ತೀರ್ಥಹಳ್ಳಿ ಕಾಂಗ್ರೆಸ್ ವಲಯದಲ್ಲಿ ಅಸಾದಿ ಹಕೀಕತ್......

ಹೊಸ ಪಾರ್ಲಿಮೆಂಟ್ ಕುರ್ಚಿಯಲ್ಲಿ ಕುಳಿತ ಅಸಾದಿ... ವರಸೆ ಬದಲಾಯಿಸಿ ಬಿಜೆಪಿ ಕಡೆ ಕಣ್ಣು... ಬಿವೈಆರ್ ಜೊತೆ ಏನಿದು ನಂಟು... ಕಾಂಗ್ರೆಸ್ಗೆ ಅಸಾದಿ ಕಷಾಯ...

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ತಮ್ಮ ಮಾತಿನ ಶೈಲಿಯನ್ನು ಹರಿತಗೊಳಿಸಿದ್ದಾರೆ. ಸ್ವಪಕ್ಷ ಕಾಂಗ್ರೆಸ್ ವಲಯದಲ್ಲೇ ಈ ಬಗ್ಗೆ ಗುಸು ಗುಸು ಆರಂಭವಾಗಿದ್ದು ಅದಕ್ಕೆ ಸರಿಯೆಂಬಂತೆ ಸಾಮಾನ್ಯ ಸಭೆ, ವಿವಿಧ ವೇದಿಕೆ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷದ ನಿಲುವುಗಳ ವಿರುದ್ಧವೆ ಹೇಳಿಕೆ ಸಲೀಸಾಗಿ ಹೊರಗಿಳಿಯುತ್ತಿವೆ. ಕೇಂದ್ರದ ಬಿಜೆಪಿ ಕಾರ್ಯಕ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿರುವುದು ಸಾರ್ವಜನಿಕವಾಗಿ ಹೊಸ ಅಭಿಪ್ರಾಯ ಸೃಷ್ಟಿಗೆ ಕಾರಣವಾದಂತಿದೆ.

ಈಗಾಗಲೇ ಪಟ್ಟಣ ಪಂಚಾಯಿತಿ ಕುರ್ಚಿ ಕಾಳಗ ಪಕ್ಷದ ಆಂತರಿಕ ವಲಯದಲ್ಲಿ ರಾಧಾಂತವನ್ನೇ ಎಬ್ಬಿಸಿದೆ. ನಾಬಿಡೆ ನೀಕೊಡೆ ಎಂಬಂತೆ ಅಧ್ಯಕ್ಷಗಾದಿ ಊರು ಬಾಗಿಲಾಗಿದೆ. ಮುಸಿ ಮುಸಿ ಗುದ್ದಾಟದ ಕಾರಣದಿಂದ ಪಟ್ಟಣದ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ‌ ಕೆಲಸಗಳು ಸುಗಮವಾಗಿ ನಡೆಯುತ್ತಿಲ್ಲ. ಈ ನಡುವೆ ಬಿಜೆಪಿ ಸದಸ್ಯರ ಮನವೊಲಿಸುವ ದೃಷ್ಟಿಯಿಂದಲೇ ಅನೇಕ ಅಭಿವೃದ್ಧಿ ಕಾಮಗಾರಿಗೆ ಹಣ ಮಂಜೂರು ಮಾಡಿಸುತ್ತಿರುವುದು ಕೂಡ ಭಿನ್ನಮತ ಸೃಷ್ಟಿಗೆ ಬಹುದೊಡ್ಡ ಕಾರಣವಾಗುತ್ತಿದೆ.

