ಮಂತ್ರ ಮಾಂಗಲ್ಯದ ಮೂಲಕ ಜೊತೆಯಾದ ಸಿಂಚನ ದರ್ಶನ

ಅವಸರವಿಲ್ಲ ಆಡಂಬರವೂ ಇಲ್ಲ….

ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ… ಇದು ಕುವೆಂಪುರವರ ಜಗತ್ಪಸಿದ್ಧ “ಮಲೆಗಳಲ್ಲಿ ಮದುಮಗಳು” ಕಾದಂಬರಿಯ ಒಂದು ಅರ್ಥಪೂರ್ಣ ಸಾಲು.

ಕಳೆದ ಶುಕ್ರವಾರ ಕುಪ್ಪಳಿಯ ಹೇಮಾಂಗಣದಲ್ಲಿ ಈ ಸಾಲಿಗೆ ಪೂರಕವಾದ ವಾತಾವರಣ ಇತ್ತು. ಪತ್ರಕರ್ತ ಕೋಣಂದೂರು ಮುರುಘರಾಜ್‌ ಮತ್ತು ನಾಗರತ್ನ ದಂಪತಿಗಳ ಮಗಳು ಸಿಂಚನ ಹಾಗೂ ಬೆಂಗಳೂರಿನ ವಿ.ಬೋರೆಗೌಡ ಮತ್ತು ಸರೋಜ ದಂಪತಿಗಳ ಮಗ ದರ್ಶನ ಅವರು ಮಂತ್ರ ಮಾಂಗಲ್ಯದ ಮೂಲಕ ಭವಿಷ್ಯದ ಬಾಳನ್ನು ಹಂಚಿಕೊಳ್ಳುವ ಜೊತೆಗಾರರಾದರು.

ಸಾಂಪ್ರದಾಯಿಕ ಮದುವೆಗಳಲ್ಲಿ ಕಂಡು ಬರುವ ಗಡಿಬಿಡಿ ಅರ್ಥವೇ ಆಗದ ಧಾವಂತ ಅಲ್ಲಿರಲಿಲ್ಲ. ಹುಡುಗ ಹಾಗೂ ಹುಡುಗಿ ಎರಡೂ ಕಡೆಯವರು ಶಾಂತಚಿತ್ತರಾಗಿ ದಾಂಪತ್ಯದ ಬದುಕಿಗೆ ಹೊಸ ಅರ್ಥವನ್ನೇ ಕಲ್ಪಿಸಿದ ಅದನ್ನೊಂದು ಆಧ್ಯಾತ್ಮದ ಹಂತಕ್ಕೆ ಕೊಡೊಯ್ದ ಮಂತ್ರ ಮಾಂಗಲ್ಯ ವಿವಾಹಕ್ಕೆ ಸಂಭ್ರಮದಿಂದ ಸಾಕ್ಷಿಯಾದರು.

ಸರಳವಾದ ವಿವರಣೆ ಮೂಲಕ ಮಂತ್ರ ಮಾಂಗಲ್ಯ ಆಶಯವನ್ನು ನಿವೃತ್ತ ಪ್ರಾಂಶುಪಾಲ ಬಿ.ಗಣಪತಿ ಉತ್ತುಂಗ ಸರಳವಾಗಿ ಮನಮುಟ್ಟುವಂತೆ ವಿವರಿಸಿದರೆ ಉಪನ್ಯಾಸಕ ಬಿದರಗೋಡು ನಾಗೇಶ್‌ ಅದಕ್ಕೆ ಪೂರಕವಾದ ನಿರೂಪಣೆಯೊಂದಿಗೆ ಸಹಕರಿಸಿದರು. ಮಂತ್ರಮಾಂಗಲ್ಯವೆಂದರೆ ಈಗಿನ ಪೀಳಿಗೆ ಬಯಸುವ ಯಾವುದೇ ಅಬ್ಬರವಿಲ್ಲ. ಅದು ನೀರಸ ಎಂಬ ರೂಡಿಗತ ನಂಬಿಕೆಯನ್ನು ತೊಡೆದು ಹಾಕುವಂತೆ ಮಂತ್ರ ಮಾಂಗಲ್ಯ ವೇದ, ಉಪನಿಷತ್ತುಗಳ ಅರ್ಥಪೂರ್ಣ ಮಂತ್ರಗಳು ಹಾಗೂ ಗಂಡು ಹೆಣ್ಣು ಯಾವುದೇ ಭೇದ ಭಾವವಿಲ್ಲದೆ ಬದುಕಿನಲ್ಲಿ ಸಹಪಯಣಿಗರು ಆಗಿರಬೇಕು ಎಂಬ ಮಹಾನ್‌ ಆಶಯವನ್ನು ಹೊಂದಿದೆ ಎಂಬುದನ್ನು ಆಹ್ವಾನಿತರ ಎದುರು ಪ್ರಸ್ತುತ ಪಡಿಸುವಲ್ಲಿ ಯಶಸ್ವಿಯಾಯಿತು.

ಕಾರ್ಯಕ್ರಮಕ್ಕೂ ಮೊದಲು ಅತ್ಯಂತ ಅರ್ಥಪೂರ್ಣ ಗೀತೆಗಳನ್ನು ನಾದಮಣಿ ನಾಲ್ಕೂರು ಸಾಂದರ್ಭಿಕವಾಗಿ ಸಾದರಪಡಿಸಿ ಪ್ರೇಕ್ಷಕರ ಗಮನ ಸೆಳೆದರು. ಪತ್ರಕರ್ತ ಮೋಹನ್‌ ಮುನ್ನೂರು ಕುವೆಂಪು ಅವರ ತೆರೆದಿದೆ ಮನೆ ಬಾ ಓ ಅತಿಥಿಯನ್ನು ಆರಂಭಗೀತೆಯಾಗಿ ಹಾಡಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post