ಹಗರಣದ ಹೆಗ್ಗಣಗಳಿಂದ ಝಣಝಣ ಕಾಂಚಾಣ !

ಕೋಟಿ ಲೆಕ್ಕಾಚಾರದಲ್ಲಿ ಪ್ರಾಧ್ಯಾಪಕರ ಹುದ್ದೆ ಮಾರಾಟ
ಗುಡ್ಡದ ತಪ್ಪಲಿನ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವುದಾದರೇನು ?

ಕಾಲೇಜಿನ ಕರ್ಮಕಾಂಡ ಒಂದಾ ಎರಡಾ..!
ವಿದ್ಯಾರ್ಥಿಗಳಿಲ್ಲದಿದ್ದರೂ ಪ್ರಾಧ್ಯಾಪಕರ ನೇಮಕಾತಿ

ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡದ ತಪ್ಪಲಿನ ಪದವಿ ಕಾಲೇಜಿನಲ್ಲಿ ಬಾರಿ ಪ್ರಮಾಣದ ನೇಮಕಾತಿ ಹಗರಣ ನಡೆದಿರುವ ಬಗ್ಗೆ ಸಾರ್ವಜನಿಕ ಚರ್ಚೆ ಬಿರುಸುಗೊಂಡಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪ್ರಾಧ್ಯಾಪಕರ ಹುದ್ದೆಗಳು ಕೋಟಿ ಲೆಕ್ಕಾಚಾರದಲ್ಲಿ ಮಾರಾಟವಾಗುತ್ತಿದೆ. 10-20 ಸಾವಿರಕ್ಕೆ ಅತ್ಯುತ್ತಮವಾಗಿ ಪಾಠ ಮಾಡುತ್ತಿದ್ದ ನುರಿತ ಅತಿಥಿ ಶಿಕ್ಷಕರು ಕೋಟಿ ಮೊತ್ತದ ಲಂಚ ನೀಡಲು ಸಾಧ್ಯವಾಗದೆ ಕಣ್ಣೀರ ಕೋಡಿ ಹರಿಸುತ್ತಿರುವುದು ಜಗಜ್ಜಾಹೀರಾಗಿದೆ.

ಅಂದ ಹಾಗೆ ಗಿರಿಗಳ ತಪ್ಪಲಿನಲ್ಲಿ ಸ್ವಚ್ಚಂದ, ಆನಂದಮಯ ವಾತಾವರಣದಿಂದ ಕೂಡಿರುವ ಕಾಲೇಜಿನಲ್ಲಿ ಇದೀಗ 15 ವರ್ಷಗಳಿಂದ ಈಚೆಗೆ ನಿಜಕ್ಕೂ ವಾರ್ಷಿಕವಾಗಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಮುಗ್ಗರಿಸಿದೆ. ಒಂದೊಂದು ವಿಭಾಗದಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿದ್ದು ಅಲ್ಲಿರುವ ಕೊಠಡಿಗಳನ್ನು ತುಂಬಿಸಲು ಕೂಡ ಸಾಧ್ಯವಾಗದ ಪರಿಸ್ಥಿತಿ ಇದೆ. ಖಾಲಿ ಖಾಲಿಯಾಗಿರುವ ಕಾಲೇಜಿನ ವಾತಾವರಣದಲ್ಲಿ ಮರ, ಗಿಡಗಳಿಗೆ ಪಾಠ ಮಾಡಲೆಂದೇ ಎರಡ್ಮೂರು ವರ್ಷಕ್ಕೊಮ್ಮೆ ಸರ್ಕಾರದಿಂದ ನೇಮಕಗೊಳ್ಳುವ ಪ್ರಾಧ್ಯಾಪಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಕಾಲೇಜಿನ ಆಡಳಿತ ಮಂಡಳಿ ನಿಸ್ಸಂಕೋಚವಾಗಿ ನಡೆಸುತ್ತಿರುವ ಖಯಾಲಿ ರೂಢಿಸಿಕೊಂಡಿದೆ.

