“ಲಾರಿ ಚಾಲಕನೇ ಪೊಲೀಸರಿಗೆ ಫೋನ್ ಮಾಡ್ತಾನೆ” !!!
ಮಳೆಗಾಲ ಬಿಡುತ್ತಿದ್ದ ಹಾಗೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮರಳು ದಂಧೆ ಆರಂಭಗೊಂಡಿದೆ. ಹಗಲು ರಾತ್ರಿ ಎನ್ನದೆ ಮರಳು ಸಾಗಾಣೆ ನಡೆಯುತ್ತಿದ್ದು ಆಡಳಿತ ಮಾತ್ರ ಗಾಢ ನಿದ್ದೆಗೆ ಜಾರಿದಂತಿದೆ.
ಕೋಣಂದೂರು ಆಸ್ಪತ್ರೆಯ ಮುಂಭಾಗದ ಖಾಸಗಿ ಲೇ ಔಟ್ಗೆ ನಿತ್ಯ ಮರಳು ಸಾಗಾಣೆಯಾಗುತ್ತಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಕೇಳಿ ಬಂದಿದೆ. ಆರಗ, ಶಿರುಪತಿ, ನಂದ್ರವಳ್ಳಿ, ಬಿಜ್ಜಳ, ಅರಳಸುರಳಿ ಭಾಗದಿಂದ ಮರಳು ಯದ್ವತದ್ವ ಲೋಡ್ಗಟ್ಟಲೇ ಸಾಗಾಣೆಯಾಗುತ್ತಿದೆ ಎಂಬ ಆರೋಪಗಳಿವೆ. ಲಾರಿ ಚಾಲಕನನ್ನು ಗ್ರಾಮಸ್ಥರು ಅಡ್ಡಗಟ್ಟಿ ವಿಚಾರಿಸಿದರೆ ನೇರವಾಗಿ ಚಾಲಕ ಪೋನ್ ಹಾಯಿಸುತ್ತಿದ್ದಾನೆ. ಫೋನ್ನಲ್ಲಿ ಮಾತನಾಡುವ ವ್ಯಕ್ತಿ ನಾನು ಪೊಲೀಸ್ ಎಂದು ಹೇಳುತ್ತಿದ್ದು ಗ್ರಾಮಸ್ಥರೇ ಬೆಚ್ಚಿ ಬೀಳುವಂತಾಗಿದೆ. ಫೋನ್ನಲ್ಲಿ ಮಾತನಾಡುವ ವ್ಯಕ್ತಿ ಪೊಲೀಸ್ ಅಧಿಕಾರಿಯೇ ಎಂಬ ಬಗ್ಗೆ ಇದುವರೆಗೂ ಯಾವುದೇ ಪುರಾವೆಗಳಿಲ್ಲ. ಮಳೆಗಾಲ ಬಿಡುತ್ತಿದ್ದಂತೆ ಹಳ್ಳಿಗಳ ರಸ್ತೆಗಳನ್ನು ಬಳಸಿಕೊಳ್ಳುತ್ತಿರುವ ಲಾರಿಯವರು ರಸ್ತೆಗಳನ್ನು ಹಾಳುಗೆಡವುತ್ತಿದ್ದಾರೆ. ರಸ್ತೆ ಅಡ್ಡಗಟ್ಟಿದರೆ ಯಾರ್ಯಾರಿಗೋ ಪೋನ್ ಮಾಡಿ ಹೆದರಿಸುತ್ತಿದ್ದಾರೆ ಎಂದು ದೂರುಗಳಿವೆ.
ಆರಗ ಸುತ್ತಮುತ್ತ ಸುತ್ತುತ್ತಿರುವ ಲಾರಿ ಒಂದೊಂದು ಲೋಡ್ಗೆ ಒಂದೊಂದು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ನಿತ್ಯ ಕನಿಷ್ಟ ಐದು ಲೋಡ್ ಮರಳು ಸಾಗಾಣೆಯಾಗುತ್ತಿದೆ. ಯಾರಿಗೂ ಕ್ಯಾರೆ ಮಾಡುತ್ತಿಲ್ಲ. ಹಳೆಯ ಟಿಪ್ಪರ್ ಲಾರಿಯಾಗಿದ್ದು ಸೀಸ್ ಆದರೂ ಆಗಲಿ ಎಂಬ ಉದ್ದೇಶದಿಂದಲೇ ಹೀಗೆ ಮರಳು ಸಾಗಾಣೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮರಳು ಮಾಫಿಯಾದಲ್ಲಿ ಭಾಗವಹಿಸುವ ವ್ಯಕ್ತಿಗಳಿಗೂ ಹಾಗೂ ಪೊಲೀಸ್ ಸಿಬ್ಬಂದಿಗಳಿಗೂ ಯಾವುದಾದರು ಲಿಂಕ್ ಇದ್ಯಾ ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಕಾಡುತ್ತಿದೆ. ಕಂದಾಯ ಅಧಿಕಾರಿಗಳು ಕೂಡ ಮಾಫಿಯಾಕ್ಕೆ ಸಹಕಾರ ನೀಡುತ್ತಿರುವ ಬಗ್ಗೆಯೂ ಗಂಭೀರ ಆರೋಪಗಳಿವೆ. ಇವುಗಳನ್ನು ತಡೆಯಬೇಕಿದ್ದ ಗಣಿ ಅಧಿಕಾರಿ ತಾಲ್ಲೂಕಿಗೂ ಕಾಲು ಇಡುತ್ತಿಲ್ಲ. ತಾನಿರುವ ಸ್ಥಳದಲ್ಲಿಯೇ ಕುಳಿತುಕೊಂಡು ದೂರು ನೀಡಿದವರ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದ್ದಾರೆ. ನಾವು ಯಾರ ಬಳಿ ದೂರು ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ಅಧಿಕಾರಿಗಳೇ ದಂಧೆಯ ಜೊತೆಗೆ ಕೈಜೋಡಿಸಿದರೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ತಾಲ್ಲೂಕಿನಲ್ಲಿ ಆಡಳಿತ ಸುಸ್ಥಿತಿಯಲ್ಲಿ ಇದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.