ಕೆಟ್ಟ ಹವ್ಯಾಸ ಬಿಡಲು ಕ್ರೀಡೆ ಅಸ್ತ್ರ

 ಕ್ರೀಡೆ ಆರೋಗ್ಯದಾಯಕವಾಗಿರಲಿ- ಬಂಗಾರಮಕ್ಕಿ ಮಾರುತಿ ಗುರೂಜಿ
ಪ್ರತಿಭೆ ಪ್ರೋತ್ಸಾಹಿಸುವ ಗುಣ ಬೆಳೆಸಿಕೊಳ್ಳಿ - ಕಿಮ್ಮನೆ

ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್, ಮಾರಿಕಾಂಬ ದೇವಸ್ಥಾನ ಸಹಯೋಗದಲ್ಲಿ ರಾಷ್ಟ್ರಮಟ್ಟದ ಹೊನಲು ಬೆಳಕಿನ ಖೋ- ಖೋ ಪಂದ್ಯಾವಳಿ ಉದ್ಘಾಟಿಸಿ ಬಂಗಾರಮಕ್ಕಿ ಮಾರುತಿ ಗುರೂಜಿ ಮಾತನಾಡಿ, ಹಬ್ಬದ ವಾತಾವರಣದಿಂದ ಕ್ರೀಡಾಂಗಣ ಕೂಡಿದೆ. ರಾಜಕೀಯ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಅಲ್ಲದೇ ಎಲ್ಲಾ ಕ್ಷೇತ್ರದಲ್ಲೂ ತೀರ್ಥಹಳ್ಳಿಯ ಅತ್ಯುತ್ತಮ ವ್ಯಕ್ತಿಗಳು ಇದ್ದಾರೆ. ರಾಜ್ಯಮಟ್ಟದ ಕಾರ್ಯಕ್ರಮ ಆಗುತ್ತಿದೆ ಎಂದರೆ ಅನಂದಿಸಬೇಕು. ತಾಯಿಯ ಮಡಿಲಲ್ಲಿ ಜಾತ್ರೆ ನಡೆಯುತ್ತಿದ್ದು ಎಲ್ಲರೂ ಯಶಸ್ವಿಗೊಳಿಸಬೇಕು. ಮನೋರಂಜನೆ ಜೊತೆ ಕ್ರೀಡೆಯಲ್ಲಿ ಸತ್ವ, ಶಕ್ತಿ, ಸಂಘಟನಾ ಸಾಮರ್ಥ್ಯ ಇದೆ. ಒಳ್ಳೆಯ ಮನಸ್ಸು ಇರುವವರು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ. ಶಿವನಿಂದ ಕ್ರೀಡೆ ಬಂದಿದೆ.

