ಶ್ರೀ ಕ್ಷೇತ್ರ ಸೋಮವಾರ ಸಂತೆ ಮೇಳ ಬೇಳೂರು ವಿಷ್ಣುಮೂರ್ತಿ ನಾಯಕ್ ಹೆಗಲಿಗೆ

ಶ್ರೀ ದೇವಿಯ ಮೇಳದ ಯಕ್ಷಗಾನ ಆಟ ಆಡಿಸಿ ಸಹಕರಿಸಲು ದೇವಸ್ಥಾನದ ಧರ್ಮದರ್ಶಿ ಸಮಿತಿ ಮನವಿ
ನವೆಂಬರ್‌ 21 ರಿಂದ ಯಕ್ಷಗಾನ ಹರಕೆ ತಿರುಗಾಟ ಪ್ರಾರಂಭ

ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಹೆದ್ದೂರು ಸಮೀಪದ ಸೋಮವಾರ ಸಂತೆ ಶ್ರೀ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಜಮಾನಿಕೆ ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರಸಂಗ ಕರ್ತ ಬೇಳೂರು ವಿಷ್ಣುಮೂರ್ತಿ ನಾಯಕ್ ಯಜಮಾನಿಕೆಯಲ್ಲಿ ಮುಂದುವರೆಯಲಿದೆ. ಹರಕೆ ಹೊತ್ತು ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಭಕ್ತ ಮಹನೀಯರು ತಮ್ಮ ಹರಕೆ ಆಟಗಳನ್ನು ಮೇಳದ ವ್ಯವಸ್ಥಾಪಕರಾದ ಬೇಳೂರು ವಿಷ್ಣುಮೂರ್ತಿ ನಾಯಕ್ ಹಾಗೂ ದೇವಸ್ಥಾನದ ಕೌಂಟರ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ದೇವಸ್ಥಾನದ ಧರ್ಮದರ್ಶಿ ಸಮಿತಿ ಮಂಗಳವಾರ ಹೊಸಹಳ್ಳಿ ಗುತ್ಯಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ವಿನಂತಿಸಿದರು.

ಘಟ್ಟದ ಮೇಲಿನ ಪ್ರಸಿದ್ದ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಸೋಮವಾರ ಸಂತೆ ಮೇಳವು ಶ್ರೀದೇವಿ ಗುತ್ಯಮ್ಮನ ಕೃಪಾಶೀರ್ವಾದದೊಂದಿಗೆ ತೀರ್ಥಹಳ್ಳಿ ಸಹ್ಯಾದ್ರಿ ವಾರ್ತೆ ಸಂಪಾದಕರಾದ ಬಿ. ಗಣಪತಿ ದೇವಸ್ಥಾನ ಸಮಿತಿ ಸಹಕಾರದೊಂದಿಗೆ 2000-2001ರಲ್ಲಿ ಪ್ರಾರಂಭಿಸಿದರು. ದೇವಿಯ ಪಲ್ಲಕ್ಕಿಯ ಕುರುತ್ತಪ್ಪಣೆಯ ಸೂಚನೆಯಂತೆ ಅವರೇ ರಚಿಸಿ ನಿರ್ದೇಶಿಸಿದ ಶ್ರೀ ಕ್ಷೇತ್ರ ಸೋಮವಾರ ಸಂತೆಯಲ್ಲಿ ನೆಲೆಗೊಂಡ ಶ್ರೀ ಗುತ್ಯಮ್ಮ ದೇವಿಯ ಮಹಿಮೆಯನ್ನು ಸಾರುವ ಶ್ರೀ ಗುತ್ಯಮ್ಮ ದೇವಿ ಮಹಾತ್ಮ ಅರ್ಥಾತ್ ಸೋಮವಾರ ಸಂತೆ ಕ್ಷೇತ್ರ ಮಹಾತ್ಮ ಎಂಬ ಕಥಾ ಪ್ರಸಂಗವು ತಿರುಗಾಟದ ಪ್ರಥಮ ವರ್ಷದಲ್ಲೇ ಜಯಭೇರಿ ಬಾರಿಸಿತ್ತು. ಪ್ರಸಂಗ ಮಲೆನಾಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರದರ್ಶನಗೊಂಡು ಅತ್ಯುತ್ತಮ ಕ್ಷೇತ್ರ ಮಹಾತ್ಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಪ್ರಸಂಗಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಹಾಗೂ ಪ್ರಸಂಗ ಕರ್ತ ಎಂ.ಕೆ. ರಮೇಶ್ ಆಚಾರ್ಯ ಪದ್ಯ ಸಂಯೋಜನೆ ಮಾಡಿದ್ದರು.