ಇತ್ತೀಚೆಗೆ ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮೇಯರ್ ಮತ್ತು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರುಗಳ ಕಾರ್ಯಗಾರದಲ್ಲಿ ಭಾಗವಹಿಸಿದ್ದ ಅಸಾದಿ ತಮ್ಮ ಮಾತಿನ ಚಾಕಚಕ್ಯತೆಯಿಂದ ಸಭೆಯ ಗಮನ ಸೆಳೆದ ಕುರಿತು ತಮ್ಮ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಬೇರೆ ಯಾರೇ ಅಧ್ಯಕ್ಷರು ಆಗಿದ್ದರೆ ಅವರಿಂದ ಇದ್ಯಾವುದು ಸಾಧ್ಯವಾಗುತ್ತಿರಲಿಲ್ಲ. ಲೋಕಸಭಾ ಸಭಾಪತಿ ಓಂ ಬಿರ್ಲಾ ಸೇರಿದಂತೆ ಉತ್ತರ ಪ್ರದೇಶದ ಮಾಜಿ ಉಪ ಮುಖ್ಯಮಂತ್ರಿ ಹಾಲಿ ರಾಜ್ಯಸಭೆ ಸದಸ್ಯ ದಿನೇಶ್ ಶರ್ಮ ತಮ್ಮ ಮಾತುಗಾರಿಕೆ ಮತ್ತು ಪಟ್ಟಣ ಪಂಚಾಯಿತಿ ಕಾರ್ಯವನ್ನು ಶ್ಲಾಘಿಸುತ್ತಿರುವ ವಿಚಾರವನ್ಮು ಪ್ರಸ್ತಾಪಿಸುತ್ತಿರುವುದು ಇತರ ಸದಸ್ಯರಿಗೆ ಇರಿಸುಮುರಿಸಾಗಿಸುತ್ತಿದೆ.

2047ರ ವಿಕಸಿತ ಭಾರತಕ್ಕೆ ತಮ್ಮ ಕೊಡುಗೆ ಹೇಳುತ್ತಿರುವ ನಡುವೆ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅವರ ಕೆಲಸಗಳ ಬಗ್ಗೆ ಮುಕ್ತವಾಗಿ ಹೊಗಳುತ್ತಿರುವುದರಿಂದ ಸದಸ್ಯರ ನಡುವೆ ಭಿನ್ನಮತ ಜೋರಾದಂತಿದೆ. ಇತ್ತೀಚೆಗೆ ಹಜ್ ಯಾತ್ರೆ ಕೈಗೊಂಡಿದ್ದ ಅಸಾದಿ ಯಾತ್ರೆಯಿಂದ ಹಿಂದಿರುಗಿ ಬಂದ ನಂತರ ರಾಜೀನಾಮೆ ನೀಡುವುದಾಗಿ ಭರವಸೆ ನೀಡಿದ್ದರು. ಅದಕ್ಕಾಗಿ ಉಪಾಧ್ಯಕ್ಷೆ ಗೀತಾ ಅವರನ್ನು ಪ್ರಭಾರ ಅಧ್ಯಕ್ಷರಾಗಲು ಅನುಮತಿಸಿದ್ದರು. ನಂತರ ಯಾತ್ರೆ ಮುಗಿದ ನಂತರ ಮಂಜುನಾಥ ಗೌಡರ ವಾಪಾಸಾತಿಯ ವರೆಗೆ ರಾಜೀನಾಮೆ ಇಲ್ಲ ಎಂದರು. ಅದಾದ ನಂತರ ಹರಿಯಾಣದ ಸಭೆಯ ನೆಪ ಇಟ್ಟರು. ಇದೀಗ ಪಾರ್ಲಿಮೆಂಟ್ ಭವನ, ಸೇರಿದಂತೆ ಬಿಜೆಪಿ ಒಲಿಸುವ ಪ್ರಯತ್ನ ನಡೆಸುತ್ತಿರುವುದು ಜಟಾಪಟಿಗೆ ಕಾರಣವಾಗುತ್ತಿದೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸದಸ್ಯರುಗಳು ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟರೇ ಎಂಬ ಚಿಂತೆಗೆ ಬಿದ್ದಿದ್ದಾರೆ.


ಬಿ.ವೈ.ರಾಘವೇಂದ್ರ ಜೊತೆ ಏನಿದು ನಂಟು..

