ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಶಿಷ್ಟಾಚಾರ ಉಲ್ಲಂಘನೆ

ಮಧು ಬಂಗಾರಪ್ಪ ಕಡೆಗಣಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ
ಭರ್ಜರಿ ಯಶಸ್ವಿಯಾದ ಬ್ಯಾಗ್‌ ವಿತರಣೆ ಕಾರ್ಯಕ್ರಮ
ಬ್ಯಾಗ್‌ ವಿತರಣೆ ಕಾರ್ಯಕ್ರಮ ಬಿಜೆಪಿಯದ್ದೋ-ಸರ್ಕಾರದ್ದೋ…

ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾ ವ್ಯಾಪ್ತಿಯ 1 ರಿಂದ 4ನೇ ತರಗತಿ ಮಕ್ಕಳಿಗೆ ಶುಕ್ರವಾರ ಬ್ಯಾಗ್‌ ವಿತರಿಸುವ ಕಾರ್ಯಕ್ರಮ ಭರ್ಜರಿ ಯಶಸ್ವಿಯಾಗಿ ಇಲ್ಲಿನ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಿತು. ಬ್ಯಾಗ್‌ ವಿತರಿಸಲು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಆಗಮಿಸಿದ್ದರು. ಅವರಿಗೆ ಬೆಂಬಲವಾಗಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್‌ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್‌ ಹಾಜರಿದ್ದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್‌ ವಹಿಸಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಬ್ಯಾಗ್‌ ವಿತರಿಸಲಾಗಿತ್ತು. ಬಹುತೇಕ ಶಾಲೆಯ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಭಾಗವಹಿಸಿ ಸಂಸದ ಬಿ.ವೈ.ರಾಘವೇಂದ್ರ ಅವರ ಶೈಕ್ಷಣಿಕ ಕಾರ್ಯವನ್ನು ಮುಕ್ತಕಂಠದಿಂದ ಸ್ವಾಗತಿಸಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸಾಕ್ಷಾರ್ಥ ಮಿಷನ್‌ ಯೋಜನೆಯಡಿ ಕಳೆದ ನವೆಂಬರ್‌ ಅಂತ್ಯದಲ್ಲಿ ಬ್ಯಾಗ್‌ ಬಂದಿದ್ದವು. ಪ್ರಸಕ್ತ ಸಾಲಿನಲ್ಲಿ ಸ್ವೆಟರ್‌ ಬಂದಿದ್ದು ಎರಡನ್ನೂ ಒಟ್ಟಿಗೆ ಸೇರಿಸಿ ಮಕ್ಕಳಿಗೆ ಕೊಡಲಾಗಿತ್ತು. ಆದರೆ ಸರ್ಕಾರಿ ಕಾರ್ಯಕ್ರಮ ರೂಪಿಸುವಾಗ ಯಾವುದೇ ರೀತಿಯ ಶಿಷ್ಟಾಚಾರ ಪಾಲನೆ ಮಾಡಿರಲಿಲ್ಲ. ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರ ಹೆಸರನ್ನು ಕೂಡ ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಲಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಗತಿಸುವಾಗಲೂ ಶಿಕ್ಷಣ ಸಚಿವರನ್ನು ನೆನೆಯಲಿಲ್ಲ. ಹಾಗಿದ್ದರೆ ಇದೇನು ಬಿಜೆಪಿ ಕಾರ್ಯಕ್ರಮವೋ ಅಥವಾ ಸರ್ಕಾರಿ ಕಾರ್ಯಕ್ರಮವೋ ಎಂಬ ಬಗ್ಗೆ ಇದೀಗ ವ್ಯಾಪಕ ಚರ್ಚೆ ಆರಂಭವಾಗಿದೆ.