ಬಿ ಗಣಪತಿಯವರ ಯಜಮಾನಿಕೆಯಲ್ಲಿ ಸುಮಾರು 12 ವರ್ಷಗಳ ಕಾಲ ಪೂರ್ಣ ಪ್ರಮಾಣದ ತಿರುಗಾಟ ಮೇಳವಾಗಿ ಶ್ರೀ ಗುತ್ಯಮ್ಮ ಮೇಳವು ಎಲ್ಲೆಡೆಯೋ ಪ್ರದರ್ಶನಗೊಂಡು ಭಕ್ತಾದಿಗಳ ಮನದ ಸಂಕಷ್ಟವನ್ನು ಹರಕೆ ಆಟ ಆಡುವುದರ ಮೂಲಕ ಬಗೆಹರಿಸಿತ್ತು. ಪೂರ್ಣ ಪ್ರಮಾಣದ ತಿರುಗಾಟದ ಮೇಳವೊಂದು ಕಾಲಮಿತಿಗೆ ಒಳಪಟ್ಟಿದ್ದು ಮತ್ತು ಯಕ್ಷಗಾನ ಕ್ಷೇತ್ರದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಲಾರಿ ಮೇಲೆ ರಂಗಸ್ಥಳ ಎಂಬ ನೂತನ ರಂಗಸಜ್ಜಿಕೆ ನಿರ್ಮಾಣಗೊಂಡಿದ್ದು ಇವರ ಅವಧಿಯಲ್ಲಿಯೆ. ಲಾರಿ ಮೇಲೆ ರಂಗಸ್ಥಳದ ರಂಗ ಸಜ್ಜಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ ವೀರೇಂದ್ರ ಹೆಗ್ಗಡೆ, ಉಡುಪಿಯ ಪೇಜಾವರ ಶ್ರೀಗಳು ಪ್ರಶಂಸೆ ವ್ಯಕ್ತಪಡಿಸಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಕ್ಷೇತ್ರ ಸೋಮವಾರ ಸಂತೆಯ ಗುತ್ಯಮ್ಮ ದೇವಿಯ ಬಗ್ಗೆ ಅಪಾರವಾದ ಗೌರವ ವಿರಿಸಿಕೊಂಡವರು. ಅಂದಿನ ಮೇಳದ ವ್ಯವಸ್ಥಾಪಕರಾಗಿದ್ದ ಬಿ. ಗಣಪತಿಯವರ ಪರಿಕಲ್ಪನೆಯ ಲಾರಿ ಮೇಲೆ ರಂಗಸ್ಥಳವನ್ನು ಮೆಚ್ಚಿ ಸುಮಾರು 50 ಸಾವಿರ ರೂಪಾಯಿ ದೇಣಿಗೆ ನೀಡಿದ್ದರು. ಪ್ರತಿ ವರ್ಷವೂ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ತಾವೇ ಖುದ್ದು ಯಕ್ಷಗಾನವನ್ನು ವೀಕ್ಷಿಸುತ್ತಿದ್ದರು. ನವೀಕರಣಗೊಂಡ ಗುತ್ಯಮ್ಮ ದೇವಸ್ಥಾನಕ್ಕೆ ಕ್ಷೇತ್ರ ಧರ್ಮಸ್ಥಳದ ನೆರವು ಹಾಗೂ ಸಹಕಾರವಿದೆ.

