ವೈವಿಧ್ಯಮಯ ಸಂಯೋಜನೆಯೊಂದಿಗೆ ಯಶಸ್ವಿಯಾದ 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಸಮಾಜಮುಖಿ ಸಂದೇಶ ಸಾರಿದ ಸರ್ವಾಧ್ಯಕ್ಷೆ ಉಮಾದೇವಿ ಉರಾಳ್‌
ಕನ್ನಡದ ಶ್ರೀಮಂತ ಸಂಸ್ಕೃತಿ ತೆರೆದಿಟ್ಟ ಪುರುಷೋತ್ತಮ ಬಿಳಿಮಲೆ

ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾರ್ಚ್‌ 10 ಹಾಗೂ 11 ರಂದು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ 11ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನ ಪರಿಷತ್ತು ಅಧ್ಯಕ್ಷ ಟಿ.ಕೆ.ರಮೇಶ್‌ ಶೆಟ್ಟಿ ಸಾರಥ್ಯದಲ್ಲಿ ನಾಡೋಜ ನಾ ಡಿಸೋಜ ವೇದಿಕೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಸಮ್ಮೇಳನದ ಸರ್ವಾಧ್ಯಕ್ಷೆ, ಹಿರಿಯ ಲೇಖಕಿ, ನಿವೃತ್ತ ಉಪನ್ಯಾಸಕಿ ಕೆ.ಆರ್.‌ಉಮಾದೇವಿ ಉರಾಳ್‌ ಅವರ ಸೂಕ್ಷ್ಮ ಹಾಗೂ ಸಮಾಜಮುಖಿ ಒಳನೋಟವುಳ್ಳ ಅಧ್ಯಕ್ಷೀಯ ಭಾಷಣದೊಂದಿಗೆ ಆರಂಭಗೊಂಡ ಈ ಸಮ್ಮೇಳನ ಒಟ್ಟಾರೆ ತೀರ್ಥಹಳ್ಳಿಯ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಹಿರಿಮೆಯನ್ನು ಮತ್ತೊಮ್ಮೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಲನಚಿತ್ರ ಸಾಹಿತಿ ಕವಿರಾಜ್‌ ಮನಸೂರೆಗೊಳ್ಳುವಂತೆ ಭಾಷಣ ಮಾಡಿದರು.


ವಿಶೇಷವೆಂದರೆ ಈ ಬಾರಿ ಸಾಹಿತ್ಯ ಸಮ್ಮೇಳನ ತೀರಾ ಒತ್ತಡ ಹಾಗೂ ಗಡಿಬಿಡಿಯಲ್ಲಿ ಆಯೋಜಿಸಬಾರದು ಸಮ್ಮೇಳನದ ಮೂಲಕ ಸಮಾಜದ ಆರೋಗ್ಯ ಕಾಪಾಡುವ ಚಿಂತನೆಗಳು ಪ್ರಚಾರಗೊಳ್ಳಬೇಕೆಂಬ ದೃಷ್ಟಿಯಿಂದ ಎರಡು ದಿನ ಸಂಘಟಿಸಲಾಗಿತ್ತು. ಹಾಗೂ ಸಾಹಿತ್ಯ ಸಮ್ಮೇಳನಗಳ ಜೀವಾಳವಾದ ವಿವಿಧ ವಿಚಾರಗಳ ಗೋಷ್ಟಿಗಳು ಈ ಬಾರಿ ಕೂಡ ವೈವಿಧ್ಯಮಯವಾಗಿ ಜನರನ್ನು ತಲುಪಿದವು.

