ಆಶ್ರಯ ಮನೆಗಳಿಗೆ ಮರಳು ಪೂರೈಸಲು ಅಡ್ಡಿ

ಅರೇಹಳ್ಳಿ ಗ್ರಾ.ಪಂ. ಕಚೇರಿಗೆ ಬೀಗ
ಜನಪ್ರತಿನಿಧಿಗಳ ಮೇಲೆ ಕೇಸು ದಾಖಲು - ಬಂಧನ

ತೀರ್ಥಹಳ್ಳಿ ತಾಲ್ಲೂಕು ಆಡಳಿತ ಮತ್ತು ಅರೇಹಳ್ಳಿ ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳ ನಡುವೆ ಇಂದು ಘರ್ಷಣೆ ಸಂಭವಿಸಿದೆ. ಆಶ್ರಯ ಮನೆಗಳಿಗೆ ಉಚಿತ ಮರಳು ಪೂರೈಸಲು ಅಧಿಕಾರಿ ವರ್ಗ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಪಂಚಾಯಿತಿಗೆ ಬೀಗ ಜಡಿದರು. ಪ್ರತಿಯಾಗಿ ಕರ್ತವ್ಯಕ್ಕೆ ಅಡ್ಡಿಯೆಂದು ಅಲ್ಲಿನ ಪಿಡಿಓ ದೂರು ನೀಡಿದ ಕಾರಣ ಜನಪ್ರತಿನಿಧಿಗಳನ್ನು ಆಗುಂಬೆ ಪೊಲೀಸರು ಬಂಧಿಸಿದರು.

ಘಟನೆಯ ವಿವರ

ತೀರ್ಥಹಳ್ಳಿ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿ, ಮಳಲೂರು, ಕೆಸಲೂರು ಗ್ರಾಮದ ವ್ಯಾಪ್ತಿಯ 41 ಫಲಾನುಭವಿಗಳಿಗೆ ವಸತಿ ಯೋಜನೆ ಫಲಾನುಭವಿಗಳಿಗೆ ಮನೆ ನಿರ್ಮಿಸಲು ತಲಾ ಮೂರು ಲೋಡ್ ಉಚಿತ ಮರಳು ವಿತರಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ವಿನಂತಿಸಿದ್ದರು. ಆದರೆ ಇದಕ್ಕೆ ಸೂಕ್ತವಾಗಿ ಅಲ್ಲಿನ ಪಿಡಿಓ ಹಾಗೂ ತಾಲ್ಲೂಕು ಆಡಳಿತ ಸ್ಪಂದಿಸಲಿಲ್ಲ.

ಇದರಿಂದ ಆಕ್ರೋಶಗೊಂಡು ಜನಪ್ರತಿನಿಧಿಳು, ಸಾರ್ವಜನಿಕರು ಬೆಳಿಗ್ಗೆ ಟ್ರ್ಯಾಕ್ಟರ್‌, ಪಿಕಪ್‌ ವಾಹನಗಳನ್ನು ಮಾಲತಿ ನದಿಗೆ ಇಳಿಸಲು ಗ್ರಾ.ಪಂ. ಅಧ್ಯಕ್ಷೆ ಶ್ರೀಲತಾ, ಉಪಾಧ್ಯಕ್ಷ ಕಡ್ತೂರು ಯಶಸ್ವಿ ನೇತೃತ್ವದಲ್ಲಿ ಸದಸ್ಯರು ಮತ್ತು ಸಾರ್ವಜನಿಕರು ಮಾಲತಿ ನದಿ ತೀರದಲ್ಲಿ ಮರಳು ತುಂಬಿಸಲು ಮುಂದಾದರು.

ವಿಷಯ ತಿಳಿದ ತಹಸೀಲ್ದಾರ್‌ ಎಸ್.ರಂಜಿತ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್.ಶೈಲಾ ಸ್ಥಳಕ್ಕೆ ಬೇಟಿ ನೀಡಿ ಕಾನೂನು ಬಾಹಿರವಾಗಿ ಮರಳು ಸಾಗಾಣೆಗೆ ಅವಕಾಶವಿಲ್ಲ. ಅರ್ಹ ಫಲಾನುಭವಿಗಳ ಪಟ್ಟಿ ನೀಡಿದರೆ ಮರಳು ವಿತರಿಸಲು ಪ್ರಯತ್ನಿಸಬಹುದು ಎಂದರು. ಆಗ ಬಡ ಫಲಾನುಭವಿಗಳಿಗೆ ಮರಳು ವಿತರಿಸಲು ಅಡ್ಡಿಪಡಿಸುತ್ತೀರಿ ಆದರೆ ದಂಧೆಕೋರರ ವಿರುದ್ಧ ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಜನಪ್ರತಿನಿಧಿಗಳು ತಿರುಗಿ ನಿಂತಾಗ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಅಲ್ಲದೇ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಯಿತು. ಸರ್ಕಾರಿ ಕಚೇರಿಗೆ ಬೀಗ ಹಾಕುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿ ಆಗುಂಬೆ ಪೊಲೀಸ್‌ ಠಾಣೆಗೆ ಪಿಡಿಓ ಮಧ್ಯಾಹ್ನ ದೂರು ನೀಡಿದರು. ದೂರಿನ ಅನ್ವಯ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸಿದರು.

ತೀವ್ರ ಆಕ್ರೋಶಗೊಂಡಿರುವ ಗ್ರಾಮ ಪಂಚಾಯಿತಿ ಸದಸ್ಯರು ಇದು ತಾಲ್ಲೂಕು ಆಡಳಿತದ ದಬ್ಬಾಳಿಕೆಯಾಗಿದ್ದು ಈ ಅನ್ಯಾಯದ ವಿರುಧ್ದ ತಾಲ್ಲೂಕು ಕಚೇರಿ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಗ್ರಾ.ಪಂ. ಸದಸ್ಯರಾದ ಉಂಟುಗೋಡು ಸಿದ್ದಾರ್ಥ, ಗಿರೀಶ್‌, ಭಾಸ್ಕರಗೌಡ, ಗಣೇಶ್‌, ಗೀತಾ, ಸುಧಾ, ಸವಿತಾ, ಕಾವ್ಯ ಸೇರಿದಂತೆ ಸ್ಥಳೀಯರು ಮತ್ತಿತರರು ಉಪಸ್ಥಿರಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post