ಪ್ರಭಾವಿ ಮುದುಕರಿಂದ ಹಳ್ಳ ಹಿಡಿದ ಕಾಲೇಜು

ಶಾಲೆ ಕಟ್ಟಲು 30 ಲಕ್ಷ ಬಂದಿದ್ದು ಎಲ್ಲಿಂದ?
ಹೆಗ್ಗಣ ಬುದ್ದಿ ಬಿಡದ ಮುದುಕರು – ಮತ್ತೆ ದುಡ್ಡು ಹೊಡೆಯಲು ಪ್ಲಾನ್
ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆ ಹೆಸರಿಗೆ ಮತ್ತೆ ಡೀಲ್
ಒಂದು ಕಾಲದಲ್ಲಿ ಸಹ್ಯಾದ್ರಿ ಗಿರಿ ಶ್ರೇಣಿಯ ಅಂದ, ಚೆಂದ, ಶೈಕ್ಷಣಿಕ ಗತ್ತು ಹೆಚ್ಚಿಸಿದ್ದ ಶಿಕ್ಷಣ ಸಂಸ್ಥೆಯಲ್ಲಿ ಕೋಟಿಗಟ್ಟಲೇ ಹಣದ ಆಸೆಗೆ ಗೂಟ ಹೊಡೆದು ಕೂತಿರುವ ಮೂರ್ನಾಲ್ಕು ಹೆಗ್ಗಣಗಳು ಕಾಲೇಜನ್ನು ಪೂರ್ತಿ ಮುಂಡಾಮೋಚಲು ಸಿದ್ಧತೆ ನಡೆಸಿದ್ದಾರೆ.

ಇತ್ತೀಚೆಗೆ ಕೋಟಿಗಟ್ಟಲೇ ಹಣಕ್ಕೆ ಮಾರಾಟವಾದ ಪ್ರಾಧ್ಯಾಪಕರ ಹಣದಿಂದಲೇ ಕಾಲೇಜಿಗೆ ಆಧುನಿಕ ಸ್ಪರ್ಶ ನೀಡಲು ಸಜ್ಜಾಗಿದ್ದಾರೆ. ಆಧುನೀಕತೆ ಎಂದರೆ ಕಾಲೇಜಿನ ಅವನತಿ ಎಂಬುದನ್ನು ಅರ್ಥೈಸಿಕೊಳ್ಳಬೇಕಾದ ಸನ್ನಿವೇಶ ಸಾರ್ವಜನಿಕ ವ್ಯವಸ್ಥೆಯೊಳಗೆ ಸೃಷ್ಟಿಯಾಗಿದೆ.

ಕಾಲೇಜಿಗೆ ದಾಖಲಾಗುತ್ತೇನೆ ಎಂದು ಉತ್ಸಾಹದಿಂದ ಬರುವ ವಿದ್ಯಾರ್ಥಿಗಳಿಗೆ ಇಲ್ಲಸಲ್ಲದ ಸಬೂಬು ಹೇಳಿ ಕಾಲೇಜಿನಿಂದ ಓಡಿಸುವ ಪ್ರಯತ್ನ ಆಡಳಿತ ಮಂಡಳಿಯಿಂದ ನಡೆಯುತ್ತಿದೆ. ಆಡಳಿತ ಮಂಡಳಿಯ ದುಷ್ಟ ಆಲೋಚನೆಯಿಂದಾಗಿ ಹಾಲಿ ಪ್ರತಿಷ್ಠಿತ ಕಾಲೇಜಿನಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಸರ್ಕಾರಿ ಕಾಲೇಜಿಗೆ ದಾಖಲಾಗುವಂತೆ ಆಡಳಿತ ಮಂಡಳಿಯ ಸದಸ್ಯರೇ ವಿದ್ಯಾರ್ಥಿ, ಪೋಷಕರನ್ನು ಪುಸಲಾಯಿಸುತ್ತಿರುವ ಘಟನೆಗಳು ಎಗ್ಗಿಲ್ಲದೆ ನಡೆಯುತ್ತಿದೆ.

ವಿದ್ಯಾರ್ಥಿಗಳು ಇಲ್ಲ ಎಂಬ ಕುಂಟು ನೆಪವೊಡ್ಡಿ ಕಾಲೇಜಿನ ಅಭಿವೃದ್ಧಿ ಹೆಸರಲ್ಲಿ ಖಾಸಗಿ ಸಂಸ್ಥೆಗೆ ಮಾರಾಟ ಮಾಡುವ ಪ್ರಕ್ರಿಯೆ ಪುನಃ ಚಾಲ್ತಿ ಪಡೆದುಕೊಂಡಿದೆ. ಅಂತರಾಷ್ಟ್ರೀಯ ಹೆಸರಿನ ಸಂಸ್ಥೆಯೊಂದು ಕಾಲೇಜು ಖರೀದಿಗೆ ಮುಂದಾಗಿರುವ ಮಾಹಿತಿ ಹರಿದಾಡುತ್ತಿದೆ. ಮಾಸಿದ ತಲೆಗಳು ಕಾಲೇಜನ್ನು ಹರಾಜು ಹಾಕುವ ಒಂದು ಸುತ್ತಿನ ಮಾತುಕತೆ ಕೂಡ ಮುಕ್ತಾಯಗೊಳಿಸಿದೆ.

