ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ

ಸೋಗಲಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ
ಸರ್ಕಾರಿ ಕಚೇರಿಯಲ್ಲಿ ಹೋಮ, ಹವನ! ಧರ್ಮಕೇಂದ್ರಿತ ಪೂಜೆಗೆ ಸಾರ್ವಜನಿಕರ ಟೀಕೆ
ಅಪಾಯದಲ್ಲಿದೆಯಾ ಭಾರತದ ಸಂವಿಧಾನ?

ತೀರ್ಥಹಳ್ಳಿಯ ನೂತನ ಗ್ರಾಮೀಣಾಭಿವೃದ್ಧಿ ಭವನ ಉದ್ಘಾಟನೆಗೆ ಸಿದ್ಧವಾಗಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಕಚೇರಿ ಉದ್ಘಾನೆಯನ್ನು ಸೋಮವಾರ ಮಧ್ಯಾಹ್ನ 3 ಗಂಟೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ನೇತೃತ್ವದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಹಿಂದೂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಸರ್ಕಾರಿ ಕಚೇರಿ ಉದ್ಘಾಟನೆಯನ್ನು ಭಾನುವಾರ ರಾತ್ರಿ ಪೂಜೆ, ಹವನಗಳನ್ನು ಸಮರ್ಪಿಸಿ ಲೋಕಾರ್ಪಣೆಗೆ ಸಜ್ಜುಗೊಳಿಸಲಾಗಿದೆ. ಒಂದು ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ದೇಶದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಪಾರ್ಸಿ, ಜೈನ, ಬುದ್ಧ ಸೇರಿದಂತೆ ಅನೇಕ ಧರ್ಮದ, ಜನಾಂಗದ, ಸಮುದಾಯದ ಜನರ ತೆರಿಗೆ ಹಣ ಬಳಕೆಯಾಗುತ್ತದೆ. ಆದರೆ ಒಂದು ಧರ್ಮಕ್ಕೆ ಸೀಮಿತವಾಗಿ ಆಚರಣೆಗಳು ಏಕಿರಬೇಕು ಎಂಬ ಪ್ರಶ್ನೆಗಳು ಇದೀಗ ಕೇಳಿ ಬಂದಿದೆ.


ಯಾವುದೋ ಒಂದು ಸಂಪ್ರದಾಯ, ಆಚರಣೆಯಂತೆ ಉದ್ಘಾಟನೆಗೆ ಸಜ್ಜುಗೊಳಿಸುವುದಾದರೆ ಭಾರತದ ಸಂವಿಧಾನದ ಧ್ಯೇಯ, ವಸುದೈವ ಕುಟುಂಬಕಂ ತತ್ವ, ಧರ್ಮ ಸಮನ್ವಯತೆ, ಬ್ರಾತೃತ್ವ, ಸೌಹಾರ್ದತೆ, ಸಂವೇದನೆ, ಮಾನವೀಯ ಮೌಲ್ಯಗಳಿಗೆ ಬೆಲೆ ಇಲ್ಲವೇ. ಹಿಂದೂ ಧರ್ಮದೊಳಗೆ ಕೂಡ ಅನೇಕ ಆಚರಣೆಗಳು ಅತ್ಯಂತ ಸೂಕ್ಷ್ಮ ಸಂವೇದನೆ ಹೊಂದಿರುವ ಧಾರ್ಮಿಕ ತಳಹದಿಯಲ್ಲಿ ರಚನೆಯಾಗಿದೆ. ಒಂದು ಪಂಗಡ, ಜಾತಿ ವ್ಯವಸ್ಥೆಯಲ್ಲಿಯೂ ಆಚರಣೆಗಳು ಭಿನ್ನತೆಯಿಂದ ಕೂಡಿದೆ. ಇಂತಹ ಕ್ಲಿಷ್ಟ, ಜಟಿಲವಾದ ಧಾರ್ಮಿಕ ವಿಚಾರಗಳಿಂದ ಸಮಾಜದೊಳಗಿನ ಸೌಹಾರ್ದತೆ ಒಡೆಯುವ ಪ್ರಯತ್ನದಲ್ಲಿ ರಾಜ್ಯದಲ್ಲಿರುವ ಸೋಗಲಾಡಿ ಕಾಂಗ್ರೆಸ್ ಸರ್ಕಾರ ಪ್ರಯತ್ನ ನಡೆಸುತ್ತಿದೆಯಾ. ಇದೊಂದು ಅಮಾನವೀಯ, ಅಸಂವಿಧಾನಿಕ ಆಚರಣೆ ಎಂದು ಸಾರ್ವಜನಿಕವಾಗಿ ಟೀಕೆಗಳು ಕೇಳಿ ಬರುತ್ತಿದೆ.


ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ಅಧಿಕಾರಿಗಳು ಸೂಕ್ಷ್ಮ ಸಂವೇದನೆಗಳನ್ನು ಮರೆತಂತಿದೆ. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಆಡಳಿತವೇ ಬೆಂಕಿ ಹಂಚಿ ಮಜಾ ನೋಡುವ ಕೆಟ್ಟ ಸ್ಥಿತಿ ನಿರ್ಮಾಣವಾಗಿರುವುದು ದುರಾದೃಷ್ಟಕರ. ಯಾವ ಸರ್ಕಾರಿ ಕಚೇರಿ ಉದ್ಘಾಟನೆಗೊಳ್ಳುತ್ತಿದೆಯೋ ಅಲ್ಲಿಗೇ ಈ ದೇಶದಲ್ಲಿರುವ ಎಲ್ಲಾ ಧರ್ಮಗಳ ಧರ್ಮಗುರುಗಳನ್ನು ಏಕೆ ಆಮಂತ್ರಿಸಬಾರದು. ಸರ್ಕಾರಿ ಕಾರ್ಯಕ್ರಮ ಉದ್ಘಾಟನೆಯಲ್ಲಿಯೂ ಇಂದಿಗೂ ದೀಪ ಹಚ್ಚುವ ಶಾಸ್ತ್ರ ಅಘೋಷಿತವಾಗಿ ಮುಂದುವರೆದಿದೆ. ಇದೆಂತಹ ಸಂವಿಧಾನಿಕ ಮೌಲ್ಯಗಳ ರಕ್ಷಣೆ ಎಂಬ ಪ್ರಶ್ನೆಗಳನ್ನು ಅನೇಕರು ಕೇಳುತ್ತಿದ್ದಾರೆ.

ಸರ್ಕಾರಿ ಕಟ್ಟಡ ಉದ್ಘಾಟನೆಯಲ್ಲಿ ಯಾವ ರೀತಿಯ ಹಿಂದೂ ಧರ್ಮದ ಶಾಸ್ತ್ರಗಳನ್ನು ಆಚರಿಸಲಾಗುತ್ತದೆಯೋ ಅದೇ ರೀತಿ ಮುಸ್ಲಿಂ, ಕ್ರೈಸ್ತರ ಧಾರ್ಮಿಕ ವಿಧಾನಗಳು ಯಾಕೆ ಆಚರಿಸುವುದಿಲ್ಲ. ಸರ್ಕಾರಿ ಕಚೇರಿಗಳು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿದೆಯೋ ಎಂಬ ಪ್ರಶ್ನೆಗಳು ಸೃಷ್ಟಿಯಾಗುತ್ತಿದೆ. ಅಲ್ಲದೇ ಹಿಂದೂ ಧರ್ಮದೊಳಗೆ ಇರುವ ಶೋಷಿತ ಸಮುದಾಯ, ಜಾತಿಗಳ ರೀತಿ, ರಿವಾಜುಗಳು ಯಾಕೆ ಸರ್ಕಾರಿ ಕಟ್ಟಡ ಉದ್ಘಾಟನೆಯಲ್ಲಿ ಅನ್ವಯಿಸುವುದಿಲ್ಲ ಎಂಬ ಪ್ರಶ್ನೆಯೂ ಉದ್ಭವಿಸಿದೆ

ಅಲ್ಲದೇ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಸತೀಶ್ ಜಾರಕಿಹೊಳಿ ವೈಜ್ಞಾನಿಕವಾಗಿ ಚಿಂತಿಸುವ ವಿಶೇಷ ರಾಜಕಾರಣಿಗಳು. ಪ್ರಜೆಗಳ ಹಿತಾಸಕ್ತಿಗಳನ್ನು ಸದಾಕಾಲ ಎತ್ತಿ ಹಿಡಿಯುವಂತಹ ಕೆಲಸಗಳನ್ನು ರಾಜಕೀಯ ಲಾಭದ ದೃಷ್ಟಿಯಿಂದಲೋ ಅಥವಾ ಸಂವಿಧಾನದ ಮೇಲೆ ಇರುವ ಗೌರವದಿಂದಲೋ ಆಗಾಗ ಮಾಡಿಕೊಂಡು ಬಂದಿದ್ದಾರೆ. ಅನೇಕ ಮೌಡ್ಯ ವಿರೋಧಿ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದಾರೆ. ಅಂತವರು ಆಗಮಿಸುವ ಉದ್ಘಾಟನಾ ಕಾರ್ಯಕ್ರಮ ಧರ್ಮ ಕೇಂದ್ರಿತವಾಗಿ ನಡೆಯಬಾರದಿತ್ತೂ ಎಂಬ ಆಕ್ಷೇಪಗಳು ವ್ಯಕ್ತವಾಗುತ್ತಿದೆ. ನಿಜವಾಗಲೂ ಸಮಾಜದೊಳಗೆ ಶಾಂತಿ, ಸುವ್ಯವಸ್ಥೆ, ಸೋದರತೆ ಇಲ್ಲ ಎಂಬುದಕ್ಕೆ ಇಂತಹ ಅನೇಕ ಕಾರ್ಯಕ್ರಮಗಳೇ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂವಿಧಾನದ ಮೌಲ್ಯ ಜಾಗೃತಿಗೊಳಿಸಲು ಪರದಾಡುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಿ ಕಾರ್ಯಕ್ರಮವೇ ಅಸಂವಿಧಾನಿಕವಾಗಿ ನಡೆಯುತ್ತಿರುವುದು ವಿಪರ್ಯಾಸವೇ ಸರಿ.

ಇಂತಹ ಆಡಳಿತದಿಂದ ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಧರ್ಮದೊಳಗಿನ ಶೋಷಿತ ಜಾತಿ, ವರ್ಗಗಳು ನ್ಯಾಯ ಹೇಗೆ ನಿರೀಕ್ಷಿಸಬೇಕು ಎಂಬುದೇ ಸೋಜಿಗದ ಸಂಗತಿಯಾದಂತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post