ಮ್ಯಾಮ್ಕೋಸ್‌ಗೆ ಭರ್ಜರಿ ಎಂಟ್ರಿಕೊಟ್ಟ ಹಸಿರುಮನೆ ನಂದನ್‌

ಆಗುಂಬೆ ಹೊಸ ಸ್ವರೂಪ ನೀಡಿದ್ದ ಯುವ ಆಡಳಿತಗಾರ
ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ ಕ್ಷೇತ್ರದಲ್ಲಿ ಅತ್ಯಧಿಕ ಮತ

ತೀರ್ಥಹಳ್ಳಿ ತಾಲ್ಲೂಕಿನ ಅತ್ಯಂತ ಭರವಸೆಯ ಯುವ ನಾಯಕರಲ್ಲಿ ಒಬ್ಬರಾದ ಹಸಿರುಮನೆ ನಂದನ್‌ ಇತ್ತೀಚೆಗೆ ನಡೆದ ಮ್ಯಾಮ್ಕೋಸ್‌ ಚುನಾವಣೆಯಲ್ಲಿ ಸಹಕಾರ ಭಾರತಿಯಿಂದ ಸ್ಪರ್ಧಿಸಿ ಒಟ್ಟಾರೆ ಎಲ್ಲಾ ಅಭ್ಯರ್ಥಿಗಳಿಂದಲೂ ಅತ್ಯಧಿಕ ಮತ ಪಡೆಯುವ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಇದೇ ಮೊದಲ ಬಾರಿ ಮ್ಯಾಮ್ಕೋಸ್‌ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ವಿಶೇಷವಾಗಿದೆ.

ಬಿಜೆಪಿಯ ಚುರುಕಿನ ಯುವ ನಾಯಕನಾಗಿರುವ ಹಸಿರುಮನೆ ನಂದನ್‌, 2004ರಲ್ಲಿಯೇ ಆಗುಂಬೆ ಗ್ರಾಮ ಪಂಚಾಯಿತಿ ಸದಸ್ಯನಾಗುವ ಮೂಲಕ ಚಿಕ್ಕ ಪ್ರಾಯದಲ್ಲಿಯೇ ಸಾರ್ವಜನಿಕ ಬದುಕಿಗೆ ಕಾಲಿಟ್ಟವರು ಅಲ್ಲಿಂದ 2019ರ ತನಕವೂ ಸದಸ್ಯ, ಉಪಾಧ್ಯಕ್ಷ, ಅಧ್ಯಕ್ಷ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದವರು. 2006 ರಿಂದ 2008 ಹಾಗೂ 2015 ರಿಂದ 2020ರ ವರೆಗೆ ಆಗುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಆಗುಂಬೆ ಪಟ್ಟಣಕ್ಕೆ ಹೊಸ ಸ್ವರೂಪ ನೀಡಿದ ಹೆಗ್ಗಳಿಕೆ ಅವರದ್ದು.

ತನ್ನ ಪ್ರಾಕೃತಿಕ ಸೌಂದರ್ಯದ ಮೂಲಕ ಜಗತ್ತಿನ ಗಮನ ಸೆಳೆದಿದ್ದರೂ ಆಗುಂಬೆ ಅಲ್ಲಿಯವರೆಗೆ ಅಕ್ಷರಶಃ ಹೇಳಿಕೊಳ್ಳುವಂತಹ ಮೂಲ ಸೌಕರ್ಯ ಇಲ್ಲದ ಊರಾಗಿತ್ತು. ಶೋಚನೀಯ ಪರಿಸ್ಥಿತಿಯಲ್ಲಿದ್ದ ಬಸ್‌ ನಿಲ್ದಾಣದ ಮೂಲಕ ಕೇವಲ 75 ಸಾವಿರ ರೂಪಾಯಿ ಆದಾಯ ಬರುತ್ತಿತ್ತು. ಆ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಅಂದಿನ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ನೆಚ್ಚಿನ ಯುವ ನಾಯಕರಲ್ಲಿ ಒಬ್ಬರಾದ ನಂದನ್‌ ಆ ಪ್ರಭಾವ ಉಪಯೋಗಿಸಿಕೊಂಡು ಆರಗ ಜ್ಞಾನೇಂದ್ರ, ಬಿ.ವೈ.ರಾಘವೇಂದ್ರರ ಪ್ರೋತ್ಸಾಹದೊಂದಿಗೆ ನಿರೀಕ್ಷೆಗೂ ಮೀರಿದ ಅನುದಾನ ತಂದು ಆಗುಂಬೆ ಬಸ್‌ ನಿಲ್ದಾಣವನ್ನು ಸಂಪೂರ್ಣವಾಗಿ ಸುಸಜ್ಜಿತವಾಗಿ ಮರು ನಿರ್ಮಾಣ ಮಾಡಿದ್ದಲ್ಲದೇ ಅನೇಕ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಈಗ ವಾರ್ಷಿಕ 20 ಲಕ್ಷ ರೂಪಾಯಿ ಆದಾಯ ಅವುಗಳಿಂದ ಸಂಗ್ರಹವಾಗುವ ಹಂತಕ್ಕೆ ತಂದು ನಿಲ್ಲಿಸಿದವರು.

