ವಿಮಾ ಕಂಪನಿಗಳ ಸುಲಿಗೆಗೆ
ಅಧಿಕಾರಿಗಳ ಪ್ರೋತ್ಸಾಹವೆ
ಕುಡುಮಲ್ಲಿಗೆ ಅಂಜೂರ
ಆಕ್ರೋಶ
ಕೇಂದ್ರ ಸರ್ಕಾರದ
ಮಹತ್ವಾಕಾಂಕ್ಷೆಯ ರೈತಸ್ನೇಹಿ ಯೋಜನೆ "ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ" ನೈಸರ್ಗಿಕ
ವಿಕೋಪ, ಬರ, ಪ್ರವಾಹ, ಅಕಾಲಿಕ ಮಳೆ, ರೋಗಗಳಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರೈತರನ್ನು ರಕ್ಷಿಸುವುದು
ಇದರ ಮೂಲ ಉದ್ದೇಶವಾಗಿದೆ. ಬೆಳೆಹಾನಿ ಸಂದರ್ಭದಲ್ಲೂ ರೈತರ ಆರ್ಥಿಕ ಸ್ಥಿತಿ ಸುಧಾರಿಸಿ ಆತ್ಮವಿಶ್ವಾಸ
ಮೂಡಿಸುತ್ತಿರುವುದು ಈ ಬೆಳೆ ವಿಮೆ.
ಆದರೆ ಕಳೆದ ಬಾರಿ
ತೀರ್ಥಹಳ್ಳಿಯ ರೈತರು ಅತೀವ ಮಳೆಯಿಂದ ಕೊಳೆರೋಗ ಹಾಗೂ ಎಲೆಚುಕ್ಕಿಯಿಂದ ಫಸಲು ಕಡಿಮೆಯಾಗಿ ಸಂಕಷ್ಟಕ್ಕೆ
ಸಿಲುಕಿದ್ದು, ಬೆಳೆವಿಮೆಯು ರೈತರಿಗೆ ಆಸರೆ ಆಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಅಧಿಕಾರಿಗಳ ನಿರ್ಲಕ್ಷ್ಯ
ಮತ್ತು ವಿಮಾ ಕಂಪನಿಗಳ ಮೋಸದಿಂದ ರೈತರಿಗೆ ಬೆಳೆವಿಮೆಯು ತೀರ ಕಡಿಮೆ ಬಂದಿರುವುದು ರೈತರನ್ನು ಕಂಗೆಡಿಸಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಳವಡಿಸಿರುವ ಮಳೆಮಾಪನ ಹಲವು ಪಂಚಾಯಿತಿಗಳಲ್ಲಿ ಸರಿ ಇಲ್ಲ ಮತ್ತು ಇದರ
ನಿರ್ವಹಣೆ ಕೂಡ ಮಾಡುತ್ತಿಲ್ಲ.
ಯಾವ ರೀತಿ ಮಳೆಯ
ದತ್ತಾಂಶಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಸಂಪೂರ್ಣ ಮಾಹಿತಿ ಅಧಿಕಾರಿಗಳ ಬಳಿ ಇಲ್ಲ. ತೀರ್ಥಹಳ್ಳಿ
ತಾಲ್ಲೂಕಿನ ಹಲವು ಪಂಚಾಯಿತಿಗಳಲ್ಲಿ ಬೆಳೆ ವಿಮೆ ಕಟ್ಟಿದ ಪ್ರೀಮಿಯಂ ಮೊತ್ತಕ್ಕಿಂತ ಕಡಿಮೆ ಪರಿಹಾರ
ಬಂದಿದೆ. ಕುಡುಮಲ್ಲಿಗೆ ಪಂಚಾಯಿತಿಗೆ ಈ ಬಾರಿ ಶೂನ್ಯ ವಿಮಾ ಮೊತ್ತವನ್ನು ನೀಡಿದ್ದಾರೆ. ಈ ಮೂಲಕ ಕುಡುಮಲ್ಲಿಗೆ
ಗ್ರಾಮ ಪಂಚಾಯಿತಿ ಮಲೆನಾಡಿನಲ್ಲಿಯೇ ಇದೆಯೋ ಅಥವಾ ಬಯಲು ಸೀಮೆಗೆ ಸ್ಥಳಾಂತರವಾಗಿದೆಯೋ ಅನ್ನುವ ಪ್ರಶ್ನೆ
ಸ್ಥಳೀಯ ಗ್ರಾಮಸ್ಥರಿಗೆ ಉದ್ಭವಿಸಿದೆ.
