ಪ್ರಾಮಾಣಿಕ ಅಡಿಕೆ ಬೆಳೆಗಾರರು ಬಲಿ ?
ಸಾವಿರಾರು ಕ್ವಿಂಟಾಲ್ ಕಲಬೆರಕೆ ಅಡಿಕೆ ನಿರಾಯಾಸ ವ್ಯಾಪಾರ ?
ದಯವಿಟ್ಟು ಕಲಬೆರಕೆ ಅಡಿಕೆ ಕಳುಹಿಸಬೇಡಿ ಅದರಿಂದ ಅಡಿಕೆಯ ಧಾರಣೆ ಕುಸಿಯುತ್ತದೆ ಮತ್ತು ಮಲೆನಾಡಿನ ಸಾಂಪ್ರದಾಯಿಕ ಅಡಿಕೆಗೆ ಗೌರವ ಕಡಿಮೆಯಾಗುತ್ತದೆ ಎಂದ ಕೆಲವು ತಿಂಗಳ ಹಿಂದೆ ಶಾಸಕ ಆರಗ ಜ್ಞಾನೇಂದ್ರ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸಭೆಗಳಲ್ಲಿ ಹೇಳಿದ್ದರು. ಅದಕ್ಕೆ ಕಾರಣ ಕಳೆದ ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗೋಟನ್ನು ಪಾಲಿಶ್ ಮಾಡಿ ಬೇಯಿಸಿ ಅದನ್ನು ಮಾರುಕಟ್ಟೆಗೆ ರಾಶಿ ಇಡಿ ಜೊತೆ ಕಲಬೆರಕೆ ಮಾಡಿ ಬಿಡಲಾಗಿತ್ತು ಎಂಬ ಸಮಾಚಾರ.
ಅಡಿಕೆ ತೋಟ ವಿಸ್ತರಣೆ ಆದಂತೆ ಆಳುಗಳ ಸಂಖ್ಯೆ ಕಡಿಮೆಯಾಗಿದೆ. ಜೊತೆಗೆ ಅತ್ಯಂತ ಸಾಂಪ್ರದಾಯಿಕವಾಗಿ ನೈಸರ್ಗಿಕ ಅಡಿಕೆ ಚೊಗರಿನ ಮೂಲಕ ಬೇಯಿಸುವ ಪದ್ಧತಿಯೂ ಈಗ ಅಧಿಕ ಪ್ರಮಾಣದ ಬೆಳೆಯ ಕಾರಣ ಸಾಧ್ಯವಾಗುತ್ತಿಲ್ಲ. ಜೊತೆಗೆ ಹೆಚ್ಚಿನವರು ಅಡಿಕೆಯನ್ನು ಚೇಣಿಯವರಿಗೆ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಅಸಲು ಅಡಿಕೆಯ ಸಮಸ್ಯೆ ಆರಂಭಗೊಳ್ಳುವುದೇ ಇಲ್ಲಿಂದ ಅತ್ಯಧಿಕ ಲಾಭದ ಆಸೆಯಿಂದ ಎಲ್ಲರೂ ಅಲ್ಲದಿದ್ದರೂ ಕೆಲವರಾದರೂ ಅಡಿಕೆಗೆ ಬಣ್ಷ ಬರಲೆಂದು ಕೃತಕ ರಾಸಾಯನಿಕ ಅಥವಾ ರೆಡ್ ಆಕೈಡ್ ಸುರಿಯುವುದು ಸಾಮಾನ್ಯವಾಗಿದೆ. ಹಾಗೆ ರೆಡ್ ಆಕ್ಸೈಡ್ ಸುರಿದ ಅಡಿಕೆ ಒಳ್ಳೆಯ ಹೊಳಪು ಇರುವುದರಿಂದ ಮಂಡಿಗಳಲ್ಲಿ ಉತ್ತಮ ಧಾರಣೆ ದೊರೆಯುತ್ತದೆ. ಇವರ ಜೊತೆಗೆ ದೊಡ್ಡ ದೊಡ್ಡ ಮಂಡಿಯವರು ಕೂಡ ಕಡಿಮೆ ಬೆಲೆಗೆ ಕೊಂಡ ರಾಶಿ ಇಡಿ ಮತ್ತು ಬೆಟ್ಟೆ ಅಡಿಕೆಯನ್ನು ರೆಡ್ ಆಕ್ಸೈಡ್ ಬಳಿದೆ ಅಧಿಕ ದರಕ್ಕೆ ಮಾರಾಟ ಮಾಡುವ ಪ್ರಕರಣಗಳು ಕೂಡ ಹೆಚ್ಚಾಗಿದೆ. ಈ ದಂಧೆಯ ಮೂರನೇ ಕೊಂಡಿ ವರ್ತಕರು ದೊಡ್ಡ ಮಟ್ಟದಲ್ಲಿ ಅಡಿಕೆಯನ್ನು ಖರೀದಿಸುವ ಇವರು ತಮ್ಮ ನಿಗೂಢ ಸ್ಥಳಗಳಲ್ಲಿ ಇರುವ ಗೋಡೌನ್ನಲ್ಲಿ ರೆಡ್ ಆಕ್ಸೈಡ್ ಬಳಿದು ಅದನ್ನು ಉತ್ತರ ಭಾರತದ ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ ಮತ್ತು ಕಳೆದ ಬಾರಿ ಹಿಂದಿರುಗಿ ಬಂದಿರುವುದು ಮತ್ತು ಶಿರಸಿಯಲ್ಲಿ ಸೀಜ್ ಆಗಿದೆ ಎನ್ನಲಾದ ಅಡಿಕೆ ಇದೇ ರೀತಿಯದ್ದು.
