ಹೊಸ ಇತಿಹಾಸ ಬರೆದ ತೀರ್ಥಹಳ್ಳಿ-ಹೊಸನಗರ ಜೀವವಿಮಾ ಪ್ರತಿನಿಧಿಗಳ ಸಂಘದ ಬೆಳ್ಳಿಹಬ್ಬ

ಅಧ್ಯಕ್ಷ ಕೊರಕೋಟೆ ಶ್ರೀನಿವಾಸ್‌ ಮತ್ತವರ ತಂಡದ ಪರಿಶ್ರಮಕ್ಕೆ ಅಭಿನಂದನೆಗಳ ಮಹಾಪೂರ

ಭಾರತೀಯ ಜೀವವಿಮಾ ನಿಗಮದ ತೀರ್ಥಹಳ್ಳಿ, ಹೊಸನಗರ ಪ್ರತಿನಿಧಿಗಳ ಸಂಘದ ವತಿಯಿಂದ ಇತ್ತೀಚೆಗೆ ತಾಲೂಕಿನ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ನಡೆದ ಬೆಳ್ಳಿಹಬ್ಬ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸು ಕಂಡಿದೆಯಲ್ಲದೆ ಶಾಖಾ ಮಟ್ಟದ ಎಲ್‌ಐಸಿ ಪ್ರತಿನಿಧಿಗಳ ಸಂಘವೊಂದು ಇಷ್ಟೊಂದು ವ್ಯವಸ್ಥಿತ ಹಾಗೂ ಅಭೂತಪೂರ್ವ ರೀತಿಯಲ್ಲಿ ಸಂಘಟಿಸಿದ್ದು ಬಹುತೇಕ ವಿಭಾಗೀಯ, ಜೋನಲ್ ಮಟ್ಟದ ಮೊದಲು ಎನ್ನುವಂತಹ ಪ್ರಶಂಸೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ರಾಜ್ಯದ ವಿವಿದೆಡೆಯ ತಾಲ್ಲೂಕು ಮಟ್ಟದ ಸಂಘಗಳ ವಲಯಗಳಿಂದ ವ್ಯಕ್ತವಾಗಿದೆ.

ತೀರ್ಥಹಳ್ಳಿಯ ಸಾರ್ವಜನಿಕ ವಲಯದಲ್ಲಿ ಅತ್ಯಂತ ವಿಶ್ವಸನೀಯ ಯುವ ಮುಂದಾಳುಗಳಲ್ಲಿ ಒಬ್ಬರೆಂಬ ಹೆಸರುಳ್ಳ ಕೊರಕೋಟೆ ಶ್ರೀನಿವಾಸ್ ತಮ್ಮ ಸಂಘಟನಾ ಶಕ್ತಿ ಮತ್ತು ನಾಯಕತ್ವದ ಗುಣವನ್ನು ದಶಕಗಳ ಹಿಂದೆ ಯುವಜನ ಮೇಳಗಳನ್ನು ಸಂಘಟಿಸುವಾಗಲೇ ತೋರಿದ್ದರು. ಅವರು ತೀರ್ಥಹಳ್ಳಿ ತಾಲ್ಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾಗಿದ್ದಾಗ ಅದಕ್ಕೆ ಹೊಸ ಸ್ವರೂಪ ನೀಡುವಲ್ಲಿ ಯಶಸ್ವಿಯಾಗಿದ್ದರಲ್ಲದೇ ಅವರ ಕಾಲಾವಧಿಯಲ್ಲಿ ತೀರ್ಥಹಳ್ಳಿಯಲ್ಲಿ ನಡೆದ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಯುವಜನ ಮೇಳಗಳು ಅತ್ಯಂತ ಯಶಸ್ವಿ ಎನ್ನುವ ಖ್ಯಾತಿಗೆ ಒಳಗಾಗಿದ್ದವು. ಮಾತ್ರವಲ್ಲದೇ ತೀರ್ಥಹಳ್ಳಿಯಲ್ಲಿ ಮೊಟ್ಟ ಮೊದಲ ಬಾರಿ ರಾಜ್ಯ ಮಟ್ಟದ ಯುವಜನ ಮೇಳ ಬಿಳಿಗಿರಿ ವಿಜಯ್‌ ಅಧ್ಯಕ್ಷತೆಯಲ್ಲಿ ನಡೆದಾಗ ಸಂಚಾಲಕನಾಗಿ ಮಹತ್ವದ ಪಾತ್ರ ನಿರ್ವಹಿಸಿದ್ದು ಕೂಡ ಶ್ರೀನಿವಾಸ್. ಬಳಿಕ ರಾಜಕಾರಣವನ್ನು ಪ್ರವೇಶಿಸಿದ ಅವರು ಎರಡು ಬಾರಿ ಮುಳುಬಾಗಿಲು ಗ್ರಾಮ ಪಂಚಾಯಿತಿ ಸದಸ್ಯರಾಗಿ ಪ್ರಾಮಾಣಿಕ ಹಾಗೂ ಜನಪರ ವ್ಯಕ್ತಿತ್ವದ ಸದಸ್ಯನೆಂಬ ಹೆಸರುಗಳಿಸಿದ್ದರು. ಈಗ ಅವರು ಮಾಗರವಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕನಾಗಿಯೂ ಕೂಡ ಗುರುತಿಸಿಕೊಂಡಿದ್ದಾರೆ.