ಮುದುಕರ ದಂಡಿನ ಕಾರುಬಾರಿನ ಅವಾಂತರ..!

ಪ್ರತಿಷ್ಠಿತ ಕಾಲೇಜಿಗೆ ಕೆಲವು ವರ್ಷಗಳಿಂದ ಗೂಟ ಹೊಡೆದುಕೊಂಡಿರುವ ಮುದುಕರು ಕಾಲೇಜಿನ ಸರ್ವನಾಶಕ್ಕೆ ಪಣತೊಟ್ಟಂತಿದ್ದಾರೆ. ಹಣದ ಬೆನ್ನುಹತ್ತಿರುವ ಮುದುಕರ ದಂಡು ಮಾಡಬಾರದ ಅವಾಂತರ ಸೃಷ್ಟಿಸಿ ಕಾಲೇಜಿಗೆ ವಿದ್ಯಾರ್ಥಿಗಳು ಸೇರ್ಪಡೆ ಆಗದಂತಹ ಕೆಟ್ಟ ಸ್ಥಿತಿ ನಿರ್ಮಿಸಿದ್ದಾರೆ. ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿ ಗೋಲ್ಮಾಲ್‌ ಪ್ರಕರಣ ಬಯಲಿಗೆ ಬಂದರೆ ಅನೇಕ ಮುದುಕರ ಹಣೆಬರಹ ಬೀದಿ ಪಾಲಾಗುವುದು ಖಚಿತ.

ರಾಜ್ಯದಲ್ಲಿ ಸರ್ಕಾರಿ ಅನುದಾನಿತ ಕಾಲೇಜಿಗೆ ಅಧ್ಯಾಪಕರ ಕೊರತೆ ಆಗದಂತೆ ಸರ್ಕಾರವೇ ಕ್ಯಾಬಿನೇಟ್‌ ಅಂಗೀಕಾರ ಪಡೆಯುವ ಮೂಲಕ ಹುದ್ದೆಗಳನ್ನು ಸೃಷ್ಟಿ ಮಾಡಿಕೊಡುತ್ತಿದೆ. ವಿಶ್ವವಿದ್ಯಾಲಯದ ಆಡಳಿತ ಕೂಡ ಇದಕ್ಕೆ ಬೆಂಬಲವಾಗಿ ನಿಂತಿದ್ದು ಕಾಲೇಜಿನ ಅಭಿವೃದ್ಧಿಗಾಗಿ ಝಣಝಣ ಕಾಂಚಾಣ ಹರಿಸುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆಡಳಿತ ಮಂಡಳಿ ಸ್ವಯಂ ಅಭಿವೃದ್ಧಿಯ ಮಾರ್ಗೋಪಾಯವನ್ನು ಶಿರಸಾವಹಿಸಿ ಪಾಲಿಸುವಂತಿದೆ.

ಓರ್ವ ಪ್ರಾಧ್ಯಾಪಕರಿಗೆ ಕಾಲೇಜಿನಲ್ಲಿ ಪಾಠ ಮಾಡಲು ಸರ್ಕಾರ ವಾರಕ್ಕೆ ಅಂದಾಜು 16 ಗಂಟೆ ನಿಗಧಿ ಪಡಿಸಿದೆ. ವಿಭಾಗ, ಪ್ರಾಯೋಗಿಕ ತರಗತಿಗಳಲ್ಲಿ ಸಮಯ ಬದಲಾಗಿರುತ್ತದೆ. ವಿದ್ಯಾರ್ಥಿಗಳೇ ಇಲ್ಲದ ಕಾಲೇಜಿನಲ್ಲಿ 16 ಗಂಟೆ ಅವಧಿ ಪಾಠ ಮಾಡಲು ಆಗದಿದ್ದ ಸಂದರ್ಭದಲ್ಲಿ ಸಮೀಪದ ಕಾಲೇಜಿಗೆ ತೆರಳಿ ಸರ್ಕಾರ ನಿಗಧಿಪಡಿಸಿದ ಸಮಯ ಭರ್ತಿ ಮಾಡಬೇಕು. ಕೆಲವೊಂದು ವಿಷಯಗಳನ್ನು ಪಾಠ ಮಾಡುವವರು ವಾರಕ್ಕೆ ಒಂದು ದಿನ ಮಾತ್ರ ಈ ಅನುದಾನಿತ ಕಾಲೇಜಿಗೆ ಗಣ್ಯರಂತೆ ಆಗಮಿಸುತ್ತಿದ್ದಾರೆ.