ವೇದಿಕೆಯಲ್ಲಿ ಹಾಕಿದ್ದ ಪ್ಲೆಕ್ಸ್‌ನಲ್ಲಿಯೂ ಶಿಕ್ಷಣಕ್ಕೆ ಸಹಕರಿಸುವುದು ದೇಶ ಕಟ್ಟುವ ಕಾರ್ಯಕ್ಕೆ ಜೊತೆಯಾದಂತೆ, ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕರಾದ ಆರಗ ಜ್ಞಾನೇಂದ್ರ ಇವರ ನೇತೃತ್ವದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್‌ ಮತು ಸ್ವೆಟರ್‌ ವಿತರಣೆ ಎಂದು ಹಾಕಲಾಗಿತ್ತು. ಕೇಂದ್ರ ಸರ್ಕಾರವನ್ನಾಗಲಿ ಅಥವಾ ರಾಜ್ಯ ಸರ್ಕಾರವನ್ನಾಗಲಿ ಇಲ್ಲಿ ನೆನಪಿಸಲಾಗಲಿಲ್ಲ. ಇದೊಂದು ಖಾಸಗಿ ಕಾರ್ಯಕ್ರಮವಾಗಿಯೇ ರೂಪುಗೊಂಡಿದ್ದು ಬಹುತೇಕ ಎಲ್ಲಾ ಬಿಜೆಪಿ ಮುಖಂಡರನ್ನು ಶಿಕ್ಷಣಾಧಿಕಾರಿಯೇ ಆತ್ಮೀಯವಾಗಿ ಸ್ವಾಗತಿಸಿದರು. ಪ್ರಸ್ತಾವಿಕವಾಗಿ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ಸಂದೇಶ ಜವಳಿ ಮಾತನಾಡಿದರು. ಆಗಲೂ ಕೂಡ ಯಾವ ಶಿಷ್ಟಾಚಾರದ ಪ್ರಶ್ನೆಯೇ ಮೂಡಲಿಲ್ಲ. ಕೊನೆಗೆ ಮಕ್ಕಳು, ಪೋಷಕರು ಬ್ಯಾಗ್‌-ಸ್ವೆಟರ್‌ ಪಡೆದು ಸಂಸದ, ಶಾಸಕರನ್ನು ಅಭಿನಂದಿಸಿದರು. ಹೀಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಕಾಂಗ್ರೆಸ್‌ ಕಾರ್ಯಕ್ರರ್ತರ ವಲಯದಲ್ಲಿ ಇದು ಬೂದಿ ಮುಚ್ಚಿದ ಕೆಂಡವಾಗಿ ಪರಿಣಮಿಸಿದ್ದು ಅಲ್ಲಲ್ಲಿ ಹೊಗೆಯಾಡ ಹತ್ತಿದೆ. ಬುಸುಗುಡುವವರು ಜಾಸಿ ಉಸಿರು ಕೂಡ ಹೊರಹಾಕದ ಸ್ಥಿತಿ ಇದ್ದು ಕಿಮ್ಮನೆ ರತ್ನಾಕರ ಹಾಗೂ ಮಧುಬಂಗಾರಪ್ಪ ಧೋರಣೆಗೆ ಶಪಿಸುವಂತಾಗಿದೆ. ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಶಿಕ್ಷಣಾಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಡವೂ ಹೆಚ್ಚುತ್ತಿದೆ. ಜೊತೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಸಾದಿ, ಉಪಾಧ್ಯಕ್ಷೆ ಗೀತಾ ಈ ಇಬ್ಬರು ವೇದಿಕೆ ಹಂಚಿಕೊಂಡಿದ್ದು ಕಾಂಗ್ರೆಸ್‌ ಮುಖಂಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಸಾದಿ ವೇದಿಕೆಯಲ್ಲಿಯೇ ಮಾದ್ಯಮಗಳ ಬಗ್ಗೆ ಕಿಡಿಕಾರಿದರು. ಅಧ್ಯಕ್ಷನಾಗಿ ಅನುದಾನ ತರುವುದಕ್ಕೆ ಪ್ರಯತ್ನ ಮಾಡಬೇಕಾಗುತ್ತದೆ. ಅದಕ್ಕೆ ನಾವು ಹೊಗಳುವುದು ಅನಿವಾರ್ಯವಾಗಿದೆ. ಇದನ್ನು ಬಕೆಟ್‌ ಹಿಡಿಯುವುದೆಂದರು ಪರವಾಗಿಲ್ಲ. ನಾವು ಬಿ.ವೈ.ರಾಘವೇಂದ್ರ ಅವರ ಕಾರ್ಯವನ್ನು ಹೊಗಳಲೇಬೇಕು ಎಂದಿರುವುದಕ್ಕೆ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

ಅಸಾದಿ ರೈಲು ಕೇಳಿದ್ದು ಯಾತಕ್ಕೆ…

ತೀರ್ಥಹಳ್ಳಿಗೆ ರೈಲ್ವೆ ಸಂಪರ್ಕ ಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಮುಂದೆ ಬೇಡಿಕೆ ಮಂಡಿಸಿರುವ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್‌ ಉಲ್ಲಾ ಅಸಾದಿ ಈಗ ಮತ್ತೊಂದು ಮಗಲಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್ಸಿಗರು ಸಿಟ್ಟಾಗಿದ್ದಾರೆ. ಮಾದ್ಯಮಗಳ ವಿರುದ್ಧ ನಿಗಿ ನಿಗಿ ಕೆಂಡಕಾರುತ್ತಿರುವ ಅಸಾದಿ ತೀರ್ಥಹಳ್ಳಿಗೆ ರೈಲ್ವೆ ಸಂಪರ್ಕ ಕೇಳುವುದರ ಮೂಲಕ ಬಿ.ವೈ.ಆರ್‌ಗೆ ಇನ್ನಷ್ಟು ಹತ್ತಿರವಾಗಲು ಮುಂದಾಗಿದ್ದಾರೆ ಎಂಬ ದೂರು ಕಾಂಗ್ರೆಸ್ಸಿನಲ್ಲಿದೆ. ಸಚಿವ ಮಧು ಬಂಗಾರಪ್ಪ ಅವರನ್ನು ಹೊಗಳಲು ಅಸಾದಿ ಅವರಿಗೆ ಪುರುಸೊತ್ತಿಲ್ಲ. ರಾಘವೇಂದ್ರ ಅವರನ್ನು ಹೊಗಳುವ ಹಿಂದೆ ರಾಜಕೀಯದ ಹಿತಾಸಕ್ತಿ ಇದೆ ಎಂಬ ಗುಟ್ಟು ಈಗ ಕಾಂಗ್ರೆಸ್ಸಿಗರಿಗೆ ಅರ್ಥವಾಗಿರುವುದು ಮುಂದಿನ ದಿನಗಳಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.




ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post