ಹಲಸಿನ ನಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..?

ಅರಣ್ಯ ಅಧಿಕಾರಿಗಳಿಂದ ಗೊಬ್ಬರ ಗುಂಡಿಗೆ ಸರ್ಚ್ ವಾರೆಂಟ್
ಕಾಲಿಗೆ ಬೀಳುತ್ತಿರುವ ಆ ಅಧಿಕಾರಿ ಯಾರು..?
ದಂಧೆಕೋರರ ಬದಲಿಗೆ ನಿರಪರಾಧಿ ಬಂಧನ...?
ಮಧ್ಯೆ ಪ್ರವೇಶಿಸುವರೇ ಶಾಸಕ ಆರಗ ಜ್ಞಾನೇಂದ್ರ

ಆಗುಂಬೆ ವಲಯಾರಣ್ಯ ವ್ಯಾಪ್ತಿಯಲ್ಲಿ ಕಿರು ಅರಣ್ಯ ಪ್ರದೇಶದಲ್ಲಿ ಹಲಸಿನ ಮರದ ನಾಟ ಸಾಗಾಣೆ ಮಾಡಿರುವ ಆರೋಪ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಳ್ಳಿ ಹಳ್ಳಿಗಳಲ್ಲಿ ಶೋಧಾಚರಣೆಗೆ ಮುಂದಾಗಿರುವ ಅರಣ್ಯ ಅಧಿಕಾರಿಗಳು ಸಿಕ್ಕವರನ್ನು ಕೇಸ್ನಲ್ಲಿ ಫಿಟ್ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಹಲಸಿನ ನಾಟ ಸಾಗಿಸಲು ಸಹಕರಿಸಿದ ದಂಧೆಕೋರರ ಬದಲಿಗೆ ಅಮಾಯಕರನ್ನು ಬಲಿಹಾಕುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದೆ. ಕಿರು ಅರಣ್ಯ, ಅರಣ್ಯ ಪ್ರದೇಶದಲ್ಲಿ ಈಗಾಗಲೇ ಕಡಿದಿರುವ 50ಕ್ಕೂ ಹೆಚ್ಚು ಹಲಸಿನ ಮರಗಳ ಪ್ರಕರಣವನ್ನು ಕಂಡೋರ ಹೆಸರಿಗೆ ತಳಕು ಹಾಕಲು ಪೂರ್ವ ತಾಲೀಮು ನಡೆದಿದೆ.

ಅರಣ್ಯ ಇಲಾಖೆಯ ಕೆಲವರು ಅಧಿಕಾರಿಯೊಬ್ಬರನ್ನು ರಕ್ಷಿಸುವ ಉದ್ದೇಶದಿಂದ ಪೂರ್ಣ ಸಾಥ್ ನೀಡುತ್ತಿದ್ದಾರೆ. ತನಿಖೆ ನಡೆದರೆ ಕಾನೂನು ಕ್ರಮ ಜರುಗುವ ಹಿನ್ನಲೆಯಲ್ಲಿ ಹಳ್ಳಿ ಹಳ್ಳಿಗಳಲ್ಲಿ ಯಾವುದೋ ವರ್ಷ, ಕಾಲದಲ್ಲಿ ಸಂಗ್ರಹಿಸಿದ್ದ ನಾಟಗಳ ದಾಖಲೆ ಪರಿಶೀಲನೆಗೆ ಇಲಾಖೆ ಮುಂದಾಗಿದೆ. ಜಾನುವಾರು ಕೊಟ್ಟಿಗೆ, ಅಟ್ಟಣಿಗೆ, ಗೊಬ್ಬರ ಗುಂಡಿಗೆ ಕೋಲು, ಸಬ್ಬಲ್ ಹಾಕಿ ಮರಗಳ ತುಂಡು ಹುಡುಕುತ್ತಿದ್ದಾರೆ. ಎಲ್ಲಿಯೂ ಏನು ಸಿಕ್ಕದಿದ್ದಾಗ ತಂತ್ರಗಾರಿಕೆ ಹೂಡಲು ಅಧಿಕಾರಿ ವರ್ಗ ಸಿದ್ಧತೆ ನಡೆಸಿದೆ.