ದೇಶಿಯ, ಪ್ರಾದೇಶಿಕ ಕ್ರೀಡೆ ನಶಿಸುತ್ತಿರುವ ಸಂದರ್ಭದಲ್ಲಿ ಖೋಖೋ ಆಯೋಜನೆ ಸುಲಭದ ಮಾತಲ್ಲ. ರಾಷ್ಟ್ರಮಟ್ಟದಲ್ಲಿ ತಾಲ್ಲೂಕಿನ ಛಾಪು ಮೆರೆಯುತ್ತಿದೆ. ಇಲ್ಲಿಯೇ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣವಾಗಲಿ. ಮುಂದೋಗು ಅನ್ನುವವರು ಯಾರು ಮಾಡಲಿಕ್ಕೆ ಬರಲಿಲ್ಲ. ನೀವು ಸಂಘಟನೆ ಏನು ಎಂಬುದನ್ನು ತೋರಿಸಿ ಕೊಟ್ಟಿದ್ದೀರಿ. ಮೊಬೈಲ್ ಚಟ ಬಿಡಿಸಲು ಲಕ್ಷ ಲಕ್ಷ ಕೊಡಬೇಕಾದ ಸನ್ನಿವೇಶ ಇದೆ. ಹವ್ಯಾಸ ಬಿಡಿಸಲು ಕ್ರೀಡೆ ಅಸ್ತ್ರವಾಗಿದೆ. ಮಕ್ಕಳಿಗೆ ನಾವೇ ಕೊಟ್ಟ ಅಸ್ತ್ರ ಮೊಬೈಲ್ ಆಗಿದೆ. ಅದೇ ಮಾರಕಾಸ್ತ್ರವಾಗಿ ಬದಲಾಗುತ್ತಿದೆ. ಬುದ್ದಿ ಮತ್ತೆ ಅಲ್ಲದೇ ಆರೋಗ್ಯ, ಚಾಣಾಕ್ಷತೆ, ಸೂಕ್ಷತೆ, ಜ್ಞಾಪಕ ಶಕ್ತಿ ರೂಪಿಸುತ್ತದೆ. ನಮ್ಮ ಮಣ್ಣಿನ ಗುಣ ಎತ್ತಿಹಿಡಿಯುವ ಕೆಲಸ ಮಾಡಿದ್ದಾರೆ. ಸ್ಪರ್ಧೆ ಆರೋಗ್ಯದಾಯವಾಗಿರಬೇಕು. ಕ್ರೀಡಯಿಂದ ಆನಂದ, ನೆಮ್ಮದಿ ಸಿಗುತ್ತದೆ. ಹೊರ ಊರಿನವರನ್ನು ಗೌರವಿಸಿ. ಆನಂದ ಆಗುವಂತೆ ವರ್ತಿಸಿ. ಗೆಲವು ಸೋಲು ಮುಖ್ಯ ಅಲ್ಲ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಕಾನೂನು ಸುವ್ಯವಸ್ಥೆ ಸಮಸ್ಯೆ ಆಗದಂತೆ ಆಟವಾಡಬೇಕು. ಖೋ ಖೋ ಪಂದ್ಯಾವಳಿ ತಂಡ ರಾತ್ರಿ ಕೆಲಸ ಮಾಡಿದ್ದಾರೆ. 50 ಲಕ್ಷ ದೇಣಿಗೆ ನೀಡಿದ ಮಹನೀಯರಿಗೆ ವಂದನೆಗಳು. ಹಲವಾರು ಕ್ರೀಡಾಪಟುಗಳು ಶ್ರಮದಾನ ಮಾಡಿದ್ದಾರೆ. ಕ್ರೀಡಾಭಿಮಾನಿಗಳು ಪ್ರತಿಭೆಗೆ ಮಾತ್ರ ಪ್ರೋತ್ಸಾಹ ನೀಡಬೇಕು. ಪ್ರತಿಭೆ ಇರುವವರಿಗೆ ಬೆಂಬಲ ನೀಡಿ. ತೀರ್ಥಹಳ್ಳಿ ರಾಜ್ಯದಲ್ಲಿ ವಿಶಿಷ್ಟವಾಗಿದೆ. ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದವರು ಇದ್ದಾರೆ. ಶಾಂತವೇರಿ ಗೋಪಾಲಗೌಡ ದೇಶದಲ್ಲಿಯೇ ಅತ್ಯುತ್ತಮ ರಾಜಕೀಯ ಪಟು. ಕೇವಲ 3 ಬಾರಿ ಶಾಸಕರಾಗಿದ್ದ ಅವರನ್ನು ರಾಜ್ಯದ ವಿದಾನಸಭೆ ಪ್ರತಿದಿನ ನೆನಪಿಸುತ್ತದೆ. ಮಾದರಿ ವ್ಯಕ್ತಿತ್ವದ ಅಂತಹ ಅದ್ಬುತ ನಾಯಕ ಮತ್ತೊಬ್ಬರಿಲ್ಲ. ಯುವ ಪಿಳಿಗೆ ಯಾವ ದಿಕ್ಕಿನಲ್ಲಿ ಹೋಗಬೇಕು ಎಂಬ ನಿದರ್ಶನ ನೀಡಿದ್ದಾರೆ. ಹಣ ಮಾಡುವುದು ಗುರಿಯಾಗಬಾರದು. ಹಣ ಬದುಕಿನ ಸಾಧನ ಆಗಬೇಕು ಎಂದಿದ್ದರು ಎಂದು ನೆನಪಿಸಿದರು.

ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ನಾಗರಾಜ ಶೆಟ್ಟಿ ಮಾತನಾಡಿ, ತೀರ್ಥಹಳ್ಳಿಯಲ್ಲಿ ಹಬ್ಬದ ವಾತಾವರಣ ಆರಂಭವಾಗಿದೆ. ಸಾಂಸ್ಕೃತಿಕ, ಕ್ರೀಡಾಕೂಟದ ಜೊತೆಗೆ ಜಾತ್ರೆ ನಡೆಯುತ್ತಿದೆ. ಕ್ರೀಡಾಪಟುಗಳು ಒಳ್ಳೆಯ ಪ್ರದರ್ಶನ ನೀಡಿ ಎಂದು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಸುಧೀಂದ್ರ ಶೆಟ್ಟಿ (ಕಂಡಿಲ್ ಪುಟ್ಟ) ಮಾತನಾಡಿ, ಖೋ ಖೋ ದೇಶಿಯ ಕ್ರೀಡೆಯಾಗಿದ್ದು ಆಟವಾಡಿಸಲು ಅನೇಕರು ಭಯ ಪಡುತ್ತಾರೆ. ಏಕಲವ್ಯ ಸ್ಪೋರ್ಟ್ ಕ್ಲಬ್ ಕ್ರೀಡೆಯ ಜೊತೆಗೆ ತಿನಿಸುಗಳು, ಅಮ್ಯೂಸ್ಮೆಂಟ್ ಪಾರ್ಕ್ ಮೂಲಕ ಎಲ್ಲಾ ವಯಸ್ಕರನ್ನು ಸೆಳೆಯುತ್ತಿದೆ. ಆಟಗಾರರ ಟ್ರಾವೆಲ್ ಅಲೋವೆನ್ಸ್ ಜಾಸ್ತಿಯಾಗಿದೆ. ಪ್ರತಿಯೊಬ್ಬ ಮದ್ಯ ಮಾರಾಟಗಾರರು 50 ಸಾವಿರ ದೇಣಿಗೆ ಕೊಟ್ಟಿದ್ದಾರೆ. ಕ್ರೀಡಾಂಗಣ ನಿರ್ಮಾಣಕ್ಕೆ 3 ಲಕ್ಷ ಖರ್ಚಾಗಿದೆ ಎಂದರು.

ಪಟ್ಟಣ ಪಂಚಾಯತಿ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿ.ಆರ್. ರಾಘವೇಂದ್ರ ಶೆಟ್ಟಿ, ಪಾಲಿಟೆಕ್ನಿಕ್ ಕಾಲೇಜು ಅಧ್ಯಕ್ಷೆ ಅನಿತಾ ನಾಗರಾಜ್, ಪ್ರಮುಖರಾದ ಪರಿಣಿತ ಮನುದೇವ್, ಪ್ರಸನ್ನ ಕುಮಾರ್, ಲ.ಪಾಂಡುರಂಗಪ್ಪ, ಟಿ.ಕೆ. ರಮೇಶ್ ಶೆಟ್ಟಿ, ಬಾಳೇಹಳ್ಳಿ ಪ್ರಭಾಕರ್, ಬೆಲೋರಿಯನ್ ಡಯಾಸ್ ಮುಂತಾದವರು ಉಪಸ್ಥಿತರಿದ್ದರು.‌

ಗಾಯಕಿ ಉಷಾ ಪ್ರಾರ್ಥಿಸಿದರು. ಬಾಳೇಬೈಲು ಸಂತೋಷ್ ಪೂಜಾರಿ ಸ್ವಾಗತಿಸಿದರು. ಪತ್ರಕರ್ತ ಮೋಹನ್ ಮುನ್ನೂರು ನಿರೂಪಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post