ಆಡಳಿತ ಮಂಡಳಿ ಕಪಿಮುಷ್ಠಿಯಲ್ಲಿ ಮಾರಿಕಾಂಬಾ ದೇವಸ್ಥಾನ

ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ದೇವಸ್ಥಾನ ಒಂದು ಪಕ್ಷದ ಮತ್ತು ಅದರ ಬೆಂಬಲಿಗರ ಖಾಸಗಿ ಸ್ವತ್ತೆ? ಅಥವಾ ಆಡಳಿತ ಅವರ ಕಪಿಮುಷ್ಠಿಯಲ್ಲಿ ಶಾಶ್ವತವಾಗಿ ಇರಲಿದೆಯೇ? ಇದು ಸಮಸ್ತ ದೇಗುಲದ ಭಕ್ತರ ಪ್ರಶ್ನೆ. 

-ಅಮ್ರಪಾಲಿ ಸುರೇಶ್, ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ, 

ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನವು ಅನಾದಿ ಕಾಲದಿಂದಲೂ ಎಲ್ಲಾ ಭಕ್ತಾದಿಗಳ ಆರಾಧ್ಯ ದೇವಿಯಾಗಿದ್ದು, ತೀರ್ಥಹಳ್ಳಿ ಪಟ್ಟಣದ ಸಮಸ್ತ ಜನರ ಕಷ್ಟ ಕಾರ್ಪಣ್ಯಗಳಿಗೆ ಮುಕ್ತಿ ನೀಡಿ, ತನ್ನದೇ ಆದ ಭಕ್ತ ಸಮೂದಯವನ್ನು ಹೊಂದಿದೆ. ಈ ಹಿಂದೆ ಇದು ಮಾರಿ ಗದ್ದುಗೆಯಾಗಿ, ಆನಂತರ ಮಾರಿ ಗುಡಿಯಾಗಿ, ಈಗ ಶ್ರೀ ಮಾರಿಕಾಂಬಾ ದೇವಸ್ಥಾನವಾಗಿದೆ. ಶ್ರೀ ದೇವಿಯನ್ನು ಹಿಂದಿನಿಂದಲೂ ಶೂದ್ರರು, ದಲಿತರು, ಬಡವರು ಮತ್ತು ಜನಸಾಮಾನ್ಯರು ಹಾಗೂ ಇತರೆ ಧರ್ಮದವರೂ ಕೂಡ ಅತ್ಯಂತ ಭಯ ಭಕ್ತಿಯಿಂದ ನಂಬಿಕೊಂಡು ಬಂದಿರುತ್ತಾರೆ. ಈಗ ದೇವಸ್ಥಾನವು ಅಭಿವೃದ್ಧಿಯಾಗಲು ಅನೇಕರ ಶ್ರಮವಿದೆ. ದೇವಸ್ಥಾನದಲ್ಲಿ ಯಾವುದೇ ಪಕ್ಷ, ಜಾತಿ, ಪ್ರತಿಷ್ಠೆ ಇದ್ಯಾವುದೂ ಈ ಹಿಂದೆ ಇರಲಿಲ್ಲ. ಎಲ್ಲರೂ ಸೇರಿ ಎರಡು ವರ್ಷಕ್ಕೊಮ್ಮೆ ಬರುವ ಜಾತ್ರೆಯನ್ನು ಭಯಭಕ್ತಿಯಿಂದ, ಶ್ರದ್ಧೆಯಿಂದ ಮಾಡಿ ವಿಜೃಂಭಿಸುತ್ತಿದ್ದರು. 