ಉಳಿದ ಸಮಯವನ್ನು ಭರ್ತಿ ಮಾಡಲು ಇತರೆ ಕಾಲೇಜುಗಳಿಗೆ ತೆರಳಿ ಅಲ್ಲಿ ತಮ್ಮ ಪಾಠ ಪ್ರವಚನ ಮುಂದುವರೆಸುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭವನ್ನು ಎದುರಿಸುತ್ತಿರುವ ಕಾಲೇಜಿಗೂ ಸರ್ಕಾರ ಹುದ್ದೆ ಸೃಷ್ಟಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸರ್ಕಾರಿ ಕರ್ತವ್ಯಕ್ಕೆ ಸೇರುವವವರು ಎರಡ್ಮೂರು ವರ್ಷಗಳು ಇಲ್ಲಿ ಪಾಠವಿಲ್ಲದೆ ತಾವು ಕೊಟ್ಟ ಕೋಟಿ ಲೆಕ್ಕಾಚಾರದಲ್ಲಿ ಅಂಡಲೆದು ಹಾಜರಿ ಹಾಕಿ ಮನೆಗೆ ಸೇರುತ್ತಿದ್ದಾರೆ. ವಿದ್ಯಾರ್ಥಿಗಳ ಪಾಡಂತೂ ಶೋಚನೀಯವಾಗಿದೆ. ದೂರದ ಊರಿನಿಂದ ಆಗಮಿಸುವ ಅನೇಕರು ಸರ್ಕಾರಿ ಸೇವೆ ಗಿಟ್ಟಿಸಿಕೊಂಡು ವರ್ಗಾವಣೆ ಹೊಂದುತ್ತಿದ್ದಾರೆ. ಸರ್ಕಾರವೇ ಕಳ್ಳತನಕ್ಕೆ ರಾಜಮಾರ್ಗ ನೀಡಿದ್ದು ಶೈಕ್ಷಣಿಕ ವ್ಯವಸ್ಥೆ ಹದಗೆಡುವಂತಾಗಿದೆ.

ಪ್ರತಿಷ್ಠಿತ ಕಾಲೇಜಿನಲ್ಲಿ ಓದಿ ವಿದ್ಯಾವಂತರಾದ ಮಹನೀಯರು ರಾಜ್ಯದ ಅನೇಕ ಕಡೆಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಗಣ್ಯರು, ಶಿಕ್ಷಣ ತಜ್ಞರು, ಸ್ವಾತಂತ್ರ್ಯ ಹೋರಾಟಗಾರರಿಂದ ರೂಪಿತವಾದ ಕಾಲೇಜು ಇದೀಗ ಎರಡ್ಮೂರು ಹೆಗ್ಗಣಗಳ ಗೂಡಾಗಿ ಪರಿವರ್ತಿತವಾಗಿದೆ. ಕೋಟಿಗಟ್ಟಲೇ ಹಣವನ್ನು ತಿಂದು ತೇಗಿ ಕೊಬ್ಬಿದ ಹೆಗ್ಗಣಗಳನ್ನು ಓಡಿಸುವ ಕಸರತ್ತುಗಳನ್ನು ನಡೆಯುತ್ತಿದ್ದರೂ ಆಯಕಟ್ಟಿನ ಬಿಲದೊಳಗೆ ಸೇರುತ್ತಿರುವುದು ವಿಪರ್ಯಾಸವೇ ಸರಿ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post