ಈಗ ಪ್ರಯಾಣಿಕರಿಗೆ ಅಲ್ಲಿ ಉತ್ತಮ ಹೋಟೆಲ್‌ ಸೇವೆ ದೊರೆಯುತ್ತಿದೆ. ಇದಲ್ಲದೇ ಹೊಸೂರಿನ ಸಮೀಪ ಆಯುರ್ವೇದಿಕ್‌ ಡೆಮೋ ಗಾರ್ಡನ್‌, ಗುಡ್ಡೇಕೇರಿ ಹಾಗೂ ಹೊಸೂರು ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಿದ್ದು, ದೋಣಿಹಕ್ಕಲು, ಕಾರೇಮನೆಯಂತಹ ಕುಗ್ರಾಮಗಳಿಗೆ ನೀರು, ರಸ್ತೆಯ ಸೌಕರ್ಯ ಒದಗಿಸಿಕೊಟ್ಟಿದ್ದು, ಕುವೆಂಪು ಹೆಸರಿನಲ್ಲಿ ಹೊಸೂರಿನಲ್ಲಿ ಸಭಾ ಭವನ ನಿರ್ಮಿಸಿದ್ದು ಇಂತಹ ಅನೇಕ ಜನಪರ ಕಾರ್ಯಗಳನ್ನು ನಂದನ್‌ ತಮ್ಮ ಅಧಿಕಾರದ ಅವಧಿಯಲ್ಲಿ ಮಾಡುವ ಮೂಲಕ ಆ ಭಾಗದಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಆಗುಂಬೆಯಲ್ಲಿಯೂ ಸಹ ಕುಡಿಯುವ ನೀರಿನ ಹಾಹಾಕಾರ ಉಂಟಾದಾಗ ತಮ್ಮ ಸ್ವಂತ ಖರ್ಚಿನಲ್ಲಿ ಬೋರ್‌ವೆಲ್‌ ಕೊರೆಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದರು.

ಮೂಲತಃ ಬಿಜೆಪಿ ತತ್ವ ಸಿದ್ಧಾಂತಗಳ ರಾಜಕಾರಣಿಯಾದರೂ ಎಲ್ಲಾ ಜಾತಿ, ಮತ, ಧರ್ಮ ಹಾಗೂ ಪಕ್ಷದವರೊಂದಿಗೆ ಅತ್ಯಂತ ಸ್ನೇಹಮಯಿಯಾಗಿ ನಡೆದುಕೊಳ್ಳುವ ನಂದನ್‌ ಇದೀಗ ಸಹಕಾರಿ ಕ್ಷೇತ್ರದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಮ್ಯಾಮ್ಕೋಸ್‌ ನಿರ್ದೇಶಕನಾಗಿ ಅತಿ ಹೆಚ್ಚಿನ ಮತ ಪಡೆಯುವ ಮೂಲಕ ಸಹಕಾರಿ ವಲಯಕ್ಕೆ ಕೂಡ ಎಲ್ಲರು ಗಮನಿಸುವ ಹಾಗೆ ಭರ್ಜರಿಯಾಗಿ ಪ್ರವೇಶಿಸಿದ್ದಾರಲ್ಲದೇ ಮಹತ್ವದನ್ನು ಸಾಧಿಸುವ ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post