ತಾಲೂಕಿನಲ್ಲಿ ಕುಡುಮಲ್ಲಿಗೆ
ಗ್ರಾಮ ಪಂಚಾಯಿತಿಗೆ ಬೆಳೆ ವಿಮೆ ಹಂಚಿಕೆಯಲ್ಲಿ ಘೋರ ಅನ್ಯಾಯವಾಗಿದ್ದು, ಒಂದು ರೂಪಾಯಿ ಕೂಡ ವಿಮಾ
ಮೊತ್ತ ಬಾರದೇ ಬೆಳೆ ವಿಮೆ ಹಂಚಿಕೆಯಲ್ಲಿ ಆಗಿರುವ ಅವ್ಯವಸ್ಥೆ ಮತ್ತು ಅವ್ಯವಹಾರಕ್ಕೆ ಸಾಕ್ಷಿಯಾಗಿದೆ.
ಇದಲ್ಲದೆ ಮಂಡಗದ್ದೆ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬೆಳೆ ವಿಮೆಯ ಮೊತ್ತ ತೀರಾ ಕಡಿಮೆ ಮೊತ್ತದಲ್ಲಿ
ಬಂದಿರುವುದನ್ನು ಒಪ್ಪಲು ಸಾಧ್ಯವಿಲ್ಲ.
‘ಬೆಳೆ ವಿಮೆ’ ಹಂಚಿಕೆಯಲ್ಲಿ
ರೈತರಿಗೆ ಆಗಿರುವ ಅನ್ಯಾಯವನ್ನು ತಕ್ಷಣ ಸರಿ ಪಡಿಸಿ, ನ್ಯಾಯಯುತವಾದ ವಿಮಾ ಮೊತ್ತವನ್ನು ನೀಡುವಂತೆ
ಎಲ್ಲ ರೈತರ ಪರವಾಗಿ ಆಗ್ರಹಿಸುತ್ತಿದ್ದೇವೆ ಎಂದು ಟಿಎಪಿಸಿಎಂಎಸ್ ನಿರ್ದೇಶಕ, ಕುಡುಮಲ್ಲಿಗೆ ಪ್ಯಾಕ್ಸ್
ನಿರ್ದೇಶಕ ಅಂಜುರ ಕುಡುಮಲ್ಲಿಗೆ ಆಗ್ರಹಿಸಿದ್ದಾರೆ.
ಶಾಸಕ ಆರಗ ಜ್ಞಾನೇಂದ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಗಮನಕ್ಕೆ ತಂದಾಗ, ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಇದೇ ವಿಷಯವನ್ನು ಸಂಸತ್ತಿನ ಸದನದಲ್ಲಿಯೂ ಪ್ರಸ್ತಾಪಿಸಿ, ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆ. ತಾಲೂಕಿನ ರೈತರು ಶಾಸಕರು ಹಾಗೂ ಸಂಸದರ ಮೇಲೆ ಭರವಸೆ ಹೊಂದಿದ್ದು ಈ ಸಮಸ್ಯೆಗೆ ತಾರ್ಕಿಕ ಅಂತ್ಯ ನೀಡಬೇಕು ಎಂದು ವಿನಂತಿಸುತ್ತೇನೆ ಎಂದು ಅಂಜೂರ ಹೇಳಿದ್ದಾರೆ.
