ಹುಂಡಿ ಹಣ ಎಣಿಕೆಯಲ್ಲೇ ನಡೆಯುತ್ತಿತ್ತಾ ದೋಖಾ...
ಹೊಟ್ಟೆಗೇನ್ ತಿಂತಾರಪ್ಪ ಇವರು....!
ಕಂಪ್ಲೆಂಟ್ ಕೊಡಲು ತಹಶೀಲ್ದಾರ್ ಹಿಂಜರಿಯುತ್ತಿರುವುದು ಏಕೆ...?
ತೀರ್ಥಹಳ್ಳಿ ತಾಲ್ಲೂಕು ಧಾರ್ಮಿಕ ಸೌಹಾರ್ದ ಕೇಂದ್ರ, ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ಹೊಸ ದಂಧೆಯೊಂದು ಬಹಿರಂಗಗೊಂಡಿದೆ. ಹುಂಡಿ ಹಣ ಎಣಿಕೆಯಲ್ಲಿ ಭಾರಿ ಪ್ರಮಾಣದ ಮೋಸ ನಡೆಯುತ್ತಿದ್ದು ಇದೀಗ ದೂರು ಕೊಡುವವರು ಯಾರು ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.ವಾರ್ಷಿಕವಾಗಿ 2 ಕೋಟಿ ರೂಪಾಯಿಗೂ ಹೆಚ್ಚು ಹುಂಡಿ ಹಣ ಹಣಗೆರೆ ಮುಜರಾಯಿ ದೇವಸ್ಥಾನದಲ್ಲಿ ಸಂಗ್ರಹವಾಗುತ್ತಿದೆ. ತ್ರೈಮಾಸಿಕ ಎಣಿಕೆಯಲ್ಲಿ ಸರಾಸರಿ 50 ಲಕ್ಷ ಹಣ ಸಂಗ್ರಹಣೆಯಾಗುತ್ತಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಹುಂಡಿಹಣ ಸಂಗ್ರಹವಾಗುವ ಮುಜರಾಯಿ ದೇವಸ್ಥಾನಗಳಲ್ಲಿ ಹಣಗೆರೆ ಕೂಡ ಒಂದು.ತ್ರೈಮಾಸಿಕ ಹುಂಡಿ ಎಣಿಕೆಗೆ ಕೆಲವೊಮ್ಮೆ ತಾಲ್ಲೂಕು ಕಚೇರಿ ಖಾಲಿಯಾಗಿದೆ ಎಂಬಂತೆ ಅಧಿಕಾರಿಗಳು ಅಲ್ಲಿಗೆ ತೆರಳುತ್ತಾರೆ. ಕಂದಾಯ ಅಧಿಕಾರಿಗಳು ಬಹುತೇಕ ಈ ಸಂದರ್ಭದಲ್ಲಿ ಎಣಿಕೆ ಕಾರ್ಯಾಚರಣೆಗೆ ಧುಮುಕುತ್ತಾರೆ. ಸಾರ್ವಜನಿಕರು, ಆಡಳಿತ ಮಂಡಳಿಗೆ ಕಿಂಚಿತ್ತೂ ಅವಕಾಶ ನೀಡದೆ ಹಣವನ್ನು ಅಧಿಕಾರಿಗಳು ನ್ಯಾಯೋಚಿತವಾಗಿ ಎಣಿಸಿ ಮುಗಿಸುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುತ್ತದೆ. ಹೀಗೆ ಹಣ ಎಣಿಸುವಾಗ ಒಂದು ಲಕ್ಷ ಮೌಲ್ಯದ ಹಣದ ಕಟ್ಟುಗಳನ್ನು ಸಿದ್ಧಪಡಿಸಿ ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಾರೆ. ಇದಿಷ್ಟು ಹಣ ಎಣಿಕೆಯ ಸಂಕ್ಷಿಪ್ತ ಮಾಹಿತಿ.