2022-23ರಲ್ಲಿ ಅವರು ತೀರ್ಥಹಳ್ಳಿ ಮತ್ತು ಹೊಸನಗರ ಜೀವವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದಾಗ ಹೊಸತನದ ಸ್ಪರ್ಶ ನೀಡಬಹುದೆಂಬ ನಿರೀಕ್ಷೆ ಅವರ ಆಪ್ತ ವಲಯದಲ್ಲಿ ಇತ್ತು. ಅದೃಷ್ಟವಶಾತ್‌ ಅದೇ ಸಂದರ್ಭದಲ್ಲಿ ಈ ವರ್ಷ ಸಂಘದ ಬೆಳ್ಳಿಹಬ್ಬವೂ ಕೂಡಿಬಂದು ಅವರ ಸಂಘಟನಾ ಚಾತುರ್ಯತೆ ಮತ್ತು ಕಾರ್ಯದರ್ಶಿ ಹಾಗೂ ನೆರಟೂರು ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿರುವ ಕ್ರಿಯಾಶೀಲ ವ್ಯಕ್ತಿತ್ವದ ಟಿ.ಚಂದ್ರಶೇಖರ್‌ ಕುಳಗೇರಿ, ಕೋಶಾಧಿಕಾರಿ ಅಂಬುತೀರ್ಥ ರಾಘವೇಂದ್ರ ಸೇರಿದಂತೆ ಇಡೀ ಸಂಘದ ಪ್ರತಿಯೊಬ್ಬ ಪದಾಧಿಕಾರಿಗಳ ಪ್ರಯತ್ನದಿಂದ ಬೆಳ್ಳಿಹಬ್ಬದ ಕಾರ್ಯಕ್ರಮ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ನಿರಂತರ ಎರಡು ತಿಂಗಳುಗಳ ಕಾಲ ಅನೇಕ ಹಿರಿಯ, ಕಿರಿಯ ಪ್ರತಿನಿಧಿಗಳು ಮನೆ ಮನೆಗೆ ತೆರಳಿ ಆಹ್ವಾನ ಪತ್ರಿಕೆ ನೀಡಿದ ಫಲವಾಗಿ 500ಕ್ಕೂ ಹೆಚ್ಚು ಪ್ರತಿನಿಧಿಗಳ ಕುಟುಂಬದವರೇ ಇದೇ ಮೊದಲ ಬಾರಿಗೆ ಪಾಲ್ಗೊಂಡಿದ್ದು ದಾಖಲೆಯಾದರೆ ಅಂದಾಜು 3000 ಸಾವಿರಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಬಂದು ಹೋಗಿದ್ದು ಹಾಗೂ ಅತ್ಯಂತ ವ್ಯವಸ್ಥಿತವಾದ ಊಟೋಪಚಾರ ವ್ಯವಸ್ಥೆ ವಿಶೇಷವಾಗಿ ಗಮನ ಸೆಳೆಯಿತು.

