ಇದೇನು ಬಿಜೆಪಿ ಕಚೇರಿನಾ… -ರಾಘವೇಂದ್ರ ಶೆಟ್ಟಿ
ಮತ್ತೇನು ಕಾಂಗ್ರೆಸ್
ಕಚೇರಿನಾ… -ಸಂದೇಶ ಜವಳಿ
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆ ಅನುಭವಿ ಸದಸ್ಯ, ಮಾಜಿ ಅಧ್ಯಕ್ಷ ಸಂದೇಶ ಜವಳಿ ಮತ್ತು ನಾಮನಿರ್ದೇಶನಗೊಂಡ ಬಳಿಕ ಮೊದಲು ಬಾರಿಗೆ ಸಭೆಯಲ್ಲಿ ಭಾಗವಹಿಸಿದ ರಾಘವೇಂದ್ರ ಶೆಟ್ಟಿ ನಡುವಿನ ತೀವ್ರ ಮಾತಿನ ಹಣಾಹಣಿಗೆ ಕಾರಣವಾಯಿತು. ಕಲಹದ ಮೂಲ ಇತ್ತೀಚೆಗೆ ದಸರಾ ಉತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಹುಲಿವೇಷ ಸ್ಪರ್ಧೆ ಅದಕ್ಕೆ 50 ಸಾವಿರ ರೂಪಾಯಿ ದೇಣಿಗೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ನೀಡಿರುವುದನ್ನು ಒಪ್ಪಲಾಗದು. ಅದು ಕಾಂಗ್ರೆಸ್ ಕಾರ್ಯಕ್ರಮದಂತಿತ್ತು ಎಂದು ಸಂದೇಶ ಜವಳಿ ಆಕ್ಷೇಪಿಸಿದರು. ಇದನ್ನು ವಿರೋಧಿಸಿದ ರಾಘವೇಂದ್ರ ಶೆಟ್ಟಿ ದಸರಾ ಉತ್ಸವಕ್ಕೆ ಪಟ್ಟಣ ಪಂಚಾಯಿತಿ ವತಿಯಿಂದ 2.5 ಲಕ್ಷ ನೀಡಲಾಗಿದೆ. ಆದರೆ ಆಹ್ವಾನ ಪತ್ರಿಕೆ ಮುದ್ರಿಸುವ ಸಂದರ್ಭ ಅಧ್ಯಕ್ಷರನ್ನು ಕಡೆಗಣಿಸಲಾಗಿದೆ. ಅಲ್ಲದೇ ದಸರಾ ಉತ್ಸವದ ವೇದಿಕೆಯಲ್ಲಿ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್‌ರಿಗೆ ವೇದಿಕೆ ಕಲ್ಪಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಧ್ಯಕ್ಷರನ್ನು ಕಡೆಗಣಿಸಲಾಗಿದೆ. ಇದು ಬಿಜೆಪಿ ಕಾರ್ಯಕ್ರಮವೇ. ಅಲ್ಲದೇ ಹುಲಿವೇಷ ಸ್ಪರ್ಧೆಯಲ್ಲಿ ಭಾಗವಹಿಸಿದವರು ಅತ್ಯಂತ ಹಿಂದುಳಿದ ವರ್ಗದವರು. ಇದನ್ನು ನಿಮಗೆ ಸಹಿಸಲು ಆಗಲಿಲ್ಲವೇ ಎಂದು ತಿರುಗಿ ಪ್ರಶ್ನಿಸಿದರು.