ಹೀಗೆ ದೊಡ್ಡ ಮಟ್ಟದಲ್ಲಿ ಅಡಿಕೆಯನ್ನು ಖರೀದಿ ಮಾಡಿ ಕಲಬೆರಕೆ ಮಾಡುವ ವರ್ತರಕರು ಜಿಲ್ಲೆಯಾದ್ಯಂತ ಪ್ರಭಾವಿಗಳಾಗಿದ್ದು ಸಮಾಜದಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿರುತ್ತಾರೆ. ಹೆಚ್ಚಾಗಿ ಕ್ರೀಡೆ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಕಾರ್ಯಕ್ರಮಗಳಿಗೆ ಧಾರಾಳವಾಗಿ ಹಣ ನೀಡುತ್ತಾರೆ. ಮತ್ತು ಕೆಲವು ಸಹಕಾರಿ ಸಂಸ್ಥೆಗಳಲ್ಲಿ ನಿರ್ದೇಶಕರು, ನಾಮ ನಿರ್ದೇಶನ ಸದಸ್ಯರು, ಸದಸ್ಯರೂ ಆಗಿರುತ್ತಾರೆ. ಇವರು ಎಲ್ಲಾ ಕಾಲಕ್ಕೂ ಎಲ್ಲಾ ಪಕ್ಷದಲ್ಲಿಯೂ ಸಲ್ಲುತ್ತಾರೆ.
ಕೆಲವು ವರ್ಷಗಳ ಹಿಂದೆ ವರ್ತಕರು ಅಡಿಕೆ ಖರೀದಿಸುವಾಗ ಏನಾದರೂ ಕುಂಟು ನೆಪ ಹೇಳಿ ಬೆಳೆಗಾರರಿಂದ ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಖರೀದಿಸಿ ಬಳಿಕ ಅದನ್ನು ಆಳುಗಳ ಮೂಲಕ ಪುನಃ ಗ್ರೇಡಿಂಗ್ ಮಾಡಿ ಲಾಭಗಳಿಸುವ ಪ್ರಯತ್ನ ನಡೆಸುತ್ತಿದ್ದರು. ಆಗಲೂ ಕೂಡ ಕಲ್ಲುಗೋಟು (ಒಣಗಿದ ಬಿಳಿಗೋಟು) ಅಡಿಕೆಗೆ ನೈಸರ್ಗಿಕ ವಿಧಾನದಲ್ಲಿಯೇ ರಾಶಿ ಇಡಿಯಂತೆ ಬಣ್ಣ ಹಾಕುವ ಕಳ್ಳ ಮಾರ್ಗ ಅನುಸರಿಸುತ್ತಿದ್ದರು. ಅದು ಸ್ವಾಭಾವಿಕ ರಾಶಿ ಇಡಿಯೊಂದಿಗೆ ಬೆರೆತು ಅಧಿಕ ಬೆಲೆ ಗಿಟ್ಟಿಸಿಕೊಳ್ಳುತ್ತಿದ್ದರು.