ಯಕ್ಷಗಾನ ಮೇಳ ಪ್ರಾರಂಭವಾದ ನಂತರದಿಂದ ಕ್ಷೇತ್ರ ಸೋಮವಾರ ಸಂತೆಯ ಗುತ್ತಮ್ಮ ದೇವಿಗೆ ಉತ್ತರ ಕನ್ನಡ, ಕುಂದಾಪುರ, ಬೈಂದೂರು, ಉಡುಪಿ, ಪುತ್ತೂರು, ಕಾಸರಗೋಡಿನವರೆಗೂ ಭಕ್ತಾದಿಗಳ ಮಹಪೂರವೇ ಇದೆ. ಭಾಗಗಳ ಭಕ್ತಾದಿಗಳು ದೇವಿಗೆ ಅತ್ಯಂತ ಪ್ರಿಯವಾದ ಯಕ್ಷಗಾನ ಅಂದರೆ ಬೆಳಕಿನ ಸೇವೆಯನ್ನು ನೆರವೇರಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಡುವಂತೆ ಹರಕೆ ಹೊತ್ತಿದ್ದೂ ಅವೆಲ್ಲವನ್ನೂ ಗುತ್ಯಮ್ಮ ದೇವಿ ತ್ವರಿತವಾಗಿ ಬಗೆಹರಿಸಿದ್ದಾಳೆ. ಕ್ಷೇತ್ರಕ್ಕೆ ಭಾಗಗಳಿಂದ ಭಕ್ತಾದಿಗಳು ಬಂದು ದೇವರಿಗೆ ತಮ್ಮ ಹರಕೆಗಳನ್ನು ಒಪ್ಪಿಸುತ್ತಿರುವುದು ಹೆಚ್ಚಾಗಿದೆ.

ಮೇಳದ ಪ್ರಾರಂಭ ವರ್ಷದಲ್ಲಿ ಮೇಳದ ಅಧ್ಯಕ್ಷರಾಗಿ ಕಾನುಕೊಪ್ಪ ಶೇಷಪ್ಪ ಗೌಡರು ಮೇಳವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದರು. ಅವರ ಜೊತೆ ಜೊತೆಗೆ ಸಾಲ್ಗಡಿ ವೆಂಕಟೇಶ್, ಹೆಚ್. ಸಿ. ಮೇಘರಾಜ್, ಕೂಳೂರು ಚಂದ್ರಶೇಖರ್, ಹೊಳೆಕೊಪ್ಪ ಪುಟ್ಟಸ್ವಾಮಿ ಮುಂತಾದವರು ಇದ್ದರು. ಶೇಷಪ್ಪ ಗೌಡರ ನಂತರ ಜಂಬಳ್ಳಿ ನಾಗರಾಜ್ ಅವರು ಯಕ್ಷಗಾನದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಾಲಿನಲ್ಲಿ ಕೋಣಕೆರೆ ಶಿವಕುಮಾರ್ ಅವರಿಗೆ ಜವಾಬ್ದಾರಿ ನೀಡಿದ್ದು ದೇವಸ್ಥಾನ ಸಮಿತಿ ಅವರಿಗೆ ಸಹಕರಿಸುತ್ತಿದೆ.

ಬಿ. ಗಣಪತಿಯವರು ಮೇಳದ ವ್ಯವಸ್ಥಾಪಕರಾಗಿ ನಿವೃತ್ತರಾದ ನಂತರ ಸೀತೂರಿನ ಅನಂತ ಪದ್ಮನಾಭ ರಾವ್ ರವರು ಮೇಳವನ್ನು ಮುನ್ನಡೆಸುತ್ತಿದ್ದರು. ಇದೀಗ ಮೇಳವು 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಸಾಲಿನಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ದ ಪ್ರಸಂಗ ಕರ್ತ ಹಲವು