ಅರಣ್ಯ ಒತ್ತುವರಿ ತಡೆಗೆ ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ

ರೈತರನ್ನು ಅಪ್ಪಚ್ಚಿಗೊಳಿಸಿದ ಕರ್ನಾಟಕದ ಕಾಂಗ್ರೆಸ್ ಸರ್ಕಾರ
ಮಾತು ತಪ್ಪಿದ ಕಾಂಗ್ರೆಸ್ ಮುಖಂಡರಿಗೆ ಮುಖಭಂಗ
ಬ್ರಿಟೀಷ್ ಕಾಲದ ಸರ್ವೆ ಎತ್ತಿಹಿಡಿದ ಪ್ರಜಾಪ್ರಭುತ್ವ ಆಡಳಿತ

ಅರಣ್ಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ 2022, 2023 ನೇ ಸಾಲಿನ ಪದಕ ವಿತರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಅರಣ್ಯ ಸಂಪತ್ತಿನ ಸಂರಕ್ಷಣೆಯ ಮಹತ್ವ ಅರಿತಿದ್ದ ಇಂಧಿರಾ ಗಾಂಧಿಯವರು ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ತಂದರು. ಇದು ಅತ್ಯಂತ ನಿಷ್ಠುರವಾಗಿದೆ. ಅರಣ್ಯಾಧಿಕಾರಿಗಳೂ ಅಷ್ಟೇ ನಿಷ್ಠುರವಾಗಿ ಅರಣ್ಯ ಒತ್ತುವರಿ ತಡೆಯಬೇಕು. ಸಚಿವ ಈಶ್ವರ್ ಖಂಡ್ರೆ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಿಮ್ಮ‌ ಸಂಪೂರ್ಣ ಸಹಕಾರ ಸಿಕ್ಕರೆ ಇನ್ನಷ್ಟು ಕ್ರಾಂತಿಕಾರಕ ಕೆಲಸ ಮಾಡುತ್ತಾರೆ.

ವನ್ಯಜೀವಿ ಮತ್ತು ಅರಣ್ಯ ಸಂಪತ್ತು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಆಫ್ರಿಕಾ ಬಿಟ್ಟರೆ ಅತಿ ಹೆಚ್ಚು ಅರಣ್ಯ ಪ್ರಾಣಿ ಸಂಪತ್ತು ಇರುವುದು ಭಾರತದಲ್ಲೇ. ಹಾಗೆಯೇ ಅರಣ್ಯದ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ” ಎಂದು ಹೇಳಿದ್ದಾರೆ. ಕಾಡು ಪ್ರಾಣಿಗಳಿಗೆ ಆಹಾರ, ಮೇವು ಮತ್ತು ನೀರು ಕಾಡಿನ ಒಳಗೇ ಅಗತ್ಯವಿದ್ದಷ್ಟು ದೊರೆತರೆ ಅವು ಕಾಡಿನಿಂದ ಹೊರಗೆ ಬರುವುದಿಲ್ಲ. ಆಗ ಮಾನವ-ಪ್ರಾಣಿ ಸಂಘರ್ಷಕ್ಕೆ ತಡೆ ಬೀಳುತ್ತದೆ. 

ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಅರಣ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಉಪಸ್ಥಿತರಿದ್ದರು.

ಮಲೆನಾಡು ಭಾಗದಲ್ಲಿ ನಾನಾ ಅಭಿವೃದ್ಧಿ ಕಾರಣಕ್ಕೆ ವಲಸೆ ಹೋಗಿರುವ ಕುಟುಂಬಗಳು ಪೂರ್ವಿಕರ ಕಾಲದಿಂದ ಸಿಕ್ಕ ಜಾಗಗಳಲ್ಲಿ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಸ್ವಾತಂತ್ರ್ಯ ಬಂದ ನಂತರವೂ ಭೂಮಿ ಹಂಚಿಕೆಯಲ್ಲಾದ ದೋಷಗಳನ್ನು ಸರಿಪಡಿಸಲು ಇಂದಿಗೂ ಯಾವ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಅರಣ್ಯ ಉಳಿಸುವ ನೆಪದಲ್ಲಿ ಬ್ರಿಟೀಷ್ ಆಡಳಿತದ ಅವಧಿಯಲ್ಲಿ ಭಾರತದ ಉದ್ದಗಲಕ್ಕೂ ನಡೆಸಿದ ಸರ್ವೆಗಳನ್ನೇ ಅಧಿಕೃತ ಕಾಡು ಎಂದು ಘೋಷಿಸಲಾಗಿದೆ. ಇಂದು ಅರಣ್ಯ ಇಲಾಖೆ ನಮ್ಮ ಜಾಗ ಎನ್ನುತ್ತಿರುವ ಪ್ರದೇಶಗಳಲ್ಲಿ ಅಕೇಶಿಯಾ ನೆಡುತೋಪು ನಿರ್ಮಿಸಿ ಅದನ್ನೇ ಕಾಡು ಎಂದು ನಾಗರೀಕರಿಗೆ ಮಂಕುಬೂದಿ ಎರಚುತ್ತಿರುವುದು ಎಲ್ಲಾ ಆಡಳಿತ ಪಕ್ಷದ ಅವಧಿಯಲ್ಲಿ ಚಾಚೂ ತಪ್ಪದೆ ರೂಢಿಗತವಾಗಿದೆ.

ಜನರಿಗೆ ಸಾಮಾಜಿಕ, ಆರ್ಥಿಕ ನ್ಯಾಯ ಕೊಡುತ್ತೇವೆ ಎಂದು ಆಡಳಿತಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ರೈತರ ಮೇಲೆ ಗಧಪ್ರಹಾರಕ್ಕೆ ಮುಂದಾಗಿದೆ. ಈಗಿರುವ ಎಲ್ಲಾ ರೀತಿಯ ಅರಣ್ಯ ಒತ್ತುವರಿ ತೆರವಿಗೆ ಮುಂದಾದರೆ ಮಲೆನಾಡಿಗರು ಬೆಂಗಳೂರಿನ ನೈಸರ್ಗಿಕ ಕಾಡುಗಳ ಮಧ್ಯೆ ನಿರ್ಮಾಣವಾಗಿರುವ ಕಾಂಕ್ರೀಟ್ ಕಾಡು ಅವಲಂಬಿಸುವ ಸಮಯ ಶೀಘ್ರದಲ್ಲೇ ಘಟಿಸಲಿದೆ.

ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಬಗರ್ ಹುಕುಂ, ಅರಣ್ಯಹಕ್ಕು ನೀಡುತ್ತೇವೆ ಎಂದಿದ್ದ ಕಾಂಗ್ರೆಸ್ ನಾಯಕರು, ಮುಖಂಡರು ಈಗ ತಲೆಮರೆಸಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾದಂತಿದೆ. ಮುಖ್ಯಮಂತ್ರಿಗಳೇ ಅರಣ್ಯ ಸಿಬ್ಬಂದಿಗಳನ್ನು ಹುರಿದುಂಬಿಸಿದ್ದು ಮಲೆನಾಡಿಗರಿಗೆ ಅತಿದೊಡ್ಡ ಗಂಡಾಂತರ ತಟ್ಟುವುದು ಸನ್ನಿಹಿತವಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post