 ವರ್ಷಗಳ ಜೈಲುಶಿಕ್ಷೆಯಾಗಲಿದೆ. ಆದರೆ ಈ ಪ್ರಕರಣ ತನಿಖೆ ಹಂತದಲ್ಲಿ ಯಾವುದೇ ರೀತಿಯ ಬಂಧನದ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಆರೋಪಿತರು ತನಿಖಾಧಿಕಾರಿ ಸೂಚಿಸಿದಾಗ ಹಾಜರಾಗಿ ತನಿಖೆಗೆ ಸಹಕರಿಸಬೇಕು. ಅಷ್ಟಕ್ಕೂ ಇಲ್ಲಿ ಅಮ್ರಪಾಲಿ ಸುರೇಶ್ ಸೇರಿದಂತೆ ಯಾರು ಕೂಡ ತಲೆಮರಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎನ್ನುತ್ತಾರೆ ಕಾನೂನು ತಜ್ಞರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post