ನಂತರ ದಿನಗಳಲ್ಲಿ ಊರ ಪ್ರಮುಖರು ಸೇರಿ ದೇವಸ್ಥಾನದ ಆಡಳಿತದ ಬಗ್ಗೆ ಒಂದು ರೂಪುರೇಷೆಗಳನ್ನು ಮಾಡಿ, ಅದಕ್ಕೊಂದು ಬೈಲಾ ಮಾಡಿ ಆಡಳಿತ ಮಂಡಳಿ ರಚನೆ ಮಾಡಿದರು. ಆ ಬೈಲಾ ಪ್ರಕಾರ 15 ಜನ ಆಡಳಿತ ಮಂಡಳಿ ಧರ್ಮದರ್ಶಿಯವರುಗಳನ್ನು ಮಾಡಲಾಗಿತ್ತು. ಒಬ್ಬ ಆಡಳಿತ ಮಂಡಳಿ ಧರ್ಮದರ್ಶಿಗೆ ಹತ್ತು ಜನ ಸದಸ್ಯರನ್ನು ಮಾಡುವ ಅಧಿಕಾರ ನೀಡಿತ್ತು. ಅದರ ಉದ್ದೇಶ ತೀರ್ಥಹಳ್ಳಿ ಪಟ್ಟಣದ ಆಸಕ್ತ ಭಕ್ತಾದಿಗಳನ್ನು ಸದಸ್ಯರುಗಳನ್ನು ಮಾಡುವುದು. ಆದರೆ ಸದಸ್ಯತ್ವ ಮಾಡುವಾಗ ಈ ವ್ಯಾಪ್ತಿಗೆ ಸಂಬಂಧ ಇಲ್ಲದೇ ಇರುವವರನ್ನ ಮತ್ತು ದೇವಸ್ಥಾನದ ಮುಖವನ್ನೇ ನೋಡದ, ದೇವರ ಮೇಲೆ ನಂಬಿಕೆ ಇಲ್ಲದವರನ್ನು ಸಹ ಸದಸ್ಯರನ್ನಾಗಿ ಮಾಡಿರುತ್ತಾರೆ. ಇಪ್ಪತ್ತು ವರ್ಷದ ಹಿಂದೆ 250 ಜನ ಸದಸ್ಯರಿದ್ದರು. ಅದರಲ್ಲಿ ಇದೀಗ 185 ಜನ ಸದಸ್ಯರಿದ್ದಾರೆ. ಅಂದರೆ ಕೆಲವರು ತೀರಿಕೊಂಡಿದ್ದಾರೆ, ಇನ್ನು ಹಲವರು ಊರು ಬಿಟ್ಟು ಹೋಗಿದ್ದಾರೆ. ಸದಸ್ಯರನ್ನು ಮಾಡುವಾಗ ಕೇವಲ ತಮ್ಮ ಪಕ್ಷದ ಕಾರ್ಯಕರ್ತರುಗಳನ್ನು ಮಾತ್ರ ಸದಸ್ಯರನ್ನಾಗಿ ಮಾಡಿದ್ದು, ಶ್ರೀದೇವಿಯನ್ನು ನಂಬಿಕೊಂಡು ಬರುವ ನೈಜ ಭಕ್ತಾದಿಗಳನ್ನು ಸದಸ್ಯರನ್ನಾಗಿ ಮಾಡದಿರುವುದು ದುರಾದೃಷ್ಟ ಎರಡು ವರ್ಷಕ್ಕೊಮ್ಮೆ ಆಡಳಿತ ಮಂಡಳಿಗೆ ಚುನಾವಣೆ ನಡೆಯುತ್ತಿದ್ದು, ಪ್ರತಿ ಚುನಾವಣೆಯಲ್ಲಿ ಅದೇ ಮುಖಗಳು ಆಯ್ಕೆಯಾಗುವಂತೆ ಮಾಡಲಾಗುತ್ತದೆ. ಬೇರೆ ಸದಸ್ಯರಿಗೆ ಆಡಳಿತ ಮಂಡಳಿ ಒಳಗೆ ಬರಲು ಅವಕಾಶವೇ ಇಲ್ಲದಂತೆ ಮಾಡಲಾಗುತ್ತದೆ. ಅದೇ ಮುಖಗಳು ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ಇದ್ದಾರೆ. 

ಕಳೆದ ಇಪ್ಪತ್ತು ವರ್ಷದಿಂದ ಯಾರಿಗೂ ಹೊಸ ಸದಸ್ಯತ್ವ ನೀಡದೇ ಇವರದೇ ಆಡಳಿತ, ಇವರುಗಳದೇ ತೀರ್ಮಾನದಿಂದ ಸದಸ್ಯತ್ವ ನೀಡದಿರುವುದು ಒಂದು ವಿಪರ್ಯಾಸ. ಇದರ ಹಿಂದೆ ಇರುವ ಒಂದೇ ಒಂದು ದುರುದ್ದೇಶ ಏನೆಂದರೆ ಸದಸ್ಯರು ಜಾಸ್ತಿ ಆದರೆ ಆಡಳಿತ ಇವರ ಕೈ ತಪ್ಪುವ ಭೀತಿ, ತೀರ್ಥಹಳ್ಳಿ ಅತೀ ಹೆಚ್ಚು ವರಮಾನ ಇರುವ ದೇವಸ್ಥಾನವೆಂದರೆ ಶ್ರೀ ಮಾರಿಕಾಂಬಾ ದೇವಸ್ಥಾನ. ತೀರ್ಥಹಳ್ಳಿ ಪುರಧೀಶ್ವರ ಶ್ರೀ ರಾಮೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಹಳ ವರ್ಷಗಳಿಂದ ಒತ್ತಾಯಗಳು ಕೇಳಿಬಂದಿದ್ದರೂ, ಈ ಹಿಂದೆ ಕ್ಷೇತ್ರದ ಯಾವುದೇ ಶಾಸಕರು ಇದರ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ ಕಿಮ್ಮನೆ ರತ್ನಾಕರ ಇವರು ಶಾಸಕರಾಗಿ, ಸಚಿವರಾದ ಮೇಲೆ ಜೀರ್ಣೋದ್ಧಾರದ ಕಾಯಕಕ್ಕೆ ಚಾಲನೆ ನೀಡಿದರು, ಇಲ್ಲೂ ಸಹ ಪಕ್ಷ ಭೇದವಿಲ್ಲದೇ, ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶ್ರೀ ಸ್ವಾಮಿಯ ಪುನರ್ ಪ್ರತಿಷ್ಠಾಪನೆ ಮಾಡಿದ್ದಾರೆ. ಆದಾಯವಿಲ್ಲದ ದೇವಸ್ಥಾನ ಕೆಲವರಿಗೆ ಅದೊಂದು ಕಟ್ಟಡ. ಆದಾಯ ಇರುವ ಆಯಾಯಕಟ್ಟಿನ ದೇವಸ್ಥಾನ ಮತ್ತು ಸಂಘ-ಸಂಸ್ಥೆಗಳಲ್ಲಿ ಇವರು ಮತ್ತು ಇವರ ಒಡೋಲಗ ಪಾರುಪತ್ಯ ನಡೆಸುತ್ತದೆ. ಎಲ್ಲಿ ಆದಾಯವಿರುತ್ತದೆ ಇವರ ಪಟಾಲಂ ಅಲ್ಲಿ ಹಾಜರಿರುತ್ತದೆ. 