ಆದರೆ ರೈತರ ಬದಲು ವರ್ತಕರು ಯಾವಾಗ ಅಡಿಕೆ ಮಂಡಿಗಳಲ್ಲಿ ಪ್ರವೇಶ ಪಡೆದರೋ ಇವರ ನೂರು, ಸಾವಿರಾರು ಚೀಲ ಅಡಿಕೆಗೆ ಬೆದರಿಯೋ ಅಥವಾ ದರ ನಿಗಧಿ ಮಾಡುವವರು ಆಮಿಷಕ್ಕೊಳಗಾಗಿಯೋ ಅಂದುಕೊಂಡ ಬೆಲೆಯಂತೂ ದೊರಕ ತೊಡಗಿತ್ತು. ಮತ್ತು ಇಲ್ಲಿಯವರೆಗೆ ಸಿಕ್ಕಿಬಿದ್ದಿರುವ ಈ ರೀತಿಯ ಕಲಬೆರೆಕೆಯ ವರ್ತಕರ ಸಂಖ್ಯೆ ತೀರಾ ಕಡಿಮೆ. ಆದರೆ ಈ ಚಕ್ರವ್ಯೂಹದೊಳಗೆ ಬಲಿಪಶು ಆಗಿದ್ದು ಕೂಡ ಮಾತ್ರ ಅತಿಸಣ್ಣ ಅಡಿಕೆ ಬೆಳೆಗಾರ. ಅತ್ತ ಮಂಡಿಯವರ ಶೋಷಣೆಗೆ ಒಳಗಾಗಿ ಮಾರಲು ಆಗದೆ ವಾಪಾಸ್ಸು ತೆಗೆದುಕೊಂಡು ಹೋಗಲು ಆಗದೆ ಅನೇಕ ರೈತರು ಕಳೆದ ಸಾಲಿನಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಸಾಧಾರಣವಾಗಿ ಬೆಳೆಗಾರರು ಕಲಬೆರಕೆ ಅಥವಾ ರೆಡ್ ಆಕ್ಸೈಡ್ ಬಳಿಯುವಂತಹ ಪಾಪದ ಕೆಲಸಕ್ಕೆ ಕೈಹಾಕುವುದು ತೀರಾ ಕಡಿಮೆ. ಅಂತಹ ಅಡ್ಡಮಾರ್ಗವೇನಿದ್ದರು ಖರೀದಿದಾರರು ಮತ್ತು ಚೇಣಿಯವರದ್ದೇ ಆಗಿರುತ್ತದೆ. ಈಗ ಸಮಸ್ಯೆ ಎದ್ದಿರುವುದು ಇದನ್ನು ಕಂಡು ಹಿಡಿಯುವವರು ಯಾರು ಮತ್ತು ಪ್ರಶ್ನಿಸುವವರು ಯಾರೆಂಬುದು.
ದೇಶದಲ್ಲಿ ಅತೀ ಹೆಚ್ಚು ಉತ್ತಮ ಧಾರಣೆಯ ಅಡಿಕೆ ಸಿಗುವುದು ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ. ಅಂತಹ ಅಡಿಕೆ ಗುಣಮಟ್ಟದಲ್ಲಿ ಸಿಗುತ್ತಿಲ್ಲ. ಕರ್ನಾಟಕದಿಂದ ಗುಟ್ಕಾ, ಪಾನ್ ಮಸಾಲ, ಔಷಧಿ ತಯಾರಿಕೆ ಸೇರಿದಂತೆ ಮುಂತಾದ ಕಾರಣಕ್ಕೆ ಹೊರ ರಾಜ್ಯ, ದೇಶಗಳಿಗೆ ರಪ್ತಾಗುವ ಇಲ್ಲಿನ ಅಡಿಕೆಯ ಮಾನ ಕಳೆಯುವ ಪ್ರಯತ್ನ ಕೂಡ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಕರ್ನಾಟಕದ ಅಡಿಕೆ ಗುಣಮಟ್ಟದಲ್ಲಿ ಇಲ್ಲ ಎಂಬ ಕಾರಣ ಮುಂದಿಟ್ಟು ವಿದೇಶಿ ಅಡಿಕೆಯನ್ನು ಅಮದು ಮಾಡಿಕೊಳ್ಳುವ ಪ್ರಯತ್ನ ಕೂಡ ನಡೆಯುತ್ತಿದೆ. ಅಂತಹ ಮಾರ್ಗದ ಕಾರಣಕ್ಕಾಗಿ ಇತ್ತೀಚೆಗೆ ಸಾವಿರಾರು ಟನ್ ಅಡಿಕೆ ಭೂತಾನ್ ಕಡೆಯಿಂದ ಬಂದಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದೆ. ಆರೋಗ್ಯಕ್ಕೆ ಹಾನಿಕಾರಕ ಎಂಬ ಗುಮಾನಿ ಹುಟ್ಟಿರುವುದು ಕೂಡ ಇಂತಹ ದಂಧೆಯ ಕಾರಣಕ್ಕೆ ಎಂದು ರೈತಾಪಿಯನ್ನು ಚಿಂತೆಗೀಡು ಮಾಡಿದೆ.