ಕರ್ತವ್ಯ ನಿರತ ಅರಣ್ಯ ಅಧಿಕಾರಿಗಳೇ ತಪ್ಪೆಸಗಿ ಬಿಜೆಪಿ ಯುವ ಮುಖಂಡನ ಸಿಕ್ಕಿಹಾಕಿಸುವ ಪ್ರಯತ್ನಕ್ಕೆ ಟ್ವಿಸ್ಟ್ ನೀಡುವ ಸಂಬಂಧ ಶಾಸಕ ಆರಗ ಜ್ಞಾನೇಂದ್ರ ಮಧ್ಯೆ ಪ್ರವೇಶಿಸುತ್ತಾರಾ ಎಂಬ ಪ್ರಶ್ನೆ ಗ್ರಾಮದಲ್ಲಿ ಹುಟ್ಟಿಕೊಂಡಿದೆ. ಓರ್ವ ನಿರಪರಾಧಿಯನ್ನು ರಕ್ಷಿಸುವ ಮಹತ್ವದ ಜವಾಬ್ದಾರಿ ಶಾಸಕರ ಮೇಲಿದೆ. ನಿಜವಾಗಲೂ ತಪ್ಪೆಸಗಿದ ದಂಧೆಕೋರರನ್ನು ಹೆಡೆಮುರಿ ಕಟ್ಟುವುದಕ್ಕೆ ಸೂಚನೆ ನೀಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

ಬಿಜೆಪಿಯ ಯುವ ಮುಖಂಡನ ಬಂಧನದಲ್ಲಿಯೂ ಇಂತಹದ್ದೆ ನಮಕರಾಮ್ ಕೆಲಸ ನಡೆದಿದರುವ ಬಗ್ಗೆ ಆರೋಪ ಇದೆ. ಆತನ ಮನೆಯ ಶೋಧನೆ ವೇಳೆ ಏನು ಸಿಕ್ಕದಿದ್ದಾಗ ಊರಿನ ಕೆಲವರು (ದಂಧೆಕೋರರು) ನಿನ್ನ ಹೆಸರೇ ಹೇಳುತ್ತಿದ್ದಾರೆ. ಎಲ್ಲಿ ಇಟ್ಟಿದ್ದೀಯ ಹೇಳು.. ನಾನೆ ಮಾಡಿದ್ದು ಅಂತ ತಪ್ಪೊಪ್ಪಿಕೋ.. ನಿನಗೆ ಏನು ಆಗದ ಹಾಗೆ ನಾವು ಕೇಸ್ ರಿಜಿಸ್ಟರ್ ಮಾಡ್ತೀವಿ. ಸಂಜೆಯೆ ಬೇಲ್ ಸಿಗುತ್ತೆ. ಮನೆಗೆ ವಾಪಾಸ್ಸು ಬರಬಹುದು ಎಂದು ದಬಾಯಿಸಿದ್ದಾರೆ. ಅಷ್ಟಕ್ಕೂ ಕರಗದ ಬಿಜೆಪಿ ಮುಖಂಡನ ಕಾಲಿಗೆ ಬಿದ್ದು ನನ್ನದು ತಪ್ಪಾಗಿದೆ. ಕೆಲಸ ಹೋಗುತ್ತೆ. ನಿನ್ನನ್ನು ನನ್ನ ತಮ್ಮ ಅಂದುಕೊಳ್ತೀನಿ ಎಂದು ಭಾವನಾತ್ಮಕವಾಗಿ ಪುಸಲಾಯಿಸಿದ್ದಾರೆಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದ್ದು ನಿರಪರಾಧಿ ಬಂಧನ ವಿರುದ್ಧ ಆಕ್ರೋಶಕ್ಕೂ ಕಾರಣವಾಗುತ್ತಿದೆ.