ಬಯಲಾಟ ಮೇಳಗಳೊಂದಿಗೆ ಉತ್ತಮ ಒಡನಾಟ ಹೊಂದಿರುವ ಬೇಳೂರು ವಿಷ್ಣುಮೂರ್ತಿ ಯವರ ಸಾರಥ್ಯದಲ್ಲಿ ಕ್ಷೇತ್ರ ಸೋಮವಾರ ಸಂತೆ ಮೇಳವು ಮೊದಲಿನಂತೆ ಪೂರ್ಣ ಪ್ರಮಾಣದ ಮೇಳವಾಗಿ ತಿರುಗಾಟ ನಡೆಸಲಿದೆ. ನವೆಂಬರ್ ತಿಂಗಳಲ್ಲಿ ಕ್ಷೇತ್ರದಲ್ಲಿ ಪ್ರಥಮ ಸೇವೆ ಆಟದೊಂದಿಗೆ ಪ್ರಾರಂಭಗೊಳ್ಳುವ ಮೇಳಕ್ಕೆ ಪ್ರಸಿದ್ದ ಕಲಾವಿದರ ತಂಡವನ್ನು ತಯಾರು ಗೊಳಿಸಿದ್ದು ರಂಗಸಜ್ಜಿಕೆ ಮೇಳದ ಚೌಕಿ, ವೇಷ-ಭೂಷಣ ಸಕಲ ರೀತಿಯ ಸಿದ್ಧತೆ ನಡೆಸಿಕೊಂಡಿದ್ದಾರೆ. ಇಷ್ಟು ವರ್ಷಗಳ ಕಾಲವೂ ಮೇಳದ ಆಟಗಳನ್ನು ಆಡಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಸಮಸ್ತ ಭಕ್ತಾದಿಗಳು ಮುಂಬರುವ ದಿನಗಳಲ್ಲಿ ಶ್ರೀ ಕ್ಷೇತ್ರ ಸೋಮವಾರ ಸಂತೆ ಮೇಳದ ಯಕ್ಷಗಾನ ಸೇವೆ ಮಾಡಿಸಿ ಸಹಕರಿಸುವಂತೆ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಬಿ.ವಿ ನಾಗರಾಜ್ ಬಸರವಳ್ಳಿ, ಕಾರ್ಯದರ್ಶಿ ಹೆಚ್.ಸಿ.ಮೇಘರಾಜ್ ಹೊಸಳ್ಳಿ, ಖಜಾಂಚಿ ಗಳಾದ ಹೆಚ್.ಎಸ್. ಕಿರಣ್ ಹೊಸ್ಕೆರಿ ಹಾಗೂ ಯಕ್ಷಗಾನ ಮೇಳದ ಕಾರ್ಯದರ್ಶಿಗಳಾದ ಶಿವಕುಮಾರ್ ಕೋಣಕೆರೆ ಇವರು ವಿನಂತಿಸಿದ್ದಾರೆ.

ಬೇಳೂರು ವಿಷ್ಣುಮೂರ್ತಿ ನಾಯಕ್ ಸಾಲಿಗ್ರಾಮ ಸಮೀಪದ ಕೋಟದ ತೆಕ್ಕಟ್ಟೆಯವರು. ವಿದ್ಯುತ್ ಹಾಗೂ ಪ್ಲಮ್ಮಿಂಗ್ ಕೆಲಸ ಇವರ ಉದ್ಯೋಗ, ಪ್ರವೃತ್ತಿಯಾಗಿ ಯಕ್ಷಗಾನ ತರಬೇತಿ, ಯಕ್ಷಗಾನ ಪ್ರಸಂಗ ರಚನೆ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ತೊಡಗಿಕೊಂಡವರು. ಅನೇಕ ಪ್ರಸಂಗ ಹಾಗೂ ಹಲವಾರು ಕ್ಷೇತ್ರಗಳ ಕ್ಷೇತ್ರ ಮಹಾತ್ಮ ಪ್ರಸಂಗ ಬರೆದು ಪ್ರಖ್ಯಾತಿ ಪಡೆದರು. ಹಾಲಾಡಿ ಕ್ಷೇತ್ರ ಮಹಾತ್ಮ, ಮಾರ್ಪಳ್ಳಿ ಕ್ಷೇತ್ರ ಮಹಾತ್ಮ, ಹೊಂಬುಜ ಪದ್ಮಾವತಿ ದೇವಿ ಮಹಾತ್ಮ,ಕನ್ನರ್ಪಾಡಿ ಜಯದುರ್ಗ ಮಹಾತ್ಮ, ಮೆಕ್ಕೆ ಕಟ್ಟು ಕ್ಷೇತ್ರ ಮಹಾತ್ಮ, ಕೊರಳಾ ಚಿಕ್ಕಮ್ಮ ದೇವಿ ಮಹಾತ್ಮ, ಸಾಲಿಗದ್ದೆ ವೀರ ಕಲ್ಲು ಕುಟಕ ಮುಂತಾದ ಕ್ಷೇತ್ರ ಮಹಾತ್ಮಗಳನ್ನು ರಚಿಸುವುದು ಅಲ್ಲದೇ ಚೈತ್ರ ಯಾಮಿನಿ, ಜನನಿ ಜನ್ಮಭೂಮಿ, ಸೌಭಾಗ್ಯ ಸಿರಿದೀಪ, ಬೃಂಗಸಂಪಿಗೆ, ಕುಹೂ ಕುಹೂ ಕೋಗಿಲೆ, ಸುಮುಕೋದ್ಭವ, ಮಾಯಾ ಮೇಘನ, ಮಹಿ ಮಾಧುರಿ, ಬಾಲ ಕಲ್ಯಾಣ, ಸ್ವಚ್ಛ ಭಾರತ, ಮಂತ್ರದೇವತೆ, ಪ್ರಸೀದ ಪರಮೇಶ್ವರಿ, ಪ್ರೇಮಾಂಜಲಿ, ಕ್ರಾಂತಿಯ ಕಿಡಿ, ದಶಕಂಠ ರಾವಣ, ಸಿರಿ ಸಿಂಗಾರಿ ಮುಂತಾದ ಪ್ರಸಂಗಗಳನ್ನು ರಚಿಸಿದ್ದಾರೆ. ಹಾಲಾಡಿ ಮರಳು ಚಿಕ್ಕು, ದಿವ್ಯದರ್ಶನ, ಸಾಕ್ಷ ಚಿತ್ರ, ಭಕ್ತಿಗೀತೆ, ದೇತಾಡ್ಕ, ವನದುರ್ಗ ದೇವಿ ಭಕ್ತಿ ಗೀತೆ, ಮೆಕ್ಕೆ ಕಟ್ಟು ನಂದಿಕೇಶ್ವರ ಭಕ್ತಿಗೀತೆ ಇವುಗಳು ಯಕ್ಷಗಾನ ಪ್ರಸಂಗವಲ್ಲದ ಅವರ ಇತರ ರಚನೆಗಳು, ಯಕ್ಷಗಾನ ಕ್ಷೇತ್ರದ ಇವರ ಸಾಧನೆಯನ್ನು ಗುರುತಿಸಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಡಾ. ಶಾಂತಾರಾಮ್ ಪ್ರಶಸ್ತಿ ಅಲ್ಲದೇ 200 ಕ್ಕೂ ಹೆಚ್ಚು ಸನ್ಮಾನಗಳಾಗಿವೆ.

ಶ್ರೀ ಕ್ಷೇತ್ರ ಸೋಮವಾರ ಸಂತೆ ಶ್ರೀ ಗುತ್ಯಮ್ಮ ದೇವಸ್ಥಾನಕ್ಕೆ ಪುರಾತನವಾದ ಇತಿಹಾಸವಿದೆ. ಶ್ರೀ ದೇವಿಯ ಸಾನಿದ್ಯವು ಭಾಗದ ಸುತ್ತಮುತ್ತಲಿನ ಜನರು ಅನಾಧಿಕಾಲದಿಂದಲೂ ಆರಾಧಿಸಿಕೊಂಡು ಬಂದ ಕ್ಷೇತ್ರವಾಗಿದೆ. ಹುಲ್ಲಿನ ಗುಡಿಸಲೋಪಾದಿಯಲ್ಲಿದ್ದ ದೇವಸ್ಥಾನವನ್ನು ಊರವರು ನವೀಕರಣಗೊಳಿಸಿ ದೇವಿಯ ಗರ್ಭಗುಡಿ, ಪಡಸಾಲೆ ಸೇರಿದಂತೆ ಚಿಕ್ಕದೊಂದು ಹಂಚು ಹಾಗೂ ಮಣ್ಣಿನ ಗೋಡೆಗಳಿಂದ ಕೂಡಿದ ದೇವಾಲಯವನ್ನು ಕಟ್ಟಿದ್ದರು. ಅಂದಾಜು ಸುಮಾರು 100 ವರ್ಷಗಳ ಹಳೆಯದಾದ ದೇವಸ್ಥಾನವನ್ನು ಹಿಂದಿನ ಆಡಳಿತ ಮಂಡಳಿ ಶ್ರೀ ದೇವಿಯ ಅಪ್ಪಣೆಯ ಮೇರೆಗೆ ಕೆಡವಿ ವ್ಯವಸ್ಥಿತವಾದ ದೇವಾಲಯವನ್ನು ಕಟ್ಟಿದ್ದಾರೆ. ದೇವಾಲಯವನ್ನು ಅಂದಿನ ಅಧ್ಯಕ್ಷರೂ, ಹಿಂದಿನ ಆಡಳಿತ ಮಂಡಳಿಯ ಗೌರವ ಅಧ್ಯಕ್ಷರೂ ಆಗಿರುವ ಹೆಚ್. ಎಲ್. