ರತ್ನಾಕರ ಶೆಟ್ಟರ ಅಧ್ಯಕ್ಷತೆಯ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ

ಆಡಳಿತ, ವಿರೋಧ ಪಕ್ಷ ಎರಡರಲ್ಲೂ ಕಂಗೊಳಿಸಿದ ಕಾಂಗ್ರೆಸ್‌ ಪಕ್ಷ
ಆಗ ಅಸಾದಿ ಹಠಾವೋ! ಈಗ ಅಸಾದಿ ನಿರ್ಣಯ ಹಠಾವೋ!!

ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಗುರುವಾರ ರತ್ನಾಕರ ಶೆಟ್ಟರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಆದರೆ ವಿರೋಧ ಪಕ್ಷದವರಿಗೆ ಹೆಚ್ಚೇನು ಕೆಲಸ ಇರಲಿಲ್ಲ. ಬಹುಶಃ ಸಂದೇಶ ಜವಳಿ ಅಂತರಾಷ್ಟ್ರೀಯ ನಾಟಕೋತ್ಸವದಲ್ಲಿ ಪಾಲ್ಗೊಂಡು ಸುಸ್ತಾಗಿರುತ್ತಾರೆ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ ಪಕ್ಷ ಔದಾರ್ಯ ತೋರಿತೋ ಎಂಬಂತೆ ವಿರೋಧ ಪಕ್ಷದ ಜವಾಬ್ದಾರಿಯನ್ನು ಕೂಡ ಬಿಜೆಪಿ ಬದಲು ಕಾಂಗ್ರೆಸ್ ಸದಸ್ಯರೇ ನಿರ್ವಹಿಸಿಬಿಟ್ಟರು!

ಎರಡು ತಿಂಗಳ ಹಿಂದೆ ಅಧ್ಯಕ್ಷರ ಕುರ್ಚಿ ಬಿಟ್ಟುಕೊಡದೆ ಕಿಮ್ಮನೆ ಸೇರಿದಂತೆ ಇಲ್ಲಿನ ಕಾಂಗ್ರೆಸ್ಸಿಗರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಮಾಜಿ ಅಧ್ಯಕ್ಷ ರಹಮತ್‌ ಉಲ್ಲಾ ಅಸಾದಿಯ ಮೇಲೆ ಸೇಡು ಎಂಬಂತೆ ಸಭೆಯಲ್ಲಿ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಕೈಗೊಳ್ಳಲಾಗಿದ್ದ ಅನೇಕ ಪ್ರಮುಖ ಕಾಮಗಾರಿಗಳನ್ನು ಬಿಜೆಪಿ ಸದಸ್ಯರ ಬದಲು ಕಾಂಗ್ರೆಸ್ಸಿಗರೇ ವಿರೋಧಿಸಿದ್ದು ಸಭೆಯ ವಿಶೇಷ.

ಕಳೆದ ಸಾಮಾನ್ಯ ಸಭೆಯಲ್ಲಿ ಸಂದೇಶ ಜವಳಿ ಲೆಕ್ಕಾಚಾರ ಪತ್ರ ಪರಿಶೀಲನೆಯ ವೇಳೆ ಸುಮಾರು 70 ಲಕ್ಷ ದುರುಪಯೋಗ ಆಗಿದೆ. ಸಭೆಯ ಗಮನಕ್ಕೆ ತಾರದೆ ಕಾಮಗಾರಿಗಳ ಬಿಲ್‌ ಮಂಜೂರು ಮಾಡಲಾಗಿದೆ. ಅದರ ತನಿಖೆಗೆ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದ್ದರು. ಗುರುವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಬಿ.ಗಣಪತಿ ಮಾಜಿ ಅಧ್ಯಕ್ಷ ಅಸಾದಿಯನ್ನು ಸಮಿತಿಯಲ್ಲಿ ಇಡಲಾಗಿದೆ. ಹಗರಣ ನಡೆದ ಅವಧಿಯ ಅಧ್ಯಕ್ಷರನ್ನು ಸಮಿತಿಯಿಂದ ಹೊರಗಿಡಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಬಿ.ಆರ್.ರಾಘವೇಂದ್ರ ಶೆಟ್ಟಿ, ಜಯಪ್ರಕಾಶ್‌ ಶೆಟ್ಟಿ ಧ್ವನಿಗೂಡಿಸಿದರು. ಮಧ್ಯ ಪ್ರವೇಶಿಸಿ ಮಾಜಿ ಅಧ್ಯಕ್ಷ ರಹಮತ್‌ ಉಲ್ಲಾ ಅಸಾದಿ ಹಗರಣ ಎಂದು ನೀವು ಹೇಗೆ ಹೇಳುತ್ತೀರ. ನನ್ನನ್ನು ಹೊರಗಿಡುವ ಬಗ್ಗೆ ಯಾವುದೇ ಅಭ್ಯಂತರವಿಲ್ಲ. ಅಂತಹ ಯಾವುದೇ ಆಕ್ರಮಗಳು ನಡೆದಿಲ್ಲ ಎಂದು ಮರು ಉತ್ತರ ನೀಡಿದರು.

ಪಟ್ಟಣ ಪಂಚಾಯಿತಿ ಪಕ್ಕದಲ್ಲಿ 80 ಲಕ್ಷ ವೆಚ್ಚದಲ್ಲಿ ಕುವೆಂಪು ಬಯಲು ರಂಗಮಂದಿರ ನಿರ್ಮಾಣ ಮಾಡುವುದಾಗಿ ಅಸಾದಿ ಘೋಷಿಸಿದ್ದರು. ಅದಕ್ಕೆ ಸರ್ಕಾರ ಮತ್ತು ಬಿ.ಕೆ.ಹರಿಪ್ರಸಾದ್‌ ಅವರ ಅನುದಾನ ಒದಗಿಸುವುದಾಗಿ ತಿಳಿಸಿದ್ದರು. ಇದೀಗ 80 ಲಕ್ಷ ಹಣವನ್ನು ಉದ್ಯೋಗ ನಿಧಿಯಿಂದ ರಂಗಮಂದಿರ ಸ್ಥಾಪಿಸುವುದಾಗಿ ಅನುಮೋದನೆ ಪಡೆಯಲಾಗಿದೆ. ಇದರಿಂದ ಸಾರ್ವಜನಿಕ ತೆರಿಗೆ ಹಣ ದುರ್ಭಳಕೆ ಆಗುವ ಜೊತೆಗೆ ಪಟ್ಟಣದ ಆದಾಯಕ್ಕೆ ಹಿನ್ನಡೆಯಾಗಲಿದೆ. ಅದೇ ಹಣದಲ್ಲಿ ಹಲವು ವಾರ್ಡ್‌ಗಳ ಸಮಸ್ಯೆಗಳನ್ನು ಬಗೆಹರಿಸಬಹುದು. ಪಟ್ಟಣದಲ್ಲಿ ಫುಡ್‌ಕೋರ್ಟ್‌ ನಿರ್ಮಾಣ ಮಾಡಬಹುದು ಎಂದು ಬಿ.ಆರ್.ರಾಘವೇಂದ್ರ ಶೆಟ್ಟಿ, ಬಿ.ಗಣಪತಿ, ಜಯಪ್ರಕಾಶ್‌ ಶೆಟ್ಟಿ ಆಕ್ಷೇಪಣೆ ವ್ಯಕ್ತಪಡಿಸಿದರು.

ಗೀತಾ ರಮೇಶ್‌ ಮಾತನಾಡಿ ಬಯಲು ರಂಗಮಂದಿರದಲ್ಲಿ ನಾಯಿ, ನರಿಗಳು ಬಂದು ಮಲಗುತ್ತದೆ ಎಂದು ನಾನು ಹೇಳಿರುವುದಾಗಿ ಹಲವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಾನೆಲ್ಲಿ ಹೇಳಿದ್ದೇನೆ ಎಂದು ಪ್ರಶ್ನಿಸಿದರು. ಮಧ್ಯೆ ಪ್ರವೇಶಿಸಿದ ರಾಘವೇಂದ್ರ ಶೆಟ್ಟಿ ಸಾರ್ವಜನಿಕವಾಗಿ ಇದನ್ನು ಪ್ರಸ್ತಾಪಿಸುವ ಅಗತ್ಯವಿರಲಿಲ್ಲ. ಹೇಳಿಕೆ ಹೇಳಿರುವುದು ನಾನು. ಅದಕ್ಕೆ ನಾನು ಬದ್ಧವಾಗಿದ್ದೇನೆ. ಅಂತಹ ಎದೆಗಾರಿಕೆ ಬೆಳೆಸಿಕೊಂಡಿದ್ದೇನೆ. ಇರುವ ರಂಗಮಂದಿರದಲ್ಲಿ ಕಾರ್ಯಕ್ರಮಗಳು ಎಷ್ಟಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. 80 ಲಕ್ಷವನ್ನು ಆದಾಯವಿಲ್ಲದ ಯೋಜನೆಗೆ ಹಾಕುವುದು ಸರಿಯಲ್ಲ ಎಂದರು. ಬಯಲು ವೇದಿಕೆಗಳನ್ನು ನಿರ್ಮಾಣ ಮಾಡುವಾಗ ಸರಿಯಾದ ಪ್ಲಾನ್‌ ಮಾಡಲು ಸಾಧ್ಯವಿಲ್ಲ. ಕಾರ್ಯಕ್ರಮದ ಘನತೆಗೆ ತಕ್ಕಂತೆ ವೇದಿಕೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇಂತಿಷ್ಟೇ ಅಳತೆಯ ವೇದಿಕೆ ಬೇಕು ಎನ್ನುವುದಕ್ಕೆ ಸಾಧ್ಯವಿಲ್ಲ. ಹಣವನ್ನು ವ್ಯರ್ಥ ಮಾಡಬೇಡಿ ಎಂದು ಜಯಪ್ರಕಾಶ್‌ ಶೆಟ್ಟಿ ಹೇಳಿದರು.