ಈ ದೇವಸ್ಥಾನಕ್ಕೆ ಅತೀ ಹೆಚ್ಚು ಭಕ್ತಾದಿಗಳೆಂದರೆ ಮಹಿಳೆಯರು, ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಒಬ್ಬರೇ ಒಬ್ಬ ಮಹಿಳಾ ಸದಸ್ಯರೇ ಇಲ್ಲ. ದೇವಸ್ಥಾನದಲ್ಲಿ ದಲಿತ ಸದಸ್ಯರಿದ್ದರೂ ಅವರಲ್ಲಿ ಒಬ್ಬ ಧರ್ಮದರ್ಶಿ ಇಲ್ಲ. ಇವರದೇ ಪಕ್ಷದ ಕೆಲವರು ಈ ಬಗ್ಗೆ ನನ್ನಲ್ಲಿ ಚರ್ಚಿಸಿದ್ದಾರೆ. 

ತೀರ್ಥಹಳ್ಳಿ ಜನರ ಮತ್ತು ಭಕ್ತಾದಿಗಳ ಮನವಿ ಇಷ್ಟೇ. ದೇವಸ್ಥಾನದ ಸದಸ್ಯತ್ವ ಮುಕ್ತವಾಗಿ ಎಲ್ಲಾರಿಗೂ ದೊರಕುವಂತಾಗಲಿ. ಇದರಿಂದ ದೇವಸ್ಥಾನಕ್ಕೆ ಆದಾಯವೂ ಹೆಚ್ಚುತ್ತದೆ. ಉತ್ಸಾಹಿಗಳು, ಆಸಕ್ತರು, ಯುವಕರು ಜಾತಿ, ಪಕ್ಷ ಭೇಧವಿಲ್ಲದೇ ಶ್ರೀ ದೇವಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ನಮ್ಮ ಉದ್ದೇಶ ಪಟ್ಟಣದ ವ್ಯಾಪ್ತಿಯ ಜನತೆ ಮತ್ತು ಭಕ್ತಾದಿಗಳು ದೇವಸ್ಥಾನದ ಧರ್ಮ ಕಾರ್ಯಗಳಲ್ಲಿ ಭಾಗವಹಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕು. ಆಡಳಿತವು ಕೇವಲ ಉಳ್ಳವರ, ಪ್ರತಿಷ್ಠಿತರ ಸ್ವತ್ತಾಗದೇ ಸಾಮಾನ್ಯ ಭಕ್ತಾದಿಗಳೂ ಕೂಡ ಈ ಆಡಳಿತ ಮಂಡಳಿಯೊಳಗೆ ಬರಬೇಕು. 

ಜಾತ್ರೆ ಮುಗಿದ ನಂತರ ತುರ್ತು ಸರ್ವಸದಸ್ಯರ ಸಭೆಯನ್ನು ಕರೆದು, ಬೈಲಾ ತಿದ್ದುಪಡಿ ಮಾಡಿ, ಸರ್ವರಿಗೂ ಇದರಲ್ಲಿ ಸದಸತ್ವ ಆಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಅಮ್ರಪಾಲಿ ಸುರೇಶ್‌ ಎಚ್ಚರಿಸಿದ್ದಾರೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post