ಅಧ್ಯಕ್ಷರಾದ ಬಳಿಕ ಸಂಘವನ್ನು ಸದಾಕಾಲ ಕ್ರೀಯಾಶೀಲವಾಗಿಡಲು ಪ್ರಾಮಾಣಿಕವಾಗಿ ಶ್ರಮಿಸಿರುವ ಶ್ರೀನಿವಾಸ್‌ ಹತ್ತು ಹಲವು ಉಪಯುಕ್ತ ಕಾರ್ಯಕ್ರಮಗಳ ಜೊತೆಗೆ ಶಾಖಾ ವ್ಯವಹಾರಕ್ಕೂ ಅನುಕೂಲವಾಗುವ ರೀತಿಯಲ್ಲಿ ಪ್ರತಿನಿಧಿಗಳ ಪ್ರವಾಸವನ್ನು ಆಯೋಜಿಸಿದ್ದು ಶಾಖೆಯ ವ್ಯವಹಾರದ ದೃಷ್ಟಿಯಿಂದಲೂ ಉತ್ತಮ ಆಲೋಚನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದಲ್ಲದೇ ಈ ಕ್ಷೇತ್ರದ ಪ್ರಖ್ಯಾತ ಹೆಸರುಗಳಾದ ಸ್ಥಾಪಕ ಅಧ್ಯಕ್ಷ ಬಿ.ಕೆ.ವಾದಿರಾಜ್‌, ಕೋಣಂದೂರು ಕೇಶವಮೂರ್ತಿ, ಮಂಜುನಾಥ ಟಿ., ಕೆ.ಎನ್.ಸುಬ್ರಹ್ಮಣ್ಯ, ಶಿವಪ್ಪ ಗೌಡ ಹೊಸನಗರ, ಮುದ್ದಣ್ಣ ಶೆಟ್ಟಿ, ರಿಪ್ಪನಪೇಟೆ ಮಂಜುನಾಥ ಕಾಮತ್‌ ಇವರುಗಳಲ್ಲದೇ ಗಾಯತ್ರಿ, ಶಕುಂತಲಾ ಸೇರಿದಂತೆ ಮಹಿಳಾ ಪ್ರತಿನಿಧಿಗಳನ್ನು ಒಳಗೊಂಡ ಹಿರಿಯ ಹಾಗೂ ಕಿರಿಯರ ಕ್ರಿಯಾಶೀಲ ಸಮ್ಮಿಲನ ಈ ಕಾರ್ಯಕ್ರಮ ಒಂದು ಕೌಟುಂಬಿಕ ಆಪ್ತತೆಯ ಭಾವನೆಯಲ್ಲಿ ಮುಂದೆ ಸಾಗಿ ಯಶಸ್ವಿಯಾಯಿತು.

ಸಾಧಾರಣವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ನಡೆಯುತ್ತಿದ್ದ ಸಂಘದ ಕಾರ್ಯಕ್ರಮ ಇಷ್ಟು ಅದ್ದೂರಿಯಾಗಿ ಯಶಸ್ವಿಯಾಗಿ ನಡೆದಿದ್ದು ಮಾರುಕಟ್ಟೆ ಪ್ರಬಂಧಕರಾದ ಪಿ.ಸುಜಿತ್‌ ಕುಮಾರ್‌, ಶಿವಮೊಗ್ಗ ವಿಭಾಗ ಮ್ಯಾನೇಜರ್‌ ಆಫ್‌ ಸೇಲ್ಸ್‌ ಆರ್.ಡಿ.ಯೋಗೇಂದ್ರ, ತೀರ್ಥಹಳ್ಳಿ ಹೊಸನಗರ ಹಿರಿಯ ಶಾಖಾಧಿಕಾರಿ ಅನಂತ ನಾರಾಯಣ, ವಿಭಾಗದ ಸಂಘಟನೆಯ ಅಧ್ಯಕ್ಷ ವೀರೇಶಪ್ಪ, ಕಾರ್ಯದರ್ಶಿ ಸತೀಶ್‌ ಕುಮಾರ್‌ ಸೇರಿದಂತೆ ಎಲ್ಲಾ ಶಾಖಾ ಅಧ್ಯಕ್ಷರುಗಳ ಮುಕ್ತ ಕಂಠದ ಶ್ಲಾಘನೆಗೆ ಪಾತ್ರವಾಗಿದೆ.

ಅಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಗೃಹಮಂತ್ರಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌, ಎಂಎಡಿಬಿ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೊರಕೋಟೆ ಶ್ರೀನಿವಾಸ್‌ ಮತ್ತವರ ತಂಡದ ಕಾರ್ಯಕ್ರಮ ಆಯೋಜನೆ ಅಚ್ಚುಕಟ್ಟುತನವನ್ನು ಶ್ಲಾಘಿಸಿದ್ದಲ್ಲದೇ ಸಮಾರೋಪದಲ್ಲಿ ವಿಶೇಷ ಆಕರ್ಷಣೆಯಾಗಿದ್ದ ಹೆಸರಾಂತ ವಾಗ್ಮಿ ಪ್ರೊ.ಕೃಷ್ಣೇಗೌಡರ ಸದಭಿರುಚಿಯ ಕಾರ್ಯಕ್ರಮವನ್ನು ವೀಕ್ಷಿಸಿದ್ದು ಕೂಡ ಕಾರ್ಯಕ್ರಮದ ಯಶಸ್ಸನ್ನು ಬಿಂಬಿಸಿತ್ತು.

ಮೇಲ್ಕಾಣಿಸಿದ್ದವರಲ್ಲದೇ ಉಪಾಧ್ಯಕ್ಷರುಗಳಾದ ಕೆ.ಎ.ಹರೀಶ್‌, ವೈ.ಷಣ್ಮುಖಪ್ಪ, ಗಿರೀಶ್‌ ಅಂಬಳಿಕೆ, ಎಂ.ಕೃಷ್ಣಮೂರ್ತಿ, ಕೋಶಾಧಿಕಾರಿ ರಾಘವೇಂದ್ರ ಎ.ಎಸ್.‌, ಲೆಕ್ಕಪರಿಶೋಧಕ ರಾಘವೇಂದ್ರ ಪವಾರ್‌, ಮಾದ್ಯಮ ಸಲಹೆಗಾರ ಟಿ.ಪಾಂಡೇಶ್‌, ನಿರ್ದೇಶಕರುಗಳಾದ ರಾಜೇಂದ್ರ ಕೆ.ಎಸ್.‌, ಭಾರತೀ ಎಚ್.ಸಿ., ಗಣೇಶ್‌ ಭಟ್‌, ಎಸ್.ರವೀಂದ್ರ, ಎಸ್.ಸತ್ಯನಾರಾಯಣ, ಲತಾ ಶ್ರೀನಿವಾಸಮೂರ್ತಿ, ಚಂದ್ರಕಲಾ, ಶಾಲಿನಿ, ವನಜಾಕ್ಷಿ, ಗೀತಾ ಡಿ, ಪಿ.ಭಾಸ್ಕರ್‌, ರೇವಣ್ಣ ಸ್ವಾಮಿ, ಜಯಂತಿ ಮುತಾದವರಲ್ಲದೇ ಯಶಸ್ಸಿಗಾಗಿ ಸಹಕರಿಸಿದ ಪ್ರತಿಯೊಬ್ಬ ಪ್ರತಿನಿಧಿಗಳ ಪರಿಶ್ರಮ ಈ ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ಸ್ಮರಣೀಯಗೊಳಿಸಿದೆ ಎಂದು ಕೊರಕೋಟೆ ಶ್ರೀನಿವಾಸ್‌ ಅಭಿಪ್ರಾಯಪಟ್ಟಿದ್ದು ಕಾರ್ಯಕ್ರಮಕ್ಕೆ ಪ್ರತ್ಯಕ್ಷ, ಪರೋಕ್ಷ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post