ಪಟ್ಟಣ ಪಂಚಾಯಿತಿ ಆಗುಂಬೆ ಬಸ್ ನಿಲ್ದಾಣದಲ್ಲಿ 2 ಲಕ್ಷ ವೆಚ್ಚ ಪಡೆದು 15 ವರ್ಷ ಅವಧಿಗೆ ಜಾಹೀರಾತು ಫಲಕ ಅಳವಡಿಸಲು ಅವಕಾಶ ಕಲ್ಪಿಸಿದೆ. ಇದರಿಂದ ಪಟ್ಟಣ ಪಂಚಾಯಿತಿ ಆದಾಯಕ್ಕೆ ಹೊಡೆತ ಬೀಳಲಿದೆ ಎಂದು ನಮ್ರತ್‌ ಆಕ್ಷೇಪಣೆ ಸಲ್ಲಿಸಿದರು. ಅದಕ್ಕೆ ಸಂದೇಶ ಜವಳಿ ಧ್ವನಿಗೂಡಿಸಿ 2 ಲಕ್ಷ ಪಡೆದಿದ್ದರೆ ಅದರ ಮಾಹಿತಿಯನ್ನು ಸಭೆಗೆ ತರಬೇಕು ಎಂದು ಒತ್ತಾಯಿಸಿದರು.

ಕುಶಾವತಿಯಲ್ಲಿ ಮರಳು ಲಾರಿಗಳು ಎದ್ವಾ ತದ್ವ ಓಡಾಡುತ್ತವೆ. ಲಾರಿಗಳಿಗೆ ನಿಯಂತ್ರಣ ಹಾಕದಿದ್ದರೆ ರಸ್ತೆಗಳು ಹಾಳಾಗುತ್ತದೆ. ಸ್ಥಳೀಯ ನಿವಾಸಿಗಳಿಗೆ ಇದರಿಂದ ತೊಂದರೆಯಾಗುತ್ತದೆ. ಈ ಬಗ್ಗೆ ಗಮನ ಹರಿಸಬೇಕು. ಕೊಪ್ಪ ಸರ್ಕಲ್‌ನಿಂದ ಕುಶಾವತಿ ಪಾರ್ಕ್‌ ವರೆಗೆ ಇಂಟಲ್‌ ಲಾಕ್‌ ಅಳವಡಿಸಲಾಗಿದೆ. ರಸ್ತೆ ಅಗಲೀಕರಣ ಕಾಮಗಾರಿಗೆ ಅದನ್ನು ತೆಗೆಯಲಾಗುತ್ತಿದ್ದು ಅದನ್ನು ಮರು ಬಳಕೆಗೆ ಯೋಜನೆ ರೂಪಿಸಬೇಕು ಎಂದು ಡಾ. ಅನಿಲ್‌ ಒತ್ತಾಯಿಸಿದರು.

ಹೀಗೆ ಹತ್ತು ಹಲವು ವಿಷಯಗಳಲ್ಲಿ ಕಾಂಗ್ರೆಸ್‌ ಪಕ್ಷದ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಮುಕ್ತಾಯವಾಯಿತು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post