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಜೊತೆ ಅಸಾದಿ ಆತ್ಮೀಯ ಒಡನಾಟದ ಜೋರಾಗಿದೆ. ಬಿ.ವೈ.ಆರ್. ತೀರ್ಥಹಳ್ಳಿಗೆ ಆಗಮಿಸುವ ಮುನ್ನ ಅಸಾದಿ ಜೊತೆ ಕಾಸ ಮಾತುಗಳನ್ನು ಹಂಚಿಕೊಳ್ಳುತ್ತಾರಂತೆ. ತೀರ್ಥಹಳ್ಳಿಯ ವರ್ಣರಂಜಿತ ರಾಜಕಾರಣಿಯಾದ ಅಸಾದಿ ಇದೀಗ ಟಾಕ್ ಆಫ್ ದ ಟೌನ್ ಆಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಸದಸ್ಯರಿಗೆಲ್ಲ ಕಷಾಯ ಹಾಕಿ ಖುರ್ಚಿ ಬದ್ರಪಡಿಸುತ್ತಿದ್ದಾರಾ ಎಂಬ ಅನುಮಾನ ಸಾರ್ವಜನಿಕವಾಗಿ ಮೂಡಿ ಬರುವಂತಾಗಿದೆ.


ಪಟ್ಟಣದ ಕಾಂಗ್ರೆಸ್ ಆಡಳಿತ ಅಂತ್ಯ...?

22 ವರ್ಷಗಳ ವನವಾಸದಿಂದ ಕಾಂಗ್ರೆಸ್ ನಾಲ್ಕು ವರ್ಷಗಳ ಹಿಂದೆ ಅಧಿಕಾರ ಪಡೆದಿದೆ. ಆದರೆ ಇದೀಗ ಆಂತರಿಕ ಗಲಾಟೆಯ ಕಾರಣಕ್ಕೆ ಪಡೆದ ಅಧಿಕಾರವನ್ನು ಕಳೆದು ಕೊಳ್ಳುವ ಸಾಧ್ಯತೆ ದಟ್ಟವಾಗುತ್ತಿದೆ. ಕಾಂಗ್ರೆಸ್ ಪುನಃ ಪಟ್ಟಣದಲ್ಲಿ ವನವಾಸಕ್ಕೆ ಸೇರುವ ಸಾಧ್ಯತೆ ಹೆಚ್ಚುತ್ತಿದೆ. ಪಟ್ಟಣದ ಜನತೆಗೆ ಸುಭದ್ರವಾದ ಆಡಳಿತ ನೀಡುವ ನಿರೀಕ್ಷೆಯಲ್ಲಿದ್ದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಹಿಂದಿನ ಅಧ್ಯಕ್ಷರ ಮೀಸಲಾತಿಯಲ್ಲಿ ಮಹಿಳಾ ಸದಸ್ಯರನ್ನು ಸಂಬಾಳಿಸುವುದು ಕಷ್ಟವಾದರೆ ಇದೀಗ ಸಾಮಾನ್ಯ ವರ್ಗಕ್ಕೆ ಎಲ್ಲರೂ ತಾಮುಂದೆ ನಾಮುಂದೆ ಎಂದು ಮುನ್ನುಗ್ಗುತ್ತಿದ್ದಾರೆ. ಕೆಲವು ವೇದಿಕೆಯಲ್ಲಿ ತಾನೇ ಮೀಸಲಾತಿ ಹಾಕಿಸಿಕೊಂಡು ಬಂದಿದ್ದು ಅದರ ಪೂರ್ಣ ಕ್ರೆಡಿಟ್ ತನಗೆ ಮಾತ್ರ ಲಭಿಸಬೇಕು ಎಂಬ ವಾದ ಮುಂದಿಡುತ್ತಿರುವುದು ಇತರ ಸದಸ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಲ್ಲದೇ ರೇಸ್ ನಲ್ಲಿ ಇರುವವರು ಪ್ರಭಾವ ಬೆಳೆಸುತ್ತಿದ್ದು ಪಟ್ಟಣದ ಆಡಳಿತ ಮಬ್ಬಾಗುವಂತಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post