ಮೊದಲ ಗೋಷ್ಠಿ ಪ್ರಸ್ತುತ ಕಾಲಘಟ್ಟದ ತಲ್ಲಣದಲ್ಲಿ ಚಿಂತಕ ನೆಂಪೆ ದೇವರಾಜ್‌, ಕವಿ ಟೆಲೆಕ್ಸ್‌ ರವಿಕುಮಾರ್‌, ಪತ್ರಕರ್ತ ಮೋಹನ್‌ ಮುನ್ನೂರು ಸೂಕ್ಷ್ಮ ಒಳನೋಟಗಳ ವಿಚಾರಗಳನ್ನು ಮಂಡಿಸಿದರು. ಸಮ್ಮೇಳನಾಧ್ಯಕ್ಷರ ಸಾಹಿತ್ಯದ ಕೃಷಿಯ ಕುರಿತು ಶಿಕ್ಷಕಿ ಕೆ.ಎಸ್.‌ ನಾಗರತ್ನ, ಸಾಹಿತಿ ವಿಜಯ ಶ್ರೀಧರ್‌ ತಲಸ್ಪರ್ಶಿ ವಿವರಗಳನ್ನು ನೀಡಿದರು.

ಸಮಾಜ ಮತ್ತು ಆರೋಗ್ಯ ಈ ಬಾರಿ ಆಯೋಜಿಸಲಾಗಿದ್ದ ವಿಶೇಷವಾದ ಗೋಷ್ಟಿಯಲ್ಲಿ ಒಂದಾಗಿತ್ತು. ಗೋಷ್ಟಿಯಲ್ಲಿ ಡಾ.ಬಿ.ಜಿ.ನಂದಕಿಶೋರ್‌, ಡಾ.ವಿನಯ ಶ್ರೀನಿವಾಸ್‌, ಡಾ.ಶಿವಪ್ರಕಾಶ್‌ ಡಿ.ಎಸ್.‌, ಡಾ.ಅಣ್ಣಯ್ಯ ಕುಲಾಲ್‌ ಸರಳವಾಗಿ ಆರೋಗ್ಯ ಹಾಗೂ ವೈದ್ಯಕೀಯ ಸಾಹಿತ್ಯದ ಕುರಿತು ವಿವರಿಸಿದರು.

ಮಾಜಿ ಶಾಸಕ ದಿ.ಪಟಮಕ್ಕಿ ರತ್ನಾಕರ ಗೋಷ್ಠಿಯಲ್ಲಿ ರಾಜಕಾರಣಿ, ಶಾಸಕನಾಗಿ ಅಪಾರವಾಗಿ ಸಾಹಿತ್ಯಾಭ್ಯಾಸ ಮಾಡಿದ್ದ ವಿರಳ ವ್ಯಕ್ತಿತ್ವದ ಪಟಮಕ್ಕಿ ರತ್ನಾಕರ್‌ ಕುರಿತು ಸುಧೀರ್ಘ ಕಾಲ ಅವರ ಒಡನಾಡಿಯಾಗಿದ್ದ ಹಿರಿಯ ಪತ್ರಕರ್ತ ಡಿ.ಎಸ್.ವಿಶ್ವನಾಥ ಶೆಟ್ಟಿ ಸ್ವಾರಸ್ಯಕರ ವಿವರಗಳನ್ನು ಹಂಚಿಕೊಂಡರು.

ಇನ್ನೊಂದು ವಿಶಿಷ್ಟ ಗೋಷ್ಠಿ ಮಲೆನಾಡಿನಲ್ಲಿ ಯಕ್ಷಗಾನ-ರಂಗಭೂಮಿ-ಇಂದ್ರಜಾಲ, ವಿಷಯದ ಕುರಿತು ಹಿರಿಯ ರಂಗಕರ್ಮಿ ಮ್ಯಾಥ್ಯೂ ಸುರಾನಿ, ಯಕ್ಷಗಾನ ಕಲಾವಿದ ಬಿ.ಗಣಪತಿ, ಜಾದೂ ಕಲಾವಿದ ನಿಶ್ಚಲ್‌ ಜಾದೂಗಾರ್‌ ಅಪೂರ್ವ ವಿವರಗಳನ್ನು ಸಭಿಕರೆದುರು ತೆರೆದಿಟ್ಟರು. ಇದರ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಶಾಂತರಾಮ ಪ್ರಭುಗಳ ವಿದ್ವತ್‌ ಪೂರ್ಣ ಭಾಷಣ ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