ಆದರೆ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಲು ಸಜ್ಜಾಗಿರುವ ಈ ವಿಶೇಷ ಪ್ರಕರಣ ರಾಜ್ಯ ಸರ್ಕಾರ ಅಲ್ಲದೇ ರಾಜ್ಯದ ಹಲವು ಮುಜರಾಯಿ ದೇವಸ್ಥಾನಗಳ ಹುಂಡಿ ಎಣಿಕೆಯ ಕುರಿತು ವಿಪರೀತ ಪ್ರಮಾಣದ ಅನುಮಾನ ಹುಟ್ಟುವಂತಿದೆ.ಗುರುವಾರ ಎಂದಿನಂತೆ ಹೊಸದಾಗಿ ಈಚೆಗೆ ಅಧಿಕಾರ ವಹಿಸಿಕೊಂಡ ತಹಶೀಲ್ದಾರ್ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಬೆಳಗ್ಗೆಯಿಂದ ಹುಂಡಿ ಎಣಿಕೆ ಕಾರ್ಯಾಚರಣೆಯಲ್ಲಿದೆ. ಸಂಜೆಯ ವೇಳೆಗೆ ಇನ್ನೇನು ಹುಂಡಿ ಹಣ ಮುಕ್ತಾಯ ಆಗಲಿದೆ ಎನ್ನುವಾಗ ನೂತನವಾಗಿ ಸರ್ಕಾರ ರಚನೆ ಮಾಡಿದ ಆಡಳಿತ ಮಂಡಳಿಗೆ ಅನುಮಾನ ಸೃಷ್ಟಿಯಾಗಿದೆ. ಅದಕ್ಕೆ ತಕ್ಕಂತೆ ಒಂದು ಲಕ್ಷ ಮೌಲ್ಯದ ಹಣದ ಕಟ್ಟುಗಳನ್ನು ಎಣಿಸಿದಾಗ ಹೆಚ್ಚುವರಿ ಹಣ ಇರುವುದು ಪತ್ತೆಯಾಗಿದೆ. ಒಂದು ಲಕ್ಷ ಕಟ್ಟಿನೊಳಗೆ 2, 3, 4 ಸಾವಿರಕ್ಕೂ ಹೆಚ್ಚು ಹಣ ಲಭ್ಯವಾಗಿದೆ. ಇಂತಹ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಅಲ್ಲಿ ಇರುವ ಬ್ಯಾಂಕ್ ಸಿಬ್ಬಂದಿಗಳು ಜಮೆ ಮಾಡಿಕೊಂಡ ನಂತರ ಹೆಚ್ಚುವರಿ ನಗದು ಏನಿದೆ ಅವುಗಳನ್ನು ಕಂದಾಯ ಅಧಿಕಾರಿಗಳಿಗೆ ಹಿಂದಿರುಗಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.ತೀರ್ಥಹಳ್ಳಿ ತಾಲ್ಲೂಕಿನ ತಹಶೀಲ್ದಾರ್ ಆಗಿ ಮೊದಲ ಬಾರಿ ಹಣಗೆರೆ ಹುಂಡಿ ಎಣಿಕೆಗೆ ಹೋಗಿದ್ದ ತಹಶೀಲ್ದಾರ್ ದಂಧೆಯ ಕರಾಳತೆ ತಿಳಿಯುತ್ತಿದ್ದಂತೆ ಬೆಚ್ಚಿ ಬಿದ್ದಿದ್ದಾರೆ. ದಂಧೆಯ ಬಗ್ಗೆ ಏನೇನು ಗೊತ್ತಿರದಿದ್ದರು ತಂಡದ ನೇತೃತ್ವ ವಹಿಸಿಕೊಂಡ ತಹಶೀಲ್ದಾರ್ ಪ್ರಕರಣವನ್ನು ಹೇಗೆ ಬೇಧಿಸಬೇಕು ಎಂಬ ಸುಳಿಗೆ ಸಿಲುಕಿದಂತಿದೆ.ಹಲವಾರು ವರ್ಷಗಳಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಜಾಂಡಾ ಹೊಡೆದುಕೊಂಡು ದಂಧೆಯ ವ್ಯೂಹ ರಚಿಸಿದ ಅಧಿಕಾರಿಗಳಿಗೆ ಹುಂಡಿ ಎಣಿಕೆ ಸಂದರ್ಭಕ್ಕಾಗಿ ಬಕಪಕ್ಷಿಯಂತೆ ಕಾಯುತ್ತಿರುತ್ತಾರೆ. ಹತ್ತು ರೂಪಾಯಿ ನೋಟಿನಿಂದ ಹಿಡಿದು 500 ರೂಪಾಯಿ ನೋಟಿನ ವರೆಗೆ ಹಣ ಇರುವುದರಿಂದ ನಿರೀಕ್ಷೆಯಂತೆ ನೋಟುಗಳನ್ನು ನೋಡಿ ಹಣವನ್ನು