ಸೂತ್ರದಾರನಿಂದಲೇ ಪೊಲೀಸರ ಮೇಲೆ ಒತ್ತಡ
ಮಾಳೂರು ಠಾಣೆಯಲ್ಲಿ ಏನೆಲ್ಲ ನಡೆಯುತ್ತಿದೆ...
ತೀರ್ಥಹಳ್ಳಿಯ ಮಹಿಷಿ ಸಮೀಪ ತಡರಾತ್ರಿ ಮಠವೊಂದರ ಕಳುವಾಗಿದ್ದು ಸ್ಥಳಕ್ಕೆ ಬೆಳಿಗ್ಗೆ ಪೊಲೀಸರು ತೆರಳುವಾಗ ಜಾನುವಾರು ಕಳ್ಳತನ ಮಾಡುವ ಗ್ಯಾಂಗ್ ಸೆರೆಯಾಗಿದೆ. ಕಳ್ಳತನ ಮಾಡುತ್ತಿರುವ ಗ್ಯಾಂಗ್ ಹಿಡಿಯಲು ಮುಂದಾದ ಪೊಲೀಸರ ಮೇಲೆಯೇ ವಾಹನ ಹತ್ತಿಸಲು ಮುಂದಾಗಿರುವ ವಿಶೇಷ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಮಂಡಗದ್ದೆಯ ಜಾನುವಾರು ಕಳ್ಳತನದ ಗ್ಯಾಂಗ್ ಯಾರ ಹೆದರಿಕೆ ಇಲ್ಲದೆ ಗ್ರಾಮೀಣ ಭಾಗದಲ್ಲಿ ನಿತ್ಯ ಜಾನುವಾರು ಕಳ್ಳತನಕ್ಕೆ ಮುಂದಾಗುತ್ತಿದೆ. ಈಚೆಗೆ ಹತ್ತಕ್ಕೂ ಹೆಚ್ಚು ಜಾನುವಾರುಗಳು ಗ್ರಾಮೀಣ ಭಾಗದಲ್ಲಿ ಸರಣಿ ಕಳ್ಳತನವಾಗಿದ್ದು ಪೊಲೀಸರ ಕಣ್ಣು ತಪ್ಪಿಸುವ ಪ್ರಯತ್ನ ಎಗ್ಗಿಲ್ಲದೆ ಸಾಗಿದೆ.
ಮಂಡಗದ್ದೆಯ ದನ ಕಳ್ಳತನ ಗ್ಯಾಂಗ್ ಒಳಗೆ ಕದೀಮರ ಯುವ ಗುಂಪು ಇದೆ. ಈ ಗುಂಪು ನಿತ್ಯ ಕಳ್ಳತನದಲ್ಲಿ ನಿರತವಾಗಿದೆ. ಇದರ ಸೂತ್ರದಾರ ಮಂಡಗದ್ದೆ ಭಾಗದಲ್ಲಿ ಒಬ್ಬ ಇದ್ದು ಆತನೇ ಇದೀಗ ಪೊಲೀಸರ ಮೇಲೆ ರಾಜಕೀಯ ಒತ್ತಡ ಹಾಕಲು ಮುಂದಾಗಿದ್ದಾನೆ. ಬೆಳಿಗ್ಗೆಯಿಂದಲೇ ಪೊಲೀಸ್ ಠಾಣೆಯಲ್ಲಿ ವಾಹನ ಬಿಟ್ಟುಕೊಡುವಂತೆ ಇಲ್ಲಸಲ್ಲದ ನೆಪ, ರಾಜಕೀಯ ಒತ್ತಡಗಳನ್ನು ಹಾಕಲಾಗುತ್ತಿದೆ ಎಂಬ ಸುದ್ದಿ ಹರಡಿದೆ. ಪೊಲೀಸರು ಒತ್ತಡ ಹೇರುತ್ತಿರುವ ಕದೀಮರ ಗ್ಯಾಂಗ್ ಸೂತ್ರದಾರನ್ನೇ ವಿಚಾರಣೆಗೆ ಒಳಪಡಿಸಿದರೆ ದೊಡ್ಡ ಜಾನುವಾರು ಕಳ್ಳ ಸಾಗಾಣೆಯ ಜಾಲ ಪತ್ತೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಪೊಲೀಸರ ವಾಹನ ಮತ್ತು ಸಿಬ್ಬಂದಿಗಳ ಮೇಲೆಯೇ ಜಾನುವಾರು ಕೊಂಡೊಯ್ಯುವ ವಾಹನ ಹತ್ತಿಸಲು ಮುಂದಾಗಿರುವ ಗ್ಯಾಂಗ್ ಸಲೀಸಾಗಿ ಬಿಟ್ಟರೆ ಮುಂದಿನ ದಿನಗಳಲ್ಲಿ ದೊಡ್ಡ ದರೋಡೆ ಗ್ಯಾಂಗ್ ಆಗಿ ಬದಲಾಗುವ ಸಾಧ್ಯತೆ ಇದೆ. ಇವುಗಳಿಗೆ ಅವಕಾಶ ಕೊಡದೆ ದರೋಡೆ ಗ್ಯಾಂಗ್ ಸದೆಬಡೆಯುವ ಅನಿವಾರ್ಯತೆ ಇದ್ದು ಸೂತ್ರದಾರನನ್ನೇ ವಿಚಾರಣೆಗೆ ಒಳಪಡಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.