ಗೋಷ್ಠಿಗಳ ಜೊತೆಗೆ ಇಡೀ ಸಮ್ಮೇಳನ ವರ್ಣ ರಂಜಿತವಾಗಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ತೀರ್ಥಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ನೀಡಿದ್ದ ನೃತ್ಯ ಕಾರ್ಯಕ್ರಮಗಳು ವಿಶಿಷ್ಟವಾಗಿದ್ದವು. ತೀರ್ಥಹಳ್ಳಿ ರೋಟರಿ ಸಂಸ್ಥೆಯ ಕಿರು ನಾಟಕ ಕಾಡಿನ ಕೂಗು ಒಳ್ಳೆಯ ಸಂದೇಶದೊಂದಿಗೆ ಮನಸೆಳೆಯಿತು. ತುಂಗಾ ಕಾಲೇಜಿನ ಚಿಗುರು ಕಲಾವಿದರು ಅಭಿನಯಿಸಿದ ಕಿರು ನಾಟಕ ಭಾವ ತೊರೆದ ಜೀವ ಕೂಡ ಮನಸೆಳೆಯಿತು.

ಯಕ್ಷರಂಜಿನಿ ತಂಡ ಶೀರೂರು ಪ್ರಸ್ತುತ ಪಡಿಸಿದ ಸತ್ವ ಶೈಥಿಲ್ಯ ಕೂಡ ಯಶಸ್ವಿಯಾಯಿತು. ಎಂದಿನಂತೆ ಕಾವ್ಯವಾಚನ ಹಿರಿಯ ಕವಿ ಮೇಗರವಳ್ಳಿ ರಮೇಶ್‌ ಅಧ್ಯಕ್ಷತೆಯಲ್ಲಿ ಯಶಸ್ವಿಯಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಹೃದಯಸ್ಪರ್ಶಿ ಸನ್ಮಾನವನ್ನು ಕೂಡ ಹಮ್ಮಿಕೊಳ್ಳಲಾಯಿತು.

ಸಮ್ಮೇಳನದ ಹೈಲೈಟ್‌ ಎಂದರೆ ಸಮಾರೋಪ ಭಾಷಣಕ್ಕೆ ಆಗಮಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಅವರ ಅದ್ಬುತವಾದ ಬಾಷಣ ಕನ್ನಡ ಅಶೋಕ ಮಹಾರಾಜರ ಕಾಲದಿಂದ ಹಿಡಿದು ಇಲ್ಲಿಯ ತನಕ ಕೊಡುಕೊಳ್ಳುವಿಕೆಯ ಧಾರಾಳತನದಿಂದ ಎಂತಹ ಒಂದು ಉನ್ನತವಾದ ಸಂಸ್ಕೃತಿಯಾಗಿ ಬೆಳೆದಿದೆ ಎಂಬುದನ್ನು ಅತ್ಯಂತ ಸರಳವಾಗಿ ಆದರೆ ಪ್ರಭಾವಶಾಲಿಯಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಆರಂಭದಿಂದ ಅಂತ್ಯದ ವರೆಗೆ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್‌, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್‌, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ, ಪಟ್ಟಣ ಪಂಚಾಯಿತಿ ಅಧಕ್ಷ ರಹಮತ್‌ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್‌, ತಹಶೀಲ್ದಾರ್‌ ಎಸ್.ರಂಜಿತ್‌, ಇಓ ಶೈಲಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ. ನಾಗರಾಜ್‌, ಪಟ್ಟಣ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಮತ್ತಿತರರು ಪಾಲ್ಗೊಂಡಿದ್ದರು.

ಸಮ್ಮೇಳನದ ಯಶಸ್ವಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್‌ ಶೆಟ್ಟಿ ಕೃತಜ್ಞತೆ ವ್ಯಕ್ತಪಡಿಸಿದ್ದು ಜಿಲ್ಲಾ ಹಾಗೂ ತಾಲ್ಲೂಕು ಕಸಾಪ ವತಿಯಿಂದ ವಂದಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post