ಅಂದಾಜು ಮಾಡುವುದು ಬಹಳ ಕಷ್ಟದ ಸಂಗತಿ. ಇದರ ಲಾಭವನ್ನು ಬಳಸಿಕೊಳ್ಳುತ್ತಿರುವ ಕದೀಮ ಗ್ಯಾಂಗುಗಳು ರೊಕ್ಕ ಗಿಟ್ಟಿಸಿಕೊಳ್ಳಲು ಹೆಚ್ಚು ತಂತ್ರಗಾರಿಕೆ ಹೂಡುತ್ತಾರೆ. ತಾವೇ ಬ್ಯಾಂಕಿಗೆ ತೆರಳಿ ಜಮೆ ಮಾಡುವುದರಿಂದ ಅದರ ಲಾಭಗಳ ಬಗ್ಗೆ ಒಳ್ಳೆಯ ಮಾಹಿತಿ ಹೊಂದಿರುತ್ತಾರೆ. ಸರ್ಕಾರ ಸಂಬಳ ಕೊಟ್ಟು ಹೊಟ್ಟೆ ಬಟ್ಟೆಗೆ ಕಡಿಮೆ ಮಾಡಿಕೊಳ್ಳಬೇಡಿ, ಬಡವರು, ಶೋಷಿತರ ಸೇವೆ ಮಾಡಿ ಎಂದು ಅತ್ಯುತ್ತಮ ವೇತನ ನೀಡುತ್ತಾರೆ. ಅಲ್ಲದೇ ಈಚೆಗೆ ಸರ್ಕಾರ ಏಳನೆ ವೇತನ ನೀಡಲು ಆರಂಭಿಸಿದ್ದು ಅಧಿಕಾರಿಗಳ ಪಾಲಿಗಂತು ಲಾಟರಿಯಾಗಿದೆ.ಆದರೂ ಕೂಡ ಜನರ ಕೈ ಬಾಯಿ ನೋಡುವ ಅಧಿಕಾರಿಗಳು ಹೀಗೆ ಸಿಕ್ಕ ಸಿಕ್ಕ ಸ್ಥಳಗಳಲ್ಲಿ ಕರಾಮತ್ತು ಪ್ರದರ್ಶಿಸಿ ರೊಕ್ಕ ಲಪಟಾಯಿಸುವ ಉಪಾಯ ಹೂಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಹಣಗೆರೆ ಹುಂಡಿ ಎಣಿಕೆ ಪ್ರಕರಣ ಇಂಬು ಕೊಡುವಂತಿದೆ.
ದೇವಸ್ಥಾನದ ಆಡಳಿತ ಮಂಡಳಿ ಹಣವನ್ನು ದೇವಸ್ಥಾನದಲ್ಲಿ ಇಡುವಂತಿಲ್ಲ. ಇದನ್ನು ತಾಲ್ಲೂಕು ಕಚೇರಿಗೆ ತೆಗೆದುಕೊಂಡು ಹೋಗಿ. ಇಲ್ಲವೇ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗುವಂತೆ ಪಟ್ಟು ಹಿಡಿದಿದೆ. ನೂತನವಾಗಿ ಆಗಮಿಸಿರುವ ತಹಶೀಲ್ದಾರ್ ಅವರಿಗೆ ತಮ್ಮ ಇಲಾಖೆ ನೌಕರರ ವಿರುದ್ಧವೇ ದೂರು ದಾಖಲಿಸಬೇಕೆಂಬ ಸಂಕಟ ಎದುರಾಗಿದೆ. ಇನ್ನೊಂದು ಕಡೆಯಲ್ಲಿ ಅನೇಕ ವರ್ಷಗಳಿಂದ ಬ್ಯಾಂಕ್ ಕೂಡ ಇದಕ್ಕೆ ನೆರವಾಗಿದ್ದು ಅವರಿಗೂ ಶಿಕ್ಷೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಹಣಗೆರೆ ಆಡಳಿತವನ್ನು ನೋಡಿಕೊಳ್ಳುವ ಉದ್ದೇಶದಿಂದ ಅಲ್ಲಿಗೆ ಆಡಳಿತ ಅಧಿಕಾರಿ ನೇಮಕ ಮಾಡಲಾಗಿದೆ. ಈ ಪ್ರಕರಣದಲ್ಲಿ ಅವರ ಪಾತ್ರ ಏನು. ಎಷ್ಟು ವರ್ಷಗಳಿಂದ ಈ ದಂಧೆ ನಡೆಯುತ್ತಿದೆ. ದಂಧೆಯ ರುವಾರಿಗಳು ಯಾರು. ಸರ್ಕಾರಕ್ಕೆ ಎಷ್ಟು ಕೋಟಿ ಹಣ ಇದೂವರೆಗೆ ನಷ್ಟವಾಗಿದೆ. ಹಣಗೆರೆ ಭಕ್ತರಿಗೆ ಯಾವ ರೀತಿಯ ಅನ್ಯಾಯ ನಡೆದಿದೆ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂಬ ಬಗ್ಗೆ ಆಗ್ರಹ ಸ್ಥಳೀಯವಾಗಿ ಕೇಳಿ ಬರುತ್ತಿದೆ.