ಬಿಜೆಪಿ ಸದಸ್ಯರು ಸಂದೇಶ ಜವಳಿ ಅವರ ಜೊತೆಗೆ ನಿಂತರೆ ಕಾಂಗ್ರೆಸ್ ಸದಸ್ಯರು ರಾಘವೇಂದ್ರ ಶೆಟ್ಟಿ ಅವರ ಉತ್ತರವನ್ನು ಬೆಂಬಲಿಸಿದರು. ಇದಕ್ಕೂ ಮೊದಲು ಸಂದೇಶ ಜವಳಿ ಸಾಮಾನ್ಯ ವರ್ಗದ ಜಿ.ಕೆಟಗೆರಿ 300 ನಿವೇಶನವನ್ನು ಇಂದಿಗೂ ಹಂಚಿಕೆ ಮಾಡದೆ ಬಾಕಿ ಉಳಿಸಿಕೊಂಡಿದೆ ಎಂದು ತಕರಾರು ತೆಗೆದರು. ಇದಕ್ಕೆ ಪ್ರತ್ಯುತ್ತರ ನೀಡಿದ ರಹಮತ್ ಉಲ್ಲಾ ಅಸಾದಿ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಸೈಟ್ ಹಂಚಿಕೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಕ್ಯಾಬಿನೇಟ್ ಅಂಗೀಕಾರಗೊಂಡಿದೆ. ಶೀಘ್ರ ಜಿ.ಕೆಟಗರಿ ನಿವೇಶನ ಹಂಚುತ್ತೇವೆ ಎಂದು ಬಾರಿ ಪ್ರಚಾರ ಪಡೆದುಕೊಂಡಿದ್ದರು. ಅವರು ಶಾಸಕರಾಗಿದ್ದಾಗ ಅದನ್ನು ಈಡೇರಿಸಬೇಕಿತ್ತು ಎಂದರು. ಆಗ ಧ್ವನಿಗೂಡಿಸಿದ ರಾಘವೇಂದ್ರ ಶೆಟ್ಟಿ ಸ್ಥಳೀಯ ಪತ್ರಿಕೆಗಳಲ್ಲಿ ಸಂದೇಶ ಜವಳಿ ಮತ್ತು ಸೊಪ್ಪುಗುಡ್ಡೆ ರಾಘವೇಂದ್ರ ವಾರಗಟ್ಟಲೇ ಜಾಹೀರಾತು ನೀಡಿದ್ದರು. ಈಗ ತಪ್ಪನ್ನು ಕಾಂಗ್ರೆಸ್ ಪಕ್ಷದ ಮೇಲೇಕೆ ಹೊರೆಸುತ್ತಿದ್ದೀರಿ ಎಂದಾಗ ಮತ್ತೆ ಮಾತಿನ ಕೋಲಾಹಲ ಸೃಷ್ಟಿಯಾಗಿ ಸಂದೇಶ ಜವಳಿ ವೈಯಕ್ತಿಕ ಹೆಸರು ಪ್ರಸ್ತಾಪಿಸಿ ಉತ್ತರಿಸಬಾರದು ಎಂದು ಏರು ಧ್ವನಿಯಲ್ಲಿ ವಾದಿಸಿದರು. ಅದೇ ರೀತಿ ರಾಘವೇಂದ್ರ ಶೆಟ್ಟಿ ಮಾತನಾಡಿದಾಗ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ನಿಮಗೆ ಮನಸ್ಸಿಗೆ ಬಂದಂತೆ ಮಾತನಾಡಲು ಇದು ಬಿಜೆಪಿ ಕಚೇರಿಯಲ್ಲ ಎಂದು ರಾಘವೇಂದ್ರ ಶೆಟ್ಟಿ ಅಬ್ಬರಿಸಿದರು. ಅದೇ ಶೈಲಿಯಲ್ಲಿ ಉತ್ತರಿಸಿದ ಸಂದೇಶ ಜವಳಿ ನೀವು ಹೇಳಿದಂತೆ ಕೇಳಲು ಇದೇನು ಕಾಂಗ್ರೆಸ್ ಕಚೇರಿಯಲ್ಲ. ನಾವು ಯಾರಿಗೂ ಹೆದರುವುದಿಲ್ಲ ಎಂದರು.