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿನ ಧರ್ಮದರ್ಶಿ ಸಮಿತಿಯ ನೀತೃತ್ವದಲ್ಲಿ ವ್ಯವಸ್ಥಿತವಾಗಿ ಕಟ್ಟಲಾಗಿದೆ.ವಿಶಾಲವಾದ ಗರ್ಭಗುಡಿ, ಭಕ್ತಾದಿಗಳಿಗೆ ದೇವಿ ದರ್ಶನಕ್ಕಾಗಿ ವಿಶಾಲವಾದ ಪ್ರಾಂಗಣ, ಶ್ರೀ ದೇವಿಯ ಎದುರು ಭಾಗದಲ್ಲಿ ಶ್ರೀ ಚೌಡೇಶ್ವರಿ, ಭೂತರಾಯನ ದೇವಾಲಯ, ನಾಗರಕಟ್ಟೆ ಮಳೆಗಾಲದಲ್ಲಿ ದೇವಿಯ ಪಲ್ಲಕ್ಕಿಯನ್ನು ಅಂಗಳದಲ್ಲಿ ಹೊರಡಿಸಿದಾಗ ಮಳೆ ಗಾಳಿಯಿಂದ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಶೀಟ್ ಮಾಡನ್ನು ಭಕ್ತಾದಿಗಳ ಅನುಕೂಲಕ್ಕಾಗಿ ನಿರ್ಮಿಸಲಾಗಿದೆ.ಕಳೆದ ವರ್ಷ ನೂತನ ಆಡಳಿತ ಮಂಡಳಿ ರಚನೆಯಾದ ಬಳಿಕ ಮಾಜಿ ಅಧ್ಯಕ್ಷರಾಗಿದ್ದ ದಿ|ಹೆಚ್. ಹೆಚ್. ಮಂಜಪ್ಪ ಗೌಡರು ಭಾಗದ ಭಕ್ತಾದಿಗಳಿಗೆ ಉಪಯೋಗವಾಗಲು ನಿರ್ಮಿಸಿದ್ದ ಉಚಿತ ಸಮುದಾಯ ಭವನವನ್ನು ತೆರವುಗೊಳಿಸಿ ಸುಸಜ್ಜಿತವಾಗಿ ನಿರ್ಮಿಸಿದ್ದಾರೆ. ನೂತನ ಧರ್ಮದರ್ಶಿ ಸಮಿತಿಯಲ್ಲಿ ಬಿ. ವಿ. ನಾಗರಾಜ್ ಬಸರವಳ್ಳಿ ಇವರು ಅಧ್ಯಕ್ಷರಾಗಿ ಆಯ್ಕೆಗೊಂಡರೇ, ಕಾರ್ಯದರ್ಶಿಯಾಗಿ ಹೆಚ್. ಸಿ. ಮೇಘರಾಜ್ ಹೊಸಳ್ಳಿ, ಖಜಾಂಚಿಯಾಗಿ ಹೆಚ್. ಎಸ್. ಕಿರಣ್ ಹೊಸೈರಿ ಇವರು ಆಯ್ಕೆಗೊಂಡಿದ್ದಾರೆ. ಶಿವಕುಮಾರ್ ಕೋಣಕೆರೆ ಇವರು ಯಕ್ಷಗಾನ ಮೇಳದ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಸುಮಾರು 5 ಪಾಲುಗಳಿಂದ ಧರ್ಮದರ್ಶಿಗಳ ಆಯ್ಕೆ ನಡೆದಿದ್ದು ಧರ್ಮದರ್ಶಿ ಸಮಿತಿಯಲ್ಲಿ 58 ಮಂದಿ ಸದಸ್ಯರಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post