ಯಾವಾಗ ತಪ್ಪೊಪ್ಪಿಕೊಂಡನೋ ಆತನ ಮನೆಯಲ್ಲಿದ್ದ ಹೆಬ್ಬಲಸು ನಾಟದ ಜೊತೆಗೆ ಹಲಸಿನ ನಾಟವನ್ನು ಹೊರಗಿನಿಂದ ತಂದು ಸೇರಿಸಿ ಫೋಟೋ ಕ್ಲಿಕ್ಕಿಸಿಕೊಂಡು ಅರೆಸ್ಟ್ ಮಾಡುವ ನಾಟಕ ಪ್ರಸಂಗ ನಡೆದಿದೆ. ಅಷ್ಟಾದ ಮೇಲೆ ಆತನಿಗೆ ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ಕರೆತಂದು ದೈಹಿಕ ಪಿಟ್ನೆಸ್ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಿದ್ದಾರೆ. ಕೋರ್ಟ್ ಕಟಕಟೆಯ ಮುಂದೆ ಅರಣ್ಯ ಅಧಿಕಾರಿಗಳು, ನಿರಪರಾಧಿ ನಿಂತಿದ್ದರು. ಆದರೆ ಪ್ರಕರಣದ ಕುರಿತಂತೆ ಸೋಮವಾರ ಸಾಕ್ಷಿ ಆಲಿಸುವುದಾಗಿ ನ್ಯಾಯಾಲಯ ಹೇಳಿದ್ದು ಆತನನ್ನು ಸ್ಥಳದಲ್ಲೇ ಕಸ್ಟಡಿಗೆ ಪಡೆದಿದ್ದಾರೆ.

ಕಾಲಿಗೆ ಬಿದ್ದು ಹಲಸಿನ ನಾಟ ಮನೆಯಲ್ಲಿ ಕೂಡುವಾಗ ಶಾಂತರಾಗಿದ್ದ ಅರಣ್ಯ ಅಧಿಕಾರಿಗಳು ಇದ್ದಕ್ಕಿದ್ದಂತೆ ರಾಕ್ಷಸರಾದ ಬಗೆಯನ್ನು ನೋಡಿ ಯುವಕ ಮತ್ತು ಆತನ ಕುಟುಂಬಸ್ಥರು ಬೆಚ್ಚಿ ಬೆರಗಾಗಿದ್ದಾರೆ. ಅಧಿಕಾರಿಯೊಬ್ಬರಿಗೆ ಸಹಾಯ ಮಾಡಲು ಮುಂದಾಗಿ ತಾವೇ ಜೈಲು ಸೇರುವ ಸನ್ನಿವೇಶ ನೋಡಿ ಮರುಗುವಂತಾಗಿದ್ದಾರೆ.

ಅಕ್ರಮ ನಾಟ ಸಾಗಾಣೆಯ ದಂಧೆಕೋರರು ಗ್ರಾಮದಲ್ಲಿ ಸಜ್ಜನರಂತೆ ಅರಾಮಾಗಿ ಓಡಾಡಿಕೊಂಡಿದ್ದಾರೆ. ಅದಕ್ಕೆ ಸಹಕರಿಸಿದ ಅಧಿಕಾರಿ ದಂಧೆಕೋರರ ನೆರವಿಗೆ ನಿಂತಿದ್ದಾರೆ. ಒಂದು ವೇಳೆ ದಂಧೆಕೋರರು ಅರೆಸ್ಟ್ ಆದರೆ ಅರಣ್ಯ ಅಧಿಕಾರಿ ಹೆಸರು ಹೊರಗೆ ಬರುವ ಸಾಧ್ಯತೆ ಇದೆ. ಇದನ್ನು ಹೇಗಾದರೂ ತಪ್ಪಿಸಬೇಕು ಎಂಬ ಸಾಕ್ಷ್ಯಾಚಿತ್ರ ಅರಣ್ಯ ಇಲಾಖೆಯೇ ತಯಾರಿ ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post