ಸಾಧಾರಣವಾಗಿ ಅತ್ಯಂತ
ಅನುಭವಿ ಸದಸ್ಯರಾಗಿರುವ ಸಂದೇಶ ಜವಳಿ ಕರಾರು ವಕ್ಕಾದ ಅಂಕಿಅಂಶ ಸಮೇತ ವಾದಕ್ಕೆ ಇಳಿದರೆ ಆಡಳಿತ ಪಕ್ಷ
ಸದಾಕಾಲ ಇರಿಸುಮುರುಸು ಅನುಭವಿಸುತ್ತಿತ್ತು ಮತ್ತು ಅಂತಿಮವಾಗಿ ಇಲ್ಲಯವರೆಗೆ ಅಧ್ಯಕ್ಷ ರಹಮತ್ ಉಲ್ಲಾ
ಅಸಾದಿ ಆಡಳಿತ ಪಕ್ಷವನ್ನು ಸಮರ್ಥಿಸಿಕೊಳ್ಳುವ ಸಂದರ್ಭ ಒದಗಿಬರುತ್ತಿತ್ತು. ಆದರೆ ಇಂದಿನ ಸಭೆ ನೇರಾ
ನೇರ ಸಂದೇಶ ಜವಳಿ ಮತ್ತು ರಾಘವೇಂದ್ರ ಶೆಟ್ಟಿ ಸವಾಲು, ಪ್ರತಿಸವಾಲಿಗೆ ಸಾಕ್ಷಿಯಂತಿತ್ತು.
ಹಿಂದಿನ ಬಿಜೆಪಿ
ಅವಧಿಯಲ್ಲಿ ಅವೈಜ್ಞಾನಿಕವಾಗಿ ಸಾರ್ವಜನಿಕ ಶೌಚಾಲಯ ಗುಂಡಿ ನಿರ್ಮಿಸಲಾಗಿದೆ. ಅದರ ಶುಚಿತ್ವ ಕಾಪಾಡುವ
ಸವಾಲು ಪೌರಕಾರ್ಮಿಕರ ಮೇಲಿದೆ. ಅದನ್ನು ದುರಸ್ಥಿಗೊಳಿಸಬೇಕು ಪೌರ ಕಾರ್ಮಿಕರ ಕೆಲಸ ಕಡಿಮೆ ಮಾಡಬೇಕು.
ಪಟ್ಟಣದಲ್ಲಿ ಸುಸಜ್ಜಿತ ನಾಮಫಲಕ ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಸಿಸಿಟಿವಿ
ಇಲ್ಲದೆ ತೊಂದರೆಯಾಗುತ್ತಿದೆ. ಸಿಸಿಟಿವಿ ನಿರ್ಮಾಣ ಕಾಮಗಾರಿ ಅಗತ್ಯವಾಗಿದ್ದು ಶೀಘ್ರ ಅನುಷ್ಟಾನಕ್ಕೆ
ಸಭೆ ಅನುಮೋದನೆ ನೀಡಬೇಕು ಎಂದು ಅಧ್ಯಕ್ಷ ಟಿ.ರಹಮತ್ ಉಲ್ಲಾ ಅಸಾದಿ ಸಭೆಯಲ್ಲಿ ವಿಚಾರ ಮಂಡಿಸಿದರು.
ಉಪಾಧ್ಯಕ್ಷೆ ಗೀತಾ
ರಮೇಶ್, ಸದಸ್ಯರಾದ ಸುಶೀಲ ಶೆಟ್ಟಿ, ಶಬನಮ್, ಜಯಪ್ರಕಾಶ್ ಶೆಟ್ಟಿ, ರವೀಶ್ ಭಟ್, ಜ್ಯೋತಿ ಮೋಹನ್,
ಯತಿರಾಜ್, ರತ್ನಾಕರ ಶೆಟ್ಟಿ, ಮಂಜುಳಾ ನಾಗೇಂದ್ರ, ಡಾ.ಅನಿಲ್ ಕುಮಾರ್, ವಿಲಿಯಂ ಮಾರ್ಟೀಸ್,
ನಮ್ರತ್ ಮುಖ್ಯಾಧಿಕಾರಿ ಡಿ.ನಾಗರಾಜ್ ಇದ್ದರು.