ಯುವ ಪೀಳಿಗೆಗೆ ಮೌಲಿಕ ಶಿಕ್ಷಣ ಕೊಡುವ ಬದಲಿಗೆ ರಾಜಕೀಯ ಸೇರಿದಂತೆ ತಲೆಮಾಸಿದ ಅನಾಚಾರಗಳ ಬಗ್ಗೆ ತಿಳಿಸಿಕೊಡುತ್ತಿರುವ ದುರಂತ ನಡೆಯುತ್ತಿದೆ.
ಗೆದ್ದಲು ಕೆರೆಯುವ ಮುದುಕರು ಅಭಿವೃದ್ಧಿ ಹೆಸರಿನಲ್ಲಿ 30 ಲಕ್ಷ ರೂಪಾಯಿ ಹಣವನ್ನು ಮುಂಡಾಯಿಸಲು ಸ್ಕೆಚ್ ಹಾಕಿಕೊಂಡಿದ್ದಾರೆ. ಕಾಲೇಜು ಮಾರಾಟ ಮಾಡಿ ಶಾಲೆ ಆರಂಭಿಸುವ ಹಂತಕ್ಕೆ ಮುದುಕರ ಬೌದ್ಧಿಕ ಮಟ್ಟ ಇಳಿದಿದೆ. ಕಾಲೇಜು ಮುಚ್ಚುವುದೇ ಇವರ ಜೀವನದ ಪರಮ ಗುರಿಯಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ಮತ್ತೆ ದುಡ್ಡು ಹೊಡೆಯಲು ಸರಣಿ ಪ್ಲಾನ್ ನಡೆಯುತ್ತಿದ್ದು ಆಡಳಿತ ಮಂಡಳಿಯಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ತಮ್ಮನ್ನು ತಾವು ಶಿಕ್ಷಣ ತಜ್ಞರು ಎಂದು ಪ್ರಚಾರ ಪಡೆದುಕೊಳ್ಳುವ ತಲೆ ಮಾಸಿದ ಮುದುಕರು ಎಲ್ಲಿ, ಯಾವಾಗ, ಎಷ್ಟು ಹಣ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲೇ ಮುಳುಗಿರುತ್ತಾರೆ‌.

ಹೊಸ ಪ್ರಯೋಗಗಳನ್ನು ಮಾಡುವ ಬದಲು ಹಳೆಯ ಮರಗಳಿಗೆ ಜೋತು ಬೀಳುವ ಇಂತಹ ಹೆಗ್ಗಣಗಳಿಂದ ಕಾಲೇಜು ವಾರ್ಷಿಕವಾಗಿ ಅವತಿಯ ಸನಿಹಕ್ಕೆ ತಳ್ಳಲ್ಪಡುತ್ತಿದೆ. 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಲೆ ಆರಂಭಿಸುವ ಬೃಹತ್ ಡೀಲಿಗೆ ಕೈಹಾಕಿದಂತಿದೆ. ಕಾಲೇಜಿನ ಆಡಳಿತ ಮಂಡಳಿಯಲ್ಲಿ ನಿದ್ರಿಸುತ್ತಿರುವ ಅಜೀವ ಸದಸ್ಯತ್ವ ಸಂಖ್ಯೆ ಶೇಕಡಾ 80 ರಷ್ಟಿದ್ದು ಇವರ್ಯಾರು ಕೂಡ ಕಾಲೇಜಿನ ಅಭಿವೃದ್ಧಿಗೆ ಕಿಂಚಿತ್ತೂ ತಮ್ಮ ಸಲಹೆ ಸಹಕಾರ ನೀಡುತ್ತಿಲ್ಲ. ಪ್ರತಿಷ್ಠಿತರ ಈ ನಡೆ ಕೂಡ ಅಭಿವೃದ್ಧಿಗೆ ಮುಳುವಾಗುತ್ತಿದೆ.

ಹೆಗ್ಗಣಗಳು ಡೀಲ್ ಮಾಡಿದ್ದರಿಂದಾಗಿ ಈಗಾಗಲೇ ಪ್ರತಿಷ್ಠಿತ ಕಾಲೇಜಿಗೆ ವಿಶ್ವವಿದ್ಯಾಲಯ, ಪದವಿ ಪೂರ್ವ ಕಾಲೇಜು ಜಂಟಿ ಕಾರ್ಯದರ್ಶಿಯಿಂದ ಕಾರಣ ಕೇಳಲಾಗಿದೆ. ಅದಕ್ಕೆ ಸಬೂಬು ಹೇಳಿ ಸರ್ಕಾರದ ಕೆಲವು ಕಾನೂನು ಅಡ್ಡಿ ಎಂದು ಉತ್ತರ ಪತ್ರಿಕೆ ತಯಾರಿಸಲಾಗಿದೆ.  ಅಲ್ಲದೇ ಕಾಲೇಜಿನ 24 ಎಕರೆ ಮಾರಾಟಕ್ಕೆ ಎರಡನೇ ಹಂತದ ಪ್ರಯತ್ನ ನಡೆಸಲಾಗುತ್ತಿದೆ. ಇಷ್ಟೆಲ್ಲಾ ಬೆಳವಣಿಗಳು ನಡೆಯುತ್ತಿರುವ ಮಧ್ಯೆಯೂ ಹೆಮ್ಮೆಗಾಗಿ ಅಜೀವ ಸದಸ್ಯತ್ವ ಪಡೆದುಕೊಂಡಿರುವ ಸದಸ್ಯರು ಹೊದ್ದು ಮಲಗಿದ್ದಾರೆ. ಇನ್ನು ಕೆಲವರು ಸದಸ್ಯತ್ವ ಪಡೆದುಕೊಳ್ಳುವಲ್ಲಿ ಮಾತ್ರ ತೃಪ್ತಿ ಪಡೆದುಕೊಂಡಿದ್ದಾರೆ. ಆಡಳಿತ ಮಂಡಳಿಯ ನಾಲ್ಕೈದು ಮಾಸಿದ ತಲೆಗಳು ಆಡಿದ್ದೇ ಆಟವಾಗಿ ಮಾರ್ಪಟ್ಟಿದೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post